
ಟೀಮ್ ಇಂಡಿಯಾ ವೇಗಿ ಆಖಿಬ್ ನಬಿ ಅವರಿಗೆ ಇಂಗ್ಲಿಷ್ ಕೌಂಟಿ ಕ್ರಿಕೆಟ್‌ನಲ್ಲಿ ಶಾರ್ಟ್-ಟರ್ಮ್ ರೆಡ್-ಬಾಲ್ (ಟೆಸ್ಟ್) ಒಪ್ಪಂದವನ್ನು ಕೊಡಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ (BCCI) ಸಕ್ರಿಯವಾಗಿ ಮಾತುಕತೆ ನಡೆಸುತ್ತಿದೆ. ಮುಂಬರುವ ಮಹತ್ವದ ನ್ಯೂಝಿಲೆಂಡ್ ಟೆಸ್ಟ್ ಸರಣಿಗೂ ಮುನ್ನ ಕಾಶ್ಮೀರಿ ವೇಗಿ ವಿದೇಶಿ ಮಣ್ಣಿನಲ್ಲಿ ಉತ್ತಮ ಅನುಭವ ಮತ್ತು ಅಭ್ಯಾಸ ಸಿಗಲಿ ಎಂಬ ಉದ್ದೇಶದಿಂದ ಬಿಸಿಸಿಐ ಈ ಹೆಜ್ಜೆಯನ್ನಿಟ್ಟಿದೆ.
ಲಂಡನ್ ಮೂಲದ ಪ್ರತಿಷ್ಠಿತ ಸರ್ರೆ ಕೌಂಟಿ ಕ್ರಿಕೆಟ್ ಕ್ಲಬ್ ಗುಣಮಟ್ಟದ ಸ್ವಿಂಗ್ ಬೌಲರ್‌ಗಾಗಿ ಹುಡುಕಾಟ ನಡೆಸುತ್ತಿದೆ. ಈ ಹಿನ್ನೆಲೆಯಲ್ಲಿ ಇಂಗ್ಲೆಂಡ್ ತಂಡದ ಮಾಜಿ ನಾಯಕ ಹಾಗೂ ಸರ್ರೆ ಕ್ಲಬ್‌ನ ಮುಖ್ಯಸ್ಥರಾದ ಅಲೆಕ್ ಸ್ಟೀವರ್ಟ್ ಅವರು ಬಿಸಿಸಿಐನ ಉನ್ನತ ಅಧಿಕಾರಿಗಳೊಂದಿಗೆ ನೇರ ಮಾತುಕತೆ ನಡೆಸುತ್ತಿದ್ದಾರೆ.
ಕಳೆದ ರಣಜಿ ಟ್ರೋಫಿ ಸೀಸನ್‌ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಆಖಿಬ್ ನಬಿ, ಬರೋಬ್ಬರಿ 60 ವಿಕೆಟ್‌ಗಳನ್ನು ಕಬಳಿಸುವ ಮೂಲಕ ಟೂರ್ನಿಯಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದರು. ಈ ಅಮೋಘ ಪ್ರದರ್ಶನದ ಹಿನ್ನೆಲೆಯಲ್ಲಿ, ಅವರನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಜಸ್‌ಪ್ರೀತ್ ಬುಮ್ರಾ ಅವರ ಬದಲಿಯಾಗಿ ಭಾರತ ತಂಡಕ್ಕೆ ಆಯ್ಕೆ ಮಾಡಲಾಗಿತ್ತು.
ಇದನ್ನೂ ಓದಿ: ಏಷ್ಯನ್ ಗೇಮ್ಸ್ ಆರಂಭಕ್ಕೂ ಮುನ್ನ ಟೀಮ್ ಇಂಡಿಯಾದಲ್ಲಿ ಬದಲಾವಣೆ?
ಆದರೆ, ಶ್ರೀಲಂಕಾದಲ್ಲಿ ಸ್ಪಿನ್ ಸ್ನೇಹಿ ಪಿಚ್‌ಗಳಿದ್ದ ಕಾರಣ ಆಖಿಬ್ ನಬಿಗೆ ಆಡುವ ಹನ್ನೊಂದರ ಬಳಗದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಇದೀಗ ಮುಂಬರುವ ಮಹತ್ವದ ಟೆಸ್ಟ್ ಪಂದ್ಯಗಳಿಗಾಗಿ ಅವರನ್ನು ಸಜ್ಜುಗೊಳಿಸಲು ಬಿಸಿಸಿಐ ವಿಶೇಷ ಪ್ಲ್ಯಾನ್ ರೂಪಿಸುತ್ತಿದೆ. ಹೀಗಾಗಿ, ಮುಂಬರುವ ನ್ಯೂಝಿಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಆಖಿಬ್ ನಬಿ ಭಾರತ ತಂಡದಲ್ಲಿ ಕಾಣಿಸಿಕೊಳ್ಳುವುದು ಬಹುತೇಕ ಖಚಿತ ಎನ್ನಬಹುದು.