Table Tennis: ಟೇಬಲ್ ಟೆನ್ನಿಸ್ನಲ್ಲಿ ಭಾರತಕ್ಕೆ ಚಿನ್ನದ ಪದಕ ತಂದುಕೊಟ್ಟ ಅಚಂತ ಶರತ್
Achanta Sharath Kamal: 2018 ರಲ್ಲಿ ನಡೆದ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಚಂತ ಕಂಚಿನ ಪದಕ ಗೆದ್ದಿದ್ದರು ಎಂಬುದು ವಿಶೇಷ.
ಬರ್ಮಿಂಗ್‌ಹ್ಯಾಮ್‌ನಲ್ಲಿ ನಡೆಯುತ್ತಿರುವ ಕಾಮನ್‌ವೆಲ್ತ್ ಗೇಮ್ಸ್-2022ರ ಟೇಬಲ್ ಟೆನ್ನಿಸ್ನ ಪುರುಷರ ಸಿಂಗಲ್ಸ್ನಲ್ಲಿ ಭಾರತದ ಅಚಂತ ಶರತ್ ಕಮಲ್ (Achanta Sharath Kamal) ಚಿನ್ನದ ಪದಕ ಗೆದ್ದುಕೊಂಡಿದ್ದಾರೆ. ಸೋಮವಾರ ನಡೆದ ಫೈನಲ್ ಪಂದ್ಯದಲ್ಲಿ ಆತಿಥೇಯ ಇಂಗ್ಲೆಂಡ್‌ನ ಲಿಯಾಮ್ ಪಿಚ್‌ಫೋರ್ಡ್ ಅವರನ್ನು ಸೋಲಿಸಿ ಅಚಂತ ಭಾರತಕ್ಕೆ ಬಂಗಾರ ಪದಕ ತಂದುಕೊಟ್ಟರು. ಭಾರೀ ಕುತೂಹಲಕ್ಕೆ ಕಾರಣವಾಗಿದ್ದ ಈ ಪಂದ್ಯದಲ್ಲಿ ಅಚಂತ ಮೊದಲ ಸೆಟ್ನಲ್ಲಿ ಸೋತು ಆತಂಕ ಮೂಡಿಸಿದ್ದರು. ಇದಾದ ಬಳಿಕ ಬ್ಯಾಕ್ ಟು ಬ್ಯಾಕ್ ಮೂರು ಸೆಟ್ಗಳಲ್ಲಿ ಪಾರುಪತ್ಯ ಮೆರೆಯುವ ಮೂಲಕ ಲಿಯಾಮ್ ಪಿಚ್‌ಫೋರ್ಡ್ ಅವರನ್ನು 11-13, 11-7, 11-2, 11-7 ಸೆಟ್‌ಗಳ ಅಂತರದಿಂದ ಮಣಿಸಿದರು.
2018 ರಲ್ಲಿ ನಡೆದ ಗೋಲ್ಡ್ ಕೋಸ್ಟ್ ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪುರುಷರ ಸಿಂಗಲ್ಸ್ ವಿಭಾಗದಲ್ಲಿ ಅಚಂತ ಕಂಚಿನ ಪದಕ ಗೆದ್ದಿದ್ದರು ಎಂಬುದು ವಿಶೇಷ. ಇದೀಗ ಚಿನ್ನದ ಪದಕದೊಂದಿಗೆ ತನ್ನ ಅಭಿಯಾನವನ್ನು ಅಂತ್ಯಗೊಳಿಸಿದ್ದಾರೆ. ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್‌ನ ಪೌಲ್ ಡ್ರಿಂಕ್‌ಹಾಲ್ ಅವರನ್ನು ಸೋಲಿಸುವ ಮೂಲಕ ಅಚಂತ ಶರತ್ ಕಮಲ್ ಫೈನಲ್‌ಗೆ ಲಗ್ಗೆಯಿಟ್ಟಿದ್ದರು.
ಫೈನಲ್ನಲ್ಲೂ ಕೂಡ ಇಂಗ್ಲೆಂಡ್ ಎದುರಾಳಿ ಕಣದಲ್ಲಿದ್ದರಿಂದ ಫೈನಲ್ ಫೈಟ್ನಲ್ಲಿ ರೋಚಕ ಹೋರಾಟವನ್ನು ನಿರೀಕ್ಷಿಸಲಾಗಿತ್ತು. ಅದರಂತೆ ಮೊದಲ ಸೆಟ್ ಅನ್ನು ಪಿಚ್‌ಫೋರ್ಡ್ 13-11 ರಿಂದ ಗೆದ್ದುಕೊಂಡರು. ಆದರೆ ಬಳಿಕ ಕಂಬ್ಯಾಕ್ ಮಾಡಿದ ಅಂಚತ ಏಕಪಕ್ಷೀಯವಾಗಿಸಿದ್ದು ಈಗ ಇತಿಹಾಸ.
ಅಂದಹಾಗೆ ಇದು ಈ ಬಾರಿಯ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಅಚಂತ ಶರತ್ ಕಮಲ್ ಗಳಿಸಿದ ಮೂರನೇ ಚಿನ್ನ ಎಂಬುದು ಮತ್ತೊಂದು ವಿಶೇಷ. ಇದಕ್ಕೂ ಮುನ್ನ ಅವರು ಪುರುಷರ ತಂಡದಲ್ಲಿ ಕಾಣಿಸಿಕೊಂಡ ಅಚಂತ ಚಿನ್ನದ ಪದಕ ಗೆದ್ದ ಟೀಮ್ನ ಭಾಗವಾಗಿದ್ದರು. ಹಾಗೆಯೇ ಮಿಶ್ರ ಡಬಲ್ಸ್ನಲ್ಲಿ ಯುವ ಮಹಿಳಾ ಆಟಗಾರ್ತಿ ಶ್ರೀಜಾ ಅಕುಲಾ ಅವರೊಂದಿಗೆ ಚಿನ್ನದ ಪದಕವನ್ನು ಗೆದ್ದಿದ್ದರು. ಇದಲ್ಲದೆ ಪುರುಷರ ಡಬಲ್ಸ್ ವಿಭಾಗದಲ್ಲಿ ಜಿ ಸತ್ಯನ್ ಅವರೊಂದಿಗೆ ಸೇರಿ ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದರು. ಈ ಮೂಲಕ ಕಾಮನ್‌ವೆಲ್ತ್ ಕ್ರೀಡಾಕೂಟದ ಟೇಬಲ್ ಟೆನ್ನಿಸ್ನಲ್ಲಿ ಅಚಂತ ಶರತ್ ಕಮಲ್ ಪಾರುಪತ್ಯ ಮೆರೆದಿದ್ದಾರೆ.
Published On - 6:21 pm, Mon, 8 August 22