ಭಾರತೀಯ ಕ್ರಿಕೆಟ್ನ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಟೀಮ್ ಇಂಡಿಯಾ (Team India) ಮಾಜಿ ಆಟಗಾರ ಚೇತನ್ ಶರ್ಮಾ ಪುನರಾಯ್ಕೆಯಾಗಲಿದ್ದಾರೆ ಎಂದು ವರದಿಯಾಗಿದೆ. 2020 ರಲ್ಲಿ ರಾಷ್ಟ್ರೀಯ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದ ಚೇತನ್ ಶರ್ಮಾ ಅವರನ್ನು ಕಳೆದ ವರ್ಷ ಬಿಸಿಸಿಐ ವಜಾ ಮಾಡಿತ್ತು. ಏಷ್ಯಾಕಪ್ ಹಾಗೂ ಟಿ20 ವಿಶ್ವಕಪ್ನಲ್ಲಿ ಟೀಮ್ ಇಂಡಿಯಾ ಕಳಪೆ ಪ್ರದರ್ಶನ ನೀಡಿದ್ದ ಹಿನ್ನೆಲೆಯಲ್ಲಿ ಇಡೀ ಆಯ್ಕೆ ಸಮಿತಿಯನ್ನು ವಿಸರ್ಜಿಸಲಾಗಿತ್ತು. ಅಲ್ಲದೆ ಹೊಸ ಸಮಿತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿತ್ತು.
ಈ ಪಟ್ಟಿಯಲ್ಲಿ ದಕ್ಷಿಣ ವಲಯದಿಂದ ಕನ್ನಡಿಗ ವೆಂಕಟೇಶ್ ಪ್ರಸಾದ್ ಅವರು ಅರ್ಜಿ ಸಲ್ಲಿಸಿದ್ದರು. ಆದರೀಗ ಟೀಮ್ ಇಂಡಿಯಾದ ಮಾಜಿ ಮಾಜಿ ವೇಗಿಯ ಅರ್ಜಿಯನ್ನು ತಿರಸ್ಕರಿಸಲಾಗಿದೆ ಎಂದು ತಿಳಿದು ಬಂದಿದೆ. ಸದ್ಯ ಆಯ್ಕೆಗಾರರ ಹುದ್ದೆಗಳಿಗೆ ಒಟ್ಟು 12 ಅರ್ಜಿದಾರರನ್ನು ಸಂದರ್ಶನಕ್ಕೆ ಕರೆಯಲಾಗಿದೆ. ಈ ಪಟ್ಟಿಯಲ್ಲಿ ವೆಂಕಟೇಶ್ ಪ್ರಸಾದ್ ಅವರ ಹೆಸರಿಲ್ಲ ಎಂದು ವರದಿಯಾಗಿದೆ.
ಇನ್ನು ಒಟ್ಟು ಹನ್ನೆರಡು ಅರ್ಜಿದಾರರನ್ನು ಅಂತಿಮ ಸಂದರ್ಶನಕ್ಕೆ ಆಹ್ವಾನಿಸಲಾಗಿದ್ದರೂ, ಚೇತನ್ ಶರ್ಮಾ ಅವರು ಆಯ್ಕೆ ಸಮಿತಿಯ ಅಧ್ಯಕ್ಷರಾಗಿ ಮುಂದುವರಿಯುವ ಸಾಧ್ಯತೆಯಿದೆ. ಏಕೆಂದರೆ ಆಯ್ಕೆ ಸಮಿತಿಯನ್ನು ವಜಾಗೊಳಿಸಿದ ಬಳಿಕ ಮರು ಅರ್ಜಿ ಸಲ್ಲಿಸುವಂತೆ ಚೇತನ್ ಶರ್ಮಾ ಅವರಿಗೆ ಬಿಸಿಸಿಐಯೇ ತಿಳಿಸಿತ್ತು ಎಂದು ಹೇಳಲಾಗಿದೆ. ಹೀಗಾಗಿ ಅರ್ಜಿದಾರರ ಪಟ್ಟಿಯಲ್ಲಿ ಅತಿ ಹೆಚ್ಚು ಟೆಸ್ಟ್ ಪಂದ್ಯವಾಡಿದ ಕ್ರಿಕೆಟಿಗ (23) ಎಂಬ ಕಾರಣಕ್ಕಾಗಿ ಅವರಿಗೆ ಉನ್ನತ ಹುದ್ದೆಯನ್ನು ನೀಡಬಹುದು.
ಹಾಗೆಯೇ ಕಳೆದ ಬಾರಿ ಆಯ್ಕೆ ಸಮಿತಿಯಲ್ಲಿದ್ದ ಹರ್ವಿಂದರ್ ಸಿಂಗ್ ಕೂಡ ಕೇಂದ್ರ ವಲಯದಿಂದ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಲೆಕ್ಕಾಚಾರದಲ್ಲಿದ್ದಾರೆ. ಮಾಜಿ ಟೆಸ್ಟ್ ಓಪನರ್ ಶಿವಸುಂದರ್ ದಾಸ್ (ಪೂರ್ವ ವಲಯ) ಮತ್ತು ತಮಿಳುನಾಡಿನ ದೇಶೀಯ ಬ್ಯಾಟಿಂಗ್ ದಿಗ್ಗಜ ಶ್ರೀಧರನ್ ಶರತ್ (ದಕ್ಷಿಣ ವಲಯ) ಅವರು ಸಮಿತಿಯಲ್ಲಿ ನೇಮಕಗೊಳ್ಳುವ ಸಾಧ್ಯತೆಯಿದೆ.
ದಕ್ಷಿಣ ವಲಯದಿಂದ ಅರ್ಜಿ ಸಲ್ಲಿಸಿರುವ ಶ್ರೀಧರನ್ ಶರತ್ ಅವರು ಪ್ರಸ್ತುತ ರಾಷ್ಟ್ರೀಯ ಜೂನಿಯರ್ ಆಯ್ಕೆ ಸಮಿತಿಯ ಮುಖ್ಯಸ್ಥರಾಗಿದ್ದಾರೆ. ಪಶ್ಚಿಮ ವಲಯದಿಂದ ಆಯ್ಕೆಗಾರರ ಹುದ್ದೆಗೆ, ಭಾರತದ ಮಾಜಿ ವೇಗಿ ಸಲಿಲ್ ಅಂಕೋಲಾ ಮತ್ತು ಆರಂಭಿಕ ಕಾನರ್ ವಿಲಿಯಮ್ಸ್ ಅವರನ್ನು ಸಂದರ್ಶನಕ್ಕೆ ಕರೆಯಲಾಗಿದೆ.
ಅಶೋಕ್ ಮಲ್ಹೋತ್ರಾ, ಜತಿನ್ ಪರಂಜ್ಪೆ ಮತ್ತು ಸುಲಕ್ಷಣಾ ನಾಯಕ್ ಅವರನ್ನೊಳಗೊಂಡ ಕ್ರಿಕೆಟ್ ಸಲಹಾ ಸಮಿತಿಯು (ಸಿಎಸಿ) ಸೋಮವಾರ ಭಾರತದ ಮಾಜಿ ವಿಕೆಟ್ ಕೀಪರ್ ಅಜಯ್ ರಾತ್ರಾ ಮತ್ತು ಬ್ಯಾಟರ್ ಅಮಯ್ ಖುರಾಸಿಯಾ ಅವರನ್ನು ಸಂದರ್ಶನ ಮಾಡಿದೆ. ಆದರೆ ಭಾರತದ ಮಾಜಿ ವೇಗಿ ಮತ್ತು ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿ ಕಾರ್ಯ ನಿರ್ವಹಿಸಿದ್ದ ವೆಂಕಟೇಶ್ ಪ್ರಸಾದ್ ಅವರ ಹೆಸರು ಈ ಸಂದರ್ಶನದ ಪಟ್ಟಿಯಲ್ಲಿಲ್ಲ. ಹೀಗಾಗಿ ಆಯ್ಕೆ ಸಮಿತಿಯ ಉನ್ನತ ಹುದ್ದೆಯು ಕನ್ನಡಿಗ ಕೈ ತಪ್ಪಿದೆ ಎಂದೇ ಹೇಳಬಹುದು.
ಇದನ್ನೂ ಓದಿ: RCB ತಂಡದ ಮೊದಲ ಪ್ಲೇಯಿಂಗ್ ಇಲೆವೆನ್ನಲ್ಲಿ ಯಾರೆಲ್ಲಾ ಇದ್ದರು ಗೊತ್ತಾ?
ಟೀಮ್ ಇಂಡಿಯಾ ಪರ 33 ಟೆಸ್ಟ್ ಪಂದ್ಯಗಳನ್ನಾಡಿರುವ ವೆಂಕಟೇಶ್ ಪ್ರಸಾದ್ 96 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ 161 ಏಕದಿನ ಪಂದ್ಯಗಳಿಂದ 196 ವಿಕೆಟ್ ಕಬಳಿಸಿ ಮಿಂಚಿದ್ದರು. ನಿವೃತ್ತಿಯ ಬಳಿಕ ಟೀಮ್ ಇಂಡಿಯಾದ ಬೌಲಿಂಗ್ ಕೋಚ್ ಆಗಿಯೂ ಕೂಡ ಕಾರ್ಯ ನಿರ್ವಹಿಸಿದ್ದರು.
ಆಯ್ಕೆ ಸಮಿತಿ ಆಯ್ಕೆಗೆ ಇರಬೇಕಾದ ಅರ್ಹತೆಗಳೇನು?
ರಾಷ್ಟ್ರೀಯ ಆಯ್ಕೆ ಸಮಿತಿಯ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಟೀಮ್ ಇಂಡಿಯಾ ಪರ ಕನಿಷ್ಠ 7 ಟೆಸ್ಟ್ ಪಂದ್ಯಗಳು ಅಥವಾ 30 ಪ್ರಥಮ ದರ್ಜೆ ಪಂದ್ಯಗಳು ಅಥವಾ 10 ಏಕದಿನ ಮತ್ತು 20 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿರಬೇಕು. ಅಲ್ಲದೆ, ಅಭ್ಯರ್ಥಿಗಳು ಕನಿಷ್ಠ ಐದು ವರ್ಷಗಳ ಹಿಂದೆ ಕ್ರಿಕೆಟ್ನಿಂದ ನಿವೃತ್ತರಾಗಿರಬೇಕು. ಆದರೆ ಇದೀಗ ಟೀಮ್ ಇಂಡಿಯಾ ಪರ 161 ಏಕದಿನ ಹಾಗೂ 33 ಟೆಸ್ಟ್ ಪಂದ್ಯವನ್ನು ಆಡಿರುವ ವೆಂಕಟೇಶ್ ಪ್ರಸಾದ್ ಅವರನ್ನು ಅಂತಿಮ ಪಟ್ಟಿಯಿಂದ ಕೈ ಬಿಡಲು ಕಾರಣವೇನು ಎಂದು ತಿಳಿದು ಬಂದಿಲ್ಲ.