
2028 ರಲ್ಲಿ ಲಾಸ್ ಏಂಜಲೀಸ್ನಲ್ಲಿ ನಡೆಯಲಿರುವ ಒಲಿಂಪಿಕ್ಸ್ (Olympics) ಕ್ರೀಡಾಕೂಟದಲ್ಲಿ ಕೇವಲ 6 ಕ್ರಿಕೆಟ್ ತಂಡಗಳಿಗೆ ಮಾತ್ರ ಅವಕಾಶ ದೊರೆಯಲಿದೆ. 128 ವರ್ಷಗಳ ಇತಿಹಾಸ ಹೊಂದಿರುವ ಒಲಿಂಪಿಕ್ಸ್ ಕ್ರೀಡಾಕೂಟದಲ್ಲಿ ಇದೇ ಮೊದಲ ಬಾರಿ ಕ್ರಿಕೆಟ್ ಅನ್ನು ಪರಿಚಯಿಸಲಾಗುತ್ತಿದ್ದು, ಅದರಂತೆ ಪುರುಷರು ಮತ್ತು ಮಹಿಳೆಯರ ಎರಡೂ ವಿಭಾಗಗಳಲ್ಲಿ ತಲಾ ಆರು ತಂಡಗಳು ಭಾಗವಹಿಸಲಿವೆ ಎಂದು ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ (IOC) ದೃಢಪಡಿಸಿದೆ.
ಇನ್ನು ಈ ಕ್ರೀಡಾಕೂಟದಲ್ಲಿ ಕ್ರಿಕೆಟ್ ಅನ್ನು ಟಿ20 ಮಾದರಿಯಲ್ಲಿ ಆಯೋಜಿಸಲಾಗುತ್ತದೆ. ಹೀಗಾಗಿ ಐಸಿಸಿ ಟಿ20 ತಂಡಗಳ ಶ್ರೇಯಾಂಕಗಳ ಆಧಾರದ ಮೇಲೆ ತಂಡಗಳು ಅರ್ಹತೆ ಪಡೆಯಲಿವೆ. ಅಂದರೆ ಒಲಿಂಪಿಕ್ಸ್ ಅರ್ಹತೆಗೆ ನಿಗದಿ ಮಾಡಲಾದ ಸಮಯದ ವೇಳೆ ಐಸಿಸಿ ತಂಡಗಳ ಶ್ರೇಯಾಂಕವನ್ನು ಪರಿಗಣಿಸಿ 6 ತಂಡಗಳನ್ನು ಆಯ್ಕೆ ಮಾಡಲಾಗುತ್ತದೆ.
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) 12 ಪೂರ್ಣ ಸದಸ್ಯರ ತಂಡಗಳನ್ನು ಒಲಿಂಪಿಕ್ಸ್ ಸಮಿತಿಗೆ ಶಿಫಾರಸ್ಸು ಮಾಡಲಿದ್ದು, ಈ ತಂಡಗಳ ಶ್ರೇಯಾಂಕದ ಆಧಾರ ಮೇಲೆ 6 ತಂಡಗಳನ್ನು ಒಲಿಂಪಿಕ್ಸ್ ಅಂಗಳದಲ್ಲಿ ಕಣಕ್ಕಿಳಿಸಲಾಗುತ್ತದೆ ಎಂದು ವರದಿಯಾಗಿದೆ.
ಇದಾಗ್ಯೂ ಯಾವುದಾದರೂ ಸಹ ಸದಸ್ಯ ರಾಷ್ಟ್ರದ ತಂಡ ಮುಂದಿನ 2 ವರ್ಷಗಳ ಒಳಗೆ ಐಸಿಸಿ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯ ಟಾಪ್-6 ನಲ್ಲಿ ಕಾಣಿಸಿಕೊಂಡರೆ ಅವರು ಅರ್ಹತೆ ಪಡೆಯಲಿದ್ದಾರೆ.
ಪ್ರಸ್ತುತ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯಲ್ಲಿ ಭಾರತ ತಂಡ ಅಗ್ರಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾ ದ್ವಿತೀಯ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಇನ್ನು ಇಂಗ್ಲೆಂಡ್ ಮತ್ತು ನ್ಯೂಝಿಲೆಂಡ್ ತಂಡಗಳು ಕ್ರಮವಾಗಿ 3ನೇ ಮತ್ತು 4ನೇ ಸ್ಥಾನಗಳಲ್ಲಿದೆ. ಐದನೇ ಸ್ಥಾನದಲ್ಲಿ ವೆಸ್ಟ್ ಇಂಡೀಸ್ ತಂಡವಿದ್ದರೆ, ಆರನೇ ಸ್ಥಾನದಲ್ಲಿ ಸೌತ್ ಆಫ್ರಿಕಾ ತಂಡವಿದೆ.
ಇನ್ನು ಪಾಕಿಸ್ತಾನ್ ತಂಡ 7ನೇ ಸ್ಥಾನದಲ್ಲಿದೆ. ಅಂದರೆ ಒಲಿಂಪಿಕ್ಸ್ಗೆ 6 ತಂಡಗಳು ಮಾತ್ರ ಅರ್ಹತೆ ಪಡೆಯಲಿದೆ. ಮುಂದಿನ ಒಂದು ವರ್ಷದೊಳಗೆ ಪಾಕಿಸ್ತಾನ್ ತಂಡ ಟಾಪ್-6 ನಲ್ಲಿ ಕಾಣಿಸಿಕೊಳ್ಳದಿದ್ದರೆ, ಒಲಿಂಪಿಕ್ಸ್ನಿಂದ ಹೊರಬೀಳುವುದು ಖಚಿತ. ಹೀಗಾಗಿ ಪಾಕ್ ಪಡೆಗೆ ಮುಂಬರುವ ಟಿ20 ಸರಣಿಗಳು ತುಂಬಾ ಮಹತ್ವದ್ದಾಗಿ ಪರಿಣಮಿಸಿದೆ.
2028ರ ಒಲಿಂಪಿಕ್ಸ್ಗೆ ಯುಎಸ್ಎ ಆತಿಥ್ಯವಹಿಸುತ್ತಿದೆ. ಹೀಗಾಗಿ ಆತಿಥೇಯ ರಾಷ್ಟ್ರವಾಗಿ ಅಮೆರಿಕ ತಂಡ ಕಣಕ್ಕಿಳಿಯುವ ಸಾಧ್ಯತೆಯಿದೆ. ಒಂದು ವೇಳೆ ಆತಿಥೇಯ ರಾಷ್ಟ್ರಕ್ಕೆ ಅವಕಾಶ ನೀಡಿದರೆ, ಐಸಿಸಿ ಟಿ20 ತಂಡಗಳ ಶ್ರೇಯಾಂಕ ಪಟ್ಟಿಯಿಂದ 5 ತಂಡಗಳನ್ನು ಮಾತ್ರ ಆಯ್ಕೆ ಮಾಡಲಾಗುತ್ತದೆ. ಇದಕ್ಕಾಗಿ ರೀಜಿನಲ್ ರೆಪ್ರೆಸೆಂಟೇಶನ್ ನಿಯಮವನ್ನು ಪರಿಚಯಿಸುವ ಸಾಧ್ಯತೆ ಕೂಡ ಇದೆ. ಅಂದರೆ ಆಯಾ ಖಂಡಗಳಿಂದ 2 ತಂಡಗಳನ್ನು ಆಯ್ಕೆ ಮಾಡಬಹುದು. ಇದರಿಂದ ಏಷ್ಯಾ ಖಂಡದ ಎರಡು ಬಲಿಷ್ಠ ತಂಡಗಳು ಮಾತ್ರ ಒಲಿಂಪಿಕ್ಸ್ನಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯನ್ನು ತಳ್ಳಿ ಹಾಕುವಂತಿಲ್ಲ.
ಇದನ್ನೂ ಓದಿ: PSL 2025: ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ RCB ಮಾಜಿ ಆಟಗಾರರು
Published On - 1:55 pm, Thu, 10 April 25