ವಿಕೆಟ್ ಕೀಪರ್ ಎಡವಟ್ಟು: ಮಿಲಿಮೀಟರ್ ಅಂತರದಲ್ಲಿ ಕೈ ತಪ್ಪಿದ ಟ್ರೋಫಿ
Dubai Capitals vs Desert Vipers, Final: ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯಲ್ಲಿ ದುಬೈ ಕ್ಯಾಪಿಟಲ್ಸ್ ತಂಡವು ಚಾಂಪಿಯನ್ ಪಟ್ಟ ಅಲಂಕರಿಸಿದೆ. ಈ ಗೆಲುವಿನ ರೂವಾರಿ ರೋವ್ಮನ್ ಪೊವೆಲ್. ಆದರೆ ದುಬೈ ಕ್ಯಾಪಿಟಲ್ಸ್ ತಂಡಕ್ಕೆ ಗೆಲುವು ತಂದುಕೊಡುವ ಮೊದಲು ಪೊವೆಲ್ಗೆ ಜೀವದಾನವೊಂದು ಸಿಕ್ಕಿತ್ತು ಎಂಬುದು ವಿಶೇಷ. ಈ ಜೀವದಾನದೊಂದಿಗೆ ರೋವ್ಮನ್ ಪೊವೆಲ್ ಇಡೀ ಪಂದ್ಯದ ಚಿತ್ರಣ ಬದಲಿಸಿದರು.

ಕ್ರಿಕೆಟ್ ಅಂಗಳದಲ್ಲಿ ಕ್ಯಾಚಸ್ ವಿನ್ ಮ್ಯಾಚಸ್ ಎಂಬ ಮಾತಿದೆ. ಆದರೆ ಸ್ಟಂಪ್ ಔಟ್ ಕೂಡ ಪಂದ್ಯದ ಗತಿ ಬದಲಿಸಬಲ್ಲದು ಎಂಬುದಕ್ಕೆ ಈ ಘಟನೆಯೇ ಸಾಕ್ಷಿ. ಏಕೆಂದರೆ ಈ ಪಂದ್ಯದಲ್ಲಿ ವಿಕೆಟ್ ಕೀಪರ್ ಆಝಂ ಖಾನ್ ಮಿಲಿಮೀಟರ್ ಅಂತರದಲ್ಲಿ ಮಾಡಿದ ತಪ್ಪು ಇಡೀ ಪಂದ್ಯದ ಚಿತ್ರಣ ಬದಲಿಸಿತು. ಅದು ಕೂಡ ಫೈನಲ್‌ನಲ್ಲಿ…!
ಹೌದು, ದುಬೈನಲ್ಲಿ ನಡೆದ ಇಂಟರ್ನ್ಯಾಷನಲ್ ಲೀಗ್ ಟಿ20 ಟೂರ್ನಿಯ ಫೈನಲ್ ಪಂದ್ಯದಲ್ಲಿ ಡೆಸರ್ಟ್ ವೈಪರ್ಸ್ ಹಾಗೂ ದುಬೈ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಸರ್ಟ್ ವೈಪರ್ಸ್ ತಂಡವು 20 ಓವರುಗಳಲ್ಲಿ 5 ವಿಕೆಟ್ ಕಳೆದುಕೊಂಡು 189 ರನ್ ಕಲೆಹಾಕಿತು.
190 ರನ್ ಗಳ ಗುರಿ ಪಡೆದ ದುಬೈ ಕ್ಯಾಪಿಟಲ್ಸ್ ತಂಡವು 14 ಓವರುಗಳಲ್ಲಿ 4 ವಿಕೆಟ್ ಕಳೆದುಕೊಂಡು 113 ರನ್ ಗಳಿಸಿ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಂತದಲ್ಲಿ ಕಣಕ್ಕಿಳಿದ ಸ್ಪೋಟಕ ದಾಂಡಿಗ ರೋವ್ಮನ್ ಪೊವೆಲ್ 2 ರನ್ ಗಳಿಸಿ ಸ್ಟಂಪ್ ಔಟ್ ಆಗಿದ್ದರು.
ಈ ವಿಕೆಟ್ನೊಂದಿಗೆ ಡೆಸರ್ಟ್ ವೈಪರ್ಸ್ ತಂಡವು ಗೆಲುವು ಖಚಿತಪಡಿಸಿಕೊಂಡಿದ್ದರು. ಆದರೆ ಕ್ಷಣಾರ್ಧದಲ್ಲೇ ಅಂಪೈರ್ ನೋಬಾಲ್ ಎಂದಿದ್ದಾರೆ. ಅಲ್ಲದೆ ಔಟಾಗಿ ತೆರಳಿದ್ದ ರೋವ್ಮನ್ ಪೊವೆಲ್ ಅವರನ್ನು ವಾಪಾಸ್ ಕರೆದಿದ್ದಾರೆ.
ಅಷ್ಟಕ್ಕೂ ಆಗಿದ್ದೇನು?
ರೋವ್ಮನ್ ಪೊವೆಲ್ ಅವರನ್ನು ವಿಕೆಟ್ ಕೀಪರ್ ಆಝಂ ಖಾನ್ ಕ್ಲಿಯರ್ ಸ್ಟಂಪ್ ಔಟ್ ಮಾಡಿದ್ದರು. ಹೀಗೆ ಸ್ಟಂಪ್ ಔಟ್ ಮಾಡುವ ಅವಸರದಲ್ಲಿ ಎಸೆಗಿದ ಸಣ್ಣ ಪ್ರಮಾದವೇ ಇಡೀ ಪಂದ್ಯದ ದಿಕ್ಕನ್ನೇ ಬದಲಿಸಿತು.
ಅಂದರೆ ಬೌಲರ್ ಎಸೆದ ಚೆಂಡು ವಿಕೆಟ್ ದಾಟುವ ಮುಂಚಿತವಾಗಿ ಆಝಂ ಖಾನ್ ಹಿಡಿದಿದ್ದರು. ಕ್ರಿಕೆಟ್ ನಿಯಮಗಳ ಪ್ರಕಾರ ವಿಕೆಟ್ ಕೀಪರ್ ಚೆಂಡು ಹಿಡಿಯುವಾಗ ಕೀಪರ್ ಗ್ಲೌಸ್ ಸ್ಟಂಪ್ ಅನ್ನು ದಾಟಿರಬಾರದು ಅಥವಾ ಸ್ಟಂಪ್ಗಿಂತ ಮುಂದಿರಬಾರದು.
ಆದರೆ ರೋವ್ಮನ್ ಪೊವೆಲ್ನ ಸ್ಟಂಪ್ ಔಟ್ ಮಾಡಲು ಚೆಂಡು ಹಿಡಿದಾಗ ಆಝಂ ಖಾನ್ ಅವರ ಗ್ಲೌಸ್ ಮಿಲಿಮೀಟರ್ ಅಂತರದಲ್ಲಿ ಸ್ಟಂಪ್ ಮುಂದೆ ಸಾಗಿತ್ತು. ಹೀಗಾಗಿ ಮೂರನೇ ಅಂಪೈರ್ ನೋಬಾಲ್ ಕರೆದಿದ್ದಾರೆ.
ರೋವ್ಮನ್ ಪೊವೆಲ್ ಸ್ಟಂಪ್ ಔಟ್ ವಿಡಿಯೋ:
Rovman Powell survives after a no-ball stumping and makes the Vipers pay 😱
(via @ILT20Official) #ILT20 pic.twitter.com/Jwm8RfLrhQ
— ESPNcricinfo (@ESPNcricinfo) February 9, 2025
ಮಿಲಿಮೀಟರ್ ಅಂತರಗಳ ಮೂಲಕ ಜೀವದಾನ ಪಡೆದ ರೋವ್ಮನ್ ಪೊವೆಲ್ ಆ ಬಳಿಕ ಅಬ್ಬರಿಸಿದರು. ಡೆಸರ್ಟ್ ವೈಪರ್ಸ್ ಬೌಲರ್‌ಗಳ ಬೆಂಡೆತ್ತುವ ಮೂಲಕ 38 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 7 ಫೋರ್ ಗಳೊಂದಿಗೆ 63 ರನ್ ಚಚ್ಚಿದರು. ಈ ಸಿಡಿಲಬ್ಬರದಿಂದಾಗಿ ಪಂದ್ಯವು ದುಬೈ ಕ್ಯಾಪಿಟಲ್ಸ್ನತ್ತ ವಾಲಿತು.
ಇದನ್ನೂ ಓದಿ: ಕ್ಯಾಚ್ ಹಿಡಿದು ವಿಶ್ವ ದಾಖಲೆ ಬರೆದ ಸ್ಟೀವ್ ಸ್ಮಿತ್
ಅಂತಿಮವಾಗಿ 19.2 ಓವರುಗಳಲ್ಲಿ 6 ವಿಕೆಟ್ ನಷ್ಟದೊಂದಿಗೆ 191 ರನ್ ಬಾರಿಸಿ ದುಬೈ ಕ್ಯಾಪಿಟಲ್ಸ್ ತಂಡ ಚಾಂಪಿಯನ್ ಪಟ್ಟ ಅಲಂಕರಿಸಿತು. ಇತ್ತ ವಿಕೆಟ್ ಕೀಪರ್ ಆಝಂ ಖಾನ್ ಮಿಲಿಮೀಟರ್ ಅಂತರದಲ್ಲಿ ಎಸೆಗಿದ ತಪ್ಪಿನಿಂದಾಗಿ ಗೆಲ್ಲಬಹುದಾಗಿದ್ದ ಪಂದ್ಯವನ್ನು ಡೆಸರ್ಟ್ ವೈಪರ್ಸ್ ಕೈಚೆಲ್ಲಿಕೊಂಡಿತು.
