CK Nayudu Trophy: 27 ಫೋರ್, 1 ಸಿಕ್ಸ್: ತ್ರಿಶತಕ ಸಿಡಿಸಿ ಮಿಂಚಿದ ವಿ. ಜಡೇಜಾ
CK Nayudu Trophy: ವಿಶೇಷ ಎಂದರೆ ಇದು ವಿಶ್ವರಾಜ್‌ಸಿನ್ಹ ಜಡೇಜಾ ಅವರ ಕಂಬ್ಯಾಕ್ ಪಂದ್ಯ. ಅಂದರೆ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಯುಪಿ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದರು.
CK Nayudu Trophy 2o23: ಸಿಕೆ ನಾಯ್ಡು ಟೂರ್ನಿಯಲ್ಲಿ ಸೌರಾಷ್ಟ್ರ ತಂಡದ ನಾಯಕ ವಿಶ್ವರಾಜ್‌ಸಿನ್ಹ ಜಡೇಜಾ ಭರ್ಜರಿ ತ್ರಿಶತಕ ಸಿಡಿಸಿ ಮಿಂಚಿದ್ದಾರೆ. 25 ವರ್ಷದೊಳಗಿನವರು ಈ ಪಂದ್ಯದಲ್ಲಿ ಸೌರಾಷ್ಟ್ರ ಹಾಗೂ ಕೇರಳ ತಂಡಗಳು ಮುಖಾಮುಖಿಯಾಗಿತ್ತು. ಮೊದಲು ಬ್ಯಾಟ್ ಮಾಡಿದ ಸೌರಾಷ್ಟ್ರ ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ಕೇವಲ 79 ರನ್ಗಳಿಗೆ ಪ್ರಮುಖ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದ ಸೌರಾಷ್ಟ್ರ ತಂಡಕ್ಕೆ ನಾಯಕ ಆಸರೆಯಾದರು. ಗಜ್ಜರ್ ಸಮರ್ ಜೊತೆಗೂಡಿ ಇನಿಂಗ್ಸ್ ಕಟ್ಟಿದ್ದ ವಿಶ್ವರಾಜ್‌ಸಿನ್ಹ ಜಡೇಜಾ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದರು.
ಜಡೇಜಾ ತಮ್ಮ ಅದ್ಭುತ ಇನ್ನಿಂಗ್ಸ್‌ನಲ್ಲಿ 27 ಬೌಂಡರಿ ಮತ್ತು ಒಂದು ಸಿಕ್ಸರ್ನೊಂದಿಗೆ ತ್ರಿಶತಕ ಪೂರೈಸಿದರು. ಅಲ್ಲದೆ ಮೊದಲ ಇನಿಂಗ್ಸ್ನಲ್ಲಿ ತಂಡದ ಮೊತ್ತವನ್ನು 8 ವಿಕೆಟ್ ನಷ್ಟಕ್ಕೆ 550 ಕ್ಕೆ ತಲುಪಿಸಿ ಡಿಕ್ಲೇರ್ ಘೋಷಿಸಿದರು.
ವಿಶೇಷ ಎಂದರೆ ಇದು ವಿಶ್ವರಾಜ್‌ಸಿನ್ಹ ಜಡೇಜಾ ಅವರ ಕಂಬ್ಯಾಕ್ ಪಂದ್ಯ. ಅಂದರೆ ಅವರು ಕಳೆದ ವರ್ಷ ನವೆಂಬರ್‌ನಲ್ಲಿ ಯುಪಿ ವಿರುದ್ಧ ಕೊನೆಯ ಪಂದ್ಯವನ್ನು ಆಡಿದ್ದರು. 2018 ರಲ್ಲಿ ರಣಜಿ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಯುವ ಆಟಗಾರ ಇದೀಗ ಸಿಕೆ ನಾಯ್ಡು ಟೂರ್ನಿಯಲ್ಲಿ ಅಬ್ಬರಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ವಿಶ್ವರಾಜ್‌ಸಿನ್ಹ ಜಡೇಜಾ ಇದುವರೆಗೆ 12 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, ಒಟ್ಟು 671 ರನ್ ಕಲೆಹಾಕಿದ್ದಾರೆ. ಇದಕ್ಕೂ ಮುನ್ನ ಅಜೇಯ 105 ರನ್ ಗಳಿಸಿದ್ದು ಅವರ ಅತ್ಯುತ್ತಮ ಪ್ರದರ್ಶನವಾಗಿತ್ತು. ಅಲ್ಲದೆ ತಮ್ಮ ವೃತ್ತಿಜೀವನದಲ್ಲಿ 1 ಶತಕ ಮತ್ತು 5 ಅರ್ಧ ಶತಕಗಳನ್ನು ಬಾರಿಸಿದ್ದಾರೆ. ಹಾಗೆಯೇ 20 ಲಿಸ್ಟ್ ಎ ಪಂದ್ಯಗಳಲ್ಲಿ 499 ರನ್ ಗಳಿಸಿದ್ದಾರೆ. ಲಿಸ್ಟ್ ಎ ಕ್ರಿಕೆಟ್‌ನಲ್ಲೂ ಜಡೇಜಾ 5 ಅರ್ಧಶತಕಗಳನ್ನು ಬಾರಿಸಿದ್ದಾರೆ. ಇದೀಗ ಸಿಕೆ ನಾಯ್ಡು ಟೂರ್ನಿಯ ಮೂಲಕ ಮತ್ತೆ ರಣಜಿ ತಂಡದಲ್ಲಿ ಸ್ಥಾನ ಪಡೆಯುವ ವಿಶ್ವಾಸದಲ್ಲಿದ್ದಾರೆ ವಿಶ್ವರಾಜ್‌ಸಿನ್ಹ ಜಡೇಜಾ.