Maharaja Trophy 2022: 22 ಎಸೆತ, 5 ಸಿಕ್ಸರ್; ಮಿಥುನ್ ಸಿಡಿಲಬ್ಬರಕ್ಕೆ ಸುಸ್ತಾದ ಬೆಂಗಳೂರು ಬ್ಲಾಸ್ಟರ್ಸ್
Maharaja Trophy 2022: ಮಿಥುನ್ 22 ಎಸೆತಗಳನ್ನು ಎದುರಿಸಿ 231ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ಅಜೇಯ 51 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಅವರ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್ ಮತ್ತು 2 ಬೌಂಡರಿ ಸೇರಿದ್ದವು.
ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(KSCA) ಆಯೋಜಿಸುವ ಮಹಾರಾಜ ಟಿ20 ಟೂರ್ನಿ (Maharaja T20 Trophy 2022) ಭಾನುವಾರ ಮೈಸೂರಿನಲ್ಲಿ ಆರಂಭವಾಗಿದ್ದು, ರೋಚಕ ಕ್ರಿಕೆಟ್ಗೆ ಮೈಸೂರು ಸಾಕ್ಷಿಯಾಗುತ್ತಿದೆ. ಇದಕ್ಕೆ ಪೂರಕವೆಂಬಂತೆ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧ ನಡೆದ ಪಂದ್ಯದಲ್ಲಿ ಹೂಗ್ಲಿ ಟೈಗರ್ಸ್ ತಂಡದ ನಾಯಕ ಅಭಿಮನ್ಯು ಮಿಥುನ್ ಅಬ್ಬರಿಸಿದ್ದಾರೆ. ಮಿಥನ್ ಅವರ ಮಿಂಚಿನ ಇನ್ನಿಂಗ್ಸ್ ಫಲವಾಗಿ ಹೂಗ್ಲಿ ಟೈಗರ್ಸ್ ತಂಡ ಬೆಂಗಳೂರು ಬ್ಲಾಸ್ಟರ್ಸ್ ತಂಡವನ್ನು ಬಗ್ಗುಬಡಿಯುವಲ್ಲಿ ಯಶಸ್ವಿಯಾಗಿದೆ.
ಮೊದಲು ಬ್ಯಾಟಿಂಗ್‌ಗಿಳಿದ ಬೆಂಗಳೂರು ಬ್ಲಾಸ್ಟರ್ಸ್ ಎರಡನೇ ಓವರ್‌ನಲ್ಲಿ ಎಲ್‌ಆರ್ ಚೇತನ್ ಅವರ ವಿಕೆಟ್ ಕಳೆದುಕೊಂಡಿತು. ಆದರೆ ನಾಯಕ ಮಯಾಂಕ್ ಅಗರ್ವಾಲ್, ಅನೀಶ್ ಕೆವಿ ಜೊತೆಗೆ ಜವಾಬ್ದಾರಿ ವಹಿಸಿಕೊಂಡರು. ಅನೀಶ್ 14 ರನ್ ಗಳಿಸಿ ನಿರ್ಗಮಿಸುವ ಮೊದಲು ಇವರಿಬ್ಬರು 18 ರನ್‌ಗಳ ತ್ವರಿತ ಜೊತೆಯಾಟ ನಡೆಸಿದರು. ನಂತರ ನಾಯಕ ಮಯಾಂಕ್ಗೆ ಜೊತೆಯಾದ ಸೂರಜ್ ಅಹುಜಾ 20 ರನ್‌ಗಳ ಇನ್ನಿಂಗ್ಸ್ ಆಡುವುದರ ಜೊತೆಗೆ, ಮಯಾಂಕ್ ಜೊತೆಗೂಡಿ 45 ನಿರ್ಣಾಯಕ ರನ್‌ಗಳ ಜೊತೆಯಾಟ ಆಡಿದರು.
ಸೂರಜ್ ವಿಕೆಟ್ ಬಳಿಕ ಆಕ್ರಮಣಕಾರಿ ಆಟಕ್ಕೆ ಮುಂದಾಗುತ್ತಿದ ಮಯಾಂಕ್ ಆಟಕ್ಕೆ ಅನಿರುದ್ಧ ಜೋಶಿ (8) ಅವರ ವಿಕೆಟ್ ತಡೆಗೋಡೆಯಾಯಿತು. ವಿಕೆಟ್‌ಗಳ ನಿಯಮಿತ ಪತನದಿಂದ ಹಿನ್ನಡೆ ಅನುಭವಿಸಿದ ಮಯಾಂಕ್, ತಂಡ 100 ರನ್‌ಗಳ ಗಡಿಯನ್ನು ಸಮೀಪಿಸುತ್ತಿದ್ದಂತೆಯೇ 43 ರನ್‌ಗಳಿಸಿ ವಿಕೆಟ್ ಒಪ್ಪಿಸಿದರು.
ಜಗದೀಶ ಸುಚಿತ್ (ಔಟಾಗದೆ 12) ಮತ್ತು ಶಿವಕುಮಾರ್ ರಕ್ಷಿತ್ (ಔಟಾಗದೆ 15) ನಿರ್ಣಾಯಕ 25 ರನ್‌ಗಳನ್ನು ಸೇರಿಸುವ ಮೊದಲು ಮಳೆಯು ಮೊದಲ ಇನಿಂಗ್ಸ್ ಅಂತ್ಯಕ್ಕೆ ಇತಿಶ್ರೀ ಹಾಡಿತು. ಟೈಗರ್ಸ್ ಪರ, ಸೌರಭ್ ಶ್ರೀವಾಸ್ತವ್ ಎರಡು ವಿಕೆಟ್‌ಗಳನ್ನು ಕಬಳಿಸಿದರು, ಅಂತಿಮವಾಗಿ ಬ್ಲಾಸ್ಟರ್ಸ್ 16 ಓವರ್‌ಗಳಲ್ಲಿ 5 ವಿಕೆಟ್ ಕಳೆದುಕೊಂಡು 119 ರನ್ ಗಳಿಸಿತು.
137 ರನ್‌ಗಳ ಗುರಿಯ ಮುಂದೆ ಕಳಪೆ ಆರಂಭ
ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ ವಿಜೆಡಿ ನಿಯಮದನ್ವಯ ಹೂಗ್ಲಿ ಟೈಗರ್ಸ್ 16 ಓವರ್‌ಗಳಲ್ಲಿ 137 ರನ್‌ಗಳ ಗುರಿ ಪಡೆದಿತ್ತು. ಈ ಗುರಿಯನ್ನು ಬೆನ್ನಟ್ಟಿದ ಹೂಗ್ಲಿ ಟೈಗರ್ಸ್ ಕಳಪೆ ಆರಂಭ ಪಡೆಯಿತು. ಕೇವಲ 18 ರನ್‌ಗಳಿಗೆ ಅಗ್ರ 3 ವಿಕೆಟ್‌ಗಳನ್ನು ಕಳೆದುಕೊಂಡಿತು. ಇದರ ನಂತರ 50 ರನ್‌ಗಳ ಒಳಗೆ ನಾಲ್ಕನೇ ವಿಕೆಟ್ ಕೂಡ ಉರುಳಿತು. 87 ರನ್ ತಲುಪುವ ವೇಳೆಗೆ ಹೂಗ್ಲಿ ಟೈಗರ್ಸ್ ತಂಡದ ಅರ್ಧದಷ್ಟು ಆಟಗಾರರು ಡಗೌಟ್ ಸೇರಿದ್ದರಿಂದ ತಂಡ ಸಂಕಷ್ಟಕ್ಕೆ ಸಿಲುಕಿತ್ತು. ಅಂತಹ ಪರಿಸ್ಥಿತಿಯಲ್ಲಿ ಕ್ಯಾಪ್ಟನ್ ಅಭಿಮನ್ಯು ಮಿಥುನ್ ತಂಡದ ಜವಬ್ದಾರಿವಹಿಸಿಕೊಂಡರು.
ಅಭಿಮನ್ಯು ಮಿಥುನ್ ಅರ್ಧಶತಕ
ಮಿಥುನ್ 22 ಎಸೆತಗಳನ್ನು ಎದುರಿಸಿ 231ಕ್ಕೂ ಹೆಚ್ಚು ಸ್ಟ್ರೈಕ್ ರೇಟ್‌ನೊಂದಿಗೆ ಅಜೇಯ 51 ರನ್ ಗಳಿಸಿ ತಂಡಕ್ಕೆ ಜಯ ತಂದುಕೊಟ್ಟರು. ಅವರ ಇನ್ನಿಂಗ್ಸ್‌ನಲ್ಲಿ 5 ಸಿಕ್ಸರ್ ಮತ್ತು 2 ಬೌಂಡರಿ ಸೇರಿದ್ದವು. ಇದು ಅವರ ಬ್ಯಾಟ್‌ನಿಂದ ಟಿ20 ಕ್ರಿಕೆಟ್‌ನಲ್ಲಿ ಮೊದಲ ಅರ್ಧಶತಕವಾಗಿದೆ.
ಹುಬ್ಬಳ್ಳಿ ಟೈಗರ್ಸ್ಗೆ 4 ವಿಕೆಟ್‌ಗಳ ಜಯ
ಅಭಿಮನ್ಯು ಮಿಥುನ್ ಅವರ ಅರ್ಧಶತಕದ ಆಧಾರದ ಮೇಲೆ ಹುಬ್ಬಳ್ಳಿ ಟೈಗರ್ಸ್ ಬೆಂಗಳೂರು ಬ್ಲಾಸ್ಟರ್ಸ್ ವಿರುದ್ಧದ ಪಂದ್ಯದಲ್ಲಿ 4 ವಿಕೆಟ್‌ಗಳಿಂದ ಜಯ ಸಾಧಿಸಿತು. ಗಳಿಸಬೇಕಿದ್ದ 137 ರನ್‌ಗಳ ಗುರಿಯನ್ನು ಹುಬ್ಬಳ್ಳಿ ತಂಡ 16 ಓವರ್‌ಗಳಲ್ಲಿ ಸಾಧಿಸಿತು.
ಸಂಕ್ಷಿಪ್ತ ಸ್ಕೋರ್: ಬೆಂಗಳೂರು ಬ್ಲಾಸ್ಟರ್ಸ್ 16 ಓವರ್‌ಗಳಲ್ಲಿ 119/5 (ಮಯಾಂಕ್ ಅಗರ್ವಾಲ್ 43, ಸೂರಜ್ ಅಹುಜಾ 20; ಸೌರಭ್ ಶ್ರೀವಾಸ್ತವ್ 2-31) ಹುಬ್ಬಳ್ಳಿ ಟೈಗರ್ಸ್ 15.5 ಓವರ್‌ಗಳಲ್ಲಿ 139/6 (ಅಭಿಮನ್ಯು ಮಿಥುನ್ 51 ಔಟಾಗದೆ, ಬಿಯು ಜಗದೇ ಕುಮಾರ್ ಔಟಾಗದೆ 30, ಸುಚಿತ್ ಜಗದೇ ಕುಮಾರ್ 2-21)