ಶನಿವಾರದ ಸಭೆಯಲ್ಲಿ RCB ಕುರಿತು ಚರ್ಚೆ..!

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಚೊಚ್ಚಲ ಬಾರಿ ಚಾಂಪಿಯನ್ ಪಟ್ಟ ಅಲಂಕರಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ವಿಜಯೋತ್ಸವದ ವೇಳೆ ಚಿನ್ನಸ್ವಾಮಿ ಸ್ಟೇಡಿಯಂ ಬಳಿ ಕಾಲ್ತುಳಿತ ಉಂಟಾಗಿತ್ತು. ಈ ಕಾಲ್ತುಳಿತದಿಂದ 11 ಮಂದಿ ಸಾವನ್ನಪ್ಪಿದರೆ, ಅನೇಕರು ಗಾಯಗೊಂಡಿದ್ದರು. ಈ ಪ್ರಕರಣವನ್ನು ಬಿಸಿಸಿಐ ಗಂಭೀರವಾಗಿ ಪರಿಗಣಿಸಿರುವ ಬಿಸಿಸಿಐ ಕಠಿಣ ಕ್ರಮ ಕೈಗೊಳ್ಳುವ ಸಾಧ್ಯತೆಯಿದೆ.

ಶನಿವಾರದ ಸಭೆಯಲ್ಲಿ RCB ಕುರಿತು ಚರ್ಚೆ..!
Rcb

Updated on: Jun 12, 2025 | 1:04 PM

ಭಾರತೀಯ ಕ್ರಿಕೆಟ್ ಮಂಡಳಿಯ (BCC) ಅಪೆಕ್ಸ್​ ಕೌನ್ಸಿಲ್ ಸಭೆಯು ಶನಿವಾರ (ಜೂನ್ 14) ನಡೆಯಲಿದೆ. ಈ ಸಭೆಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ವಿಜಯೋತ್ಸವ ಬಗ್ಗೆ ಕೂಡ ಚರ್ಚೆ ನಡೆಯಲಿದೆ. ಐಪಿಎಲ್ ಸೀಸನ್-18 ರಲ್ಲಿ ಚಾಂಪಿಯನ್ ಪಟ್ಟ ಅಲಂಕರಿಸಿದ ಆರ್​ಸಿಬಿ ಮರುದಿನ ಬೆಂಗಳೂರಿನಲ್ಲಿ ವಿಜಯೋತ್ಸವವನ್ನು ಆಚರಿಸಿತ್ತು. ಈ ವಿಜಯೋತ್ಸವದ ವೇಳೆ ಉಂಟಾದ ಕಾಲ್ತುಳಿತದಿಂದಾಗಿ 11 ಮಂದಿ ಸಾವಿಗೀಡಾಗಿದ್ದರು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸುವುದಾಗಿ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ ತಿಳಿಸಿದ್ದರು. ಇದೇ ವಿಚಾರ ಬಿಸಿಸಿಐನ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಚರ್ಚೆಯಾಗಲಿದೆ ಎಂದು ತಿಳಿದು ಬಂದಿದೆ.

ಪ್ರಸ್ತುತ ಮಾಹಿತಿ ಪ್ರಕಾರ, ಐಪಿಎಲ್ ವಿಜಯೋತ್ಸವದ ಬಗ್ಗೆ ಚರ್ಚಿಸಲು ಮತ್ತು ಕಾಲ್ತುಳಿತದಂತಹ ಘಟನೆಗಳನ್ನು ತಡೆಗಟ್ಟಲು ಹೊಸ ಮಾರ್ಗಸೂಚಿಗಳನ್ನು ಜಾರಿಗೊಳಿಸಲು ಇಚ್ಛಿಸಿದೆ.  ಅಲ್ಲದೆ ಆರ್​ಸಿಬಿ ಫ್ರಾಂಚೈಸಿ ವಿರುದ್ಧ ಕ್ರಮ ಕೈಗೊಳ್ಳಬೇಕಾ ಅಥವಾ ಬೇಡವಾ ಎಂಬುದು ಸಹ ಇದೇ ಸಭೆಯಲ್ಲಿ ನಿರ್ಧಾರವಾಗಲಿದೆ.

ಹೀಗಾಗಿ ಶನಿವಾರ ನಡೆಯಲಿರುವ ಸಭೆಯ ಬಳಿಕ ಐಪಿಎಲ್​ನಲ್ಲಿ ಒಂದಷ್ಟು ನಿಯಮಗಳು ಜಾರಿಯಾಗುವ ಸಾಧ್ಯತೆಯಿದೆ. ಇತ್ತ ಅಹಿತಕರ ಘಟನೆಯನ್ನು ನೋಡಿ ಮೂಕ ಪ್ರೇಕ್ಷಕರಾಗಿ ಇರಲು ಸಾಧ್ಯವಿಲ್ಲ ಎಂದು ಬಿಸಿಸಿಐ ಕಾರ್ಯದರ್ಶಿ ಈಗಾಗಲೇ ಸ್ಪಷ್ಟಪಡಿಸಿದ್ದಾರೆ. ಹಾಗಾಗಿ ಆರ್​ಸಿಬಿ ಫ್ರಾಂಚೈಸಿಯ ಕ್ರಮ ಜರುಗಿಸುವ ಸಾಧ್ಯತೆಯನ್ನು ಸಹ ತಳ್ಳಿ ಹಾಕುವಂತಿಲ್ಲ.

ಇನ್ನು ಈ ಸಭೆಯಲ್ಲಿ ಆಟಗಾರರ ವಯೋಮಾನದ ಪರಿಶೀಲನೆ ನಿಯಮಗಳ ಬಗ್ಗೆ ಕೂಡ ಚರ್ಚೆ ನಡೆಯಲಿದೆ. ವಿಶೇಷವಾಗಿ 16 ವರ್ಷದೊಳಗಿನ (ಹುಡುಗರು) ಮತ್ತು 15 ವರ್ಷದೊಳಗಿನ (ಬಾಲಕಿಯರ) ವಿಭಾಗಗಳಲ್ಲಿ ವಯಸ್ಸಿನ ವಂಚನೆಯನ್ನು ತಡೆಯುವ ಗುರಿಯನ್ನು ಹೊಂದಿರುವ ಕಾರ್ಯವಿಧಾನವಾದ – ಅಸ್ತಿತ್ವದಲ್ಲಿರುವ ವಯಸ್ಸಿನ ಪರಿಶೀಲನಾ ಕಾರ್ಯಕ್ರಮವನ್ನು ಮಂಡಳಿ ಪರಿಶೀಲಿಸುವ ನಿರೀಕ್ಷೆಯಿದೆ.

ಹಾಗೆಯೇ ಏಪ್ರಿಲ್ 2025 ರಲ್ಲಿ, ಕರೀಂನಗರ ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ​​ಅಧ್ಯಕ್ಷ ವಿ. ಆಗಮ್ ರಾವ್ ಅವರು ತೆಲಂಗಾಣ ಜಿಲ್ಲೆಗಳಲ್ಲಿ ಕ್ರಿಕೆಟ್ ಮೂಲಸೌಕರ್ಯ ಅಭಿವೃದ್ಧಿಗೆ ನಿಗದಿಪಡಿಸಿದ ನಿಧಿಯ ಬಳಕೆಯಲ್ಲಿ ಅಕ್ರಮಗಳು ನಡೆದಿವೆ ಎಂದು ಆರೋಪಿಸಿ ದೂರು ದಾಖಲಿಸಿದ್ದರು. ಈ ದೂರಿನ ಮೇರೆಗೆ ಕಾರ್ಯನಿರ್ವಹಿಸಿದ ಬಿಸಿಸಿಐ ಒಂಬುಡ್ಸ್‌ಮನ್ ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ಸೂಕ್ತ ಕ್ರಮ ಕೈಗೊಳ್ಳುವಂತೆ ಅಪೆಕ್ಸ್ ಕೌನ್ಸಿಲ್‌ಗೆ ನಿರ್ದೇಶನ ನೀಡಿದ್ದರು. ಈ ವಿಷಯವನ್ನು ಸಹ ಚರ್ಚಿಸಲಾಗುತ್ತದೆ.

ಇದನ್ನೂ ಓದಿ: ಗ್ಲೆನ್ ಮ್ಯಾಕ್ಸ್​ವೆಲ್​ಗೆ ಒಲಿದ ಚಾಂಪಿಯನ್ ತಂಡದ ನಾಯಕತ್ವ

ಇದಲ್ಲದೆ ಆಟಗಾರರು ಮತ್ತು ತಂಡದ ಅಧಿಕಾರಿಗಳಿಗೆ ಬಿಸಿಸಿಐ ನೀತಿ ಸಂಹಿತೆ, ಬಿಸಿಸಿಐ ಉದ್ಯೋಗಿಗಳಿಗೆ ಟೂರ್ನಮೆಂಟ್ ಭತ್ಯೆ ನೀತಿ, 2025–26ರ ದೇಶೀಯ ಸೀಸನ್​ನ ನವೀಕರಣಗಳು ಮತ್ತು ಅಂಪೈರ್ ಮತ್ತು ಮ್ಯಾಚ್ ರೆಫರಿ ತರಬೇತುದಾರರಿಗೆ ಸಂಬಂಧಿಸಿದ ವಿಷಯಗಳ ಕುರಿತು ಕೂಡ ಅಪೆಕ್ಸ್ ಕೌನ್ಸಿಲ್ ಸಭೆಯಲ್ಲಿ ಚರ್ಚಿಸಲಿದೆ ಎಂದು ಬಿಸಿಸಿಐ ಮೂಲಗಳು ತಿಳಿಸಿವೆ.