ಕ್ರಿಕೆಟ್ ಲೋಕದಲ್ಲಿ ಕ್ರಿಕೆಟ್ ದೇವರ ಬಗ್ಗೆ ಕೇಳದವರಿಲ್ಲ, ಅವರನ್ನು ಇಷ್ಟಪಡದವರಿಲ್ಲ. ಸಚಿನ್ ತೆಂಡೂಲ್ಕರ್ (Sachin Tendulkar) ಎಂಬ ಹೆಸರನ್ನು ಕೇಳಿದೊಡನೆ ಇಡೀ ಕ್ರಿಕೆಟ್ ಲೋಕವೇ ಒಂದು ಕ್ಷಣ ಮೌನವಾಗಿ ಬಿಡುತ್ತದೆ. ಅಷ್ಟೊಂದು ಪವರ್ ಆ ಹೆಸರಿಗಿದೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಸಚಿನ್ ಹೇಗೆ ಉತ್ತುಂಗಕ್ಕೇರಿಸದರೋ ಅಷ್ಟೇ ಪ್ರಸಿದ್ದಿಯನ್ನು ಮುಂಬೈ ಕ್ರಿಕೆಟ್ಗೆ ತಂದುಕೊಟ್ಟಿದ್ದಾರೆ. ಮುಂಬೈನಿಂದ ಬಂದಿರುವ ಸಚಿನ್, ಮುಂಬೈನ ಮೈದಾನದಲ್ಲಿ ಕ್ರಿಕೆಟ್ ಕಲಿತು, ಮುಂಬೈಗಾಗಿ ತಮ್ಮ ಸಂಪೂರ್ಣ ದೇಶೀಯ ಕ್ರಿಕೆಟ್ ಆಡಿದರು. ಸಚಿನ್ ನಂತರ ಅವರ ಮಗ ಅರ್ಜುನ್ ತೆಂಡೂಲ್ಕರ್ (Arjun Tendulkar) ಕೂಡ ಮುಂಬೈನಿಂದಲೇ ಕ್ರಿಕೆಟ್ ಶಾಲೆಯನ್ನು ಪ್ರಾರಂಭಿಸಿದರು, ಆದರೆ ಇದೀಗ ಅವರು ಬದಲಾವಣೆಯತ್ತ ಹೆಜ್ಜೆ ಹಾಕುತ್ತಿದ್ದು, ಮುಂಬೈ ಕ್ರಿಕೆಟ್ ತೊರೆಯಲು ತಯಾರಿ ನಡೆಸಿದ್ದಾರೆ.
ಮುಂಬೈ ಕ್ರಿಕೆಟ್ ತೊರೆಯಲಿದ್ದಾರೆ ಅರ್ಜುನ್
ಸುದ್ದಿ ಸಂಸ್ಥೆ ಪಿಟಿಐ ವರದಿಯ ಪ್ರಕಾರ, ಎಡಗೈ ವೇಗದ ಬೌಲರ್ ಅರ್ಜುನ್ ತೆಂಡೂಲ್ಕರ್ ಅವರು ದೇಶೀಯ ಕ್ರಿಕೆಟ್‌ನಲ್ಲಿ ತಮ್ಮ ವೃತ್ತಿಜೀವನವನ್ನು ಮುಂದುವರಿಸಲು ಮುಂಬೈ ಕ್ರಿಕೆಟ್‌ನ ಬದಲಿಗೆ ಮತ್ತೊಂದು ತಂಡದ ಭಾಗವಾಗಲು ನಿರ್ಧರಿಸಿದ್ದಾರೆ. ಇದಕ್ಕಾಗಿ ಅರ್ಜುನ್ ತಮ್ಮ ತವರು ಸಂಸ್ಥೆ ಮುಂಬೈ ಕ್ರಿಕೆಟ್ ಸಂಸ್ಥೆಯಿಂದ ನಿರಾಕ್ಷೇಪಣಾ ಪ್ರಮಾಣಪತ್ರಕ್ಕೆ (ಎನ್‌ಒಸಿ) ಅರ್ಜಿ ಸಲ್ಲಿಸಿದ್ದಾರೆ. ಮಾಹಿತಿಯ ಪ್ರಕಾರ, ಮುಂದಿನ ತಿಂಗಳು ಪ್ರಾರಂಭವಾಗುವ ದೇಶೀಯ ಕ್ರಿಕೆಟ್ ಋತುವಿನಲ್ಲಿ ಅರ್ಜುನ್ ಗೋವಾ ಪರ ಆಡುವುದನ್ನು ಕಾಣಬಹುದು.
ಅರ್ಜುನ್‌ಗೆ ಅವಕಾಶಗಳು ಬೇಕು
ಈ ಬಗ್ಗೆ ಸಚಿನ್ ತೆಂಡೂಲ್ಕರ್ ಅವರ ಮ್ಯಾನೇಜ್‌ಮೆಂಟ್ ಕಂಪನಿ ಎಸ್‌ಆರ್‌ಟಿ ಸ್ಪೋರ್ಟ್ಸ್ ಮ್ಯಾನೇಜ್‌ಮೆಂಟ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದು, ಅರ್ಜುನ್‌ಗೆ ಆಡಲು ಹೆಚ್ಚು ಹೆಚ್ಚು ಅವಕಾಶಗಳನ್ನು ನೀಡಲು ಇದು ಸರಿಯಾದ ಸಮಯ . ತಮ್ಮ ವೃತ್ತಿಜೀವನದ ಈ ಹಂತದಲ್ಲಿ ಮೈದಾನದಲ್ಲಿ ಗರಿಷ್ಠ ಸಮಯವನ್ನು ಕಳೆಯುವುದು ಅರ್ಜುನ್‌ಗೆ ಮುಖ್ಯವಾಗಿದೆ. ಹೀಗಾಗಿ ಅರ್ಜುನ್ ಹೆಚ್ಚು ಸ್ಪರ್ಧಾತ್ಮಕ ಪಂದ್ಯಗಳನ್ನು ಆಡುವ ಅವಕಾಶ ಪಡೆಯುತ್ತಾರೆ ಎಂದು ನಾವು ಬಾವಿಸುತ್ತೇವೆ. ಅವರು ತಮ್ಮ ಕ್ರಿಕೆಟ್ ವೃತ್ತಿಜೀವನದ ಹೊಸ ಹಂತವನ್ನು ಪ್ರಾರಂಭಿಸುತ್ತಿದ್ದಾರೆ ಎಂದು ಹೇಳಿಕೊಂಡಿದೆ.
ಗೋವಾ ಕ್ರಿಕೆಟ್ ತಂಡದಲ್ಲಿ ಸ್ಥಾನ ಪಡೆಯಲಿದ್ದಾರೆ
ಇದೇ ವೇಳೆ ಗೋವಾ ಕ್ರಿಕೆಟ್ ಸಂಸ್ಥೆ ಕೂಡ ಈ ವಿಚಾರದಲ್ಲಿ ಆಸಕ್ತಿ ತೋರುತ್ತಿದ್ದು, ಜೂನಿಯರ್ ತೆಂಡೂಲ್ಕರ್ ರಾಜ್ಯ ತಂಡದಲ್ಲಿ ಸ್ಥಾನ ಪಡೆಯಬಹುದು ಎಂದು ಹೇಳಿದೆ. ಗೋವಾ ಕ್ರಿಕೆಟ್ ಸಂಸ್ಥೆ (ಜಿಸಿಎ) ಅಧ್ಯಕ್ಷ ಸೂರಜ್ ಲೊಟ್ಲಿಕರ್ ಪಿಟಿಐಗೆ ಮಾಹಿತಿ ನೀಡಿರುವ ಪ್ರಕಾರ, “ನಾವು ಎಡಗೈ ವೇಗದ ಬೌಲರ್‌ಗಾಗಿ ಹುಡುಕುತ್ತಿದ್ದೇವೆ. ಅದಕ್ಕಾಗಿಯೇ ನಾವು ಅರ್ಜುನ್ ತೆಂಡೂಲ್ಕರ್ ಅವರನ್ನು ಗೋವಾ ತಂಡಕ್ಕೆ ಸೇರಲು ಆಹ್ವಾನಿಸಿದ್ದೇವೆ. ನಾವು ಸೀಸನ್‌ಗೆ ಮೊದಲು ಸೀಮಿತ ಓವರ್‌ಗಳ ಅಭ್ಯಾಸ ಪಂದ್ಯಗಳನ್ನು ಆಡಲಿದ್ದು, ಅವರು ಕೂಡ ಆಡಲಿದ್ದಾರೆ. ಈ ಪಂದ್ಯಗಳಲ್ಲಿನ ಅವರ ಪ್ರದರ್ಶನದ ಆಧಾರದ ಮೇಲೆ ಅವರನ್ನು ತಂಡದಲ್ಲಿ ಇರಿಸಿಕೊಳ್ಳಲು ಆಯ್ಕೆಗಾರರು ನಿರ್ಧರಿಸುತ್ತಾರೆ ಎಂದು ತಿಳಿಸಿದ್ದಾರೆ.
ಮುಂಬೈ ಪರ ಕೇವಲ 2 ಪಂದ್ಯಗಳನ್ನು ಆಡಿದ್ದಾರೆ
22 ವರ್ಷದ ಅರ್ಜುನ್ ತೆಂಡೂಲ್ಕರ್ ಮುಂಬೈ ಕ್ರಿಕೆಟ್ ತಂಡದಲ್ಲಿ ಭದ್ರವಾಗಿ ಬೇರೂರುವಲ್ಲಿ ವಿಫಲರಾಗಿದ್ದಾರೆ. ಭಾರತೀಯ ಕ್ರಿಕೆಟ್‌ನ ಅತ್ಯಂತ ಯಶಸ್ವಿ ತಂಡವಾದ ಮುಂಬೈ ಅತ್ಯುತ್ತಮ ಪ್ರತಿಭಾವಂತ ಕ್ರಿಕೆಟಿಗರನ್ನು ಹೊಂದಿದೆ. ಅಂತಹ ಪರಿಸ್ಥಿತಿಯಲ್ಲಿ ಅರ್ಜುನ್ ಸ್ಥಾನ ಪಡೆಯುವುದು ಸುಲಭವಲ್ಲ. ಅರ್ಜುನ್ 2020-21ರ ಸೀಸನ್ನಲ್ಲಿ ಕಡಿಮೆ ಸ್ವರೂಪದ ತಂಡದಲ್ಲಿ ಸ್ಥಾನ ಪಡೆದಿದ್ದರು. ನಂತರ ಅರ್ಜುನ್ ಅವರು ಹರ್ಯಾಣ ಮತ್ತು ಪುದುಚೇರಿ ವಿರುದ್ಧ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ಮುಂಬೈ ಪರ ಎರಡು ಪಂದ್ಯಗಳನ್ನು ಆಡಿದರು. ಆದರೆ ಈ ಸೀಸನ್ನಲ್ಲಿ ತನ್ನನ್ನು ತಾನು ಸಾಬೀತುಪಡಿಸಲು ಅವಕಾಶ ಸಿಗದೆ ಮುಂಬೈ ತಂಡದಿಂದ ಕೈಬಿಡಲ್ಪಟ್ಟಿರುವುದು ಅರ್ಜುನ್‌ಗೆ ದೊಡ್ಡ ನಿರಾಸೆಯಾಗಿದೆ. ಅವರು ಪ್ರಸ್ತುತ ಐಪಿಎಲ್‌ನಲ್ಲಿ ಮುಂಬೈ ಇಂಡಿಯನ್ಸ್‌ನ ಭಾಗವಾಗಿದ್ದಾರೆ, ಆದರೆ ಒಂದೇ ಒಂದು ಪಂದ್ಯವನ್ನು ಆಡುವ ಅವಕಾಶ ಸಿಕ್ಕಿಲ್ಲ.
Published On - 7:53 pm, Thu, 11 August 22