
ದಕ್ಷಿಣ ಆಫ್ರಿಕಾ ವಿರುದ್ಧ ತವರಿನಲ್ಲೇ ಏಕದಿನ ಸರಣಿ ಸೋತು ಮುಜುಗರಕ್ಕೀಡಾಗಿದ್ದ ಆತಿಥೇಯ ಆಸ್ಟ್ರೇಲಿಯಾ ತಂಡ ಇದೀಗ ಸರಣಿಯ ಮೂರನೇ ಮತ್ತು ಅಂತಿಮ ಏಕದಿನ ಪಂದ್ಯದಲ್ಲಿ ರನ್‌ಗಳ ಬೆಟ್ಟವನ್ನೇ ಕಟ್ಟಿದೆ. ಉಭಯ ತಂಡಗಳ ನಡುವಿನ ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಆಸ್ಟ್ರೇಲಿಯಾ ತಂಡ ನಿಗದಿತ 50 ಓವರ್‌ಗಳಲ್ಲಿ ಕೇವಲ 2 ವಿಕೆಟ್ ಕಳೆದುಕೊಂಡು ಬರೋಬ್ಬರಿ 431 ರನ್ ಕಲೆಹಾಕಿದೆ. ಇದು ಏಕದಿನ ಕ್ರಿಕೆಟ್‌ನಲ್ಲಿ ಆಸ್ಟ್ರೇಲಿಯಾ ಕಲೆಹಾಕಿದ ಎರಡನೇ ಅತ್ಯಧಿಕ ಸ್ಕೋರ್ ಆಗಿದೆ. ತಂಡದ ಪರ ಆರಂಭಿಕರಾದ ಟ್ರಾವಿಸ್ ಹೆಡ್, ಮಿಚೆಲ್ ಮಾರ್ಷ್ ಶತಕ ಬಾರಿಸಿದರೆ, ಮೂರನೇ ಕ್ರಮಾಂಕದಲ್ಲಿ ಬಂದ ಕ್ಯಾಮರೂನ್ ಗ್ರೀನ್ ಕೂಡ ಸ್ಫೋಟಕ ಶತಕ ಬಾರಿಸಿದರು. ಈ ಮೂವರ ಆಟದಿಂದಾಗಿ ಆಸೀಸ್ ಪಡೆ ಬೃಹತ್ ಮೊತ್ತವನ್ನು ಪೇರಿಸಿತು.
ವಾಸ್ತವವಾಗಿ ಇದೇ ದಕ್ಷಿಣ ಆಫ್ರಿಕಾ ವಿರುದ್ಧ 2006 ರಲ್ಲಿ ನಡೆದಿದ್ದ ಏಕದಿನ ಪಂದ್ಯದಲ್ಲಿ ಆಸ್ಟ್ರೇಲಿಯಾ ತಂಡ 434 ರನ್‌ಗಳ ಇನ್ನಿಂಗ್ಸ್ ಆಡಿತ್ತು. ಇದು ಏಕದಿನದಲ್ಲಿ ಆಸ್ಟ್ರೇಲಿಯಾ ಕಲೆಹಾಕಿರುವ ಅತ್ಯಧಿಕ ರನ್‌ಗಳ ಇದುವರೆಗಿನ ದಾಖಲೆಯಾಗಿದೆ. ಇದೀಗ ಅಂದರೆ ಬರೋಬ್ಬರಿ 19 ವರ್ಷಗಳ ನಂತರ, ದಕ್ಷಿಣ ಆಫ್ರಿಕಾ ವಿರುದ್ಧ ಕಾಂಗರೂಗಳು ಮತ್ತೊಮ್ಮೆ ಏಕದಿನ ಪಂದ್ಯಗಳಲ್ಲಿ ಎರಡನೇ ಅತ್ಯಧಿಕ ಸ್ಕೋರ್ ದಾಖಲಿಸಿದ ಸ್ಕ್ರಿಪ್ಟ್ ಬರೆದಿದ್ದಾರೆ.
ಇದು ಮಾತ್ರವಲ್ಲದೆ 10 ವರ್ಷಗಳ ಕಾಯುವಿಕೆಯ ನಂತರ ಆಸ್ಟ್ರೇಲಿಯಾ ಏಕದಿನ ಕ್ರಿಕೆಟ್‌ನಲ್ಲಿ 400 ಕ್ಕೂ ಹೆಚ್ಚು ರನ್ ಗಳಿಸಿದೆ. ಇದಕ್ಕೂ ಮೊದಲು, 2015 ರಲ್ಲಿ ಅಫ್ಘಾನಿಸ್ತಾನ ವಿರುದ್ಧ ಕೊನೆಯ ಬಾರಿಗೆ ಏಕದಿನದಲ್ಲಿ 400 ರನ್‌ಗಳ ಗಡಿ ದಾಟಿತ್ತು. ಆಗ ಆಸ್ಟ್ರೇಲಿಯಾ 6 ವಿಕೆಟ್‌ಗಳಿಗೆ 417 ರನ್ ಗಳಿಸಿತ್ತು, ಇದು ಏಕದಿನದಲ್ಲಿ ಆಸೀಸ್ ಪಡೆಯ ಮೂರನೇ ಅತ್ಯಧಿಕ ಸ್ಕೋರ್ ಆಗಿದೆ. ಇದು ಮಾತ್ರವಲ್ಲದೆ ಏಕದಿನ ಕ್ರಿಕೆಟ್‌ನಲ್ಲಿ ಇದು 9 ನೇ ಅತ್ಯಧಿಕ ಸ್ಕೋರ್ ಆಗಿದೆ.
ಆಸೀಸ್ ಪರ ಟ್ರಾವಿಸ್ ಹೆಡ್ ಅತ್ಯಧಿಕ 142 ರನ್ ಬಾರಿಸಿದರೆ, ಮಿಚೆಲ್ ಮಾರ್ಷ್ ಕೂಡ 100 ರನ್ ಕಲೆ ಹಾಕಿದರು. ಮೂರನೇ ಕ್ರಮಾಂಕದಲ್ಲಿ ಬಂದ ಕ್ಯಾಮರೂನ್ ಗ್ರೀನ್ ಕೇವಲ 55 ಎಸೆತಗಳಲ್ಲಿ 118 ರನ್ ಬಾರಿಸಿ ತಂಡವನ್ನು ಈ ಬೃಹತ್ ಮೊತ್ತದತ್ತ ಕೊಂಡೊಯ್ದರು. ಆಸ್ಟ್ರೇಲಿಯಾದ ಇನ್ನಿಂಗ್ಸ್‌ನಲ್ಲಿ ಒಟ್ಟು 18 ಸಿಕ್ಸರ್‌ಗಳು ಸಿಡಿದವು. ಇವುಗಳಲ್ಲಿ ಹೆಡ್ ಮತ್ತು ಮಾರ್ಷ್ ತಲಾ 5 ಸಿಕ್ಸರ್‌ಗಳನ್ನು ಬಾರಿಸಿದರೆ, ಕ್ಯಾಮರೂನ್ ಗ್ರೀನ್ 8 ಸಿಕ್ಸರ್‌ಗಳನ್ನು ಬಾರಿಸಿದರು.
10 ವರ್ಷಗಳಲ್ಲಿ ಟಾಪ್ ಮೂವರು ಬ್ಯಾಟ್ಸ್‌ಮನ್‌ಗಳು ಏಕದಿನ ಕ್ರಿಕೆಟ್‌ನಲ್ಲಿ ಶತಕ ಬಾರಿಸಿದ್ದು ಇದೇ ಮೊದಲು. ಅಚ್ಚರಿಯೆಂದರೆ ದಕ್ಷಿಣ ಆಫ್ರಿಕಾದ ಟಾಪ್ ಮೂವರು ಬ್ಯಾಟ್ಸ್‌ಮನ್‌ಗಳು ಕೊನೆಯ ಬಾರಿಗೆ ಅಂದರೆ 2015 ರಂದು ವೆಸ್ಟ್ ಇಂಡೀಸ್ ವಿರುದ್ಧ ನಡೆದಿದ್ದ ಏಕದಿನ ಪಂದ್ಯದಲ್ಲಿ ಶತಕ ಬಾರಿಸಿದ್ದರು. ಆ ಸಮಯದಲ್ಲಿ ಆರಂಭಿಕರಾದ ಹಾಶಿಮ್ ಆಮ್ಲಾ, ರೈಲಿ ರುಸ್ಸೋ ಮತ್ತು ಎಬಿ ಡಿವಿಲಿಯರ್ಸ್ ಶತಕದ ಇನ್ನಿಂಗ್ಸ್ ಆಡಿದ್ದರು.
Published On - 3:12 pm, Sun, 24 August 25