AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪದಕಗಳ ಅರ್ಧಶತಕ ಪೂರ್ಣ; ಒಂದೇ ದಿನ ಅಧಿಕ ಪದಕ ಗೆದ್ದು ತನ್ನದೇ ದಾಖಲೆ ಮುರಿದ ಭಾರತ..!

Asian Games 2023: ಭಾನುವಾರ ಟೀಂ ಇಂಡಿಯಾ ಒಟ್ಟು 15 ಪದಕಗಳನ್ನು ಬಾಚಿಕೊಂಡಿದ್ದು, ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದುಕೊಂಡ ಸಾಧನೆ ಮಾಡಿದೆ. 13 ವರ್ಷಗಳ ಹಿಂದೆ ಭಾರತ 2010ರ ಏಷ್ಯನ್ ಗೇಮ್ಸ್‌ನಲ್ಲಿ ಒಂದೇ ದಿನದಲ್ಲಿ 11 ಪದಕ ಗೆದ್ದ ಸಾಧನೆ ಮಾಡಿತ್ತು.

ಪದಕಗಳ ಅರ್ಧಶತಕ ಪೂರ್ಣ; ಒಂದೇ ದಿನ ಅಧಿಕ ಪದಕ ಗೆದ್ದು ತನ್ನದೇ ದಾಖಲೆ ಮುರಿದ ಭಾರತ..!
ಏಷ್ಯನ್ ಗೇಮ್ಸ್ ಪದಕಗಳ ಪಟ್ಟಿ
ಪೃಥ್ವಿಶಂಕರ
|

Updated on: Oct 02, 2023 | 7:38 AM

Share

ಚೀನಾದ ಹ್ಯಾಂಗ್‌ಝೌನಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್‌ನಲ್ಲಿ (Asian Games 2023) ಭಾರತ ತನ್ನ ಪದಕಗಳ ಬೇಟೆಯನ್ನು ಮುಂದುವರೆಸಿದೆ. ಈ ಕ್ರೀಡಾಕೂಟದ ಎಂಟನೇ ದಿನ ಅಂದರೆ ಅಕ್ಟೋಬರ್ 1 ರಂದು ಭಾರತದ ಆಟಗಾರರು ವಿವಿಧ ಕ್ರೀಡೆಗಳಲ್ಲಿ ಐತಿಹಾಸಿಕ ಪ್ರದರ್ಶನ ನೀಡುವ ಮೂಲಕ ಪದಕಗಳನ್ನು ಗೆದ್ದು ಬೀಗಿದ್ದಾರೆ. ಭಾನುವಾರ ಟೀಂ ಇಂಡಿಯಾ (Team India) ಒಟ್ಟು 15 ಪದಕಗಳನ್ನು ಬಾಚಿಕೊಂಡಿದ್ದು, ಈ ಮೂಲಕ ಒಂದೇ ದಿನದಲ್ಲಿ ಅತಿ ಹೆಚ್ಚು ಪದಕಗಳನ್ನು ಗೆದ್ದುಕೊಂಡ ಸಾಧನೆ ಮಾಡಿದೆ. 13 ವರ್ಷಗಳ ಹಿಂದೆ ಭಾರತ 2010ರ ಏಷ್ಯನ್ ಗೇಮ್ಸ್‌ನಲ್ಲಿ ಒಂದೇ ದಿನದಲ್ಲಿ 11 ಪದಕ ಗೆದ್ದ ಸಾಧನೆ ಮಾಡಿತ್ತು. ಈ ಮೂಲಕ 13 ವರ್ಷಗಳ ಹಿಂದಿನ ತನ್ನದೇ ದಾಖಲೆಯನ್ನು ಭಾರತ ಈಗ ಮುರಿದಿದೆ.

ಪದಕಗಳ ಅರ್ಧಶತಕ

ಟೂರ್ನಿಯ ಎಂಟನೇ ದಿನದಲ್ಲಿ ಟೀಂ ಇಂಡಿಯಾ ಪದಕಗಳ ಅರ್ಧ ಶತಕ ಪೂರೈಸಿದೆ. ಅಕ್ಟೋಬರ್ 1 ರಂದು ಟೀಂ ಇಂಡಿಯಾ ಹೆಸರಿನಲ್ಲಿ ಒಟ್ಟು 53 ಪದಕಗಳು ದಾಖಲಾಗಿವೆ. ಈ 53 ಪದಕಗಳಲ್ಲಿ ಅತಿ ಹೆಚ್ಚು ಬೆಳ್ಳಿ ಪದಕಗಳು ಸೇರಿವೆ. ನಂತರ ಎರಡನೇ ಸ್ಥಾನದಲ್ಲಿ ಕಂಚಿನ ಪದಕಗಳಿವೆ. ಚಿನ್ನದ ಪದಕಗಳು ಮೂರನೇ ಸ್ಥಾನದಲ್ಲಿವೆ. ಟೀಂ ಇಂಡಿಯಾ ಇದುವರೆಗೆ ಒಟ್ಟು 13 ಚಿನ್ನ, 21 ಬೆಳ್ಳಿ ಮತ್ತು 19 ಕಂಚಿನ ಪದಕಗಳನ್ನು ಗೆದ್ದುಕೊಂಡಿದ್ದು, ಚೀನಾ ಹೆಚ್ಚು ಪದಕ ವಿಜೇತರ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಚೀನಾ ಇದುವರೆಗೆ 243 ಪದಕಗಳನ್ನು ಗೆದ್ದಿದೆ. ಇದರಲ್ಲಿ 132 ಚಿನ್ನ, 72 ಬೆಳ್ಳಿ ಮತ್ತು 38 ಕಂಚಿನ ಪದಕಗಳಿವೆ.

ಕೊನೆಯಲ್ಲಿ ಕೈ ಜಾರಿದ ಚಿನ್ನ; ಬ್ಯಾಡ್ಮಿಂಟನ್‌ನಲ್ಲಿ ಐತಿಹಾಸಿಕ ಬೆಳ್ಳಿ ಪದಕ ಗೆದ್ದ ಭಾರತದ ಪುರುಷರ ತಂಡ..!

ಬೆಳ್ಳಿ ಗೆದ್ದ ಜ್ಯೋತಿ

100 ಮೀಟರ್ ಹರ್ಡಲ್ಸ್ ಓಟದಲ್ಲಿ ಭಾರತದ ಜ್ಯೋತಿ ಯರಾಜಿ ಬೆಳ್ಳಿ ಪದಕಕ್ಕೆ ಮುತ್ತಿಟ್ಟರು. ವಾಸ್ತವವಾಗಿ ಜ್ಯೋತಿ ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಗಿತ್ತು. ಆದರೆ ಚೀನಾದ ಸ್ಪರ್ಧಿ ನಿಯಮ ಉಲ್ಲಂಘಿಸಿ ಆಟದಿಂದ ಅನರ್ಹಕೊಂಡ ಬಳಿಕ ಜ್ಯೋತಿಗೆ ಕಂಚಿನ ಬದಲು ಬೆಳ್ಳಿ ಪದಕ ಲಭಿಸಿತು.

ಡಿಸ್ಕಸ್ ಎಸೆತದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸವಿತಾ ಪುನಿಯಾ 58.62 ಮೀಟರ್ ದೂರ ಎಸೆದು ಕಂಚಿನ ಪದಕ ಗೆದ್ದರು. ಅಲ್ಲದೆ 800 ಮೀ ಹೆಪ್ಟಾಥ್ಲಾನ್‌ನಲ್ಲಿ ನಂದಿನಿ ಅಗಸರ ಕಂಚಿನ ಪದಕವನ್ನು ತನ್ನದಾಗಿಸಿಕೊಂಡರು.

ಬೆಳ್ಳಿ ಗೆದ್ದ ಶ್ರೀ ಶಂಕರ್

ಹೈ ಜಂಪ್​ನಲ್ಲಿ ಭಾರಕ್ಕೆ ಚಿನ್ನದ ಪದಕದ ನಿರೀಕ್ಷೆ ಹೆಚ್ಚಿಸಿದ್ದ ಶ್ರೀಶಂಕರ್ ಅವರಿಗೆ ಚಿನ್ನದ ಪದಕ ಗೆಲ್ಲುವ ಅವಕಾಶ ಕೈ ತಪ್ಪಿತು. ಆದರೆ ಬೆಳ್ಳಿ ಪದಕ ಗೆಲ್ಲುವಲ್ಲಿ ಯಶಸ್ವಿಯಾದರು.

ಅಲ್ಲದೆ, 1500 ಮೀಟರ್ ಓಟದಲ್ಲಿ ಭಾರತ 2 ಪದಕಗಳನ್ನು ಪಡೆದುಕೊಂಡಿತು. ಇದರಲ್ಲಿ ಅಜಯ್ ಕುಮಾರ್ ಸರೋಜ್ ಬೆಳ್ಳಿ ಪದಕ ಪಡೆದರೆ, ಜಾನ್ಸನ್ ಕಂಚಿನ ಪದಕಕ್ಕೆ ಕೊರಳೊಡ್ಡಿದರು. ಕತಾರ್‌ನ ಮೊಹಮ್ಮದ್ ಅಲ್ ಗಾರ್ನಿಗೆ ಚಿನ್ನದ ಪದಕ ಲಭಿಸಿತು.

ಚಿನ್ನ ಗೆದ್ದ ತಜಿಂದರ್‌ಪಾಲ್ ಸಿಂಗ್

ಏಷ್ಯನ್ ಗೇಮ್ಸ್‌ನ ಶಾಟ್‌ಪುಟ್‌ ವಿಭಾಗದಲ್ಲಿ ಭಾರತದ ತಜಿಂದರ್‌ಪಾಲ್ ಸಿಂಗ್ ಸತತ ಎರಡನೇ ಬಾರಿಗೆ ಚಿನ್ನದ ಪದಕ ಗೆದ್ದಿದ್ದಾರೆ. ತಜಿಂದರ್ ಈ ಹಿಂದೆ ಅಂದರೆ 2018ರಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್​ನಲ್ಲೂ ಚಿನ್ನದ ಪದಕ ಗೆದ್ದಿದ್ದರು.

ಅವಿನಾಶ್ ಸಾಬಳೆ ಐತಿಹಾಸಿಕ ಸಾಧನೆ

ಮಹಾರಾಷ್ಟ್ರದ ಅವಿನಾಶ್ ಸಾಬಳೆ 3000 ಸ್ಟೀಪಲ್‌ಚೇಸ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದರು. ಅವಿನಾಶ್ ನೇತೃತ್ವದ ಟೀಂ ಇಂಡಿಯಾ ಅಥ್ಲೆಟಿಕ್ಸ್‌ನಲ್ಲಿ ಮೊದಲ ಚಿನ್ನವನ್ನು ಗೆದ್ದುಕೊಂಡಿತು. ಅವಿನಾಶ್ 8:19:53 ಸೆಕೆಂಡ್‌ಗಳಲ್ಲಿ ದಾಖಲೆ ಬರೆದು 3000 ಮೀಟರ್‌ಗಳನ್ನು ದಾಟಿ ಚಿನ್ನದ ಪದಕ ಗೆದ್ದರು. ಇನ್ನು ವಿಶ್ವ ಚಾಂಪಿಯನ್ ನಿಖತ್ ಜರೀನ್ ಸೆಮಿಫೈನಲ್‌ನಲ್ಲಿ ಸೋಲನುಭವಿಸಿ, ಕಂಚಿನ ಪದಕಕ್ಕೆ ತೃಪ್ತಿಪಡಬೇಕಾಯಿತು.

ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ