
IPL 2026: ಕ್ರಿಕೆಟ್ ಎಂಬುದು ಕೇವಲ ದೈಹಿಕ ಬಲದ ಆಟವಲ್ಲ, ಅದು ಬುದ್ಧಿವಂತಿಕೆಯ ಚದುರಂಗದಾಟ ಎಂಬುದನ್ನು ಗುಜರಾತ್ ಟೈಟಾನ್ಸ್ ತಂಡದ ಕೋಚ್ ಆಶಿಶ್ ನೆಹ್ರಾ ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ. ಮೊಹಮ್ಮದ್ ಸಿರಾಜ್ ಅವರ ಓವರ್‌ನಲ್ಲಿ ರನ್ ಮಳೆ ಹರಿಸುತ್ತಿದ್ದ ವೈಭವ್ ಸೂರ್ಯವಂಶಿಯನ್ನು ಕಟ್ಟಿಹಾಕಲು ಡಗೌಟ್‌ನಿಂದ ನೆಹ್ರಾ ನೀಡಿದ ಒಂದು ಸಣ್ಣ ‘ಮಾಸ್ಟರ್‌ಸ್ಟ್ರೋಕ್’ ಸಿಗ್ನಲ್, ಇಡೀ ಪಂದ್ಯದ ಚಿತ್ರಣ ಬದಲಿಸಿತು.
ಹೌದು, ಜೈಪುರದ ಸವಾಯಿ ಮಾನ್ಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ, 230 ರನ್‌ಗಳ ಬೃಹತ್ ಗುರಿಯನ್ನು ಬೆನ್ನಟ್ಟಿದ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವೈಭವ್ ಸೂರ್ಯವಂಶಿ ಸಿಡಿಲಬ್ಬರದ ಆರಂಭ ಒದಗಿಸಿದ್ದರು. ಮೊಹಮ್ಮದ್ ಸಿರಾಜ್ ಎಸೆದ ಮೂರನೇ ಓವರ್‌ನಲ್ಲಿ ವೈಭವ್ ಒಂದು ಸಿಕ್ಸರ್ ಮತ್ತು ಮೂರು ಸತತ ಬೌಂಡರಿಗಳನ್ನು ಬಾರಿಸಿ ಸಿರಾಜ್‌ರನ್ನು ಒತ್ತಡಕ್ಕೆ ಸಿಲುಕಿಸಿದ್ದರು.
ಅಲ್ಲದೆ ಕೇವಲ 16 ಎಸೆತಗಳಲ್ಲಿ 36 ರನ್ ಗಳಿಸಿದ್ದ ವೈಭವ್ ಆಟ ನೋಡಿ ಅನುಭವಿ ವೇಗಿಗಳಾದ ಮೊಹಮ್ಮದ್ ಸಿರಾಜ್ ಹಾಗೂ ಕಗಿಸೊ ರಬಾಡ ಕೂಡ ಅಸಹಾಯಕರಾಗಿ ನಿಂತಿದ್ದರು. ಇತ್ತ ಸಿರಾಜ್ ಅವರ ಮುಖದಲ್ಲಿನ ಅಸಹಾಯಕತೆಯನ್ನು ಗಮನಿಸಿದ ಆಶಿಶ್ ನೆಹ್ರಾ ಒಂದು ಸಿಗ್ನಲ್ ನೀಡಿದ್ದಾರೆ.
ವೈಭವ್ ಆರ್ಭಟ ಮುಂದುವರೆಯುತ್ತಿದ್ದಂತೆ ಡಗೌಟ್‌ನಲ್ಲಿದ್ದ ಗುಜರಾತ್ ಟೈಟಾನ್ಸ್ ಕೋಚ್ ಆಶಿಶ್ ನೆಹ್ರಾ ಅವರು ಮೈದಾನದಲ್ಲಿದ್ದ ಸಿರಾಜ್‌ಗೆ ಕೈ ಸನ್ನೆ ಮಾಡಿ ವಿಶೇಷ ಸೂಚನೆಯೊಂದನ್ನು ನೀಡಿದರು. ಅದರಂತೆ ಮೊಹಮ್ಮದ್ ಸಿರಾಜ್ ವೈಭವ್‌ಗೆ ಶಾರ್ಟ್ ಬಾಲ್ ಬೌನ್ಸರ್ ಎಸೆದಿದ್ದಾರೆ.
146.6 ಕಿ.ಮೀ ವೇಗದಲ್ಲಿ ಬಂದ ಮಾರಕ ಬೌನ್ಸರ್ ಅನ್ನು ವೈಭವ್ ಪುಲ್ ಮಾಡಲು ಪ್ರಯತ್ನಿಸಿ ವಿಫಲರಾದರು. ಚೆಂಡು ಬ್ಯಾಟ್‌ನ ಎಡ್ಜ್ಗೆ ತಾಗಿ ಅರ್ಶದ್ ಖಾನ್ ಕೈಸೇರಿತು. ಅಲ್ಲಿಗೆ ವೈಭವ್ ಸೂರ್ಯವಂಶಿಯ ಇನಿಂಗ್ಸ್ ಕೂಡ ಕೊನೆಗೊಂಡಿತು.
Masterstroke from Ashish Nehra and Mohammed Siraj nails the execution under pressure🙌
Vaibhav Sooryavanshi falls to the trap 🚨#TATAIPL Revenge Week 2026 ➡️ #RRvGT | LIVE NOW 👉 https://t.co/4f0xDg7EfO pic.twitter.com/ApgaLO8b24
— Star Sports (@StarSportsIndia) May 9, 2026
ಇದೀಗ ವೈಭವ್ ಸೂರ್ಯವಂಶಿಗಾಗಿ ಆಶಿಶ್ ನೆಹ್ರಾ ರೂಪಿಸಿದ್ದ ಮಾಸ್ಟರ್ ಪ್ಲ್ಯಾನ್ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಈ ಪಮದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ಟೈಟಾನ್ಸ್ ತಂಡವು 20 ಓವರ್ಗಳಲ್ಲಿ 229 ರನ್ ಕಲೆಹಾಕಿದ್ದರು. ಈ ಕಠಿಣ ಗುರಿ ಬೆನ್ನತ್ತಿದ ರಾಜಸ್ಥಾನ್ ರಾಯಲ್ಸ್ ತಂಡವು 16.3 ಓವರ್ಗಳಲ್ಲಿ 152 ರನ್ಗಳಿಸಿ ಆಲೌಟ್ ಆಗಿದೆ. ಈ ಮೂಲಕ ಗುಜರಾತ್ ಟೈಟಾನ್ಸ್ ತಂಡವು 77 ರನ್‌ಗಳ ಭರ್ಜರಿ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಶುಭ್ಮನ್ ಗಿಲ್ ಪಡೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಿದೆ.
Published On - 10:51 am, Sun, 10 May 26