41 ಬೌಂಡರಿ, 22 ಸಿಕ್ಸರ್ ಸಹಿತ 327 ರನ್ ಚಚ್ಚಿದ 13 ವರ್ಷದ ಅಯಾನ್ ರಾಜ್
Ayan Raj: ಬಿಹಾರದ ಮುಜಫರ್ಪುರದ 13 ವರ್ಷದ ಅಯಾನ್ ರಾಜ್ ಜಿಲ್ಲಾ ಕ್ರಿಕೆಟ್ ಲೀಗ್‌ನಲ್ಲಿ 327 ರನ್ ಬಾರಿಸಿ ಐತಿಹಾಸಿಕ ಸಾಧನೆ ಮಾಡಿದ್ದಾರೆ. ಕೇವಲ 134 ಎಸೆತಗಳಲ್ಲಿ 41 ಬೌಂಡರಿ ಮತ್ತು 22 ಸಿಕ್ಸರ್‌ಗಳೊಂದಿಗೆ ಈ ಸಾಧನೆ ಮಾಡಿದ ಅಯಾನ್, ಅಂಡರ್-14 ಟೂರ್ನಮೆಂಟ್‌ನಲ್ಲಿ ತ್ರಿಶತಕ ಬಾರಿಸಿದ ಮೊದಲ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರ ಸ್ಫೂರ್ತಿ ವೈಭವ್ ಸೂರ್ಯವಂಶಿ ಎಂದು ಅಯಾನ್ ಹೇಳಿಕೊಂಡಿದ್ದಾರೆ.

ಬಿಹಾರದ ಮುಜಫರ್‌ಪುರ ಜಿಲ್ಲೆಯ 13 ವರ್ಷದ ಅಯಾನ್ ರಾಜ್ (Ayan Raj ) ಜಿಲ್ಲಾ ಕ್ರಿಕೆಟ್ ಲೀಗ್‌ನಲ್ಲಿ 327 ರನ್ ಬಾರಿಸುವ ಮೂಲಕ ಐತಿಹಾಸಿಕ ಇನ್ನಿಂಗ್ಸ್ ಆಡಿದ್ದಾರೆ. ಅಯಾನ್ ಕೇವಲ 134 ಎಸೆತಗಳಲ್ಲಿ 41 ಬೌಂಡರಿಗಳು ಮತ್ತು 22 ಸಿಕ್ಸರ್‌ಗಳ ಸಹಿತ ಈ ತ್ರಿಶತಕ ಸಿಡಿಸಿದ್ದಾರೆ. ಈ ಮೂಲಕ ಅಯಾನ್ ಅಂಡರ್-14 ಟೂರ್ನಮೆಂಟ್‌ನಲ್ಲಿ ತ್ರಿಶತಕ ಬಾರಿಸಿದ ಮೊದಲ ಆಟಗಾರ ಎಂಬ ದಾಖಲೆ ಬರೆದಿದ್ದಾರೆ. ಈ ಸ್ಪರ್ಧೆಯಲ್ಲಿ ಇದಕ್ಕೂ ಮೊದಲು ಯಾವುದೇ ಆಟಗಾರ 300 ರನ್ ಗಳಿಸಲು ಸಾಧ್ಯವಾಗಿರಲಿಲ್ಲ. ಪ್ರಸ್ತುತ 8 ನೇ ತರಗತಿ ಓದುತ್ತಿರುವ ಅಯಾನ್ ರಾಜ್ ಈ ಲೀಗ್‌ನಲ್ಲಿ ತ್ರಿಶತಕ ಸಿಡಿಸಿದ ಮೊದಲ ಆಟಗಾರನೆನಿಸಿಕೊಂಡಿದ್ದಾರೆ.
ಬೌಂಡರಿಗಳಿಂದಲೇ 296 ರನ್
ಜಿಲ್ಲಾ ಕ್ರಿಕೆಟ್ ಲೀಗ್‌ನ 30 ಓವರ್‌ಗಳ ಪಂದ್ಯದಲ್ಲಿ ಸಂಸ್ಕೃತಿ ಕ್ರಿಕೆಟ್ ಅಕಾಡೆಮಿ ಪರ ಆಡುತ್ತಿದ್ದ ಅಯಾನ್ 327 ರನ್‌ಗಳ ಸ್ಫೋಟಕ ಇನ್ನಿಂಗ್ಸ್ ಆಡಿದ್ದಾರೆ. ಈ ಇನ್ನಿಂಗ್ಸ್ ಅವರ ಪ್ರತಿಭೆಯ ಪ್ರದರ್ಶನ ಮಾತ್ರವಲ್ಲದೆ, ಭಾರತೀಯ ಕ್ರಿಕೆಟ್‌ನ ಉಜ್ವಲ ಭವಿಷ್ಯದತ್ತಲೂ ಬೆರಳು ತೋರಿಸುತ್ತದೆ. ಈ ಪಂದ್ಯದಲ್ಲಿ, ಅಯಾನ್ 134 ಎಸೆತಗಳನ್ನು ಎದುರಿಸಿ 244 ಸ್ಟ್ರೈಕ್ ರೇಟ್‌ನಲ್ಲಿ ರನ್ ಗಳಿಸಿದರು. ಅಯಾನ್ ಅವರ ಈ ಇನ್ನಿಂಗ್ಸ್‌ನಲ್ಲಿ, 296 ರನ್‌ಗಳು ಕೇವಲ ಬೌಂಡರಿಗಳಿಂದ (ಬೌಂಡರಿಗಳು ಮತ್ತು ಸಿಕ್ಸರ್‌ಗಳು) ಬಂದಿದ್ದು, ಇದು ಅವರ ಆಕ್ರಮಣಕಾರಿ ಬ್ಯಾಟಿಂಗ್ ಅನ್ನು ತೋರಿಸುತ್ತದೆ.
ವೈಭವ್ ಭಾಯ್ ನನ್ನ ದೊಡ್ಡ ಸ್ಫೂರ್ತಿ
ಅಯಾನ್ ರಾಜ್ ತಮ್ಮ ಈ ಐತಿಹಾಸಿಕ ಸಾಧನೆಗೆ ತಮ್ಮ ಆಪ್ತ ಸ್ನೇಹಿತ ಮತ್ತು ಭಾರತೀಯ ಕ್ರಿಕೆಟ್‌ನ ಉದಯೋನ್ಮುಖ ತಾರೆ ವೈಭವ್ ಸೂರ್ಯವಂಶಿ ಅವರಿಗೆ ಮನ್ನಣೆ ನೀಡಿದ್ದಾರೆ. ಈ ಬಗ್ಗೆ ಮಾಧ್ಯಮದೊಂದಿಗೆ ಮಾತನಾಡಿದ ಅಯಾನ್, ‘ವೈಭವ್ ಭಾಯ್ ನನ್ನ ದೊಡ್ಡ ಸ್ಫೂರ್ತಿ. ನಾವು ಬಾಲ್ಯದಿಂದಲೂ ಒಟ್ಟಿಗೆ ಕ್ರಿಕೆಟ್ ಆಡುತ್ತಿದ್ದೇವೆ. ಅವರು ಇಂದು ಭಾರತ ಕ್ರಿಕೆಟ್ನಲ್ಲಿ ದೊಡ್ಡ ಹೆಸರು ಮಾಡಿದ್ದು, ನಾನು ಕೂಡ ಅವರ ಹೆಜ್ಜೆಗಳನ್ನು ಅನುಸರಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.
90 ಎಸೆತಗಳಲ್ಲಿ 190 ರನ್ ಚಚ್ಚಿದ ವೈಭವ್ ಸೂರ್ಯವಂಶಿ
ಕ್ರಿಕೆಟ್‌ಗೆ ನನ್ನನ್ನು ಅರ್ಪಿಸಿಕೊಂಡೆ
ಮುಂದುವರೆದು ಮಾತನಾಡಿದ ಆಯನ್, ‘ಭಾರತಕ್ಕಾಗಿ ಆಡುವುದು ಮತ್ತು ದೇಶವನ್ನು ಹೆಮ್ಮೆಪಡುವಂತೆ ಮಾಡುವುದು ನನ್ನ ಕನಸು. ನಾನು 8 ನೇ ವಯಸ್ಸಿನಲ್ಲಿ ಕ್ರಿಕೆಟ್ ಆಡಲು ಪ್ರಾರಂಭಿಸಿದೆ. ನನಗೆ ಅಧ್ಯಯನ ಮಾಡಲು ಇಷ್ಟವಿರಲಿಲ್ಲ, ಆದ್ದರಿಂದ ನಾನು ಕ್ರಿಕೆಟ್‌ಗೆ ನನ್ನನ್ನು ಅರ್ಪಿಸಿಕೊಂಡೆ. ವೈಭವ್ ಸೂರ್ಯವಂಶಿ ನನ್ನ ಬಾಲ್ಯದ ಸ್ನೇಹಿತ ಮತ್ತು ನಾನು ಅವರನ್ನು ನೋಡಿ ಸ್ಫೂರ್ತಿ ಪಡೆದಿದ್ದೇನೆ’ ಎಂದಿದ್ದಾರೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 5:17 pm, Mon, 16 June 25
