ಒಂದೇ ತಂಡವಾದ ಎರಡು ಟೀಮ್​​ಗಳು..!

BBL 2026-27: ಕ್ರಿಕೆಟ್ ಜಗತ್ತಿನ ಅತ್ಯಂತ ಜನಪ್ರಿಯ ಟಿ20 ಟೂರ್ನಿಗಳಲ್ಲಿ ಒಂದಾದ ಆಸ್ಟ್ರೇಲಿಯಾದ ಬಿಗ್ ಬ್ಯಾಷ್ ಲೀಗ್ (BBL) ಇತಿಹಾಸದಲ್ಲೇ ಅತ್ಯಂತ ಶಾಕಿಂಗ್ ನಿರ್ಧಾರವೊಂದನ್ನು ಪ್ರಕಟಿಸಲಾಗಿದೆ. ಕಳೆದ 15 ವರ್ಷಗಳಿಂದ ಕಡು ವೈರಿಗಳಂತೆ ಮೈದಾನದಲ್ಲಿ ಹೋರಾಡುತ್ತಾ, ಅಭಿಮಾನಿಗಳನ್ನು ರೋಮಾಂಚನಗೊಳಿಸುತ್ತಿದ್ದ 'ಮೆಲ್ಬೋರ್ನ್ ಸ್ಟಾರ್ಸ್' ಮತ್ತು 'ಮೆಲ್ಬೋರ್ನ್ ರೆನೆಗೇಡ್ಸ್' ತಂಡಗಳು ಈಗ ಇತಿಹಾಸ ಪುಟ ಸೇರಲು ಸಜ್ಜಾಗಿವೆ.

ಒಂದೇ ತಂಡವಾದ ಎರಡು ಟೀಮ್​​ಗಳು..!
Melbourne Stars - Melbourne Renegades
Image Credit source: BBL

Updated on: Jun 07, 2026 | 8:01 AM

ಆಸ್ಟ್ರೇಲಿಯಾದ ಪ್ರತಿಷ್ಠಿತ ಟಿ20 ಟೂರ್ನಿ ಬಿಗ್ ಬ್ಯಾಷ್ ಲೀಗ್​ನ (BBL) ಎರಡು ತಂಡಗಳು ವಿಲೀನಗೊಂಡಿವೆ. ಮೆಲ್ಬೋರ್ನ್ ನಗರದ ಸಾಂಪ್ರದಾಯಿಕ ಎದುರಾಳಿಗಳಾದ ‘ಮೆಲ್ಬೋರ್ನ್ ಸ್ಟಾರ್ಸ್’ (Melbourne Stars) ಮತ್ತು ‘ಮೆಲ್ಬೋರ್ನ್ ರೆನೆಗೇಡ್ಸ್’ (Melbourne Renegades) ತಂಡಗಳು ಈಗ ಒಂದಾಗಿದ್ದು, ಮುಂಬರುವ ಸೀಸನ್​​ನಲ್ಲಿ ಒಂದೇ ತಂಡವಾಗಿ ಕಣಕ್ಕಿಳಿಯಲಿದೆ.

ವಿಲೀನದ ಹಿಂದಿನ ಮುಖ್ಯ ಉದ್ದೇಶವೇನು?

ಬಿಬಿಎಲ್ ಟೂರ್ನಿಯನ್ನು ಸಂಪೂರ್ಣವಾಗಿ ಖಾಸಗೀಕರಣಗೊಳಿಸಲು ಕ್ರಿಕೆಟ್ ಆಸ್ಟ್ರೇಲಿಯಾ ಸಜ್ಜಾಗುತ್ತಿದೆ. ಈ ಹಿನ್ನೆಲೆಯಲ್ಲಿ, ಎರಡು ಪ್ರತ್ಯೇಕ ತಂಡಗಳನ್ನು ನಡೆಸಿ ಸಂಪನ್ಮೂಲಗಳನ್ನು ವ್ಯರ್ಥ ಮಾಡುವ ಬದಲು, ಆಡಳಿತವನ್ನು ಸುಗಮಗೊಳಿಸಲು ಕ್ರಿಕೆಟ್ ವಿಕ್ಟೋರಿಯಾ ಈ ನಿರ್ಧಾರ ಮಾಡಿದೆ.

ಈ ಮೂಲಕ ಒಂದು ಬಲಿಷ್ಠ ತಂಡವನ್ನು ರೂಪಿಸಿ ಖಾಸಗಿ ಹೂಡಿಕೆದಾರರಿಗೆ (ಮುಖ್ಯವಾಗಿ ಐಪಿಎಲ್ ಫ್ರಾಂಚೈಸಿಗಳಿಗೆ) ಕೋಟ್ಯಂತರ ರೂಪಾಯಿಗೆ ಮಾರಾಟ ಮಾಡುವುದು ಇದರ ಹಿಂದಿನ ತಂತ್ರವಾಗಿದೆ.

ಹೊಸ ತಂಡದ ರೂಪರೇಷೆ ಹೇಗಿರಲಿದೆ?

  • ಹೊಸ ಹೆಸರು ಮತ್ತು ಬಣ್ಣ: ಸ್ಟಾರ್ಸ್‌ನ ಹಸಿರು ಮತ್ತು ರೆನೆಗೇಡ್ಸ್‌ನ ಕೆಂಪು ಬಣ್ಣದ ಜರ್ಸಿಗಳು ಇನ್ಮುಂದೆ ಇರುವುದಿಲ್ಲ. ಹೊಸದಾಗಿ ರೂಪುಗೊಳ್ಳುವ ‘ಸೂಪರ್ ಟೀಮ್’ಗೆ ಕೇವಲ ‘ಮೆಲ್ಬೋರ್ನ್’ ಎಂದು ಹೆಸರಿಡಲಾಗುವುದು. ಇದು ವಿಕ್ಟೋರಿಯಾ ರಾಜ್ಯದ ಸಾಂಪ್ರದಾಯಿಕ ಗಾಢ ನೀಲಿ (Navy Blue) ಬಣ್ಣದ ಜರ್ಸಿಯನ್ನು ಧರಿಸಲಿದೆ. ತಂಡದ ಉಪನಾಮವನ್ನು (Nickname) ಶೀಘ್ರದಲ್ಲೇ ಅಂತಿಮಗೊಳಿಸಲಾಗುತ್ತದೆ.
  • ಹೋಮ್ ಗ್ರೌಂಡ್: ಈ ಹೊಸ ಸಂಯೋಜಿತ ತಂಡವು ಜಗತ್ತಿನ ಐತಿಹಾಸಿಕ ಕ್ರೀಡಾಂಗಣವಾದ ಮೆಲ್ಬೋರ್ನ್ ಕ್ರಿಕೆಟ್ ಮೈದಾನವನ್ನು (MCG) ತನ್ನ ಪ್ರಮುಖ ತವರೂಡನ್ನಾಗಿ ಮಾಡಿಕೊಳ್ಳಲಿದೆ.
  • ಮುಖ್ಯಸ್ಥರು: ರೆನೆಗೇಡ್ಸ್ ತಂಡದ ಜನರಲ್ ಮ್ಯಾನೇಜರ್ ಆಗಿದ್ದ ಜೇಮ್ಸ್ ರೋಸೆನ್‌ಗಾರ್ಟನ್ ಅವರು ಈ ಹೊಸ ಮೆಲ್ಬೋರ್ನ್ ತಂಡದ ಜಿಎಂ ಆಗಿ ಜವಾಬ್ದಾರಿ ವಹಿಸಿಕೊಳ್ಳಲಿದ್ದಾರೆ.

ಆಟಗಾರರ ಒಪ್ಪಂದಗಳ ಕಥೆಯೇನು?

ಮುಂಬರುವ 2026-27ರ ಬಿಬಿಎಲ್ ಸೀಸನ್‌ಗಾಗಿ ಈಗಾಗಲೇ ಒಪ್ಪಂದ ಮಾಡಿಕೊಂಡಿರುವ ಆಟಗಾರರ ಹಿತಾಸಕ್ತಿಯನ್ನು ಕಾಯ್ದುಕೊಳ್ಳಲಾಗಿದೆ. ಮೆಲ್ಬೋರ್ನ್ ಸ್ಟಾರ್ಸ್ ಪರ ಆಡುತ್ತಿದ್ದ ಗ್ಲೆನ್ ಮ್ಯಾಕ್ಸ್‌ವೆಲ್, ಮಾರ್ಕಸ್ ಸ್ಟೊಯಿನಿಸ್ ಮತ್ತು ರೆನೆಗೇಡ್ಸ್ ಪರ ಆಡುತ್ತಿದ್ದ ಜೇಕ್ ಫ್ರೇಸರ್-ಮೆಕ್‌ಗುರ್ಕ್ ಅವರಂತಹ ಸ್ಟಾರ್ ಆಟಗಾರರು ಸದ್ಯಕ್ಕೆ ತಮ್ಮ ತಮ್ಮ ಒಪ್ಪಂದದ ಪಟ್ಟಿಯಲ್ಲೇ ಮುಂದುವರಿಯಲಿದ್ದಾರೆ. ಖಾಸಗಿ ಹೂಡಿಕೆದಾರರು ಸಿಗುವವರೆಗೂ ಈ ಒಪ್ಪಂದಗಳು ಬದಲಾಗುವುದಿಲ್ಲ.

ಆಸ್ಟ್ರೇಲಿಯನ್ ಕ್ರಿಕೆಟ್‌ನಲ್ಲಿ ಗೊಂದಲ!

ಕ್ರಿಕೆಟ್ ವಿಕ್ಟೋರಿಯಾದ ಈ ದಿಢೀರ್ ಘೋಷಣೆ ಬಿಬಿಎಲ್ ಆಟಗಾರರು ಮತ್ತು ಇತರೆ ರಾಜ್ಯಗಳ ಕ್ರಿಕೆಟ್ ಮಂಡಳಿಗಳಿಗೆ ತೀವ್ರ ಆಘಾತ ನೀಡಿದೆ. ತಮಗೆ ಯಾವುದೇ ಮುನ್ಸೂಚನೆ ನೀಡದೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಆಟಗಾರರು ಆತಂಕ ವ್ಯಕ್ತಪಡಿಸಿದ್ದಾರೆ.

ಇತ್ತ ನ್ಯೂ ಸೌತ್ ವೇಲ್ಸ್, ಕ್ವೀನ್ಸ್‌ಲ್ಯಾಂಡ್ ಮತ್ತು ಸೌತ್ ಆಸ್ಟ್ರೇಲಿಯಾ ಕ್ರಿಕೆಟ್ ಸಂಸ್ಥೆಗಳು ಈ ವಿಲೀನದ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಕ್ರಿಕೆಟ್ ಆಸ್ಟ್ರೇಲಿಯಾ ಜೊತೆ ತುರ್ತು ಸಭೆಗೆ ಆಗ್ರಹಿಸಿವೆ.

ಮೆಲ್ಬೋರ್ನ್ ಡರ್ಬಿ ಮಿಸ್:

ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ಎರಡೂ ತಂಡಗಳು ಶುರುವಾಗಿ 15 ವರ್ಷಗಳು ಆಗಿವೆ.ಅಂದರೆ ಕಳೆದ ಹದಿನೈದು ವರ್ಷಗಳಿಂದ ಎರಡೂ ತಂಡಗಳ ಅಭಿಮಾನಿಗಳು ಮೆಲ್ಬೋರ್ನ್ ಸ್ಟಾರ್ಸ್ ಮತ್ತು ಮೆಲ್ಬೋರ್ನ್ ರೆನೆಗೇಡ್ಸ್ ನಡುವಣ ಪಂದ್ಯವನ್ನು ಪ್ರತಿಷ್ಠಿತೆಯಾಗಿ ಪರಿಗಣಿಸಿದ್ದರು.

ಇದೀಗ ಮೆಲ್ಬೋರ್ನ್​ ತಂಡಗಳ ವಿಲೀನದಿಂದಾಗಿ ಮೆಲ್ಬೋರ್ನ್ ಡರ್ಬಿ ಪಂದ್ಯಗಳು ಮಿಸ್ ಆಗಲಿವೆ. ಅಲ್ಲದೆ ಒಂದು ದಶಕದಿಂದ ಬೆಂಬಲಿಸುತ್ತಾ ಬಂದಿದ್ದ ಅಭಿಮಾನಿಗಳೂ ಕೂಡ ಈ ವಿಲೀನದ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕುತ್ತಿದ್ದಾರೆ.

ಇದನ್ನೂ ಓದಿ: ಇದೆಂತಾ ಅನ್ಯಾಯ… ಈ ಮೂವರ ಬದಲಿಗೆ ಆ ಮೂವರಿಗೆ ಸ್ಥಾನ..!

ಒಟ್ಟಾರೆಯಾಗಿ ಹೇಳುವುದಾದರೆ, ಈ ವಿಲೀನದಿಂದಾಗಿ ಬಿಬಿಎಲ್‌ನ ಅತ್ಯಂತ ರೋಮಾಂಚಕ ‘ಮೆಲ್ಬೋರ್ನ್ ಡರ್ಬಿ’ ಪಂದ್ಯಗಳು ಇನ್ಮುಂದೆ ಇರುವುದಿಲ್ಲ ಎನ್ನುವುದು ಕಹಿ ಸತ್ಯ. ಕಳೆದ 15 ವರ್ಷಗಳಿಂದ ತಮ್ಮ ನೆಚ್ಚಿನ ತಂಡಗಳನ್ನು ಪ್ರಾಣಕ್ಕಿಂತ ಹೆಚ್ಚಾಗಿ ಪ್ರೀತಿಸಿ, ಬೆಂಬಲಿಸುತ್ತಾ ಬಂದಿದ್ದ ಅಭಿಮಾನಿಗಳಿಗೆ ಈ ದಿಢೀರ್ ಬದಲಾವಣೆಯನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂಬುದು ಕೂಡ ಅಷ್ಟೇ ಸತ್ಯ.

 

Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More
Follow Us