
ಭಾರತ ಟೆಸ್ಟ್ ತಂಡದ ನಾಯಕ ಶುಭ್ಮನ್ ಗಿಲ್ ಮನವಿ ಮಾಡಿದರೂ ಚೆಂಡಿಗೆ ಲಾಲಾರಸ ಹಚ್ಚುವ ನಿಯಮವನ್ನು ಮತ್ತೆ ಜಾರಿಗೆ ತರಲು ಐಸಿಸಿ ಒಪ್ಪಿಗೆ ನೀಡಿಲ್ಲ. ಈ ನಿಷೇಧವನ್ನು ಮರುಪರಿಶೀಲಿಸುವ ಯಾವುದೇ ಯೋಜನೆ ಸದ್ಯಕ್ಕಿಲ್ಲ ಎಂದು ಐಸಿಸಿ ಸ್ಪಷ್ಟಪಡಿಸಿದೆ. ನ್ಯೂಜಿಲೆಂಡ್ನ ವೆಲ್ಲಿಂಗ್ಟನ್ನಲ್ಲಿರುವ ಬೇಸಿನ್ ರಿಸರ್ವ್ ಮೈದಾನದಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡಿತ್ತು. ಪಂದ್ಯದ ಬಳಿಕ ಮಾತನಾಡಿದ್ದ ಶುಭ್ಮನ್ ಗಿಲ್, ಕೂಕಬುರ್ರಾ ಚೆಂಡು ಬೇಗನೆ ಮೃದುವಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದರು. ಇದರಿಂದ ಬೌಲರ್ಗಳಿಗೆ ಸಾಕಷ್ಟು ನೆರವು ಸಿಗುತ್ತಿಲ್ಲ. ಹೀಗಾಗಿ ಚೆಂಡನ್ನು ಹೊಳಪು ಮಾಡಲು ಆಟಗಾರರಿಗೆ ಲಾಲಾರಸ ಬಳಸಲು ಅವಕಾಶ ನೀಡಬೇಕು ಎಂದು ಅವರು ಒತ್ತಾಯಿಸಿದ್ದರು. ಆದರೆ ಗಿಲ್ ಅವರ ಈ ಮನವಿಗೆ ಐಸಿಸಿ ಸದ್ಯ ಯಾವುದೇ ಮನ್ನಣೆ ನೀಡಲು ಸಿದ್ಧವಿಲ್ಲ.
2020ರಲ್ಲಿ ಕೋವಿಡ್ ಸಾಂಕ್ರಾಮಿಕ ಹರಡಿದ್ದ ಸಂದರ್ಭದಲ್ಲಿ ಆಟಗಾರರು ಮತ್ತು ಪಂದ್ಯ ಅಧಿಕಾರಿಗಳ ಆರೋಗ್ಯದ ದೃಷ್ಟಿಯಿಂದ ಐಸಿಸಿ ಚೆಂಡಿಗೆ ಲಾಲಾರಸ ಹಚ್ಚುವುದನ್ನು ನಿಷೇಧಿಸಿತ್ತು. ಆರಂಭದಲ್ಲಿ ತಾತ್ಕಾಲಿಕವಾಗಿ ಜಾರಿಗೆ ತಂದಿದ್ದ ಈ ನಿಯಮವನ್ನು ಕೆಲವು ವರ್ಷಗಳ ಬಳಿಕ ಐಸಿಸಿ ಆಟದ ನಿಯಮಗಳಲ್ಲಿ ಶಾಶ್ವತಗೊಳಿಸಿತು. ಮೇರಿಲ್ಬೋನ್ ಕ್ರಿಕೆಟ್ ಕ್ಲಬ್ (ಎಂಸಿಸಿ) ರೂಪಿಸಿರುವ ಕ್ರಿಕೆಟ್ ನಿಯಮಗಳ ಪ್ರಕಾರವೂ ಚೆಂಡಿನ ಸ್ಥಿತಿಯನ್ನು ಕೃತಕವಾಗಿ ಬದಲಾಯಿಸುವ ಯಾವುದೇ ವಿಧಾನವನ್ನು ಅನುಮತಿಸಲಾಗುವುದಿಲ್ಲ. ಸಿಹಿತಿಂಡಿ, ಚೂಯಿಂಗ್ ಗಮ್ ಮತ್ತು ಪುದೀನದಂತಹ ಪದಾರ್ಥಗಳೊಂದಿಗೆ ಲಾಲಾರಸ ಬೆರೆತಾಗ ಚೆಂಡಿನ ಸ್ಥಿತಿಯಲ್ಲಿ ಬದಲಾವಣೆಯಾಗುವ ಸಾಧ್ಯತೆ ಇರುತ್ತದೆ. ಇಂತಹ ಬಳಕೆಯನ್ನು ಗಮನಿಸುವುದು ಮತ್ತು ನಿಯಂತ್ರಿಸುವುದು ಕಷ್ಟ ಎಂಬ ಕಾರಣವೂ ಈ ನಿಷೇಧದ ಹಿಂದಿದೆ.
ಆಟಗಾರರು ಮತ್ತು ಪಂದ್ಯ ಅಧಿಕಾರಿಗಳ ಆರೋಗ್ಯದ ದೃಷ್ಟಿಯಿಂದ ಲಾಲಾರಸದ ಬಳಕೆ ಅಪಾಯಕಾರಿಯಾಗಬಹುದು ಎಂಬುದು ಐಸಿಸಿಯ ನಿಲುವು. ಯುರೋಪಿಯನ್ ಸೆಂಟರ್ ಫಾರ್ ಡಿಸೀಸ್ ಪ್ರಿವೆನ್ಷನ್ ಅಂಡ್ ಕಂಟ್ರೋಲ್ ಪ್ರಕಾರ, ಹೊಸದಾಗಿ ಕಾಣಿಸಿಕೊಳ್ಳುತ್ತಿರುವ SARS-CoV-2 ರೂಪಾಂತರಗಳು ಜಾಗತಿಕ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಸಾಧ್ಯತೆಯಿದೆ. ಇತ್ತೀಚೆಗೆ ಬಾಲಿಯಲ್ಲಿ ನಡೆದ ಐಸಿಸಿಯ ಸಭೆಯಲ್ಲೂ ಲಾಲಾರಸದ ಮೇಲಿನ ನಿಷೇಧವನ್ನು ತೆಗೆದುಹಾಕುವ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ ಎಂದು ತಿಳಿದುಬಂದಿದೆ.
ಕೋವಿಡ್ ವೇಳೆ ಬಂದ ರೂಲ್ಸ್ ಇನ್ನೂ ಯಾಕೆ ಜಾರಿ? ಐಸಿಸಿಯನ್ನು ಪ್ರಶ್ನಿಸಿದ ಗಿಲ್
ವೆಲ್ಲಿಂಗ್ಟನ್ ಟೆಸ್ಟ್ ಡ್ರಾದಲ್ಲಿ ಅಂತ್ಯಗೊಂಡ ಬಳಿಕ ಮಾತನಾಡಿದ್ದ ಶುಭಮನ್ ಗಿಲ್, ಚೆಂಡಿಗೆ ಲಾಲಾರಸ ಹಚ್ಚಲು ಅವಕಾಶ ನೀಡದಿರುವುದಕ್ಕೆ ಅಚ್ಚರಿ ವ್ಯಕ್ತಪಡಿಸಿದ್ದರು. ‘ಚೆಂಡನ್ನು ಹೊಳಪು ಮಾಡಲು ನಮಗೆ ಇನ್ನೂ ಅವಕಾಶ ನೀಡುತ್ತಿಲ್ಲ ಎಂಬುದು ನನಗೆ ಅರ್ಥವಾಗುತ್ತಿಲ್ಲ. ನಾವು ಕೋವಿಡ್ ಕಾಲವನ್ನು ದಾಟಿ ಬಂದಿದ್ದೇವೆ. ಆ ಸಮಯದಲ್ಲಿ ಚೆಂಡಿಗೆ ಲಾಲಾರಸ ಹಚ್ಚಬಾರದು ಎಂಬ ನಿಯಮ ಜಾರಿಗೆ ತರಲಾಗಿತ್ತು. ಆದರೆ ಈಗ ಏಳೆಂಟು ವರ್ಷಗಳೇ ಕಳೆದಿವೆ. ಆದರೂ ಈ ನಿಯಮವನ್ನು ಏಕೆ ಮುಂದುವರಿಸಲಾಗಿದೆ ಎಂಬುದು ನನಗೆ ಅರ್ಥವಾಗುತ್ತಿಲ್ಲ’ ಎಂದು ಗಿಲ್ ತಮ್ಮ ಅಸಮಾಧಾನ ಹೊರಹಾಕಿದ್ದರು.
ಐಪಿಎಲ್ನಲ್ಲಿ ಈಗಾಗಲೇ ಚೆಂಡಿಗೆ ಲಾಲಾರಸ ಹಚ್ಚುವ ಮೇಲಿನ ನಿಷೇಧವನ್ನು ತೆಗೆದುಹಾಕಲಾಗಿದೆ. ಆದರೆ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಮಾತ್ರ ಐಸಿಸಿ ತನ್ನ ನಿಲುವನ್ನು ಬದಲಿಸಿಲ್ಲ. ಹೀಗಾಗಿ ಗಿಲ್ ಸೇರಿದಂತೆ ಬೌಲರ್ಗಳ ಪರವಾಗಿ ಧ್ವನಿ ಎತ್ತುತ್ತಿರುವ ಆಟಗಾರರಿಗೆ ಸದ್ಯ ನಿರಾಸೆಯಾಗಿದೆ.