6-5=1..; 2017 ರಿಂದ ಐಸಿಸಿ ಟೂರ್ನಿಗಳಲ್ಲಿ ಭಾರತದ ಪ್ರದರ್ಶನ ಹೇಗಿದೆ?
Champions Trophy 2025: 2025ರ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಲಿವೆ. ಲೀಗ್ ಹಂತದಲ್ಲಿ ಈ ಎರಡು ತಂಡಗಳು ಮುಖಾಮುಖಿಯಾಗಿದ್ದಾಗ ಭಾರತ ಗೆದ್ದಿತ್ತು. 2017ರ ಚಾಂಪಿಯನ್ಸ್ ಟ್ರೋಫಿ ಸೇರಿದಂತೆ ಇಲ್ಲಿಯವರೆಗೆ ಒಟ್ಟು 6 ವಿವಿದ ಐಸಿಸಿ ಟೂರ್ನಿಗಳು ನಡೆದಿವೆ. ಈ 6 ಟೂರ್ನಿಗಳಲ್ಲೂ ನಾಕೌಟ್ ಸುತ್ತಿಗೆ ಪ್ರವೇಶಿಸಿರುವ ಭಾರತದ ಪ್ರದರ್ಶನ ಹೇಗಿದೆ ಎಂಬುದರ ವಿವರ ಇಲ್ಲಿದೆ.

2025 ರ ಚಾಂಪಿಯನ್ಸ್ ಟ್ರೋಫಿ (Champions Trophy 2025) ಫೈನಲ್ ಆಡುವ ಎರಡು ತಂಡಗಳು ಯಾವ್ಯಾವು ಎಂಬುದು ಖಚಿತವಾಗಿದೆ. ಮಾರ್ಚ್ 9 ರ ಭಾನುವಾರದಂದು ದುಬೈನಲ್ಲಿ ನಡೆಯುವ ಫೈನಲ್ ಪಂದ್ಯದಲ್ಲಿ ಭಾರತ ಹಾಗೂ ನ್ಯೂಜಿಲೆಂಡ್ ಪ್ರಶಸ್ತಿಗಾಗಿ ಕಾದಾಡಲಿವೆ. ಲೀಗ್ ಹಂತದಲ್ಲಿ ಈಗಾಗಲೇ ಈ ಎರಡು ತಂಡಗಳು ಮುಖಾಮುಖಿಯಾಗಿದ್ದವು. ಆ ಪಂದ್ಯವನ್ನು ಟೀಂ ಇಂಡಿಯಾ (TeaM India) ಗೆದ್ದುಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಇದೀಗ ಫೈನಲ್‌ನಲ್ಲಿ ಮತ್ತೊಮ್ಮೆ ಭಾರತಕ್ಕೆ ಸವಾಲೊಡ್ಡಲು ಸ್ಯಾಂಟ್ನರ್ ಪಡೆ ಸಜ್ಜಾಗಿದೆ. ಆದರೆ ಅದಕ್ಕೂ ಮುನ್ನ 2017 ರ ಚಾಂಪಿಯನ್ಸ್ ಟ್ರೋಫಿಯೂ ಸೇರಿದಂತೆ ಇಲ್ಲಿಯವರೆಗೆ ನಡೆದಿರುವ ಐಸಿಸಿ ಟೂರ್ನಿಗಳಲ್ಲಿ ಭಾರತದ ಪ್ರದರ್ಶನ ಹೇಗಿದೆ ಎಂಬುದನ್ನು ನೋಡೋಣ.
ಕಳೆದ ಕೆಲವು ವರ್ಷಗಳಿಂದ ಐಸಿಸಿ ಟೂರ್ನಿಗಳಲ್ಲಿ ಭಾರತದ ಪ್ರದರ್ಶನ ಅತ್ಯುತ್ತಮವಾಗಿದೆ. ರೋಹಿತ್ ನಾಯಕತ್ವದಲ್ಲಿ ಭಾರತ ತಂಡ ಕಳೆದ ವರ್ಷ ದಕ್ಷಿಣ ಆಫ್ರಿಕಾವನ್ನು ಟಿ20 ವಿಶ್ವಕಪ್‌ನಲ್ಲಿ ಸೋಲಿಸಿ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು. ಇದೀಗ ಎಂಟು ತಿಂಗಳ ನಂತರ ತಂಡವು ಎರಡನೇ ಐಸಿಸಿ ಟೂರ್ನಮೆಂಟ್‌ನ ಫೈನಲ್ ತಲುಪಿದೆ. ಆದಾಗ್ಯೂ, ಸುಮಾರು ನಾಲ್ಕು ವರ್ಷಗಳ ಹಿಂದೆ 2021 ರಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ನಲ್ಲಿ ಇದೇ ಕಿವೀಸ್ ತಂಡವು ಭಾರತವನ್ನು ಸೋಲಿಸಿ ಪ್ರಶಸ್ತಿಯನ್ನು ಕಸಿದುಕೊಂಡಿತ್ತು.
25 ವರ್ಷಗಳ ನಂತರ ಮುಖಾಮುಖಿ
ಸೆಮಿಫೈನಲ್‌ನಲ್ಲಿ ಭಾರತ ಆಸ್ಟ್ರೇಲಿಯಾವನ್ನು ಸೋಲಿಸಿದರೆ, ನ್ಯೂಜಿಲೆಂಡ್ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಫೈನಲ್ಗೆ ಟಿಕೆಟ್ ಪಡೆದುಕೊಂಡಿದೆ. ಈ ಮೂಲಕ 25 ವರ್ಷಗಳ ನಂತರ ಮತ್ತೊಮ್ಮೆ ಈ ಎರಡೂ ತಂಡಗಳು ಐಸಿಸಿ ಸೀಮಿತ ಓವರ್‌ಗಳ ಸ್ವರೂಪದ ಪ್ರಶಸ್ತಿ ಪಂದ್ಯದಲ್ಲಿ ಪರಸ್ಪರ ಎದುರಾಗಲಿವೆ. ಕುತೂಹಲಕಾರಿಯಾಗಿ, ಎರಡೂ ತಂಡಗಳು ಕೊನೆಯ ಬಾರಿಗೆ ಐಸಿಸಿ ಸೀಮಿತ ಓವರ್‌ಗಳ ಫೈನಲ್‌ನಲ್ಲಿ ಆಡಿದ್ದು 2000 ರಲ್ಲಿ ನಡೆದಿದ್ದ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ. ಆ ಪಂದ್ಯದಲ್ಲಿ ನ್ಯೂಜಿಲೆಂಡ್, ಭಾರತವನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸುವ ಮೂಲಕ ಪ್ರಶಸ್ತಿಯನ್ನು ಗೆದ್ದಿತ್ತು.
ಇದನ್ನೂ ಓದಿ: Champions Trophy 2025: ಸೋತ ಆಫ್ರಿಕಾ; ಭಾರತ- ನ್ಯೂಜಿಲೆಂಡ್ ನಡುವೆ ಚಾಂಪಿಯನ್ಸ್ ಟ್ರೋಫಿ ಫೈನಲ್
2017 ರ ನಂತರ ಭಾರತದ ಪ್ರದರ್ಶನ
ಕಳೆದ ಕೆಲವು ವರ್ಷಗಳಿಂದ ಭಾರತ ಐಸಿಸಿ ಟೂರ್ನಿಗಳಲ್ಲಿ ಅಮೋಘ ಪ್ರದರ್ಶನ ನೀಡುತ್ತಾ ಬಂದಿದೆ. ಭಾರತ ತಂಡ ಪ್ರಶಸ್ತಿ ಗೆಲ್ಲುವ ಅವಕಾಶವನ್ನು ಕಳೆದುಕೊಳ್ಳುತ್ತಿದ್ದರೂ, ನಾಕೌಟ್ ಸುತ್ತಿಗೆ ತಲುಪುವಲ್ಲಿ ಯಶಸ್ವಿಯಾಗಿದೆ. 2017 ರಲ್ಲಿ ಕೊನೆಯ ಬಾರಿಗೆ ಚಾಂಪಿಯನ್ಸ್ ಟ್ರೋಫಿ ನಡೆದಿತ್ತು. ಆಗಲೂ ಭಾರತ ಫೈನಲ್ ತಲುಪಿತ್ತಾದರೂ ಪ್ರಶಸ್ತಿ ಗೆಲ್ಲುವಲ್ಲಿ ವಿಫಲವಾಯಿತು. ನಂತರ ತಂಡವು 2019 ರ ಏಕದಿನ ವಿಶ್ವಕಪ್‌ನ ಸೆಮಿಫೈನಲ್ ಪ್ರವೇಶಿಸಿತ್ತು. ಆದರೆ ನ್ಯೂಜಿಲೆಂಡ್ ವಿರುದ್ಧ ಸೋತು ಪಂದ್ಯಾವಳಿಯಿಂದ ಹೊರಬಿದ್ದಿತ್ತು. 2021 ರಲ್ಲಿ ನಡೆದ ಮೊದಲ ಡಬ್ಲ್ಯುಟಿಸಿ ಫೈನಲ್‌ನಲ್ಲಿಯೂ ಭಾರತ ಸೋತಿತ್ತು. ನಂತರ 2023 ರಲ್ಲಿ ನಡೆದಿದ್ದ ಡಬ್ಲ್ಯುಟಿಸಿ ಫೈನಲ್ ಮತ್ತು 2023 ರ ಏಕದಿನ ವಿಶ್ವಕಪ್ ಫೈನಲ್‌ನಲ್ಲಿ ಭಾರತವನ್ನು ಆಸ್ಟ್ರೇಲಿಯಾ ಸೋಲಿಸಿತ್ತು. ಆ ಬಳಿಕ 2024 ರಲ್ಲಿ ನಡೆದಿದ್ದ ಟಿ20 ವಿಶ್ವಕಪ್‌ನಲ್ಲಿ ರೋಹಿತ್ ನಾಯಕತ್ವದಲ್ಲಿ ಟೀಂ ಇಂಡಿಯಾ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ