Ben Stokes: 4,6,6,6: ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ ದಾಖಲೆ ಬರೆದ ಬೆನ್ ಸ್ಟೋಕ್ಸ್

Ben Stokes Record: ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಒಂದೇ ಓವರ್​ನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಹ್ಯಾರಿ ಬ್ರೂಕ್.

Ben Stokes: 4,6,6,6: ಸಿಡಿಲಬ್ಬರದ ಬ್ಯಾಟಿಂಗ್​ನೊಂದಿಗೆ ದಾಖಲೆ ಬರೆದ ಬೆನ್ ಸ್ಟೋಕ್ಸ್
Ben Stokes
Follow us
| Updated By: ಝಾಹಿರ್ ಯೂಸುಫ್

Updated on: Jul 02, 2023 | 7:21 PM

Ashes 2023: ಕ್ರಿಕೆಟ್ ಕಾಶಿ ಲಾರ್ಡ್ಸ್ ಮೈದಾನದಲ್ಲಿ ನಡೆದ ಆ್ಯಶಸ್ ಸರಣಿಯ ದ್ವಿತೀಯ ಟೆಸ್ಟ್ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ (Ben Stokes) ಸ್ಪೋಟಕ ಬ್ಯಾಟಿಂಗ್ ಪ್ರದರ್ಶಿಸಿ ದಾಖಲೆ ನಿರ್ಮಿಸಿದ್ದಾರೆ. ಈ ಪಂದ್ಯದ ಕೊನೆಯ ದಿನದಾಟದಲ್ಲಿ 257 ರನ್​ಗಳ ಟಾರ್ಗೆಟ್ ಪಡೆದ ಇಂಗ್ಲೆಂಡ್ ಪರ ಸ್ಟೋಕ್ಸ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಅದರಲ್ಲೂ ಆಸ್ಟ್ರೇಲಿಯಾ ವೇಗಿ ಕ್ಯಾಮರೋನ್ ಗ್ರೀನ್ ಎಸೆದ 56ನೇ ಓವರ್​ನಲ್ಲಿ ಅಕ್ಷರಶಃ ಅಬ್ಬರಿಸಿ ಬೊಬ್ಬಿರಿದರು.

ಈ ಓವರ್​ನ ಮೊದಲ ಎಸೆತದಲ್ಲೇ ಬೆನ್​ ಸ್ಟೋಕ್ಸ್​ ಫೋರ್ ಬಾರಿಸಿ ಶುಭಾರಂಭ ಮಾಡಿದ್ದರು. ಆದರೆ ದ್ವಿತೀಯ ಎಸೆತ ವೈಡ್. ಮರು ಎಸೆತದಲ್ಲಿ ಭರ್ಜರಿ ಸಿಕ್ಸ್. 3ನೇ ಹಾಗೂ 4ನೇ ಎಸೆತಗಳಲ್ಲೂ ಬ್ಯಾಕ್ ಟು ಬ್ಯಾಕ್ ಸಿಕ್ಸ್ ಸಿಡಿಸಿದರು. ಇನ್ನು 5ನೇ ಎಸೆತದಲ್ಲಿ 1 ರನ್ ಕಲೆಹಾಕಿದರು. 6ನೇ ಎಸೆತದಲ್ಲಿ ಯಾವುದೇ ರನ್ ಇಲ್ಲ. ಅಂದರೆ ಒಂದೇ ಓವರ್​ನಲ್ಲಿ 24 ರನ್​ ಚಚ್ಚುವ ಮೂಲಕ ಸ್ಟೋಕ್ಸ್ ಅಬ್ಬರಿಸಿದರು.

ಈ ಅಬ್ಬರದ ಬ್ಯಾಟಿಂಗ್​ನೊಂದಿಗೆ ಕೇವಲ 142 ಎಸೆತಗಳಲ್ಲಿ ಬೆನ್ ಸ್ಟೋಕ್ಸ್ ಶತಕ ಪೂರೈಸಿದ್ದರು. ವಿಶೇಷ ಎಂದರೆ ಈ 24 ರನ್​ಗಳೊಂದಿಗೆ ಆ್ಯಶಸ್ ಸರಣಿಯಲ್ಲಿ ಇಂಗ್ಲೆಂಡ್ ಪರ ಒಂದೇ ಓವರ್​ನಲ್ಲಿ ಅತ್ಯಧಿಕ ರನ್ ಕಲೆಹಾಕಿದ ವಿಶೇಷ ದಾಖಲೆ ಬೆನ್ ಸ್ಟೋಕ್ಸ್ ಪಾಲಾಗಿದೆ.

ಹಾಗೆಯೇ ಇಂಗ್ಲೆಂಡ್ ಪರ ಟೆಸ್ಟ್ ಕ್ರಿಕೆಟ್​ನಲ್ಲಿ ಒಂದೇ ಓವರ್​ನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ 2ನೇ ಬ್ಯಾಟರ್ ಎನಿಸಿಕೊಂಡಿದ್ದಾರೆ. ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿರುವುದು ಹ್ಯಾರಿ ಬ್ರೂಕ್. 2022 ರಲ್ಲಿ ಹ್ಯಾರಿ ಬ್ರೂಕ್ ಪಾಕಿಸ್ತಾನ್ ವಿರುದ್ಧದ ಟೆಸ್ಟ್​ ಪಂದ್ಯದಲ್ಲಿ ಝಾಹಿದ್ ಮಹ್ಮೂದ್ ಓವರ್​ನಲ್ಲಿ 27 ರನ್​ ಬಾರಿಸಿ ಅಬ್ಬರಿಸಿದ್ದರು. ಇದು ಟೆಸ್ಟ್​ ಕ್ರಿಕೆಟ್​ನಲ್ಲಿ ಇಂಗ್ಲೆಂಡ್ ಬ್ಯಾಟರ್​ರೊಬ್ಬರು ಕಲೆಹಾಕಿದ ಅತ್ಯಧಿಕ ರನ್​ ದಾಖಲೆಯಾಗಿದೆ.

ಇದೀಗ ಕ್ಯಾಮರೋನ್ ಗ್ರೀನ್ ಓವರ್​ನಲ್ಲಿ ಬರೋಬ್ಬರಿ 24 ರನ್ ಬಾರಿಸುವ ಮೂಲಕ ಬೆನ್ ಸ್ಟೋಕ್ಸ್ ಈ ಪಟ್ಟಿಯಲ್ಲಿ 2ನೇ ಸ್ಥಾನ ಅಲಂಕರಿಸಿದ್ದಾರೆ. ಹಾಗೆಯೇ ಆ್ಯಶಸ್ ಸರಣಿಯಲ್ಲಿ ಒಂದೇ ಓವರ್​ನಲ್ಲಿ ಅತೀ ಹೆಚ್ಚು ರನ್​ ಬಾರಿಸಿದ ವಿಶೇಷ ದಾಖಲೆಯನ್ನು ತಮ್ಮದಾಗಿಸಿಕೊಂಡಿದ್ದಾರೆ.

ಬುಮ್ರಾ ಹೆಸರಿನಲ್ಲಿದೆ ವಿಶ್ವ ದಾಖಲೆ:

ಟೆಸ್ಟ್ ಕ್ರಿಕೆಟ್​ನ ಒಂದೇ ಓವರ್​ನಲ್ಲಿ ಅತ್ಯಧಿಕ ರನ್​ ಕಲೆಹಾಕಿದ ದಾಖಲೆ ಟೀಮ್ ಇಂಡಿಯಾ ವೇಗಿ ಜಸ್​ಪ್ರೀತ್ ಬುಮ್ರಾ ಹೆಸರಿನಲ್ಲಿದೆ. 2022 ರಲ್ಲಿ ಇಂಗ್ಲೆಂಡ್​ ವಿರುದ್ಧ ನಡೆದ ಟೆಸ್ಟ್​ನಲ್ಲಿ ಸ್ಟುವರ್ಟ್​ ಬ್ರಾಡ್ ಓವರ್​ನಲ್ಲಿ ಬುಮ್ರಾ ಒಟ್ಟು 35 ರನ್​ ಕಲೆಹಾಕಿದ್ದರು.