47 ಎಸೆತಗಳಲ್ಲಿ ಪಂದ್ಯ ಮುಗಿಸಿದ ಶ್ರೀಲಂಕಾ!

Women's Asia Cup 2026: ಮಹಿಳಾ ಏಷ್ಯಾಕಪ್ ಟಿ20 ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಶ್ರೀಲಂಕಾ ತಂಡ ಶುಭಾರಂಭ ಮಾಡಿದೆ. ಅದು ಸಹ ಯುಎಇ ವಿರುದ್ಧ 9 ವಿಕೆಟ್​ಗಳ ಭರ್ಜರಿ ಜಯದೊಂದಿಗೆ. ಈ ಗೆಲುವಿನೊಂದಿಗೆ ಶ್ರೀಲಂಕಾ ತಂಡವು ಗ್ರೂಪ್-ಬಿ ಅಂಕಪಟ್ಟಿಯಲ್ಲಿ ಅಗ್ರಸ್ಥಾನವನ್ನು ಅಲಂಕರಿಸಿದೆ.

47 ಎಸೆತಗಳಲ್ಲಿ ಪಂದ್ಯ ಮುಗಿಸಿದ ಶ್ರೀಲಂಕಾ!
Sri Lanka

Updated on: Aug 30, 2026 | 10:59 AM

2026ರ ಮಹಿಳಾ ಏಷ್ಯಾ ಕಪ್ ಟೂರ್ನಿಯಲ್ಲಿ ಹಾಲಿ ಚಾಂಪಿಯನ್ ಆಗಿ ಕಣಕ್ಕಿಳಿದಿರುವ ಶ್ರೀಲಂಕಾ ಕ್ರಿಕೆಟ್ ತಂಡ, ಭರ್ಜರಿ ಗೆಲುವಿನೊಂದಿಗೆ ತನ್ನ ಅಭಿಯಾನ ಆರಂಭಿಸಿದೆ. ಶನಿವಾರ (ಆಗಸ್ಟ್ 29) ದುಬೈ ಅಂತಾರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ತನ್ನ ಮೊದಲ ಲೀಗ್ ಪಂದ್ಯದಲ್ಲಿ ಲಂಕಾ ಪಡೆ, ಆತಿಥೇಯ ಯುನೈಟೆಡ್ ಅರಬ್ ಎಮಿರೇಟ್ಸ್ (UAE) ತಂಡವನ್ನು 9 ವಿಕೆಟ್‌ಗಳ ಬೃಹತ್ ಅಂತರದಿಂದ ಧೂಳೀಪಟ ಮಾಡಿದೆ.

ಈ ಪಂದ್ಯದಲ್ಲಿ ಟಾಸ್ ಗೆದ್ದ ಶ್ರೀಲಂಕಾ ತಂಡದ ನಾಯಕಿ ಚಾಮರಿ ಅಥಾಪತ್ತು ಮೊದಲು ಬೌಲಿಂಗ್ ಮಾಡಲು ನಿರ್ಧರಿಸಿದರು. ನಾಯಕಿಯ ನಿರ್ಧಾರವನ್ನು ಸಂಪೂರ್ಣವಾಗಿ ಸಮರ್ಥಿಸಿದ ಲಂಕಾ ಬೌಲರ್‌ಗಳು ಯುಎಇ ಬ್ಯಾಟರ್‌ಗಳಿಗೆ ಕ್ರೀಸ್‌ನಲ್ಲಿ ನೆಲೆನಿಲ್ಲಲು ಯಾವುದೇ ಅವಕಾಶ ನೀಡಲಿಲ್ಲ. ಆರಂಭದಿಂದಲೇ ಸತತ ವಿಕೆಟ್ ಕಳೆದುಕೊಂಡ ಯುಎಇ ತಂಡ 19.5 ಓವರ್‌ಗಳಲ್ಲಿ ಕೇವಲ 79 ರನ್‌ಗಳಿಗೆ ಆಲೌಟ್ ಆಯಿತು.’

ಯುಎಇ ಪರ ನಾಯಕಿ ಇಶಾ ಓಜಾ (18 ರನ್) ಗರಿಷ್ಠ ಸ್ಕೋರರ್ ಎನಿಸಿಕೊಂಡರೆ, ಶ್ರೀಲಂಕಾ ಪರ ಚೊಚ್ಚಲ ಟಿ20 ಪಂದ್ಯ ಆಡಿದ ವೇಗಿ ಚೇತನಾ ವಿಮುಕ್ತಿ (16 ರನ್‌ಗೆ 3 ವಿಕೆಟ್) ಮತ್ತು ಮಿಥಾಲಿ ಅಯೋಧ್ಯಾ (14 ರನ್‌ಗೆ 3 ವಿಕೆಟ್) ಮಾರಕ ಬೌಲಿಂಗ್ ದಾಳಿ ನಡೆಸಿ ಯುಎಇ ಬ್ಯಾಟಿಂಗ್ ಬೆನ್ನೆಲುಬು ಮುರಿದರು.

ಚಾಮರಿ ಅಥಾಪತ್ತು ಸಿಡಿಲಬ್ಬರ!

ಕೇವಲ 80 ರನ್‌ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಶ್ರೀಲಂಕಾ ತಂಡಕ್ಕೆ ನಾಯಕಿ ಚಾಮರಿ ಅಥಾಪತ್ತು ಮತ್ತು ಇಮೇಶಾ ದುಲಾನಿ ಸ್ಫೋಟಕ ಆರಂಭ ನೀಡಿದರು. ಮೊದಲ ಓವರ್​ನಿಂದಲೇ ಅಬ್ಬರಿಸಿದ ಈ ಜೋಡಿಯು ಮೊದಲ ವಿಕೆಟ್‌ಗೆ ಕೇವಲ 5 ಓವರ್‌ಗಳಲ್ಲಿ 57 ರನ್‌ಗಳ ಜೊತೆಯಾಟವಾಡಿ ತಂಡದ ಗೆಲುವನ್ನು ಅತ್ಯಂತ ಸುಲಭಗೊಳಿಸಿದರು. ಈ ಹಂತದಲ್ಲಿ ಇಮೇಶಾ ದುಲಾನಿ 18 ಎಸೆತಗಳಲ್ಲಿ 25 ರನ್ ಗಳಿಸಿ ಔಟಾದರು.

ಮತ್ತೊಂದೆಡೆ ಸಿಡಿಲಬ್ಬರದ ಬ್ಯಾಟಿಂಗ್ ಮುಂದುವರಿಸಿದ ನಾಯಕಿ ಚಾಮರಿ ಅಥಾಪತ್ತು, ಕೇವಲ 25 ಎಸೆತಗಳಲ್ಲಿ 7 ಬೌಂಡರಿ ಹಾಗೂ 2 ಸಿಕ್ಸರ್‌ಗಳ ನೆರವಿನಿಂದ ಅಜೇಯ 48 ರನ್ ಚಚ್ಚಿದರು. ಪರಿಣಾಮ, ಶ್ರೀಲಂಕಾ ತಂಡ ಕೇವಲ 7.5 ಓವರ್‌ಗಳಲ್ಲೇ 1 ವಿಕೆಟ್ ನಷ್ಟಕ್ಕೆ 80 ರನ್ ಗಳಿಸಿ ಗುರಿ ತಲುಪಿತು. ಈ ಮೂಲಕ ಇನ್ನು 72 ಎಸೆತಗಳು ಬಾಕಿ ಇರುವಂತೆಯೇ ಭರ್ಜರಿ ಜಯಭೇರಿ ಬಾರಿಸಿತು.

ಇದನ್ನೂ ಓದಿ: ಗೆಲುವಿಗೆ ಕೇವಲ 4 ರನ್‌ ಬೇಕಿದ್ದಾಗ ಪಂದ್ಯ ನಿಲ್ಲಿಸಿದ ಅಂಪೈರ್‌!

ಅಗ್ರಸ್ಥಾನಕ್ಕೇರಿದ ಶ್ರೀಲಂಕಾ:

ಈ ಏಕಪಕ್ಷೀಯ ಮತ್ತು ಬೃಹತ್ ಗೆಲುವಿನೊಂದಿಗೆ ಶ್ರೀಲಂಕಾ ತಂಡ ಬಿ-ಗ್ರೂಪ್‌ನ ಪಾಯಿಂಟ್ಸ್ ಪಟ್ಟಿಯಲ್ಲಿ +6.263 ರನ್ ರೇಟ್‌ನೊಂದಿಗೆ ಅಗ್ರಸ್ಥಾನಕ್ಕೇರಿದೆ. ತನ್ನ ಮುಂದಿನ ಪಂದ್ಯಗಳಲ್ಲಿ ಉಭಯ ತಂಡಗಳು ಇಂಡೋನೇಷ್ಯಾ ವಿರುದ್ಧ ಸೆಣಸಾಡಲಿವೆ.

 

 

Published On - 10:59 am, Sun, 30 August 26

ಝಾಹಿರ್ ಯೂಸುಫ್

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Loading...
Unable to load recommendations.
Follow Us