AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಗೆಲುವಿಗೆ ಕೇವಲ 4 ರನ್‌ ಬೇಕಿದ್ದಾಗ ಪಂದ್ಯ ನಿಲ್ಲಿಸಿದ ಅಂಪೈರ್‌!

ಕ್ರಿಕೆಟ್ ಆಟವನ್ನು 'ಅನಿಶ್ಚಿತತೆಗಳ ಆಟ' ಎಂದು ಕರೆಯಲಾಗುತ್ತದೆ. ಆದರೆ ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ನಡೆದ ಘಟನೆಯೊಂದು ಅನಿಶ್ಚಿತತೆಯನ್ನೂ ಮೀರಿ, ತೀವ್ರ ವಿವಾದ ಹಾಗೂ ಆಶ್ಚರ್ಯಕ್ಕೆ ಕಾರಣವಾಗಿದೆ. ಪಂದ್ಯ ಗೆಲ್ಲಲು ಕೇವಲ ಒಂದೇ ಒಂದು ಬೌಂಡರಿಯ ಅಗತ್ಯವಿದ್ದಾಗ, ಅಂಪೈರ್‌ಗಳು ಮಂದಬೆಳಕಿನ ಕಾರಣ ನೀಡಿ ದಿನದಾಟವನ್ನು ಮುಕ್ತಾಯಗೊಳಿಸಿದ ಪ್ರಸಂಗವೊಂದು ಇದೀಗ ಜಾಗತಿಕವಾಗಿ ಭಾರಿ ಚರ್ಚೆಗೆ ಗ್ರಾಸವಾಗಿದೆ.

ಗೆಲುವಿಗೆ ಕೇವಲ 4 ರನ್‌ ಬೇಕಿದ್ದಾಗ ಪಂದ್ಯ ನಿಲ್ಲಿಸಿದ ಅಂಪೈರ್‌!
County Championship
ಝಾಹಿರ್ ಯೂಸುಫ್
|

Updated on: Aug 30, 2026 | 9:48 AM

Share

ಇಂಗ್ಲೆಂಡ್‌ನ ಕೌಂಟಿ ಚಾಂಪಿಯನ್‌ಶಿಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಡರ್ಹಾಮ್ ಮತ್ತು ಗ್ಲೌಸೆಸ್ಟರ್‌ಶೈರ್ ತಂಡಗಳ ನಡುವಿನ ಪಂದ್ಯವು ಅತ್ಯಂತ ವಿಲಕ್ಷಣ ಹಾಗೂ ನಾಟಕೀಯ ತಿರುವಿಗೆ ಸಾಕ್ಷಿಯಾಗಿದೆ. ಪಂದ್ಯ ಗೆಲ್ಲಲು ಡರ್ಹಾಮ್ ತಂಡಕ್ಕೆ ಕೇವಲ 4 ರನ್‌ಗಳ ಅಗತ್ಯವಿತ್ತು. ಆದರೆ, ಅಂಪೈರ್‌ಗಳಾದ ಜೇಮ್ಸ್ ಟ್ರೆಡ್‌ವೆಲ್ ಮತ್ತು ಸ್ಟೀವ್ ಒ’ಶೌಗ್ನೆಸ್ಸಿ ಮಂದಬೆಳಕಿನ ಕಾರಣ ನೀಡಿ ದಿನದಾಟವನ್ನು ಮುಕ್ತಾಯಗೊಳಿಸಿ ಅಚ್ಚರಿ ಮೂಡಿಸಿದ್ದಾರೆ. ಇದರಿಂದಾಗಿ ಡರ್ಹಾಮ್ ತಂಡ ಕೇವಲ ಒಂದೇ ಒಂದು ಬೌಂಡರಿ ಬಾರಿಸಿ ಪಂದ್ಯ ಗೆಲ್ಲಲು ಮರುದಿನದವರೆಗೂ ಕಾಯಬೇಕಾದ ಪರಿಸ್ಥಿತಿ ಎದುರಾಗಿದೆ.

ಪಂದ್ಯದ ಹಿನ್ನೆಲೆ ಮತ್ತು ಅಲ್ಡ್ರಿಡ್ಜ್ ಸಾಹಸ:

ಚೆಸ್ಟರ್-ಲೆ-ಸ್ಟ್ರೀಟ್‌ನ ರಿವರ್‌ಸೈಡ್ ಮೈದಾನದಲ್ಲಿ ನಡೆಯುತ್ತಿರುವ ಈ ಪಂದ್ಯದಲ್ಲಿ ಡರ್ಹಾಮ್ ಸಂಪೂರ್ಣ ಹಿಡಿತ ಸಾಧಿಸಿತ್ತು. ಗ್ಲೌಸೆಸ್ಟರ್‌ಶೈರ್ ತಂಡವನ್ನು ಮೊದಲ ಇನಿಂಗ್ಸ್‌ನಲ್ಲಿ 137 ರನ್‌ಗಳಿಗೆ ಆಲೌಟ್ ಮಾಡಿದ ಡರ್ಹಾಮ್, ತನ್ನ ಮೊದಲ ಇನಿಂಗ್ಸ್‌ನಲ್ಲಿ 384 ರನ್ ಕಲೆಹಾಕಿ 247 ರನ್‌ಗಳ ಬೃಹತ್ ಮುನ್ನಡೆ ಸಾಧಿಸಿತ್ತು.

ಡರ್ಹಾಮ್ ಪರವಾಗಿ ಆಲ್‌ರೌಂಡರ್ ಕೇಸಿ ಅಲ್ಡ್ರಿಡ್ಜ್ ಅದ್ಭುತ ಪ್ರದರ್ಶನ ನೀಡಿದರು. ಮೊದಲ ಇನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದ ಅವರು, ಎರಡನೇ ಇನಿಂಗ್ಸ್‌ನಲ್ಲಿ 47 ರನ್‌ಗಳಿಗೆ 4 ವಿಕೆಟ್ ಕಿತ್ತು ಗ್ಲೌಸೆಸ್ಟರ್‌ಶೈರ್ ತಂಡವನ್ನು 250 ರನ್‌ಗಳಿಗೆ ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರವಹಿಸಿದರು. ಆ ಮೂಲಕ ತಮ್ಮ ಪ್ರಥಮ ದರ್ಜೆ ಕ್ರಿಕೆಟ್ ವೃತ್ತಿಜೀವನದಲ್ಲೇ ಮೊದಲ ಬಾರಿಗೆ ಪಂದ್ಯವೊಂದರಲ್ಲಿ 9 ವಿಕೆಟ್‌ಗಳ ಸಾಧನೆ ಮಾಡಿದರು.

ಕೊನೆ ಕ್ಷಣದ ಡ್ರಾಮಾ ಮತ್ತು ವಿವಾದ!

ಗ್ಲೌಸೆಸ್ಟರ್‌ಶೈರ್ ತಂಡವು ತನ್ನ ಎರಡನೇ ಇನಿಂಗ್ಸ್‌ನಲ್ಲಿ 250 ರನ್‌ಗಳಿಗೆ ಆಲೌಟ್ ಆಯಿತು. ಇದರಿಂದಾಗಿ ಡರ್ಹಾಮ್ ತಂಡಕ್ಕೆ ಗೆಲ್ಲಲು ಸಿಕ್ಕಿದ್ದು ಕೇವಲ 4 ರನ್‌ಗಳ ಅತ್ಯಲ್ಪ ಗುರಿ ಮಾತ್ರ. ಆದರೆ, ಆ ಹೊತ್ತಿಗೆ ಸಂಜೆಯಾಗಿದ್ದರಿಂದ ಮೈದಾನದಲ್ಲಿ ಬೆಳಕು ಮಂದವಾಗಿತ್ತು. ಕ್ರಿಕೆಟ್ ನಿಯಮಗಳ ಪ್ರಕಾರ, ಇಂತಹ ಮಂದಬೆಳಕಿನಲ್ಲಿ ವೇಗದ ಬೌಲಿಂಗ್ ಎದುರಿಸುವುದು ಆಟಗಾರರ ಸುರಕ್ಷತೆಯ ದೃಷ್ಟಿಯಿಂದ ಅಪಾಯಕಾರಿ ಎಂದು ತೀರ್ಮಾನಿಸಿದ ಅಂಪೈರ್‌ಗಳು ಪಂದ್ಯವನ್ನು ಅಲ್ಲಿಗೇ ನಿಲ್ಲಿಸಿದರು.

ಇತ್ತ ಗ್ಲೌಸೆಸ್ಟರ್‌ಶೈರ್ ತಂಡವು ಸ್ಪಿನ್ ಬೌಲಿಂಗ್​ನೊಂದಿಗೆ ಪಂದ್ಯ ಮುಗಿಸಲು ನಿರಾಕರಿಸಿತು. ಸ್ಪಿನ್ನರ್‌ಗಳನ್ನು ಬಳಸಿದ್ದರೆ ಬೆಳಕಿನ ಕೊರತೆಯಿದ್ದರೂ ಪಂದ್ಯವನ್ನು ಮುಂದುವರಿಸಬಹುದಿತ್ತು. ಆದರೆ ಎದುರಾಳಿ ತಂಡ ತಂತ್ರಗಾರಿಕೆ ಪ್ರದರ್ಶಿಸಿ ವೇಗದ ಬೌಲರ್‌ಗಳನ್ನೇ ಬಳಸಲು ಹಠ ಹಿಡಿದಿದ್ದರಿಂದ, ಅಂಪೈರ್‌ಗಳು ಆಟಗಾರರನ್ನು ಪೆವಿಲಿಯನ್‌ಗೆ ವಾಪಸ್ ಕಳುಹಿಸಿದರು.

ಇದನ್ನೂ ಓದಿ: TKR ತಂಡದ ‘ಜೆರ್ಸಿ ನಂಬರ್ 47’ ನಿವೃತ್ತಿ!

ಅಭಿಮಾನಿಗಳಿಂದ ತೀವ್ರ ಆಕ್ರೋಶ ಮತ್ತು ಲೇವಡಿ!

ಕೇವಲ 4 ರನ್‌ಗಳಿರುವಾಗ ಪಂದ್ಯ ನಿಲ್ಲಿಸಿದ ಅಂಪೈರ್‌ಗಳ ಈ ನಿರ್ಧಾರಕ್ಕೆ ಕ್ರಿಕೆಟ್ ವಲಯದಲ್ಲಿ ಭಾರಿ ಟೀಕೆ ವ್ಯಕ್ತವಾಗಿದೆ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಅಂಪೈರ್‌ಗಳ ನಿರ್ಧಾರವನ್ನು “ಕಾಮನ್ ಸೆನ್ಸ್ ಇಲ್ಲದ ತೀರ್ಪು” ಎಂದು ಲೇವಡಿ ಮಾಡಿದ್ದಾರೆ. ಮುಂದಿನ ದಿನದ ಹವಾಮಾನ ವರದಿ ಆಶಾದಾಯಕವಾಗಿಲ್ಲದ ಕಾರಣ, ಕೇವಲ 4 ರನ್‌ಗಳಿಗಾಗಿ ಇಡೀ ತಂಡ, ಸಿಬ್ಬಂದಿ ಹಾಗೂ ಪ್ರೇಕ್ಷಕರು ಮರುದಿನ ಮೈದಾನಕ್ಕೆ ಬರುವಂತಾಗಿರುವುದು ಭಾರಿ ಚರ್ಚೆಗೆ ಗ್ರಾಸವಾಗಿದೆ.

Follow Us