CPL 2022: 11 ಭರ್ಜರಿ ಸಿಕ್ಸ್, 94 ರನ್: ಕಾರ್ನ್ವಾಲ್ ಸಿಡಿಲಬ್ಬರಕ್ಕೆ ದಿಕ್ಕೆಟ್ಟ ಎದುರಾಳಿ ಬೌಲರ್ಗಳು
CPL 2022: ಈ ಭರ್ಜರಿ ಜಯದೊಂದಿಗೆ ಬಾರ್ಬಡೋಸ್ ರಾಯಲ್ಸ್ ತಂಡವು ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದೆ.
ಕೆರಿಬಿಯನ್ ಪ್ರೀಮಿಯರ್ ಲೀಗ್ನ (CPL 2022) ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಭರ್ಜರಿ ಜಯ ಸಾಧಿಸುವ ಮೂಲಕ ಬಾರ್ಬಡೋಸ್ ರಾಯಲ್ಸ್ (Barbados Royals) ಫೈನಲ್ಗೆ ಪ್ರವೇಶಿಸಿದೆ. ಪ್ರಾವಿಡೆನ್ಸ್ ಸ್ಟೇಡಿಯಂನಲ್ಲಿ ನಡೆದ ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗಯಾನಾ ಅಮೆಜಾನ್ ವಾರಿಯರ್ಸ್ ಹಾಗೂ ಬಾರ್ಬಡೋಸ್ ರಾಯಲ್ಸ್ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಟಾಸ್ ಗೆದ್ದ ವಾರಿಯರ್ಸ್ ನಾಯಕ ಶಿಮ್ರಾನ್ ಹೆಟ್ಮೆಯರ್ ಬೌಲಿಂಗ್ ಆಯ್ದುಕೊಂಡರು. ಅದರಂತೆ ಇನಿಂಗ್ಸ್ ಆರಂಭಿಸಿದ ಬಾರ್ಬಡೋಸ್ ತಂಡಕ್ಕೆ ಆರಂಭಿಕ ಆಟಗಾರ ರಹಕೀಮ್ ಕಾರ್ನ್ವಾಲ್ ಸ್ಪೋಟಕ ಆರಂಭ ಒದಗಿಸಿದ್ದರು.
ನಾಯಕ ಕೈಲ್ ಮೇಯರ್ಸ್ ಜೊತೆಗೂಡಿ ಸಿಡಿಲಬ್ಬರದ ಬ್ಯಾಟಿಂಗ್ ನಡೆಸಿದ ಕಾರ್ನ್ವಾಲ್ ಮೊದಲ ವಿಕೆಟ್ಗೆ 56 ರನ್ಗಳ ಜೊತೆಯಾಟವಾಡಿದರು. ಈ ಹಂತದಲ್ಲಿ ಮೇಯರ್ಸ್ 26 ರನ್ಗಳಿಸಿ ಔಟಾದರು. ಇದರ ಬೆನ್ನಲ್ಲೇ ಹ್ಯಾರಿ ಟೆಕ್ಟರ್ ಶೂನ್ಯಕ್ಕೆ ನಿರ್ಗಮಿಸಿದರು.
ಈ ವೇಳೆ ಪಾಕ್ ಆಟಗಾರ ಆಜಂ ಖಾನ್ ಜೊತೆಗೂಡಿದ ಕಾರ್ನ್ವಾಲ್ ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಕೇವಲ 54 ಎಸೆತಗಳನ್ನು ಎದುರಿಸಿದ್ದ ರಹಕೀಮ್ ಕಾರ್ನ್ವಾಲ್ 11 ಭರ್ಜರಿ ಸಿಕ್ಸ್ ಹಾಗೂ 2 ಫೋರ್ನೊಂದಿಗೆ 91 ರನ್ ಚಚ್ಚಿದರು. ಮತ್ತೊಂದೆಡೆ ಆಜಂ ಖಾನ್ 35 ಎಸೆತಗಳಲ್ಲಿ 4 ಸಿಕ್ಸ್ ಹಾಗೂ 3 ಫೋರ್ನೊಂದಿಗೆ 52 ರನ್ ಬಾರಿಸಿದರು. ಪರಿಣಾಮ ನಿಗದಿತ 20 ಓವರ್ಗಳಲ್ಲಿ ಬಾರ್ಬಡೋಸ್ ತಂಡವು 5 ವಿಕೆಟ್ ನಷ್ಟಕ್ಕೆ 195 ರನ್ ಕಲೆಹಾಕಿತು.
196 ರನ್ಗಳ ಬೃಹತ್ ಟಾರ್ಗೆಟ್ ಪಡೆದ ಗಯಾನಾ ಅಮೆಜಾನ್ ವಾರಿಯರ್ಸ್ ಪರ ನಾಯಕ ಶಿಮ್ರಾನ್ ಹೆಟ್ಮೆಯರ್ 37 ರನ್ ಬಾರಿಸಿದ್ದು ಬಿಟ್ಟರೆ, ಉಳಿದ ಬ್ಯಾಟ್ಸ್ಮನ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿರಲಿಲ್ಲ. ಅಂತಿಮವಾಗಿ 17.4 ಓವರ್ಗಳಲ್ಲಿ ಕೇವಲ 108 ರನ್ಗಳಿಗೆ ಆಲೌಟ್ ಆಗುವ ಮೂಲಕ ಅಮೆಜಾನ್ ವಾರಿಯರ್ಸ್ ತಂಡವು 87 ರನ್ಗಳಿಂದ ಸೋಲೊಪ್ಪಿಕೊಂಡಿತು.
ಈ ಭರ್ಜರಿ ಜಯದೊಂದಿಗೆ ಬಾರ್ಬಡೋಸ್ ರಾಯಲ್ಸ್ ತಂಡವು ಕೆರಿಬಿಯನ್ ಪ್ರೀಮಿಯರ್ ಲೀಗ್ನಲ್ಲಿ ಚೊಚ್ಚಲ ಬಾರಿಗೆ ಫೈನಲ್ ಪ್ರವೇಶಿಸಿದೆ. ವಿಶೇಷ ಎಂದರೆ ಬಾರ್ಬಡೋಸ್ ರಾಯಲ್ಸ್ ತಂಡವು ಐಪಿಎಲ್ನ ರಾಜಸ್ಥಾನ್ ರಾಯಲ್ಸ್ ಫ್ರಾಂಚೈಸಿಯ ಒಡೆತನದಲ್ಲಿರುವ ತಂಡವಾಗಿದೆ.