Vastu tips: ಮನೆ ಕಟ್ಟುವಾಗ ಆಯದ ಪ್ರಾಮುಖ್ಯತೆ ಏನು? ಯಾವ ಆಯದಿಂದ ಏನು ಫಲ?
ಮನೆ ನಿರ್ಮಾಣದ ವೇಳೆ ದಿಕ್ಕುಗಳನ್ನು ಗಮನಿಸಿದರಷ್ಟೇ ಸಾಲದು. ಅದರ ಜತೆಗೆ ಆಯದ ಬಗ್ಗೆಯೂ ಗಮನ ಇರಬೇಕು. ಏನು ಈ ಆಯ ಹಾಗೂ ಇದರ ಮಹತ್ವ ಏನು ಎಂಬುದರ ಮಾಹಿತಿ ಇಲ್ಲಿದೆ.
ಮನೆ ಕಟ್ಟುವಾಗ ಯಾವ ದಿಕ್ಕಿನಲ್ಲಿ ಯಾವುದು ಇರಬೇಕು ಅನ್ನೋದು ಮುಖ್ಯ ಎಂಬುದು ಹಲವರ ನಂಬಿಕೆ. ಆದರೆ ಬಹಳ ಜನರು ಗಮನಕ್ಕೆ ಕೊಡದೆ ಹೋಗುವಂಥದದ್ದು ಆಯಕ್ಕೆ. ಏನಿದು ಆಯ? ಇದರ ಪ್ರಾಮುಖ್ಯತೆ ಏನು ಎಂದು ತಿಳಿಸಿಕೊಡುವುದೇ ಇಂದಿನ ಲೇಖನದ ಉದ್ದೇಶ. ಆಯ- ಹೀಗಂದರೆ ಉದ್ದ ಹಾಗೂ ಅಳತೆ ಎಷ್ಟು ತೆಗೆದುಕೊಂಡಿದ್ದೀರಿ ಅಂತ. ನೀವು ಮನೆಯನ್ನು ಇಷ್ಟು ಉದ್ದಕ್ಕೆ ಇಷ್ಟಗಲದಲ್ಲಿ ಕಟ್ಟಬೇಕು ಅಂದುಕೊಳ್ಳುತ್ತೀರಿ. ಕಾಂಟ್ರ್ಯಾಕ್ಟರ್ಗಳು ರೂಫಿಂಗ್ ಏರಿಯಾ, ಅಂದರೆ ಛಾವಣಿಯ ಲೆಕ್ಕವನ್ನು ಹಿಡಿಯುತ್ತಾರೆ. ಕಾಂಪಾಂಡ್, ಸಂಪ್ ಹೀಗೆ ಎಲ್ಲಕ್ಕೂ ಚದರ ಅಡಿಯಲ್ಲಿ ಲೆಕ್ಕ ಹಾಕಿಬಿಡುತ್ತಾರೆ. ಆದರೆ ನಿಜವಾಗಲೂ ಆಯ ಅಂದರೆ ಏನು, ಅದು ಹೇಗೆ ಲೆಕ್ಕ ಹಾಕಬೇಕು ಅನ್ನೋದರ ಬಗ್ಗೆ ಪ್ರಾಥಮಿಕ ಹಂತದ ವಿಚಾರ ಮಾತ್ರ ತಿಳಿಸಿಕೊಡುವ ಪ್ರಯತ್ನ ಮಾಡಲಾಗುತ್ತದೆ. ಏಕೆಂದರೆ ವಾಸ್ತು ಎಂದಾಕ್ಷಣ ಬರೀ ಆಯಕ್ಕೂ ನಿಲ್ಲುವುದಿಲ್ಲ. ಒಟ್ಟಾರೆಯಾಗಿ ಧನ, ಋಣ, ವಾರ, ತಿಥಿ, ತತ್ವ, ಲಗ್ನ, ಯೋಗ, ಗ್ರಹ, ಕುಲ, ಕಳಾ, ನಕ್ಷತ್ರ, ಕಟ್ಟಡದ ಆಯು ವರ್ಗ, ಅಂಶ, ದಿಕ್ಪತಿ, ಕರಣ ಇಷ್ಟೆಲ್ಲವನ್ನೂ ನೋಡಬೇಕು. ಆದರೆ ಇವತ್ತಿನ ಲೇಖನದಲ್ಲಿ ಆಯದ ಬಗ್ಗೆ ಮಾತ್ರ ತಿಳಿಸಲಾಗುತ್ತಿದೆ.
ಆಯ ಎಂದರೇನು? ಒಂದು ಮನೆಯನ್ನು ಕಟ್ಟುವಾಗ ಅದರ ಒಳಭಾಗ (ನೆಲದ ಪ್ರದೇಶ) ಎಷ್ಟು ಉದ್ದಕ್ಕೆ ಎಷ್ಟು ಅಗಲ ಕಟ್ಟುತ್ತಿದ್ದೀರಿ ಎಂಬುದರ ಆಧಾರದ ಮೇಲೆ ಆಯವನ್ನು ಹೆಸರಿಸಲಾಗುತ್ತದೆ.
ಆಯದ ಲೆಕ್ಕಾಚಾರ ಹೇಗೆ? ಮನೆಯ ಒಳಭಾಗದಲ್ಲಿ ಒಟ್ಟು ಎಷ್ಟು ಉದ್ದಕ್ಕೆ ಎಷ್ಟು ಅಗಲ ಕಟ್ಟಿದ್ದೀರಿ ಎಂಬುದರ ಆಧಾರದಲ್ಲಿ ಆಯ ತೀರ್ಮಾನವಾಗುತ್ತದೆ.
ಒಟ್ಟು ಎಷ್ಟು ಆಯಗಳಿವೆ, ಅವುಗಳ ಹೆಸರೇನು? ಎಂಟು ಆಯಗಳಿವೆ. ಧ್ವಜಾಯ, ಸಿಂಹಾಯ, ಧೂಮ್ರಾಯ, ಶ್ವಾನಾಯ, ಕಾಕಾಯ, ಗಜಾಯ, ಖರಾಯ, ವೃಷಭಾಯ.
ಯಾವ ಆಯಗಳಿಂದ ಏನು ಫಲ ದೊರೆಯುತ್ತದೆ? ಧ್ವಜಾಯ- ಹಣಕಾಸು ಅನುಕೂಲ, ಸಿಂಹಾಯ- ವಿಲಾಸಿ ಜೀವನ, ಧೂಮ್ರಾಯ- ಶೋಕ, ಶ್ವಾನಾಯ- ಮಹಾ ಪಾಪ, ಕಾಕಾಯ- ಮೃತ್ಯು, ಗಜಾಯ- ವೃತ್ತಿ- ಉದ್ಯೋಗ ಯಶಸ್ಸು, ವೃಷಭಾಯ- ಸಂಪತ್ತು ವೃದ್ಧಿ ಹಾಗೂ ಲಾಭ.
ಯಾವ ಆಯಕ್ಕೆ ಯಾವ ದಿಕ್ಕಿನ ಬಾಗಿಲು? ಧ್ವಜಾಯ- ಪೂರ್ವ, ಸಿಂಹಾಯ- ದಕ್ಷಿಣ, ಧೂಮ್ರಾಯ- ಆಗ್ನೇಯ, ಶ್ವಾನಾಯ- ನೈರುತ್ಯ, ಕಾಕಾಯ- ಈಶಾನ್ಯ, ಗಜಾಯ- ಉತ್ತರ, ಖರಾಯ- ವಾಯವ್ಯ, ವೃಷಭಾಯ- ಪಶ್ಚಿಮ.
ಮನೆ ನಿರ್ಮಾಣಕ್ಕೆ ಶುಭವಾದ ಆಯಗಳು ಯಾವುವು? ಧ್ವಜಾಯ, ಸಿಂಹಾಯ, ಗಜಾಯ ಹಾಗೂ ವೃಷಭಾಯ.
ಆಯದ ಲೆಕ್ಕಾಚಾರ ಹೇಗೆ ಗೊತ್ತಾಗುತ್ತದೆ? ಕಟ್ಟಡದ ಉದ್ದ ಹಾಗೂ ಅಗಲಗಳನ್ನು ಗುಣಿಸಿದ ಮೇಲೆ ಬಂದ ಕ್ಷೇತ್ರ ಫಲವನ್ನು 9 ರಿಂದ ಗುಣಿಸಿ, 8ರಿಂದ ಭಾಗಿಸಿದಾಗ ಬಂದ ಶೇಷವು ಆಯಗಳ ಸಂಖ್ಯೆಯಾಗುವುದು.
ಯಾವ ಸಂಖ್ಯೆ ಶೇಷವಾಗಿ ಉಳಿದಲ್ಲಿ ಯಾವ ಆಯ? ಶೇಷ 1 ಧ್ವಜಾಯ ಶೇಷ 2 ಧೂಮ್ರಾಯ ಶೇಷ 3 ಸಿಂಹಾಯ ಶೇಷ 4 ಶ್ವಾನಾಯ ಶೇಷ 5 ವೃಷಭಾಯ ಶೇಷ 6 ಖರಾಯ ಶೇಷ 7 ಗಜಾಯ ಶೇಷ 8 ಕಾಕಾಯ
ಯಾವ ಆಯ ಕಟ್ಟಡ ನಿರ್ಮಾಣಕ್ಕೆ ಶ್ರೇಷ್ಠ ಮತ್ತು ಯೋಗ್ಯ ಈ ಮೇಲಿನ ಎಂಟು ವರ್ಗಗಳಲ್ಲಿ 1, 3, 5, 7ರ ಬೆಸ ಸಂಖ್ಯೆಯ ಆಯಗಳಾದ ಧ್ವಜಾಯ, ಸಿಂಹಾಯ, ವೃಷಭಾಯ, ಗಜಾಯ ಕಟ್ಟಡ ನಿರ್ಮಿಸಲು ಯೋಗ್ಯ. ಮನೆ ಕಟ್ಟಡಕ್ಕೆ ಧ್ವಜಾಯ ಶ್ರೇಷ್ಠ.
ಒಂದು ಉದಾಹರಣೆಯನ್ನು ನೀಡಿ ವಿವರಿಸುವುದಾದರೆ ಹೇಗೆ? 23 ಅಡಿ ಉದ್ದಕ್ಕೆ 31 ಅಡಿ ಅಗಲದಲ್ಲಿ ಮನೆ ನಿರ್ಮಾಣಕ್ಕೆ ನಿರ್ಧರಿಸಿದರೆ, ಒಟ್ಟು ಕ್ಷೇತ್ರ ಫಲ 713 ಆಗುತ್ತದೆ. ಅದನ್ನು 9 ರಿಂದ ಗುಣಿಸಬೇಕು. 713X9=6417 ಬಂದಿತು. ಈಗ ಆ ಸಂಖ್ಯೆ ಅಂದರೆ 6417 ಅನ್ನು ಒಂದಂಕಿಗೆ ಇಳಿಯುವ ತನಕ 8ರಿಂದ ಭಾಗಿಸಬೇಕು. ಶೇಷ 1 ಉಳಿಯುತ್ತದೆ. ಈ ಸಂಖ್ಯೆಗೆ ಧ್ವಜಾಯ ಬರುತ್ತದೆ. ಪೂರ್ವ ದಿಕ್ಕಿಗೆ ಬಾಗಿಲು ಇಡಬೇಕು.
ಈ ಬಗ್ಗೆ ಸಂಪೂರ್ಣ ಮಾಹಿತಿ ಬೇಕು ಎಂದಾದಲ್ಲಿ ಮೈಸೂರು ಒಂಟಿಕೊಪ್ಪಲ್ನಂಥ ಕೆಲವು ಪಂಚಾಂಗಗಳಲ್ಲಿ ಅಥವಾ ವಾಸ್ತು ಪುಸ್ತಕಗಳಲ್ಲಿ ಉತ್ತಮ ಆಯದ ಜತೆಗೆ ಇತರ ವರ್ಗಗಳನ್ನೂ ಲೆಕ್ಕ ಮಾಡಿಯೇ ನೀಡಲಾಗಿದೆ. ಅವುಗಳ ಸಹಾಯ ಪಡೆಯಬಹುದು. ಇಂಥ ದಿಕ್ಕಿಗೆ ಅಡುಗೆ ಕೋಣೆ, ಯಜಮಾನನ ಕೋಣೆ ಎಂಬ ಅಂಶಗಳ ಜತೆಗೆ ಇವುಗಳ ಬಗ್ಗೆಯೂ ಗಮನ ನೀಡಿದರೆ ಉತ್ತಮ.
ಇದನ್ನೂ ಓದಿ: Vastu Tips: ಚಪ್ಪಲಿಗಳನ್ನು ಎಲ್ಲಿಡಬೇಕು? ಮನೆಯ ಋಣಾತ್ಮಕ ಅಂಶ ದೂರಮಾಡಲು ಈ ವಾಸ್ತು ಸಲಹೆಗಳನ್ನು ಗಮನಿಸಿ
(Vastu tips for house construction and must know details about importance of Vastu aya)