ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯಧಿಕ ಗರಿಷ್ಠ ರನ್ಗಳಿಸಿದ ಬ್ಯಾಟರ್ ಯಾರೆಂಬ ಪ್ರಶ್ನೆಗೆ ಥಟ್ಟನೆ ಬರುವ ಉತ್ತರ ವೆಸ್ಟ್ ಇಂಡೀಸ್ನ ಬ್ರಿಯಾನ್ ಲಾರಾ. 2004 ರಲ್ಲಿ ಲಾರಾ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ 400 ರನ್ ಬಾರಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು. ಇದೀಗ ಅಂತಹದ್ದೇ ಸಾಧನೆ ಮಾಡಿದ್ದಾರೆ ಭಾರತೀಯ ಪ್ರತಿಭೆ ದ್ರೋಣ ದೇಸಾಯಿ. ಆದರೆ ಇದು ಶಾಲಾ ಕ್ರಿಕೆಟ್ನಲ್ಲಿ ಎಂಬುದಷ್ಟೇ ವ್ಯತ್ಯಾಸ.
ಗುಜರಾತ್ನ 18 ವರ್ಷದ ಬ್ಯಾಟ್ಸ್ಮನ್ ದ್ರೋಣ ದೇಸಾಯಿ ಶಾಲಾ ಪಂದ್ಯಾವಳಿಯಲ್ಲಿ ಏಕಾಂಗಿಯಾಗಿ 498 ರನ್ ಬಾರಿಸಿ ಇಡೀ ವಿಶ್ವದ ಗಮನ ಸೆಳೆದಿದ್ದಾರೆ. ಅಹಮದಾಬಾದ್ನಲ್ಲಿ ನಡೆದ 19 ವರ್ಷದೊಳಗಿನವರ ಈ ಪಂದ್ಯಾವಳಿಯಲ್ಲಿ ಸೇಂಟ್ ಕ್ಸೇವಿಯರ್ಸ್ ಮತ್ತು ಜೆಎಲ್ ಇಂಗ್ಲಿಷ್ ಸ್ಕೂಲ್ ತಂಡಗಳು ಮುಖಾಮುಖಿಯಾಗಿದ್ದವು.
ಈ ಪಂದ್ಯದಲ್ಲಿ ಸೇಂಟ್ ಕ್ಸೇವಿಯರ್ಸ್ ಶಾಲೆಯ ಪರ ಮೂರನೇ ಕ್ರಮಾಂಕದಲ್ಲಿ ಕಣಕ್ಕಿಳಿದ ದ್ರೋಣ ದೇಸಾಯಿ 320 ಎಸೆತಗಳಲ್ಲಿ 498 ರನ್ ಬಾರಿಸಿ ಹಿಂತಿರುಗಿದ್ದರು. ಒಟ್ಟು 372 ನಿಮಿಷಗಳ ಕಾಲ ಕ್ರೀಸ್ನಲ್ಲಿದ್ದ ದೇಸಾಯಿ ಬ್ಯಾಟ್ನಿಂದ ಸಿಡಿದ ಫೋರ್ಗಳ ಸಂಖ್ಯೆ 86, ಹಾಗೆಯೇ 7 ಸಿಕ್ಸ್ಗಳನ್ನು ಸಹ ಬಾರಿಸಿದ್ದಾರೆ. ಅಂದರೆ ಬೌಂಡರಿಗಳಿಂದೇ ದ್ರೋಣ ದೇಸಾಯಿ 386 ರನ್ಗಳನ್ನು ಕಲೆಹಾಕಿದ್ದಾರೆ.
ಇದನ್ನೂ ಓದಿ: IPL 2025: RCB ಉಳಿಸಿಕೊಳ್ಳುವ ಅನ್ಕ್ಯಾಪ್ಡ್ ಆಟಗಾರ ಯಾರು?
ಇನ್ನು ದ್ರೋಣ ದೇಸಾಯಿ ಔಟಾಗುವ ವೇಳೆ ತಂಡವು 775 ರನ್ ಕಲೆಹಾಕಿತು. ಅಲ್ಲದೆ ಅಂತಿಮವಾಗಿ ಸೇಂಟ್ ಕ್ಸೇವಿಯರ್ಸ್ ತಂಡವು 844 ರನ್ ಗಳಿಸಿ ಇನ್ನಿಂಗ್ಸ್ ಡಿಕ್ಲೇರ್ ಘೋಷಿಸಿದರು.
ಸೇಂಟ್ ಕ್ಸೇವಿಯರ್ಸ್ ಶಾಲಾ ತಂಡ ಕಲೆಹಾಕಿದ 844 ರನ್ಗಳಿಗೆ ಪ್ರತಿಯಾಗಿ ಇನಿಂಗ್ಸ್ ಆರಂಭಿಸಿದ ಜೆಎಲ್ ಇಂಗ್ಲಿಷ್ ಸ್ಕೂಲ್ ತಂಡವು ಕೇವಲ 40 ರನ್ಗಳಿಗೆ ಆಲೌಟ್ ಆದರು. ಇನ್ನು ಫಾಲೋಆನ್ನೊಂದಿಗೆ ದ್ವಿತೀಯ ಇನಿಂಗ್ಸ್ ಆರಂಭಿಸಿದ ಜೆಎಲ್ ಇಂಗ್ಲಿಷ್ ತಂಡವು 92 ರನ್ಗಳಿಗೆ ಕುಸಿಯಿತು. ಈ ಮೂಲಕ ಸೇಂಟ್ ಕ್ಸೇವಿಯರ್ ತಂಡವು ಇನ್ನಿಂಗ್ಸ್ ಮತ್ತು 712 ರನ್ಗಳ ಭರ್ಜರಿ ಜಯ ಸಾಧಿಸಿತು.
ಈ ಪಂದ್ಯದಲ್ಲಿ ದ್ರೋಣ ದೇಸಾಯಿ 498 ರನ್ಗಳಿಸಿದರೂ ಇದು ದಾಖಲೆಯಲ್ಲ ಎಂಬುದು ವಿಶೇಷ. ಏಕೆಂದರೆ 2016 ರಲ್ಲಿ ನಡೆದ ಶಾಲಾ ಕ್ರಿಕೆಟ್ನಲ್ಲಿ ಪ್ರಣವ್ ಧನವಾಡೆ ಅಜೇಯ 1009* ರನ್ ಬಾರಿಸಿ ದಾಖಲೆ ನಿರ್ಮಿಸಿದ್ದರು. ಅಂದು ಆರ್ಯ ಗುರುಕುಲ ವಿರುದ್ಧ ಕೆಸಿ ಗಾಂಧಿ ಶಾಲೆಯ ಪರವಾಗಿ ಇನ್ನಿಂಗ್ಸ್ ಆಡಿದ ಪ್ರಣವ್ 1000 ರನ್ ಗಳಿಸಿದ ಮೊದಲ ಬ್ಯಾಟ್ಸ್ಮನ್ ಎಂಬ ದಾಖಲೆಯನ್ನು ಬರೆದಿದ್ದರು. ಹಾಗೆಯೇ 2014 ರಲ್ಲಿ ಶಾಲಾ ಪಂದ್ಯಾವಳಿಯಲ್ಲಿ ಪೃಥ್ವಿ ಶಾ 546 ರನ್ ಬಾರಿಸಿ ಮಿಂಚಿದ್ದರು. ಇದೀಗ ಶಾಲಾ ಕ್ರಿಕೆಟ್ ಪಂದ್ಯಾವಳಿಯಲ್ಲಿ ಅಬ್ಬರಿಸಿದ ಬ್ಯಾಟರ್ಗಳ ಪಟ್ಟಿಯಲ್ಲಿ ದ್ರೋಣ ದೇಸಾಯಿ ಕೂಡ ಸೇರ್ಪಡೆಯಾಗಿದ್ದಾರೆ.