ಕ್ರಿಕೆಟ್ ಮೈದಾನದಲ್ಲಿ ಎದುರಾಳಿ ತಂಡಗಳ ವಿರುದ್ಧ ಕೋಪ ತಾಪಗಳು ಕಂಡು ಬರುವುದು ಸಾಮಾನ್ಯ. ಆದರೆ ವೆಸ್ಟ್ ಇಂಡೀಸ್ ತಂಡ ಆಟಗಾರ ಅಲ್ಝಾರಿ ಜೋಸೆಫ್ ತನ್ನ ನಾಯಕನೇ ವಿರುದ್ಧವೇ ಜಗಳವಾಡಿಕೊಂಡಿದ್ದಾರೆ. ಈ ಜಗಳವು ತಾರಕ್ಕೇರಿ ಅರ್ಧದಲ್ಲೇ ಮೈದಾನ ತೊರೆದ ಘಟನೆ ಕೂಡ ನಡೆದಿದೆ.
ಬಾರ್ಬಡೋಸ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೂರನೇ ಏಕದಿನ ಪಂದ್ಯದ ವೇಳೆ ಈ ಘಟನೆ ನಡೆದಿದ್ದು, ಪಂದ್ಯದ ನಡುವೆಯೇ ಅಲ್ಝಾರಿ ಜೋಸೆಫ್ ಮೈದಾನ ತೊರೆದಿದ್ದಾರೆ.
ಈ ಪಂದ್ಯದ 4ನೇ ಓವರ್ನಲ್ಲಿ ಅಲ್ಝಾರಿ ಜೋಸೆಫ್ ದಾಳಿಗಿಳಿದಿದ್ದರು. ಇದೇ ವೇಳೆ ನಾಯಕ ಶಾಯ್ ಹೋಪ್ ಸೆಟ್ ಮಾಡಿದ ಫೀಲ್ಡಿಂಗ್ನಿಂದ ಅಲ್ಝಾರಿ ಸಂತುಷ್ಟರಾಗಿರಲಿಲ್ಲ. ಹೀಗಾಗಿ ನಾಯಕನೊಂದಿಗೆ ಫೀಲ್ಡಿಂಗ್ ವಿಚಾರವಾಗಿ ವಾಗ್ವಾದಕ್ಕಿಳಿದಿದ್ದಾರೆ.
ಅತ್ತ ಕಡೆಯಿಂದ ಶಾಯ್ ಹೋಪ್ ಕೂಡ ಅಲ್ಝಾರಿ ಜೋಸೆಫ್ಗೆ ಪ್ರತ್ಯುತ್ತರ ನೀಡಿದ್ದಾರೆ. ಇದರಿಂದ ಕೋಪಗೊಂಡ ಅಲ್ಝಾರಿ ಬೌನ್ಸರ್ ಎಸೆಯುವ ಮೂಲಕ ಜೋರ್ಡನ್ ಕಾಕ್ಸ್ (1) ವಿಕೆಟ್ ಪಡೆದರು.
ಈ ವೇಳೆಯು ನಾಯಕನೊಂದಿಗೆ ವಾಗ್ವಾದ ಮುಂದುವರೆಸಿದರು. ಅಷ್ಟೇ ಅಲ್ಲದೆ 4ನೇ ಓವರ್ ಮುಗಿಯುತ್ತಿದ್ದಂತೆ ಅಲ್ಝಾರಿ ಜೋಸೆಫ್ ಮೈದಾನ ತೊರೆದು ಡ್ರೆಸ್ಸಿಂಗ್ ರೂಮ್ಗೆ ತೆರಳಿದ್ದಾರೆ. ಇದೇ ವೇಳೆ ವೆಸ್ಟ್ ಇಂಡೀಸ್ ತಂಡದ ಕೋಚ್ ಡ್ಯಾರೆನ್ ಸ್ಯಾಮಿ ಕೂಡ ಆಟಗಾರರನ್ನು ಬೌಂಡರಿ ಲೈನ್ನ ಹೊರಗೆ ನಿಂತು ನಿಯಂತ್ರಿಸುತ್ತಿರುವುದು ಕಾಣಬಹುದು.
Gets angry! 😡
Bowls a wicket maiden 👊
Leaves 🤯An eventful start to the game for Alzarri Joseph! 😬#WIvENGonFanCode pic.twitter.com/2OXbk0VxWt
— FanCode (@FanCode) November 6, 2024
ಅತ್ತ ಅರ್ಧದಲ್ಲೇ ಮೈದಾನ ತೊರೆದ ಅಲ್ಝಾರಿ ಜೋಸೆಫ್ ಕೆಲ ನಿಮಿಷಗಳ ಬಳಿಕ ಮತ್ತೆ ಬಂದಿದ್ದಾರೆ. ಅಲ್ಲದೆ 10 ಓವರ್ಗಳನ್ನು ಪೂರ್ಣಗೊಳಿಸಿ 2 ವಿಕೆಟ್ ಕಬಳಿಸಿದರು. ಇದೀಗ ಅಲ್ಝಾರಿ ಜೋಸೆಫ್ ಅವರ ಕೋಪ ತಾಪದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಇನ್ನು ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ತಂಡವು 50 ಓವರ್ಗಳಲ್ಲಿ 8 ವಿಕೆಟ್ ಕಳೆದುಕೊಂಡು 263 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ವೆಸ್ಟ್ ಇಂಡೀಸ್ ಪರ ಬ್ರಾಂಡನ್ ಕಿಂಗ್ (102) ಹಾಗೂ ಕೀಸಿ ಕಾರ್ಟಿ (128) ಭರ್ಜರಿ ಶತಕ ಬಾರಿಸಿದರು. ಈ ಸೆಂಚುರಿಗಳ ನೆರವಿನಿಂದ ವೆಸ್ಟ್ ಇಂಡೀಸ್ ತಂಡವು 43 ಓವರ್ಗಳಲ್ಲಿ 267 ರನ್ ಬಾರಿಸಿ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಇದನ್ನೂ ಓದಿ: IPL 2025: RCB ಖರೀದಿಸಲೇಬೇಕಾದ 4 ಆಟಗಾರರನ್ನು ಹೆಸರಿಸಿದ ABD
ಈ ಗೆಲುವಿನೊಂದಿಗೆ ವೆಸ್ಟ್ ಇಂಡೀಸ್ ತಂಡವು ಮೂರು ಪಂದ್ಯಗಳ ಸರಣಿಯನ್ನು 2-1 ಅಂತರದಿಂದ ಗೆದ್ದುಕೊಂಡಿದೆ. ಇದಕ್ಕೂ ಮುನ್ನ ನಡೆದ ಮೊದಲ ಏಕದಿನ ಪಂದ್ಯದಲ್ಲಿ ವೆಸ್ಟ್ ಇಂಡೀಸ್ ತಂಡವು 8 ವಿಕೆಟ್ಗಳ ಜಯ ಸಾಧಿಸಿದರೆ, 2ನೇ ಏಕದಿನ ಪಂದ್ಯವನ್ನು ಇಂಗ್ಲೆಂಡ್ 5 ವಿಕೆಟ್ಗಳಿಂದ ಗೆದ್ದುಕೊಂಡಿತ್ತು. ಇದೀಗ ಮೂರನೇ ಏಕದಿನ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸಿ ವಿಂಡೀಸ್ ಪಡೆ ಸರಣಿ ಗೆಲುವು ದಾಖಲಿಸಿತು.