WPL 2026: ಗುಜರಾತ್ ಕನಸು ಭಗ್ನ; ಸತತ 4ನೇ ಬಾರಿಗೆ ಫೈನಲ್ಗೇರಿದ ಡೆಲ್ಲಿ
WPL 2026 Eliminator: 2026ರ ಮಹಿಳಾ ಪ್ರೀಮಿಯರ್ ಲೀಗ್ ಎಲಿಮಿನೇಟರ್‌ನಲ್ಲಿ ಡೆಲ್ಲಿ ಕ್ಯಾಪಿಟಲ್ಸ್, ಗುಜರಾತ್ ಜೈಂಟ್ಸ್ ತಂಡವನ್ನು ಸೋಲಿಸಿ ಸತತ ನಾಲ್ಕನೇ ಬಾರಿಗೆ ಫೈನಲ್‌ಗೆ ಪ್ರವೇಶಿಸಿದೆ. ಗುಜರಾತ್‌ನ ಮೊದಲ ಫೈನಲ್ ಕನಸು ಭಗ್ನಗೊಂಡಿತು. 167 ರನ್‌ಗಳ ಗುರಿಯನ್ನು ಡೆಲ್ಲಿ ಸುಲಭವಾಗಿ ಬೆನ್ನಟ್ಟಿ 3 ವಿಕೆಟ್‌ಗಳ ಗೆಲುವು ಸಾಧಿಸಿತು. ಇದೀಗ ಡೆಲ್ಲಿ ಕ್ಯಾಪಿಟಲ್ಸ್ ಫೈನಲ್‌ನಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದೆ.

2026 ರ ಮಹಿಳಾ ಪ್ರೀಮಿಯರ್ ಲೀಗ್ನ (Women’s Premier League) ಎಲಿಮಿನೇಟರ್ ಪಂದ್ಯವು ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಗುಜರಾತ್ ಜೈಂಟ್ಸ್ (Delhi Capitals vs Gujarat Giants) ನಡುವೆ ನಡೆಯಿತು. ಎರಡೂ ತಂಡಗಳು ಇದುವರೆಗೆ ಪ್ರಶಸ್ತಿ ಗೆಲ್ಲದ ಕಾರಣ ಯಾವ ತಂಡ ಫೈನಲ್ಗೇರಲಿದೆ ಎಂಬುದು ಕುತೂಹಲ ಮೂಡಿಸಿತ್ತು. ಅಂತಿಮವಾಗಿ ಡೆಲ್ಲಿ ತಂಡ ಗುಜರಾತ್ ತಂಡದ ಮೊದಲ ಫೈನಲ್ ಕನಸನ್ನು ಭಗ್ನಗೊಳಿಸಿ ಸತತ ನಾಲ್ಕನೇ ಬಾರಿಗೆ ಫೈನಲ್‌ಗೆ ಟಿಕೆಟ್ ಪಡೆಯಿತು. ಟಾಸ್ ಸೋತು ಮೊದಲು ಬ್ಯಾಟಿಂಗ್ ಮಾಡಿದ ಗುಜರಾತ್ ಜೈಂಟ್ಸ್ 167 ರನ್ ಕಲೆಹಾಕಿತು. ಈ ಗುರಿ ಬೆನ್ನಟ್ಟಿದ ಡೆಲ್ಲಿ ಕ್ಯಾಪಿಟಲ್ಸ್ ಇನ್ನು 26 ಎಸೆತಗಳು ಬಾಕಿ ಇರುವಂತೆಯೇ ಕೇವಲ 3 ವಿಕೆಟ್ ಕಳೆದುಕೊಂಡು ಜಯದ ನಗೆ ಬೀರಿತು. ಇದೀಗ ಡೆಲ್ಲಿ ಫೈನಲ್ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಎದುರಿಸಲಿದೆ.
ಡೆಲ್ಲಿಗೆ ಸತತ 4ನೇ ಫೈನಲ್
ಮೊದಲ ಆವೃತ್ತಿಯಿಂದಲೂ ಫೈನಲ್‌ನಲ್ಲಿ ಆಡುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್ ತಂಡದ ಈ ಸೀಸನ್ ಆರಂಭ ಕಳಪೆಯಾಗಿತ್ತು. ಸತತ ಎರಡು ಪಂದ್ಯಗಳನ್ನು ಸೋತಿದ್ದ ಡೆಲ್ಲಿ, ಅಂತಿಮವಾಗಿ ತನ್ನ ಮೂರನೇ ಪಂದ್ಯದಲ್ಲಿ ಮೊದಲ ಗೆಲುವು ಸಾಧಿಸಿತು. ಆದಾಗ್ಯೂ, ಜೆಮಿಮಾ ನೇತೃತ್ವದ ಫ್ರಾಂಚೈಸಿ ಬಲವಾದ ಪುನರಾಗಮನವನ್ನು ಮಾಡಿ ಎಲಿಮಿನೇಟರ್‌ನಲ್ಲಿ ಸ್ಥಾನ ಪಡೆದುಕೊಂಡಿತು. ಆದರೆ ಎದುರಾಳಿ ಗುಜರಾತ್ ಜೈಂಟ್ಸ್ ತಂಡದ ವಿರುದ್ಧ ಲೀಗ್ ಹಂತದಲ್ಲಿ ಆಡಿದ್ದ ಎರಡು ಪಂದ್ಯಗಳನ್ನು 4 ರನ್ ಮತ್ತು 3 ರನ್‌ಗಳಿಂದ ಸೋತಿದ್ದ ಡೆಲ್ಲಿ, ಎಲಿಮಿನೇಟರ್‌ನಲ್ಲಿ ಗೆಲುವು ಸಾಧಿಸುವಲ್ಲಿ ಯಶಸ್ವಿಯಾಯಿತು.
ಗುಜರಾತ್ಗೆ ಆರಂಭಿಕ ಆಘಾತ
ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಗುಜರಾತ್ ತಂಡವು 20 ಓವರ್‌ಗಳಲ್ಲಿ 7 ವಿಕೆಟ್‌ಗಳ ನಷ್ಟಕ್ಕೆ 168 ರನ್ ಪೇರಿಸಿತು. ತಂಡದ ಪರ ಅನುಭವಿ ಬೆತ್ ಮೂನಿ (ಅಜೇಯ 62) ತಂಡವನ್ನು ಈ ಸ್ಥಿತಿಗೆ ಕೊಂಡೊಯ್ಯುವಲ್ಲಿ ಪ್ರಮುಖ ಪಾತ್ರ ವಹಿಸಿದರು. ಆದಾಗ್ಯೂ ತಂಡದ ಆರಂಭ ಉತ್ತಮವಾಗಿರಲಿಲ್ಲ. ಅನುಭವಿಗಳಾದ ಸೋಫಿ ಡಿವೈನ್ ಮತ್ತು ನಾಯಕಿ ಆಶ್ಲೀ ಗಾರ್ಡ್ನರ್ ಸೇರಿದಂತೆ 4 ವಿಕೆಟ್‌ಗಳು ಕೇವಲ 59 ರನ್‌ಗಳಿಗೆ ಪತನಗೊಂಡವು. ಆದಾರೂ ಹೋರಾಟ ಬಿಡದ ಮೂನಿ ಅರ್ಧಶತಕದ ಇನ್ನಿಂಗ್ಸ್ ಆಡಿದರು. ಜಾರ್ಜಿಯಾ ವೇರ್‌ಹ್ಯಾಮ್ ಕೂಡ 35 ರನ್‌ಗಳ ಕಾಣಿಕೆ ನೀಡಿದರು. ದೆಹಲಿ ಪರ, ವೆಸ್ಟ್ ಇಂಡೀಸ್ ಆಲ್‌ರೌಂಡರ್ ಶೆನೆಲ್ಲೆ ಹೆನ್ರಿ 3 ವಿಕೆಟ್‌ಗಳನ್ನು ಮತ್ತು ಭಾರತದ ಯುವ ಬೌಲರ್ ನಂದಿನಿ ಶರ್ಮಾ 2 ವಿಕೆಟ್‌ಗಳನ್ನು ಪಡೆದರು.
WPL 2026: ಯುಪಿ ವಿರುದ್ಧ ಗೆದ್ದ ಡೆಲ್ಲಿ; ಟೂರ್ನಿಯಿಂದ ಹೊರಬಿದ್ದ ಮುಂಬೈ
ಸುಲಭವಾಗಿ ಗೆದ್ದ ಡೆಲ್ಲಿ
ಈ ಗುರಿ ಬೆನ್ನಟ್ಟಿದ ದೆಹಲಿಗೆ ಆರಂಭಿಕ ಜೋಡಿ ಮತ್ತೊಮ್ಮೆ ಸ್ಫೋಟಕ ಆರಂಭವನ್ನು ನೀಡಿ, ಪಂದ್ಯದ ಫಲಿತಾಂಶವನ್ನು ಬಹುತೇಕ ಖಚಿತಗೊಳಿಸಿತು. ಲಿಜೆಲ್ಲೆ ಲೀ ಮತ್ತು ಶಫಾಲಿ ವರ್ಮಾ ಅದ್ಭುತವಾಗಿ ಬ್ಯಾಟಿಂಗ್ ಮಾಡಿ ಕೇವಲ ಏಳು ಓವರ್‌ಗಳಲ್ಲಿ 89 ರನ್‌ಗಳ ಪಾಲುದಾರಿಕೆಯನ್ನು ನಿರ್ಮಿಸಿದರು. ಆದಾಗ್ಯೂ, ವೇರ್‌ಹ್ಯಾಮ್ ಎಂಟನೇ ಓವರ್‌ನಲ್ಲಿ ಇಬ್ಬರನ್ನೂ ಔಟ್ ಮಾಡಿದರಾದರೂ ಅಷ್ಟರಲ್ಲಾಗಲೇ ಡೆಲ್ಲಿ ತಂಡದ ಗೆಲುವು ಖಚಿತವಾಗಿತ್ತು. ಅಲ್ಲಿಂದ, ನಾಯಕಿ ಜೆಮಿಮಾ ಮತ್ತು ಅನುಭವಿ ಲಾರಾ ವೋಲ್ವಾರ್ಡ್ಟ್ 68 ರನ್‌ಗಳ ಜೊತೆಯಾಟ ನಡೆಸಿ ತಂಡಕ್ಕೆ ಗೆಲುವು ತಂದುಕೊಟ್ಟರು. 16 ನೇ ಓವರ್‌ನಲ್ಲಿ ವೋಲ್ವಾರ್ಡ್ಟ್ ಬೌಂಡರಿ ಬಾರಿಸಿ ಪಂದ್ಯವನ್ನು ಗೆದ್ದು ತಂಡವನ್ನು ಫೈನಲ್‌ಗೆ ಕೊಂಡೊಯ್ದರು.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 10:50 pm, Tue, 3 February 26
