ಏಷ್ಯಾಕಪ್ 2023ರ ಫೈನಲ್ ಪಂದ್ಯದಲ್ಲಿ ಭಾರತ ಮತ್ತು ಶ್ರೀಲಂಕಾ ತಂಡಗಳು ಮುಖಾಮುಖಿಯಾಗಲಿದೆ. ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯದಲ್ಲಿ ಗೆಲ್ಲುವ ಮೂಲಕ 8ನೇ ಬಾರಿ ಚಾಂಪಿಯನ್ ಪಟ್ಟಕ್ಕೇರುವ ವಿಶ್ವಾಸದಲ್ಲಿದೆ ಟೀಮ್ ಇಂಡಿಯಾ. ಏಕೆಂದರೆ ಏಕದಿನ ಕ್ರಿಕೆಟ್ನಲ್ಲಿ ಶ್ರೀಲಂಕಾ ವಿರುದ್ಧ ಭಾರತ ತಂಡವು ಪಾರುಪತ್ಯ ಮೆರೆಯುತ್ತಾ ಬಂದಿದೆ. ಇದಕ್ಕೆ ಸಾಕ್ಷಿ ಈ ಅಂಕಿ ಅಂಶಗಳು.
ಭಾರತ ಮತ್ತು ಶ್ರೀಲಂಕಾ ತಂಡಗಳು ಏಕದಿನ ಕ್ರಿಕೆಟ್ನಲ್ಲಿ ಇದುವರೆಗೆ 166 ಪಂದ್ಯಗಳಲ್ಲಿ ಮುಖಾಮುಖಿಯಾಗಿವೆ. ಈ ವೇಳೆ ಶ್ರೀಲಂಕಾ ಗೆದ್ದಿರುವುದು ಕೇವಲ 57 ಪಂದ್ಯಗಳಲ್ಲಿ ಮಾತ್ರ. ಇದೇ ವೇಳೆ ಭಾರತ ತಂಡವು ಬರೋಬ್ಬರಿ 97 ಮ್ಯಾಚ್ಗಳಲ್ಲಿ ಲಂಕಾ ತಂಡವನ್ನು ಬಗ್ಗು ಬಡಿದಿದೆ. ಇನ್ನು 11 ಪಂದ್ಯಗಳು ರದ್ದಾರೆ, 1 ಮ್ಯಾಚ್ ಟೈ ಆಗಿತ್ತು.
ಹಾಗೆಯೇ ಕೊನೆಯ 6 ಮುಖಾಮುಖಿಯಲ್ಲಿ ಟೀಮ್ ಇಂಡಿಯಾ ಐದರಲ್ಲಿ ಜಯ ಸಾಧಿಸಿದರೆ, ಶ್ರೀಲಂಕಾ ಗೆದ್ದಿರುವುದು ಕೇವಲ 1 ಪಂದ್ಯದಲ್ಲಿ ಮಾತ್ರ. ಅಂದರೆ ಇಲ್ಲಿ ಲಂಕಾ ಪಡೆಯ ವಿರುದ್ಧ ಟೀಮ್ ಇಂಡಿಯಾ ಮೇಲುಗೈ ಹೊಂದಿರುವುದು ಸ್ಪಷ್ಟ.
ಏಷ್ಯಾಕಪ್ನಲ್ಲಿ ಭಾರತ ಮತ್ತು ಶ್ರೀಲಂಕಾ 8 ಬಾರಿ ಫೈನಲ್ನಲ್ಲಿ ಮುಖಾಮುಖಿಯಾಗಿದೆ. ಈ ವೇಳೆ ಭಾರತ ತಂಡವು 5 ಬಾರಿ ಜಯ ಸಾಧಿಸಿದರೆ, ಶ್ರೀಲಂಕಾ ತಂಡವು 3 ಬಾರಿ ಟೀಮ್ ಇಂಡಿಯಾಗೆ ಸೋಲುಣಿಸಿ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಅಂಕಿ ಅಂಶಗಳ ಪ್ರಕಾರ ಲಂಕಾ ತಂಡದಿಂದ ಅಂತಿಮ ಹಣಾಹಣಿಯಲ್ಲಿ ಭರ್ಜರಿ ಪೈಪೋಟಿ ಎದುರಾಗಬಹುದು.
ಏಷ್ಯಾಕಪ್ನ ಫೈನಲ್ ಪಂದ್ಯವು ಕೊಲಂಬೊದ ಆರ್. ಪ್ರೇಮದಾಸ ಮೈದಾನದಲ್ಲಿ ನಡೆಯುತ್ತಿರುವುದು ಶ್ರೀಲಂಕಾ ಪಾಲಿಗೆ ಪ್ಲಸ್ ಪಾಯಿಂಟ್ ಆಗಲಿದೆ. ಒಂದೆಡೆ ತವರಿನ ಅಭಿಮಾನಿಗಳ ಬೆಂಬಲದೊಂದಿಗೆ ತವರು ಪಿಚ್ನಲ್ಲಿ ಶ್ರೀಲಂಕಾ ಅತ್ಯುತ್ತಮ ಪ್ರದರ್ಶನ ನೀಡುತ್ತಾ ಬಂದಿದೆ.
ಅದರಲ್ಲೂ ಸೂಪರ್-4 ಹಂತದಲ್ಲಿ ಇದೇ ಮೈದಾನದಲ್ಲಿ ಟೀಮ್ ಇಂಡಿಯಾವನ್ನು ಶ್ರೀಲಂಕಾ ತಂಡ 213 ರನ್ಗಳಿಗೆ ಆಲೌಟ್ ಮಾಡಿತ್ತು. ಇದಾಗ್ಯೂ ಬೌಲರ್ಗಳ ಸಾಂಘಿಕ ಪ್ರದರ್ಶನದಿಂದಾಗಿ ಈ ಪಂದ್ಯದಲ್ಲಿ ಭಾರತ ತಂಡವು 41 ರನ್ಗಳಿಂದ ಜಯ ಸಾಧಿಸಿತ್ತು. ಇದೀಗ ಇದೇ ಮೈದಾನದಲ್ಲಿ ಫೈನಲ್ ಪಂದ್ಯ ನಡೆಯುತ್ತಿರುವುದರಿಂದ ಶ್ರೀಲಂಕಾ ತಂಡದಿಂದ ಭರ್ಜರಿ ಪೈಪೋಟಿಯನ್ನು ನಿರೀಕ್ಷಿಸಬಹುದು.
ಇಲ್ಲಿ ಒಟ್ಟಾರೆ ಅಂಕಿ ಅಂಶಗಳ ಪ್ರಕಾರ ಟೀಮ್ ಇಂಡಿಯಾ ಬಲಿಷ್ಠ ಎಂಬುದು ಸ್ಪಷ್ಟ. ಇದಾಗ್ಯೂ ತವರು ಮೈದಾನದ ಬೆಂಬಲ ಶ್ರೀಲಂಕಾ ತಂಡಕ್ಕಿರಲಿದೆ. ಅದರಲ್ಲೂ ಕೆಲ ಆಟಗಾರರಿಗೆ ಕೊಲಂಬೊ ತವರು ಪಿಚ್. ಹೀಗಾಗಿ ಲಂಕಾ ಪಡೆಯಿಂದ ಕಠಿಣ ಪೈಪೋಟಿ ಎದುರಾಗುವ ಸಾಧ್ಯತೆಯಿದೆ.
ಶ್ರೀಲಂಕಾ ತಂಡ: ದಸುನ್ ಶಾನಕ (ನಾಯಕ), ಪಾತುಮ್ ನಿಸ್ಸಾಂಕ, ದಿಮುತ್ ಕರುಣಾರತ್ನೆ, ಕುಸಾಲ್ ಪೆರೇರ, ಕುಸಾಲ್ ಮೆಂಡಿಸ್ (ಉಪನಾಯಕ), ಚರಿತ್ ಅಸಲಂಕ, ಧನಂಜಯ ಡಿ ಸಿಲ್ವ, ಸದೀರ ಸಮರವಿಕ್ರಮ, ದುನಿತ್ ವೆಲ್ಲಾಲಗೆ, ಮಥೀಶ ಪತಿರಾಣ, ಕಸುನ್ ರಜಿತ, ದುಶನ್ ಹೇಮಂತ, ಬಿನೂರ ಫರ್ನಾಂಡೊ, ಪ್ರಮೋದ್ ಮಧುಶನ್.
ಇದನ್ನೂ ಓದಿ: ಕಿಂಗ್ ಕೊಹ್ಲಿಯ 1 ಶತಕಕ್ಕೆ 10 ದಾಖಲೆಗಳು ಉಡೀಸ್..!
ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ತಿಲಕ್ ವರ್ಮಾ, ಇಶಾನ್ ಕಿಶನ್ (ವಿಕೆಟ್ ಕೀಪರ್), ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ (ಉಪನಾಯಕ), ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಶಮಿ, ಪ್ರಸಿದ್ಧ್ ಕೃಷ್ಣ.