
ಕ್ರಿಕೆಟ್ ಜಗತ್ತಿನಲ್ಲಿ 35 ವರ್ಷ ದಾಟುತ್ತಿದ್ದಂತೆ ಆಟಗಾರರು ನಿವೃತ್ತಿಯ ಬಗ್ಗೆ ಆಲೋಚಿಸಲು ಶುರು ಮಾಡುತ್ತಾರೆ. ಆದರೆ, ಸೌತ್ ಆಫ್ರಿಕಾದ ಹಿರಿಯ ಲೆಗ್-ಸ್ಪಿನ್ನರ್ ಇಮ್ರಾನ್ ತಾಹಿರ್ ವಿಷಯದಲ್ಲಿ ಇದು ಉಲ್ಟಾ! ತಮ್ಮ 47ನೇ ವಯಸ್ಸಿನಲ್ಲಿ ತಾಹಿರ್ ಟಿ20 ಕ್ರಿಕೆಟ್ ಇತಿಹಾಸದಲ್ಲೇ ಯಾರೂ ಮಾಡದ ಹೊಸ ವಿಶ್ವ ದಾಖಲೆಯನ್ನು ಬರೆದಿದ್ದಾರೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ ಟೂರ್ನಿಯಲ್ಲಿ ಗಯಾನಾ ಅಮೆಝಾನ್ ವಾರಿಯರ್ಸ್ ತಂಡದ ಪರ ಕಣಕ್ಕಿಳಿಯುತ್ತಿರುವ ಇಮ್ರಾನ್ ತಾಹಿರ್, ಟಿ20 ಕ್ರಿಕೆಟ್ ಇತಿಹಾಸದಲ್ಲೇ ಐದು ವಿಕೆಟ್ ಪಡೆದ ಅತ್ಯಂತ ಹಿರಿಯ ಆಟಗಾರ ಎಂಬ ಐತಿಹಾಸಿಕ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಸೆಂಟ್ ಲೂಸಿಯಾ ಕಿಂಗ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಇಮ್ರಾನ್ ತಾಹಿರ್ ತಮ್ಮ ಸ್ಪಿನ್ ಜಾಲದ ಮೂಲಕ ಎದುರಾಳಿ ಬ್ಯಾಟರ್‌ಗಳನ್ನು ಅಕ್ಷರಶಃ ನಡುಗಿಸಿದರು. ಕೇವಲ 4 ಓವರ್‌ಗಳಲ್ಲಿ 17 ರನ್ ನೀಡಿ 5 ವಿಕೆಟ್ ಕಬಳಿಸುವ ಮೂಲಕ ಟಿ20 ಕ್ರಿಕೆಟ್ನಲ್ಲಿ ಹೊಸ ವಿಶ್ವ ದಾಖಲೆ ಬರೆದರು.
ಇದಕ್ಕೂ ಮುನ್ನ ಈ ವಿಶ್ವ ದಾಖಲೆ ಕುಕ್ ಐಲ್ಯಾಂಡ್ಸ್‌ನ ತೋಮಕನುತೆ ರಿತಾವಾ ಹೆಸರಿನಲ್ಲಿತ್ತು. ಅವರು 2022ರಲ್ಲಿ ತಮ್ಮ 46 ವರ್ಷ 299 ದಿನಗಳ ಪ್ರಾಯದಲ್ಲಿ 5 ವಿಕೆಟ್ ಪಡೆದಿದ್ದರು. ಇದೀಗ 47 ವರ್ಷದ ಇಮ್ರಾನ್ ತಾಹಿರ್ ಆ ದಾಖಲೆಯನ್ನು ಅಳಿಸಿ ಹಾಕಿ ಹೊಸ ವರ್ಲ್ಡ್ ರೆಕಾರ್ಡ್ ಬರೆದಿದ್ದಾರೆ.
Tahir is off again and AGAIN!💨
A double strike for Imran Tahir!🇬🇾 x 🇱🇨#CPL26 #GAWvSLK #CricketPlayedLouder #BiggestPartyInSport #ElDorado pic.twitter.com/Px6ov04Njn
— CPL T20 (@CPL) September 9, 2026
ಕೇವಲ ಬೌಲಿಂಗ್ ಮಾತ್ರವಲ್ಲದೆ, ಇತ್ತೀಚೆಗಷ್ಟೇ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವನ್ನು ಮುನ್ನಡೆಸಿ ಸತತ ಗ್ಲೋಬಲ್ ಸೂಪರ್ ಲೀಗ್ (GSL) ಟಿ20 ಟ್ರೋಫಿ ಗೆದ್ದುಕೊಡುವ ಮೂಲಕ ಟಿ20 ಟ್ರೋಫಿ ಗೆದ್ದ ಅತ್ಯಂತ ಹಿರಿಯ ನಾಯಕ ಎಂಬ ದಾಖಲೆಯನ್ನೂ ತಾಹಿರ್ ತಮ್ಮದಾಗಿಸಿಕೊಂಡಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಸೆಂಟ್ ಲೂಸಿಯಾ ಕಿಂಗ್ಸ್ ತಂಡವು ಒಂದು ವಿಕೆಟ್ ನಷ್ಟಕ್ಕೆ 51 ರನ್ ಗಳಿಸಿ ಸುಸ್ಥಿತಿಯಲ್ಲಿತ್ತು. ಈ ಹಂತದಲ್ಲಿ ದಾಳಿಗಿಳಿದ ಇಮ್ರಾನ್ ತಾಹಿರ್ ತಮ್ಮ ಗೂಗ್ಲಿಗಳ ಮೂಲಕ ಎದುರಾಳಿ ಬ್ಯಾಟರ್ಗಳಿಗೆ ಪೆವಿಲಿಯನ್ ಹಾದಿ ತೋರಿಸಿದರು. ಪರಿಣಾಮ ಸೆಂಟ್ ಲೂಸಿಯಾ ತಂಡವು 18.5 ಓವರ್‌ಗಳಲ್ಲಿ 119 ರನ್ಗಳಿಸಿ ಆಲೌಟ್ ಆಯಿತು.
ಇದನ್ನೂ ಓದಿ: ಫಿಟ್ನೆಸ್ ಟೆಸ್ಟ್ನಲ್ಲಿ ಫೇಲ್: ಟೀಮ್ ಇಂಡಿಯಾದಿಂದ ಯುವ ವೇಗಿ ಔಟ್!
120 ರನ್ಗಳ ಸುಲಭ ಗುರಿ ಪಡೆದ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು 18.3 ಓವರ್‌ಗಳಲ್ಲಿ 6 ವಿಕೆಟ್ ನಷ್ಟಕ್ಕೆ 122 ರನ್ಗಳಿಸಿ 4 ವಿಕೆಟ್ಗಳ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಗಯಾನಾ ಅಮೆಝಾನ್ ವಾರಿಯರ್ಸ್ ತಂಡವು ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.