
Fifa World Cup 2026: ಸ್ಪೇನ್… ಮೈದಾನಕ್ಕಿಳಿದರೆ ಎದುರಾಳಿಗಳ ಎದೆಯಲ್ಲಿ ನಡುಕ ಹುಟ್ಟಿಸುವ ಜಗತ್ತಿನ ಅತ್ಯಂತ ಬಲಿಷ್ಠ ಪಡೆ. ಮುಂಚೂಣಿಯಲ್ಲಿ ಲಮಿನ್ ಯಮಾಲ್, ಮೈಕೆಲ್ ಒಯರ್ಝಾಬಲ್, ಫೆರಾನ್ ಟೊರೆಸ್ ಮತ್ತು ಡ್ಯಾನಿ ಓಲ್ಮೊ ಅವರಂತಹ ಆಕ್ರಮಣಕಾರಿ ಆಟಗಾರರಿದ್ದರೆ, ಮಿಡ್ಫೀಲ್ಡ್ನಲ್ಲಿ ರೋಡ್ರಿ, ಪೆಡ್ರಿ, ಗಾವಿ ಹಾಗೂ ಫ್ಯಾಬಿಯನ್ ರೂಯಿಝ್ ಅವರಂತಹ ಚಾಣಾಕ್ಷ ತಂತ್ರಜ್ಞರಿದ್ದಾರೆ. ಇಂತಹದೊಂದು ವಿಶ್ವದರ್ಜೆಯ ಬಳಗ ಕಣಕ್ಕಿಳಿದರೆ ಗೆಲುವು ಯಾರದ್ದು ಎಂದು ಪ್ರತ್ಯೇಕವಾಗಿ ಹೇಳುವ ಅವಶ್ಯಕತೆಯೇ ಇಲ್ಲ! ಆದರೆ ಅಟ್ಲಾಂಟಾ ಕ್ರೀಡಾಂಗಣದಲ್ಲಿ ನಡೆದಿದ್ದೇ ಬೇರೆ.
ಹೌದು, ಫಿಫಾ ವಿಶ್ವಕಪ್ ಇತಿಹಾಸದಲ್ಲೇ ಅತ್ಯಂತ ರೋಮಾಂಚನಕಾರಿ ಮತ್ತು ಅನಿರೀಕ್ಷಿತ ಪಂದ್ಯವೊಂದಕ್ಕೆ ಜೂನ್ 15 ಸಾಕ್ಷಿಯಾಗಿದೆ. ಹಾಲಿ ಯುರೋಪಿಯನ್ ಚಾಂಪಿಯನ್ಸ್ ಬಲಿಷ್ಠ ಸ್ಪೇನ್ ವಿರುದ್ಧ ಮೊದಲ ಬಾರಿಗೆ ವಿಶ್ವಕಪ್ ಆಡುತ್ತಿರುವ ಪುಟ್ಟ ರಾಷ್ಟ್ರ ಕೇಪ್ ವರ್ಡೆ ಐತಿಹಾಸಿಕ ಡ್ರಾ ಸಾಧಿಸಿ ಇಡೀ ವಿಶ್ವವೇ ತಮ್ಮತ್ತ ಬೆರಗುಗಣ್ಣಿನಿಂದ ನೋಡುವಂತೆ ಮಾಡಿದ್ದಾರೆ.
ಪಂದ್ಯದ ಆರಂಭದಿಂದಲೇ ಸ್ಪೇನ್ ತಂಡ ಪೂರ್ಣ ಹಿಡಿತ ಸಾಧಿಸಿತ್ತು. ಶೇ. 62 ರಷ್ಟು ಸಮಯ ಚೆಂಡನ್ನು ತನ್ನ ಬಳಿಯೇ ಇಟ್ಟುಕೊಂಡಿದ್ದ ಸ್ಪೇನ್, ಕೇಪ್ ವರ್ಡೆ ಗೋಲು ಪೆಟ್ಟಿಗೆಯ ಮೇಲೆ ಸರಣಿ ದಾಳಿ ನಡೆಸಿತು. ಆದರೆ ಕೇಪ್ ವರ್ಡೆ ತಂಡದ 40 ವರ್ಷದ ಅನುಭವಿ ಗೋಲ್‌ಕೀಪರ್ ‘ವೊಝಿನ್ಹಾ’ ಸ್ಪೇನ್ ಪಾಲಿಗೆ ಬಂಡೆಯಂತೆ ನಿಂತರು. ಪಂದ್ಯದುದ್ದಕ್ಕೂ ಸ್ಪೇನ್ ಹೊಡೆದ 8 ಅತ್ಯಂತ ಅಪಾಯಕಾರಿ ಶಾಟ್‌ಗಳನ್ನು ಅದ್ಭುತವಾಗಿ ತಡೆಯುವ ಮೂಲಕ ಅವರು ಪಂದ್ಯದ ಹೀರೊ ಆಗಿ ಹೊರಹೊಮ್ಮಿದರು.
ಮೊದಲಾರ್ಧದಲ್ಲಿ ಸ್ಪೇನ್ ತಂಡದ ಫೆರಾನ್ ಟೊರೆಸ್ ಹೊಡೆದ ಪ್ರಬಲ ಶಾಟ್ ಗೋಲ್ ಪೋಸ್ಟ್‌ಗೆ ಬಡಿದು ವಾಪಸ್ಸಾಯಿತು. ಅದರ ಬೆನ್ನಲ್ಲೇ ಮೈಕೆಲ್ ಒಯರ್ಝಾಬಲ್ ಹೆಡರ್ ಮೂಲಕ ಗೋಲು ಗಳಿಸಲು ಯತ್ನಿಸಿದರಾದರೂ ವೊಝಿನ್ಹಾ ಅದನ್ನು ತಡೆದರು. ಇನ್ನು ಮೊದಲಾರ್ಧ ಮುಗಿಯುವ ಕೆಲವೇ ಕ್ಷಣಗಳ ಮುನ್ನ ಐಮೆರಿಕ್ ಲ್ಯಾಪೋರ್ಟೆ ಅವರ ತಲೆಯ ಮೂಲಕ ಬಂದ ಚೆಂಡನ್ನು ವೊಝಿನ್ಹಾ ಅದ್ಭುತವಾಗಿ ಡೈವ್ ಮಾಡುವ ಮೂಲಕ ರಕ್ಷಿಸಿದರು.
ಪಂದ್ಯದ 71ನೇ ನಿಮಿಷದಲ್ಲಿ ಸ್ಪೇನ್ ತನ್ನ ಸ್ಟಾರ್ ಆಟಗಾರ ಲಮಿನ್ ಯಮಾಲ್ ಅವರನ್ನು ಮೈದಾನಕ್ಕಿಳಿಸಿತು. ಗಾಯದಿಂದ ಚೇತರಿಸಿಕೊಂಡು ಬಂದ ಯಮಾಲ್ ಕೆಲವೇ ನಿಮಿಷಗಳಲ್ಲಿ 5 ಡ್ರಿಬಲ್ಸ್ ಮಾಡಿ ಕೇಪ್ ವರ್ಡೆ ರಕ್ಷಣಾ ಕೋಟೆಯನ್ನು ಭೇದಿಸಲು ಯತ್ನಿಸಿದರು. ಆದರೆ ಕೇಪ್ ವರ್ಡೆ ಡಿಫೆಂಡರ್‌ಗಳು ಯಮಾಲ್ ಅವರಿಗೆ ಯಾವುದೇ ಅವಕಾಶ ನೀಡದೆ ಕಮಾಲ್ ಮಾಡಿದರು.
ಈ ಪಂದ್ಯ ಮುಕ್ತಾಯಗೊಳ್ಳಲು ಕೆಲವೇ ನಿಮಿಷಗಳಿರುವಾಗ ಒಯರ್ಝಾಬಲ್ ಹೊಡೆದ ಚೆಂಡು ಕೇಪ್ ವರ್ಡೆಯ ಪಿಕೊ ಲೋಪೆಸ್ ತಮ್ಮ ದೇಹವನ್ನು ಅಡ್ಡವಿಟ್ಟು ತಡೆದರು. ಇಂಜುರಿ ಟೈಮ್‌ನಲ್ಲಿ ಒಯರ್ಝಾಬಲ್ ಅವರ ಕೊನೆಯ ಹೆಡರ್ ಶಾಟ್ ಗೋಲ್ ಪೋಸ್ಟ್‌ನ ಪಕ್ಕದಿಂದ ಹೊರಹೋಗುತ್ತಿದ್ದಂತೆ, ಕೇಪ್ ವರ್ಡೆ ಆಟಗಾರರು ಮತ್ತು ಅಭಿಮಾನಿಗಳು ಸಂಭ್ರಮಾಚರಣೆಯಲ್ಲಿ ಮುಳುಗಿದರು.
ಈ ಮೂಲಕ ಕೇಪ್ ವರ್ಡೆ ತಂಡವು ಬಲಿಷ್ಠ ಸ್ಪೇನ್ ವಿರುದ್ಧ ಒಂದೇ ಒಂದು ಗೋಲು ಹೊಡೆಸಿಕೊಳ್ಳದೇ 0-0 ಅಂತರದಿಂದ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿದೆ. ಈ ಡ್ರಾನೊಂದಿಗೆ ಕೇಪ್ ವರ್ಡೆ ತಂಡವು ಒಂದು ಅಂಕ ಪಡೆದುಕೊಂಡಿದೆ.
ಇದನ್ನೂ ಓದಿ: ಮೈದಾನದಲ್ಲಿ ಕಿರಿಕ್… ಆಟಗಾರನ ಮೇಲೆ ಕೈ ಮಾಡಿದ ವೈಭವ್ ಸೂರ್ಯವಂಶಿ..!
ವಿಶ್ವದ ನಂ.1 ತಂಡಗಳಲ್ಲೊಂದಾದ ಸ್ಪೇನ್ ವಿರುದ್ಧ ಪಡೆದ ಈ 1 ಪಾಯಿಂಟ್, ಕೇಪ್ ವರ್ಡೆ ಫುಟ್‌ಬಾಲ್ ಇತಿಹಾಸದಲ್ಲೇ ಸುವರ್ಣಾಕ್ಷರಗಳಲ್ಲಿ ಬರೆದಿಡುವಂತಹ ಸಾಧನೆಯಾಗಿದೆ.
Published On - 8:37 am, Tue, 16 June 26