ಸೌತ್ ಆಫ್ರಿಕಾ ಮನಸ್ಸು ಮಾಡಿದ್ರೆ ಭಾರತ ಡೈರೆಕ್ಟ್ ಸೆಮಿಫೈನಲ್​ಗೆ!

T20 World Cup 2026: ಟಿ20 ವಿಶ್ವಕಪ್​ನ ಸೂಪರ್-8 ಸುತ್ತಿನ ಮೊದಲ ಪಂದ್ಯದಲ್ಲಿ ಭಾರತ ತಂಡ ಸೋತಿದೆ. ಇದಾಗ್ಯೂ ಟೀಮ್ ಇಂಡಿಯಾಗೆ ಸೆಮಿಫೈನಲ್​ಗೇರಲು ಉತ್ತಮ ಅವಕಾಶವಿದೆ. ಅದರಲ್ಲೂ ಭಾರತ ತಂಡ ನೇರವಾಗಿ ಸೆಮಿಫೈನಲ್​ಗೇರಬೇಕಿದ್ದರೆ ಸೌತ್ ಆಫ್ರಿಕಾ ತಂಡ ಮನಸ್ಸು ಮಾಡಬೇಕು. ಟೀಮ್ ಇಂಡಿಯಾದ ಸೆಮಿಫೈನಲ್ ಹಾದಿಯ ಸಮೀಕರಣ ಈ ಕೆಳಗಿನಂತಿದೆ...

ಸೌತ್ ಆಫ್ರಿಕಾ ಮನಸ್ಸು ಮಾಡಿದ್ರೆ ಭಾರತ ಡೈರೆಕ್ಟ್ ಸೆಮಿಫೈನಲ್​ಗೆ!
Ind Vs Sa

Updated on: Feb 23, 2026 | 9:31 AM

T20 World Cup 2026: ಟಿ20 ವಿಶ್ವಕಪ್ 2026ರ ದ್ವಿತೀಯ ಸುತ್ತಿನ ಮೊದಲ ಪಂದ್ಯದಲ್ಲೇ ಭಾರತ ತಂಡ ಸೋಲನುಭವಿಸಿದೆ. ಅಹಮದಾಬಾದ್​ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಸೌತ್ ಆಫ್ರಿಕಾ 187 ರನ್​ಗಳಿಸಿದರೆ, ಈ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಕೇವಲ 111 ರನ್​ಗಳಿಸಿ ಆಲೌಟ್ ಆಯಿತು. ಈ ಮೂಲಕ ಸೌತ್ ಆಫ್ರಿಕಾ ತಂಡವು 76 ರನ್​ಗಳ ಭರ್ಜರಿ ಜಯ ಸಾಧಿಸಿದೆ.

ಸೌತ್ ಆಫ್ರಿಕಾ ತಂಡದ ಈ ಭರ್ಜರಿ ಗೆಲುವಿನಿಂದಾಗಿ ಟೀಮ್ ಇಂಡಿಯಾದ ನೆಟ್ ರನ್ ರೇಟ್ -3.800 ಕ್ಕೆ ಕುಸಿದಿದೆ. ಭಾರತ ತಂಡದ ನೆಟ್ ರನ್ ರೇಟ್ ನೆಗೆಟಿವ್ ಇರುವ ಕಾರಣ ಮುಂಬರುವ ಪಂದ್ಯಗಳಲ್ಲಿ ಭರ್ಜರಿ ಜಯ ಸಾಧಿಸಬೇಕು. ಈ ಭರ್ಜರಿ ಜಯದೊಂದಿಗೆ ಮಾತ್ರ ಟೀಮ್ ಇಂಡಿಯಾ ನೇರವಾಗಿ ಸೆಮಿಫೈನಲ್​ಗೇರಬಹುದು.

ಅಂದರೆ ಭಾರತ ತಂಡವು ತನ್ನ ಮುಂದಿನ ಪಂದ್ಯಗಳಲ್ಲಿ ಝಿಂಬಾಬ್ವೆ ಹಾಗೂ ವೆಸ್ಟ್ ಇಂಡೀಸ್ ತಂಡಗಳನ್ನು ಸೋಲಿಸಿದರೆ ಮಾತ್ರ ಸಾಕಾಗುವುದಿಲ್ಲ. ಏಕೆಂದರೆ ಈ ಎರಡು ತಂಡಗಳಿಗೆ ಇನ್ನೂ ತಲಾ ಮೂರು ಮ್ಯಾಚ್​ಗಳಿವೆ. ಅದರಲ್ಲೂ ವೆಸ್ಟ್ ಇಂಡೀಸ್ ಹಾಗೂ ಝಿಂಬಾಬ್ವೆ ಮುಖಾಮುಖಿಯಲ್ಲಿ ಒಂದು ತಂಡ ಗೆಲ್ಲುವುದು ಖಚಿತ.

ಇಲ್ಲಿ ಝಿಂಬಾಬ್ವೆ ಅಥವಾ ವೆಸ್ಟ್ ಇಂಡೀಸ್ ಒಂದು ಪಂದ್ಯ ಗೆದ್ದರೆ ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಲಿದೆ. ಅಲ್ಲದೆ ಮತ್ತೊಂದು ಮ್ಯಾಚ್ ಗೆದ್ದರೆ ಒಟ್ಟು 4 ಅಂಕಗಳನ್ನು ಪಡೆಯಬಹುದು.

ಇತ್ತ ಟೀಮ್ ಇಂಡಿಯಾ ಮುಂದಿನ ಎರಡು ಮ್ಯಾಚ್​ಗಳಲ್ಲಿ ಗೆದ್ದರೆ ಒಟ್ಟು 4 ಅಂಕಗಳನ್ನು ಮಾತ್ರ ಪಡೆಯಲಿದೆ. ಈ ಸಂದರ್ಭದಲ್ಲಿ ನೆಟ್ ರನ್ ರೇಟ್ ಪರಿಗಣನೆಗೆ ಬರಲಿದೆ.

ಆದರೆ ನೆಟ್​ ರನ್​ ರೇಟ್ ಲೆಕ್ಕಾಚಾರವಿಲ್ಲದೆ ಟೀಮ್ ಇಂಡಿಯಾ ಸೆಮಿಫೈನಲ್​ಗೇರಬೇಕಿದ್ದರೆ ಸೌತ್ ಆಫ್ರಿಕಾ ತಂಡ ಗೆದ್ದರೆ ಸಾಕು. ಅಂದರೆ ಆಫ್ರಿಕಾ ಪಡೆ ಮುಂದಿನ ಎರಡು ಮ್ಯಾಚ್​ಗಳಲ್ಲೂ ಗೆದ್ದರೆ ಟೀಮ್ ಇಂಡಿಯಾ ನೇರವಾಗಿ ಸೆಮಿಫೈನಲ್​​ಗೇರಬಹುದು. ಇದರ ಲೆಕ್ಕಾಚಾರ ಈ ಕೆಳಗಿನಂತಿದೆ..

  • 2 ಗೆಲುವು: ಸೌತ್ ಆಫ್ರಿಕಾ ತಂಡವು ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಗೆದ್ದರೆ ಒಟ್ಟು 6 ಅಂಕಗಳೊಂದಿಗೆ ಸೆಮಿಫೈನಲ್​ಗೇರಬಹುದು.
  • 2 ಜಯ: ಭಾರತ ತಂಡವು ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ತಂಡಗಳನ್ನು ಸೋಲಿಸಿದರೆ ಒಟ್ಟು 4 ಅಂಕಗಳನ್ನು ಪಡೆಯಲಿದೆ.
  • 2 ತಂಡ ಔಟ್: ಸೌತ್ ಆಫ್ರಿಕಾ ಮತ್ತು ಭಾರತದ ವಿರುದ್ಧ ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ಸೋತರೆ, ಈ ಎರಡು ತಂಡಗಳಿಗೆ ಮತ್ತೆ 4 ಅಂಕಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ.
  • 2 ಟೀಮ್ ಎಂಟ್ರಿ: ವೆಸ್ಟ್ ಇಂಡೀಸ್, ಝಿಂಬಾಬ್ವೆಗೆ 4 ಅಂಕಗಳನ್ನು ಪಡೆಯಲು ಸಾಧ್ಯವಾಗದೇ ಇರುವಂತಹ ಪರಿಸ್ಥಿತಿ ನಿರ್ಮಾಣವಾದರೆ, ಅಗ್ರಸ್ಥಾನದಲ್ಲಿರುವ ಸೌತ್ ಆಫ್ರಿಕಾ ಮತ್ತು ದ್ವಿತೀಯ ಸ್ಥಾನದಲ್ಲಿರುವ ಭಾರತ ತಂಡಗಳು ಸೆಮಿಫೈನಲ್​ಗೇರಲಿದೆ.

ಅಂದರೆ ಸೌತ್ ಆಫ್ರಿಕಾ ತಂಡವು ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್​ ತಂಡಗಳನ್ನು ಸೋಲಿಸಿದರೆ, ಭಾರತ ತಂಡವು ತನ್ನ ಮುಂದಿನ ಪಂದ್ಯಗಳಲ್ಲಿ ನೆಟ್ ರನ್ ರೇಟ್ ಲೆಕ್ಕಾಚಾರದಲ್ಲಿ ಗೆಲ್ಲಬೇಕಾದ ಅವಶ್ಯಕತೆ ಇರುವುದಿಲ್ಲ. ಅಲ್ಲದೆ 2 ಮ್ಯಾಚ್​ಗಳಲ್ಲೂ ಗೆದ್ದು ಅಂಕ ಪಟ್ಟಿಯಲ್ಲಿ ದ್ವಿತೀಯ ಸ್ಥಾನಕ್ಕೇರಬಹುದು.

ಇದನ್ನೂ ಓದಿ: ಪವರ್​ಪ್ಲೇನಲ್ಲಿ ಪಂದ್ಯ ಗೆಲ್ಲಲು ಸಾಧ್ಯವಿಲ್ಲ, ಆದರೆ ಸೋಲಬಹುದು!

ಈ ಮೂಲಕ ನೆಟ್ ರನ್ ರೇಟ್ ಲೆಕ್ಕಾಚಾರವಿಲ್ಲದೆ ಟೀಮ್ ಇಂಡಿಯಾ ನೇರವಾಗಿ ಸೆಮಿಫೈನಲ್​ಗೆ ಪ್ರವೇಶಿಸಬಹುದು. ಇಂತಹದೊಂದು ಸನ್ನಿವೇಶ ನಿರ್ಮಾಣವಾಗಬೇಕಿದ್ದರೆ ಸೌತ್ ಆಫ್ರಿಕಾ ತಂಡವು ಝಿಂಬಾಬ್ವೆ ಮತ್ತು ವೆಸ್ಟ್ ಇಂಡೀಸ್ ವಿರುದ್ಧ ಗೆಲ್ಲಲೇಬೇಕು.

 

Published On - 9:30 am, Mon, 23 February 26