AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

AUS vs ENG: ಕುತೂಹಲಘಟ್ಟದತ್ತ ಆ್ಯಶಸ್ ಟೆಸ್ಟ್: ಗೆಲ್ಲೋದು ಯಾರು?

Australia vs England, 5th Test: ಆ್ಯಶಸ್ ಸರಣಿಯ ಮೊದಲ ನಾಲ್ಕು ಮ್ಯಾಚ್​​​ಗಳಲ್ಲಿ ಆಸ್ಟ್ರೇಲಿಯಾ ತಂಡ 3 ಪಂದ್ಯಗಳನ್ನು ಗೆದ್ದುಕೊಂಡರೆ, ಇಂಗ್ಲೆಂಡ್ ತಂಡ ಒಂದು ಮ್ಯಾಚ್​​ನಲ್ಲಿ ಜಯ ಸಾಧಿಸಿದೆ. ಇದೀಗ ಐದನೇ ಟೆಸ್ಟ್ ಪಂದ್ಯವು ಚಾಲ್ತಿಯಲ್ಲಿದ್ದು, ಈ ಪಂದ್ಯದಲ್ಲಿ ಗೆಲ್ಲೋರು ಯಾರು ಎಂಬ ಕುತೂಹಲ ಎಲ್ಲರಲ್ಲೂ ಮನೆ ಮಾಡಿದೆ.

AUS vs ENG: ಕುತೂಹಲಘಟ್ಟದತ್ತ ಆ್ಯಶಸ್ ಟೆಸ್ಟ್: ಗೆಲ್ಲೋದು ಯಾರು?
Aus Vs Eng
ಝಾಹಿರ್ ಯೂಸುಫ್
|

Updated on: Jan 07, 2026 | 8:53 AM

Share

ಸಿಡ್ನಿ ಕ್ರಿಕೆಟ್ ಗ್ರೌಂಡ್​ನಲ್ಲಿ ನಡೆಯುತ್ತಿರುವ ಆ್ಯಶಸ್ ಸರಣಿಯ 5ನೇ ಪಂದ್ಯವು ಕುತೂಹಲ ಘಟ್ಟದತ್ತ ಸಾಗಿದೆ. ಈ ಪಂದ್ಯದಲ್ಲಿ ಟಾಸ್ ಗೆದ್ದ ಇಂಗ್ಲೆಂಡ್ ತಂಡದ ನಾಯಕ ಬೆನ್ ಸ್ಟೋಕ್ಸ್ ಬ್ಯಾಟಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಇಂಗ್ಲೆಂಡ್ ಪರ ಜೋ ರೂಟ್ 160 ರನ್​​ಗಳ ಭರ್ಜರಿ ಇನಿಂಗ್ಸ್ ಆಡಿದರು. ಈ ಶತಕದ ನೆರವಿನೊಂದಿಗೆ ಇಂಗ್ಲೆಂಡ್ ತಂಡವು ಪ್ರಥಮ ಇನಿಂಗ್ಸ್​​ನಲ್ಲಿ 384 ರನ್​ ಪೇರಿಸಿತು.

ಇದಕ್ಕುತ್ತರವಾಗಿ ಮೊದಲ ಇನಿಂಗ್ಸ್ ಆಡಿದ ಆಸ್ಟ್ರೇಲಿಯಾ ಪರ ಆರಂಭಿಕ ದಾಂಡಿಗ ಟ್ರಾವಿಸ್ ಹೆಡ್ 163 ರನ್​​ಗಳ ಇನಿಂಗ್ಸ್ ಆಡಿದರು. ಇನ್ನು ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಸ್ಟೀವ್ ಸ್ಮಿತ್ 138 ರನ್​​​ ಕಲೆಹಾಕಿದರು. ಇಬ್ಬರು ದಾಂಡಿಗರ ಭರ್ಜರಿ ಬ್ಯಾಟಿಂಗ್ ನೆರವಿನಿಂದ ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​​ನಲ್ಲಿ 567 ರನ್ ಕಲೆಹಾಕಿದೆ.

183 ರನ್​​ಗಳ ಮುನ್ನಡೆ:

ಆಸ್ಟ್ರೇಲಿಯಾ ತಂಡವು ಮೊದಲ ಇನಿಂಗ್ಸ್​​ನಲ್ಲಿ ಬರೋಬ್ಬರಿ 183 ರನ್​​ಗಳ ಮುನ್ನಡೆ ಸಾಧಿಸಿದೆ. ಅದರಂತೆ ಇದೀಗ ನಾಲ್ಕನೇ ದಿನದಾಟದಲ್ಲಿ ಬ್ಯಾಟಿಂಗ್ ಮಾಡುತ್ತಿರುವ ಇಂಗ್ಲೆಂಡ್ ತಂಡವು 183 ರನ್​​ಗಳನ್ನು ಕಲೆಹಾಕಿದ ಬಳಿಕವಷ್ಟೇ ಎರಡನೇ ಇನಿಂಗ್ಸ್​ನ ರನ್ ಪರಿಗಣನೆಗೆ ಬರಲಿದೆ.

ಹೀಗಾಗಿ ಈ ಪಂದ್ಯದಲ್ಲಿ ಗೆಲ್ಲಬೇಕಿದ್ದರೆ ಇಂಗ್ಲೆಂಡ್ ತಂಡವು ನಾಲ್ಕನೇ ದಿನದಾಟದಲ್ಲೇ ಬೃಹತ್ ಮೊತ್ತ ಪೇರಿಸಬೇಕು. ಅತ್ತ ಸಾಧಾರಣ ಮೊತ್ತ ಕಲೆಹಾಕಿದರೆ ಆಸ್ಟ್ರೇಲಿಯಾ ತಂಡ ಚೇಸ್ ಮಾಡುವುದು ಖಚಿತ.

ಅಂದರೆ ಇಂಗ್ಲೆಂಡ್ ತಂಡವು ಕೊನೆಯ ದಿನದಾಟದಲ್ಲಿ ಆಸ್ಟ್ರೇಲಿಯಾಗೆ ಕನಿಷ್ಠ 350 ರನ್​​ಗಳ ಗುರಿಯನ್ನಾದರೂ ನೀಡಲೇಬೇಕು. ಅದಕ್ಕಿಂತ ಕಡಿಮೆ ಮೊತ್ತವನ್ನು ಅಂತಿಮ ದಿನದಾಟದಲ್ಲಿ ಆಸ್ಟ್ರೇಲಿಯಾ ಚೇಸ್ ಮಾಡುವುದು ಖಚಿತ. ಏಕೆಂದರೆ ಆಸ್ಟ್ರೇಲಿಯಾ ತಂಡವು ಈಗಾಗಲೇ 3-1 ಅಂತರದಿಂದ ಸರಣಿ ವಶಪಡಿಸಿಕೊಂಡಿದೆ.

ಹೀಗಾಗಿ ಈ ಪಂದ್ಯವು ಆಸ್ಟ್ರೇಲಿಯಾ ಪಾಲಿಗೆ ಔಪಚಾರಿಕ. ಅತ್ತ ಇಂಗ್ಲೆಂಡ್ ತಂಡವು ಕೊನೆಯ ದಿನದಾಟದಲ್ಲಿ 350 ರನ್​ಗಳಿಗಿಂತ ಕಡಿಮೆ ಮೊತ್ತದ ಗುರಿ ನೀಡಿದರೆ ಟ್ರಾವಿಸ್ ಹೆಡ್ ಮುಂದಾಳತ್ವದಲ್ಲಿ ಆಸೀಸ್ ಪಡೆ ಚೇಸ್ ಮಾಡುವುದನ್ನು ಎದುರು ನೋಡಬಹುದು.

ಇತ್ತ ಇಂಗ್ಲೆಂಡ್ ತಂಡಕ್ಕೆ ಬೃಹತ್ ಮೊತ್ತ ಪೇರಿಸಲು ಸಾಧ್ಯವಾಗದೇ ಇದ್ದರೆ ನಾಲ್ಕನೇ ಮತ್ತು ಐದನೇ ದಿನದಾಟಗಳವರೆಗೆ ಬ್ಯಾಟಿಂಗ್ ಮುಂದುವರೆಸಿ ಪಂದ್ಯವನ್ನು ಡ್ರಾನತ್ತ ಕೊಂಡೊಯ್ಯಬೇಕು. ಅದರೊಳಗೆ ಆಂಗ್ಲರನ್ನು ಆಲೌಟ್ ಮಾಡಲು ಆಸ್ಟ್ರೇಲಿಯಾ ಬೌಲರ್​​​ಗಳು ಶತ ಪ್ರಯತ್ನ ನಡೆಸುವುದು ಖಚಿತ. ಹೀಗಾಗಿ ಐದನೇ ಟೆಸ್ಟ್ ಪಂದ್ಯವು ನಾಲ್ಕನೇ ದಿನದಾಟವು ಉಭಯ ತಂಡಗಳ ಪಾಲಿಗೆ ನಿರ್ಣಾಯಕ ಎಂದರೆ ತಪ್ಪಾಗಲಾರದು.

ಆಸ್ಟ್ರೇಲಿಯಾ ಪ್ಲೇಯಿಂಗ್ 11: ಸ್ಟೀವ್ ಸ್ಮಿತ್ (ನಾಯಕ), ಟ್ರಾವಿಸ್ ಹೆಡ್, ಜೇಕ್ ವೆದರಾಲ್ಡ್​, ಮಾರ್ನಸ್ ಲ್ಯಾಬುಶೇನ್, ಉಸ್ಮಾನ್ ಖ್ವಾಜಾ, ಅಲೆಕ್ಸ್ ಕ್ಯಾರಿ, ಕ್ಯಾಮರೂನ್ ಗ್ರೀನ್, ಬ್ಯೂ ವೆಬ್‌ಸ್ಟರ್, ಮೈಕೆಲ್ ನೇಸರ್, ಮಿಚೆಲ್ ಸ್ಟಾರ್ಕ್, ಸ್ಕಾಟ್ ಬೋಲ್ಯಾಂಡ್.

ಇದನ್ನೂ ಓದಿ: IPL 2026: ಒಂದೇ ಸ್ಟೇಡಿಯಂ ಮೇಲೆ RCB ಮತ್ತು RR ಕಣ್ಣು..!

ಇಂಗ್ಲೆಂಡ್ ಪ್ಲೇಯಿಂಗ್ 11: ಝಾಕ್ ಕ್ರಾಲಿ, ಬೆನ್ ಡಕೆಟ್, ಜೇಕಬ್ ಬೆಥೆಲ್, ಜೋ ರೂಟ್, ಹ್ಯಾರಿ ಬ್ರೂಕ್, ಬೆನ್ ಸ್ಟೋಕ್ಸ್ (ನಾಯಕ), ಜೇಮಿ ಸ್ಮಿತ್ (ವಿಕೆಟ್ ಕೀಪರ್), ವಿಲ್ ಜ್ಯಾಕ್ಸ್, ಬ್ರೈಡನ್ ಕಾರ್ಸ್, ಮ್ಯಾಥ್ಯೂ ಪಾಟ್ಸ್, ಜೋಶ್ ಟಂಗ್.