ಬರ್ಮಿಂಗ್ಹ್ಯಾಮ್ನಲ್ಲಿ ನಡೆಯುತ್ತಿದ್ದ ಕಾಮನ್ವೆಲ್ತ್ ಗೇಮ್ಸ್ 2022ಕ್ಕೆ (Commonwealth Games 2022) ಅದ್ಧೂರಿ ತೆರೆ ಬಿದ್ದಿದೆ. ಭಾರತದ ಕಾಲ ಮಾನದ ಪ್ರಕಾರ ಸೋಮವಾರ ತಡರಾತ್ರಿ ಕ್ರೀಡಾಕೂಡ ಮುಕ್ತಾಯಗೊಂಡಿದ್ದು ಭಾರತ (India) ಒಟ್ಟು 61 ಪದಕಗಳನ್ನು ಪಡೆದುಕೊಂಡ ಸಾಧನೆ ಮಾಡಿದೆ. 22 ಚಿನ್ನ, 16 ಬೆಳ್ಳಿ ಮತ್ತು 23 ಕಂಚಿನ ಪದಕ ಗೆಲ್ಲುವ ಮೂಲಕ ಪದಕಗಳ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದು ಅತ್ಯುತ್ತಮ ಪ್ರದರ್ಶನ ನೀಡಿದೆ. ಸಮಾರೋಪ ಸಮಾರಂಭದಲ್ಲಿ ಟಿಟಿಪಟು ಅಚಂತ ಶರತ್ ಕಮಲ್ ಮತ್ತು ಬಾಕ್ಸರ್ ನಿಖತ್ ಜರೀನ್ ಭಾರತದ ತ್ರಿವರ್ಣ ಧ್ವಜ ಹಿಡಿದು ಸಾಗಿದರು. ಉದ್ಘಾಟನ ಸಮಾರಂಭದಲ್ಲಿ ಪಿ.ವಿ. ಸಿಂಧು (PV Sindhu) ಮತ್ತು ಹಾಕಿ ತಂಡದ ನಾಯಕ ಮನ್‌ಪ್ರೀತ್ ಸಿಂಗ್ ಭಾರತದ ಧ್ವಜಧಾರಿಗಳಾಗಿದ್ದರು. ನಾಲ್ಕು ವರ್ಷಗಳಿಗೊಮ್ಮೆ ನಡೆಯುವ ಕಾಮನ್ವೆಲ್ತ್ ಕ್ರೀಡಾ ಕೂಡ 2026ಕ್ಕೆ ಆಸ್ಟ್ರೇಲಿಯದ ವಿಕ್ಟೋರಿಯದಲ್ಲಿ ಆಯೋಜಿಸಲಾಗಿದೆ.
ಕಾಮನ್ವೆಲ್ತ್ ಗೇಮ್ಸ್ನ ಕೊನೆಯ ದಿನ ಕೂಡ ಭಾರತ ಆರು ಪದಕಗಳನ್ನು ಗೆದ್ದು ಬೀಗಿತು. ಇದರಲ್ಲಿ ನಾಲ್ಕು ಚಿನ್ನ, ಒಂದು ಬೆಳ್ಳಿ ಹಾಗೂ ಕಂಚನ್ನು ಭಾರತ ಪಡೆದುಕೊಂಡಿತು. ಮೊದಲಿಗರಾಗಿ ಬ್ಯಾಡ್ಮಿಂಟನ್ ಸಿಂಗಲ್ಸ್ ಫೈನಲ್‌ನಲ್ಲಿ ಪಿ.ವಿ. ಸಿಂಧು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡರು. ಕೆನಡಾದ ಮಿಶೆಲ್ ಅವರನ್ನು ಪರಾಭವಗೊಳಿಸಿ ಬಂಗಾರಕ್ಕೆ ಕೊರಳೊಡ್ಡಿದರು. ಆದರೆ, ಪುರುಷರ ಹಾಕಿ ಫೈನಲ್‌ನಲ್ಲಿ ಆಸ್ಟ್ರೇಲಿಯಾ ವಿರುದ್ದ ಭಾರತ 0-7 ಅಂತರದಿಂದ ಹೀನಾಯ ಸೋಲನುಭವಿಸಿ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟುಕೊಳ್ಳಬೇಕಾಯಿತು.
ಇತ್ತ ಟೇಬಲ್ ಟೆನಿಸ್ ಆಟಗಾರ ಅಚಂತಾ ಶರತ್ ಕಮಲ್ ಚಿನ್ನದ ನಗು ಬೀರಿದರು. ಸೋಮವಾರ ನಡೆದ ಪುರುಷರ ಸಿಂಗಲ್ಸ್ ವಿಭಾಗದ ಫೈನಲ್‌ನಲ್ಲಿ ಅವರು 11-13, 11-7, 11-2, 11-6, 11-8 ರಲ್ಲಿ ಇಂಗ್ಲೆಂಡ್‌ನ ಲಿಯಾಮ್ ಪಿಚ್‌ಫೋರ್ಡ್ ಅವರನ್ನು ಮಣಿಸಿದರು. ಈ ಕೂಟದಲ್ಲಿ ಅವರು ಒಟ್ಟಾರೆ ಮೂರು ಚಿನ್ನ ಗೆದ್ದ ಸಾಧನೆ ಮಾಡಿದರು. ಮಿಶ್ರ ಡಬಲ್ಸ್ ಮತ್ತು ತಂಡ ವಿಭಾಗದಲ್ಲೂ ಅವರಿಗೆ ಚಿನ್ನ ಲಭಿಸಿತ್ತು.
ಇನ್ನು ಬ್ಯಾಡ್ಮಿಂಟನ್ ಪುರುಷರ ಡಬಲ್ಸ್ ವಿಭಾಗದಲ್ಲಿ ಭಾರತದ ಸಾತ್ವಿಕ್ ಸಾಯಿರಾಜ್ ರಾಂಕಿರೆಡ್ಡಿ ಹಾಗೂ ಚಿರಾಗ್ ಶೆಟ್ಟಿ ಚಿನ್ನದ ಪದಕವನ್ನು ಜಯಿಸಿದರು. ಫೈನಲ್ ಪಂದ್ಯದಲ್ಲಿ ಸಾತ್ವಿಕ್ ಹಾಗೂ ಚಿರಾಗ್ ಜೋಡಿ ಇಂಗ್ಲೆಂಡ್‌ನ ಬೆನ್ ಲೇನ್ ಹಾಗೂ ಸಿಯಾನ್ ವೆಂಡಿ ಅವರನ್ನು 21-15, 21-13 ಗೇಮ್‌ಗಳ ಅಂತರದಿಂದ ಮಣಿಸಿದರು. ಅಂತೆಯೆ ಪುರುಷ ಟೇಬಲ್ ಟೆನ್ನಿಸ್ ಸಿಂಗಲ್ಸ್ ಪಂದ್ಯದಲ್ಲಿ ಭಾರತದ ಜ್ಞಾನಶೇಖರನ್ ಸತ್ಯನ್ ಕಂಚಿನ ಪದಕ ಗೆದ್ದಿದ್ದಾರೆ. ಆತಿಥೇಯ ಇಂಗ್ಲೆಂಡ್‌ನ ಪೌಲ್ ಡ್ರಿಂಕ್‌ಹಾಲ್ ಅವರನ್ನು 4-3 ಅಂತರದಿಂದ ಸೋಲಿಸುವ ಮೂಲಕ ಜಿ. ಸತ್ಯಜಿತ್ ಮೂರನೇ ಸ್ಥಾನ ಪಡೆದರು.
ಪುರುಷರ ಬ್ಯಾಡ್ಮಿಂಟನ್ ಸಿಂಗಲ್ಸ್ನಲ್ಲಿ ಭಾರತದ ಲಕ್ಷ್ಯ ಸೇನ್ ಚಿನ್ನದ ಪದಕಕ್ಕೆ ಮುತ್ತಿಟ್ಟಿದ್ದಾರೆ. ಫೈನಲ್‌ನಲ್ಲಿ ಮಲೇಷ್ಯಾದ ಎನ್‌ಜಿ ತ್ಸೆ ಯೋಂಗ್ ಅವರನ್ನು 21-191, 21-9, 21-16 ಸೆಟ್ಗಳಿಂದ ಮಣಿಸುವ ಮೂಲಕ ಭಾರತೀಯ ಬ್ಯಾಡ್ಮಿಂಟನ್ ತಾರೆ ಈ ಸಾಧನೆ ಮಾಡಿದರು.
Published On - 7:23 am, Tue, 9 August 22