ಜಗತ್ತಿನಲ್ಲಿ ದುಃಖಕ್ಕೆ ನಿಜವಾದ ಕಾರಣವೇನು? ಈ ವಿಚಾರ ತಿಳಿದು ಬದುಕಿದರೆ ನಿರ್ಮಲ ಮನಸ್ಸಿಂದ ಜೀವಿಸಬಹುದು
ದುಃಖಕ್ಕೆ ಅಥವಾ ಕೊರಗುವಿಕೆಗೆ ಕಾರಣವೇನು? ಎಂದು ಒಂದಿನಿತೂ ಯೋಚಿಸದ ವ್ಯಕ್ತಿಗಳೂ ಇದ್ದಾರೆ. ಅದಕ್ಕೆ ಕಾರಣ ತುಂಬಾ ಸರಳವಾದ ಅಂಶ. ಅದು – “ಆಸಗಳೆಲ್ಲಾ ನಮ್ಮ ಅವಶ್ಯಕತೆಗಳಾಗಿದ್ದು”. ಈ ಮಾತು ಕೇಳಿದಾಗ ನಿಮಗೆ ಆಶ್ಚರ್ಯವೆನಿಸಬಹುದು.
ಮನುಷ್ಯ ಜನ್ಮ ಎನ್ನುವುದು ಅತ್ಯಂತ ದುರ್ಲಭವಾದ ಅನುಕೂಲ. ಇಲ್ಲಿ ಅನುಕೂಲ ಎಂಬ ಪದ ಸರಿಯೇ ಎಂದು ನೀವು ಯೋಚಿಸಬಹುದು. ಆದರೆ ಇಲ್ಲಿ ಅನುಕೂಲವೇ ಸರಿಯಾದ ಶಬ್ದ. ಯಾಕೆಂದರೆ ಭಗವಂತನ ಸೃಷ್ಟಿಯಲ್ಲಿರುವ ಪ್ರತೀ ಜೀವಿಯನ್ನು ಒಂದು ಸಲ ಕಲ್ಪಿಸಿ ಗಮನಿಸಿ…. ಮಾನವ ಜೀವಿಗೆ ಇರುವಷ್ಟು ಅವಕಾಶ ಸ್ವಾತಂತ್ರ್ಯ ವ್ಯವಸ್ಥೆಗಳು ಯಾವ ಜೀವಿಗೂ ಇಲ್ಲ ಅಲ್ಲವೇ? ಆದ ಕಾರಣ ಇಷ್ಟೆಲ್ಲಾ ಅಂಶಗಳಿಂದ ಕೂಡಿರುವ ಮಾನವ ಜೀವವ್ಯವಸ್ಥೆ ದೇವದತ್ತವಾದ ಅನುಕೂಲವೇ ತಾನೇ? ಇಂತಹ ಅನುಕೂಲಕರವಾದ ವಾತಾವರಣ ಇದ್ದರೂ ಮಾನವ ಜೀವಿ ದುಃಖಿಸುವುದನ್ನು ಬಿಡಲಿಲ್ಲ. ಕೊರಗುವಿಕೆಯನ್ನು ತೊರೆಯಲಿಲ್ಲ. ಕೃತಜ್ಞತೆಯನ್ನು ತೋರಲಿಲ್ಲ. ಸ್ವಾರ್ಥಿಯಾಗಿ ಸಂಕುಚಿತ ಚಿತ್ತದವನಾಗಿ ತನ್ನ ಸುತ್ತ “ತಾನು” ಎಂಬ ಬೇಲಿ ಹಾಕಿ ತನಗೆ ತಾನೇ ಬಂಧನ ನಿರ್ಮಿಸಿ ನೆಮ್ಮದಿಗಾಗಿ ಚಡಪಡಿಸುತ್ತಾ ಬಾಳೆಂಬುದು ಹೋರಾಟ ಎಂದು ಗೊಣಗುತ್ತಾ ಸಾಗತೊಡಗಿದ ಅಲ್ಲವೇ?
ಹಾಗಾದರೆ ಈ ದುಃಖಕ್ಕೆ ಅಥವಾ ಕೊರಗುವಿಕೆಗೆ ಕಾರಣವೇನು? ಎಂದು ಒಂದಿನಿತೂ ಯೋಚಿಸದ ವ್ಯಕ್ತಿಗಳೂ ಇದ್ದಾರೆ. ಅದಕ್ಕೆ ಕಾರಣ ತುಂಬಾ ಸರಳವಾದ ಅಂಶ. ಅದು – “ಆಸಗಳೆಲ್ಲಾ ನಮ್ಮ ಅವಶ್ಯಕತೆಗಳಾಗಿದ್ದು”. ಈ ಮಾತು ಕೇಳಿದಾಗ ನಿಮಗೆ ಆಶ್ಚರ್ಯವೆನಿಸಬಹುದು. ಆದರೂ ಸತ್ಯ. ಮನುಷ್ಯ ತನ್ನ “ಆಸೆಗಳೇ ತನ್ನ ಅವಶ್ಯಕತೆಗಳು” ಎಂದು ಭ್ರಮಿಸಿ ವ್ಯವಹರಿಸುತ್ತಾ ಸಾಗುತ್ತಿದ್ದಾನೆ. ಇಂತಹ ಆಸೆಗಳ ಪೂರಣವಾಗದಿದ್ದಾಗ ಕ್ರೋಧ (ಕೋಪ) ಸಂಭವಿಸುತ್ತದೆ. ಈ ಕ್ರೋಧದಿಂದ ಆ ವಸ್ತು ಪಡೆಯಲೇಬೇಕು ಎಂಬ ದುರಾಸೆ (ಲೋಭ) ಯ ಉದಯವಾಗುತ್ತದೆ. ಈ ದುರಾಸೆಯಿಂದ ಮೋಹ ಹುಟ್ಟುತ್ತದೆ. ಈ ಮೋಹವೆಂಬುದು ಅತ್ಯಂತ ಅಪಾಯಕಾರಿ ವ್ಯವಸ್ಥೆ ಅಥವಾ ಮಾನಸಿಕ ಸ್ಥಿತಿ. ಇದರಿಂದ ಅಂದರೆ ಈ ಮೋಹದಿಂದ ನಮ್ಮ ಸ್ಮೃತಿ (ಯೋಚನಾ ಶಕ್ತಿ) ಅಸ್ತವ್ಯಸ್ತವಾಗುತ್ತದೆ (ಒಟ್ಟಾರೆ ಯೋಚಿಸತೊಡಗುತ್ತದೆ). ಇದರಿಂದ ನಮ್ಮ ಬುದ್ಧಿಶಕ್ತಿಯು ಕುಂಠಿತ ಅಥವಾ ನಾಶವಾಗುತ್ತದೆ. ಬುದ್ಧಿವಂತಿಕೆಯ ಕೊರತೆಯಾದರೆ ಅಥವಾ ಬುದ್ಧಿ ದುಷ್ಟವಾಗತೊಡಗಿದರೆ ಎಲ್ಲವೂ ನಾಶವಾಗುವುದು ಹೌದಲ್ಲವೇ?
ಇದನ್ನೂ ಓದಿ: Spiritual: ಗ್ರಹಣದಿಂದ ಈ ರಾಶಿಯವರಿಗೆ ಯಾವೆಲ್ಲ ಸಮಸ್ಯೆಗಳು ಎದುರಾಗಬಹುದು? ಇಲ್ಲಿದೆ ಮಾಹಿತಿ
ಇಂತಹ ಸ್ಥಿತಿಯಲ್ಲಿ ಇರುವ ಮನುಷ್ಯ ಜೀವಿ ಎಂದಾದರೂ ನೆಮ್ಮದಿಯಿಂದ ಅಥವಾ ದುಃಖ ರಹಿತನಾಗಿ ಇರಲು ಸಾಧ್ಯವೇ? ಆದ್ದರಿಂದ ಜಗತ್ತಿನಲ್ಲಿ ಹಿಂಸೆಗಳು ಅನಾಚಾರಗಳು ನಡೆಯುತ್ತಿವೆ. ಹೆಚ್ಚಿನವರಿಗೂ ಐದು ನಿಮಿಷಕ್ಕಿಂತ ಹೆಚ್ಚು ಏನನ್ನೂ ಯೋಚಿಸದೆ ಆನಂದವಾಗಿರಲು ಸಾಧ್ಯವಾಗುತ್ತಿಲ್ಲ. ಹಾಗೆಯೇ ಸಹನೆಯಿಂದ ಇರಲು ಆಗುತ್ತಿಲ್ಲ. ಕಾರಣವಿಷ್ಟೆ “ ಆಸಗಳೇ ಅವಶ್ಯಕತೆಗಳಾಗಿರುವುದು”. ಹಾಗಾದರೆ ಆಸೆ ತಪ್ಪೇ ಎಂದು ಪ್ರಶ್ನೆ ಏಳಬಹುದು. ಅದಕ್ಕುತ್ತರ ಹೀಗಿದೆ ಆಸೆ ತಪ್ಪಲ್ಲ. ಆದರೆ ಆಸೆ ಅವಶ್ಯಕತೆಯಾಗುವ ಬದಲು ಅವಶ್ಯಕತೆ ಆಸೆಯಾದಲ್ಲಿ ಉತ್ತಮ ಜೀವನ ಸಾಧ್ಯ.
ಮೇಲ್ನೋಟಕ್ಕೆ ಏನು ವ್ಯತ್ಯಾಸ ಎನ್ನಬಹುದು. ಆದರೆ ಒಂದು ಸಲ ತಾಳ್ಮೆಯಿಂದ ಚಿಂತನೆ ಮಾಡಿರಿ ಉತ್ತರ ದೊರಕುವುದು. ಪಕ್ಕದ ಮನೆಯವರು ಕಾರು ತೆಗೆದುಕೊಂಡರು ಹಾಗೇ ನೆರೆಮನೆಯ ಹುಡುಗ ಏನೋ ಸಾಧಿಸಿದ ಎಂದಾಕ್ಷಣ ನಮಗೂ ಕಾರು ಬೇಕು ನಮ್ಮ ಹುಡುಗನೂ ಅದೇ ಸಾಧನೆ ಮಾಡಬೇಕು ಎಂಬ ಆಸೆಯು ಉದಯವಾಗಿ ಅದುವೇ ಅವಶ್ಯಕತೆಯಾಗಿ ಪರಿಣಮಿಸಿ ಕೈಯಲ್ಲಿ ಹಣವಿಲ್ಲದಿದ್ದರೂ ಕಾರಿನ ಖರೀದಿ ನಮ್ಮ ಮನೆಯ ಹುಡುಗನಿಗೆ ನೆರೆ ಮನೆಯ ಹುಡುಗ ಸಾಗಿದ ದಾರಿ ರುಚಿಕರವಲ್ಲದಿದ್ದರೂ ಅದರಲ್ಲಿ ಸಾಗುವಂತೆ ಒತ್ತಾಯಿಸುದು ಇದೆಲ್ಲವೂ ಕ್ರಮೇಣ ದುಃಖಕ್ಕೆ ಕಾರಣವಾಗುತ್ತದೆ. ಯಾಕೆಂದರೆ ಇದೆಲ್ಲವೂ ಅವರು ಮಾಡಿದರು ತಾನೂ ಮಾಡಬೇಕು ಎಂಬ ಆಸೆಯಷ್ಟೇ ಆಗಿದೆ. ಇದರ ಬದಲಾಗಿ ನಮ್ಮ ವ್ಯಾಪ್ತಿಗನುಗುಣವಾಗಿ ಅವಶ್ಯಕತೆಯನ್ನು ಸಾಧಿಸುವಲ್ಲಿ ಆಸಕ್ತಿ ವಹಿಸಿದರೆ ಅದೂ ಅನಂತವಾದ ನೆಮ್ಮದಿ ನೀಡುತ್ತದೆ ಯೋಚಿಸಿ.
ಡಾ.ಗೌರಿ ಕೇಶವಕಿರಣ ಬಿ
ಧಾರ್ಮಿಕಚಿಂತಕರು