VIDEO: ಕ್ಯಾಚ್ ಹಿಡಿದ ಸಿರಾಜ್ರನ್ನು ಮೈದಾನದಲ್ಲೇ ನಿಂದಿಸಿದ ಚಹರ್..!
Deepak Chahar - Mohammed Siraj: ಈ ಪಂದ್ಯದಲ್ಲಿ 228 ರನ್ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್ಮನ್ಗಳು ವಿಫಲರಾದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ 21 ಎಸೆತಗಳಲ್ಲಿ 46 ರನ್ ಬಾರಿಸಿ ಅಬ್ಬರಿಸಿದರು.

India vs South Africa 3rd T20: ಇಂದೋರ್ನ ಹೋಲ್ಕರ್ ಕ್ರಿಕೆಟ್ ಸ್ಟೇಡಿಯಂನಲ್ಲಿ ಮಂಗಳವಾರ ನಡೆದ ಮೂರು ಪಂದ್ಯಗಳ ಸರಣಿಯ ಮೂರನೇ ಮತ್ತು ಅಂತಿಮ ಟಿ20 ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ 49 ರನ್‌ಗಳಿಂದ ಭಾರತ ತಂಡವನ್ನು ಸೋಲಿಸಿತು. ಇದಾಗ್ಯೂ ಮೊದಲೆರಡು ಪಂದ್ಯಗಳಲ್ಲಿ ಜಯ ಸಾಧಿಸಿರುವ ಟೀಮ್ ಇಂಡಿಯಾ 2-1 ಅಂತರದಿಂದ ಸರಣಿ ಗೆದ್ದುಕೊಂಡಿದೆ. ಅಂತಿಮ ಪಂದ್ಯದಲ್ಲಿ ಟಾಸ್ ಗೆದ್ದು ಟೀಮ್ ಇಂಡಿಯಾ (Team India) ನಾಯಕ ರೋಹಿತ್ ಶರ್ಮಾ (Rohit Sharma) ದಕ್ಷಿಣ ಆಫ್ರಿಕಾ ತಂಡವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.
ಹೀಗೆ ಸಿಕ್ಕ ಅವಕಾಶವನ್ನು ಬಳಸಿಕೊಂಡ ಸೌತ್ ಆಫ್ರಿಕಾ ಬ್ಯಾಟ್ಸ್ಮನ್ಗಳಾದ ರಿಲೀ ರೊಸ್ಸೋ (48 ಎಸೆತಗಳಲ್ಲಿ 100 ರನ್) ಮತ್ತು ಕ್ವಿಂಟನ್ ಡಿ ಕಾಕ್ (43 ಎಸೆತಗಳಲ್ಲಿ 68) ಸ್ಪೋಟಕ ಬ್ಯಾಟಿಂಗ್ ನಡೆಸಿದರು. ಹಾಗೆಯೇ ಅಂತಿಮ ಓವರ್ ವೇಳೆ ಕಣಕ್ಕಿಳಿದ ಡೇವಿಡ್ ಮಿಲ್ಲರ್ ದೀಪಕ್ ಚಹರ್ ಓವರ್ನಲ್ಲಿ ಹ್ಯಾಟ್ರಿಕ್ ಸಿಕ್ಸ್ ಸಿಡಿಸುವ ಮೂಲಕ ಅಬ್ಬರಿಸಿದರು. ಪರಿಣಾಮ ಸೌತ್ ಆಫ್ರಿಕಾ ತಂಡವು 20 ಓವರ್‌ಗಳಲ್ಲಿ 227/3 ರನ್ಗಳ ಬೃಹತ್ ಮೊತ್ತ ಪೇರಿಸಿತು.
ಆದರೆ ಕೊನೆಯ ಓವರ್ನ 5ನೇ ಎಸೆತದಲ್ಲಿ ಡೇವಿಡ್ ಮಿಲ್ಲರ್ ಕ್ಯಾಚ್ ನೀಡಿದ್ದರು. ಚಹರ್ ಎಸೆತದಲ್ಲಿ ಲೆಗ್ಸೈಡ್ನತ್ತ ಭರ್ಜರಿ ಶಾಟ್ ಬಾರಿಸಿದ್ದರು. ಈ ವೇಳೆ ಬೌಂಡರಿ ಲೈನ್ನಲ್ಲಿದ್ದ ಮೊಹಮ್ಮದ್ ಸಿರಾಜ್ ಕ್ಯಾಚ್ ಹಿಡಿದರೂ, ಹಿಂದಕ್ಕೆ ಸಾಗಿ ಬೌಂಡರಿ ಲೈನ್ ಮೆಟ್ಟಿದರು. ಮೊದಲೇ ಎರಡು ಸಿಕ್ಸ್ ಹೊಡೆಸಿಕೊಂಡು ಕುಪಿತಗೊಂಡಿದ್ದ ದೀಪಕ್ ಚಹರ್ ಮತ್ತಷ್ಟು ಕೋಪಗೊಂಡರು. ಅಲ್ಲದೆ ಕ್ಯಾಚ್ ಹಿಡಿದು ಬೌಂಡರಿ ಲೈನ್ ಮೆಟ್ಟಿದ ಸಿರಾಜ್ ರನ್ನು ಮೈದಾನದಲ್ಲೇ ನಿಂದಿಸಿದರು. ಇತ್ತ ನಾಯಕ ರೋಹಿತ್ ಶರ್ಮಾ ಕೂಡ ತಮ್ಮ ಆಕ್ರೋಶವನ್ನು ಹಾವಭಾವದ ಮೂಲಕ ಪ್ರದರ್ಶಿಸಿದರು. ಈ ವಿಡಿಯೋ ಇದೀಗ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
— Richard (@Richard10719932) October 4, 2022
ಇನ್ನು ಈ ಪಂದ್ಯದಲ್ಲಿ 228 ರನ್ಗಳ ಟಾರ್ಗೆಟ್ ಪಡೆದ ಟೀಮ್ ಇಂಡಿಯಾ ಪರ ಆರಂಭಿಕ ಬ್ಯಾಟ್ಸ್ಮನ್ಗಳು ವಿಫಲರಾದರು. ಇದಾಗ್ಯೂ ಮಧ್ಯಮ ಕ್ರಮಾಂಕದಲ್ಲಿ ದಿನೇಶ್ ಕಾರ್ತಿಕ್ 21 ಎಸೆತಗಳಲ್ಲಿ 46 ರನ್ ಬಾರಿಸಿ ಅಬ್ಬರಿಸಿದರು. ಆದರೆ ಉತ್ತಮ ದಾಳಿ ಸಂಘಟಿಸುವಲ್ಲಿ ಯಶಸ್ವಿಯಾದ ಸೌತ್ ಆಫ್ರಿಕಾ ತಂಡವು ಅಂತಿಮವಾಗಿ 18.3 ಓವರ್‌ಗಳಲ್ಲಿ ಟೀಮ್ ಇಂಡಿಯಾವನ್ನು 170 ರನ್ಗಳಿಗೆ ಆಲೌಟ್ ಮಾಡಿತು. ಈ ಮೂಲಕ ಗೆಲುವಿನೊಂದಿಗೆ ಸರಣಿಯನ್ನು ಅಂತ್ಯಗೊಳಿಸಿದೆ.




