ಟೀಮ್ ಇಂಡಿಯಾವನ್ನು ನಾಯಿಗೆ ಹೋಲಿಸಿದ ದಿನೇಶ್ ಕಾರ್ತಿಕ್
India vs England 1st test: ಭಾರತ ಮತ್ತು ಇಂಗ್ಲೆಂಡ್ ನಡುವಣ ಮೊದಲ ಟೆಸ್ಟ್ ಪಂದ್ಯವು ಮುಗಿದಿದೆ. ಹೆಡಿಂಗ್ಲೆ ಮೈದಾನದಲ್ಲಿ ನಡೆದ ಈ ಪಂದ್ಯದ ಪ್ರಥಮ ಇನಿಂಗ್ಸ್ನಲ್ಲಿ ಮೊದಲು ಬ್ಯಾಟ್ ಮಾಡಿದ ಟೀಮ್ ಇಂಡಿಯಾ 471 ರನ್ ಕಲೆಹಾಕಿದರೆ, ಇಂಗ್ಲೆಂಡ್ 465 ರನ್ಗಳಿಸಿತು. ಇನ್ನು ದ್ವಿತೀಯ ಇನಿಂಗ್ಸ್ನಲ್ಲಿ ಭಾರತ ತಂಡ ಕಲೆಹಾಕಿದ್ದು 364 ರನ್ಗಳು. ಅದರಂತೆ ಅಂತಿಮ ಇನಿಂಗ್ಸ್ನಲ್ಲಿ 371 ರನ್ಗಳ ಗುರಿ ಪಡೆದ ಇಂಗ್ಲೆಂಡ್ ತಂಡವು ಭರ್ಜರಿ ಚೇಸಿಂಗ್ನೊಂದಿಗೆ 5 ವಿಕೆಟ್ಗಳ ಗೆಲುವು ದಾಖಲಿಸಿದೆ.

ಲೀಡ್ಸ್ನಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ 5 ವಿಕೆಟ್ಗಳಿಂದ ಪರಾಜಯಗೊಂಡಿದೆ. ಈ ಪಂದ್ಯದಲ್ಲಿ ಭಾರತೀಯ ಬ್ಯಾಟರ್ಗಳು 5 ಶತಕ ಸಿಡಿಸಿದರೂ ಗೆಲುವು ದಕ್ಕಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಸೋಲಿನ ಬೆನ್ನಲ್ಲೇ ಭಾರತ ತಂಡದ ಮಾಜಿ ಆಟಗಾರ ದಿನೇಶ್ ಕಾರ್ತಿಕ್ ಟೀಮ್ ಇಂಡಿಯಾ ಬಗ್ಗೆ ನೀಡಿದ ಹೇಳಿಕೆಯೊಂದು ವೈರಲ್ ಆಗಿದೆ. ಹೀಗೆ ಹೇಳಿಕೆ ವೈರಲ್ ಆಗಲು ಮುಖ್ಯ ಕಾರಣ ಅವರ ಭಾರತ ತಂಡವನ್ನು ನಾಯಿಗೆ ಹೋಲಿಸಿ ವಿಮರ್ಶಿಸಿರುವುದು.
ಸ್ಕೈ ಸ್ಪೋರ್ಟ್ಸ್ ಚಾನೆಲ್ನ ಕಾಮೆಂಟೇಟರ್ ಆಗಿರುವ ದಿನೇಶ್ ಕಾರ್ತಿಕ್, ಭಾರತೀಯ ಬ್ಯಾಟಿಂಗ್ ಪ್ರದರ್ಶನವನ್ನು ಡಾಬರ್‌ಮ್ಯಾನ್ ನಾಯಿಗೆ ಹೋಲಿಸಿ ವಿಮರ್ಶಿಸಿದರು. ನನ್ನ ಪ್ರಕಾರ, ಭಾರತ ತಂಡದ ಬ್ಯಾಟಿಂಗ್ ಡಾಬರ್‌ಮ್ಯಾನ್ ನಾಯಿಯಂತಿದೆ. ಅದರ ತಲೆ ಚೆನ್ನಾಗಿದೆ, ಮಧ್ಯ ಭಾಗ ಸರಿಯಾಗಿದೆ. ಆದರೆ ಅದಕ್ಕೆ ಬಾಲವಿಲ್ಲ. ಟೀಮ್ ಇಂಡಿಯಾ ಬ್ಯಾಟಿಂಗ್ ಲೈನಪ್ ಕೂಡ ಡಾಬರ್‌ಮ್ಯಾನ್ ನಾಯಿ ಥರ ಇದೆ.
ಇಲ್ಲಿ ದಿನೇಶ್ ಕಾರ್ತಿಕ್ ನಾಯಿಯ ತಲೆ ಎಂದು ಉಲ್ಲೇಖಿಸಿರುವುದು ಅಗ್ರ ಕ್ರಮಾಂಕದ ಮೂವರು ಬ್ಯಾಟರ್ಗಳನ್ನು. ಇನ್ನು ಮಧ್ಯಭಾಗ ಎಂದರೆ 4ನೇ ಮತ್ತು 5ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಬ್ಯಾಟರ್ಗಳು. ಹಾಗೆಯೇ ಬಾಲ ಇಲ್ಲ ಎಂದಿರುವುದು ಕೆಲ ಕ್ರಮಾಂಕದ ಬ್ಯಾಟರ್ಗಳನ್ನು.
ಏಕೆಂದರೆ ಟೀಮ್ ಇಂಡಿಯಾದ ಅಗ್ರಕ್ರಮಾಂಕದ ಬ್ಯಾಟರ್ಗಳು ಉತ್ತಮ ಪ್ರದರ್ಶನ ನೀಡಿದ್ದಾರೆ. ಇನ್ನು 4ನೇ ಮತ್ತು 5ನೇ ಕ್ರಮಾಂಕದಲ್ಲೂ ಕಣಕ್ಕಿಳಿದರೂ ಭರ್ಜರಿ ಬ್ಯಾಟಿಂಗ್ ಪ್ರದರ್ಶೀಸಿದ್ದಾರೆ. ಆದರೆ ಕೆಲ ಕ್ರಮಾಂಕದಲ್ಲಿ ಆಡಿದ ಬ್ಯಾಟರ್ಗಳಿಂದ ನಿರೀಕ್ಷಿತ ಪ್ರದರ್ಶನ ಮೂಡಿಬಂದಿಲ್ಲ. ಹೀಗಾಗಿ ಡಿಕೆ ಟೀಮ್ ಇಂಡಿಯಾ ಬ್ಯಾಟಿಂಗ್ ಲೈನಪ್ ಅನ್ನು ಡಾಬರ್‌ಮ್ಯಾನ್ ನಾಯಿಗೆ ಹೋಲಿಸಿದ್ದಾರೆ.
ಹೆಡಿಂಗ್ಲೆನಲ್ಲಿ ನಡೆದ ಮೊದಲ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್ನಲ್ಲಿ ಅಗ್ರ ಕ್ರಮಾಂಕದಲ್ಲಿ ಕಣಕ್ಕಿಳಿದ ಯಶಸ್ವಿ ಜೈಸ್ವಾಲ್ (101) ಶತಕ ಸಿಡಿಸಿದ್ದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಶುಭ್ಮನ್ ಗಿಲ್ (147) ರಿಷಭ್ ಪಂತ್ (134) ಶತಕ ಬಾರಿಸಿದ್ದರು. ಹಾಗೆಯೇ ದ್ವಿತೀಯ ಇನಿಂಗ್ಸ್ನಲ್ಲಿ ಆರಂಭಿಕ ದಾಂಡಿಗ ಕೆಎಲ್ ರಾಹುಲ್ (137) ಶತಕ ಬಾರಿಸಿದ್ದರು. ಹಾಗೆಯೇ ಮಧ್ಯಮ ಕ್ರಮಾಂಕದಲ್ಲಿ ರಿಷಭ್ ಪಂತ್ (118) ಬ್ಯಾಟ್ನಿಂದ ಮತ್ತೊಂದು ಶತಕ ಮೂಡಿಬಂದಿತ್ತು.
ಆದರೆ ಕೆಳ ಕ್ರಮಾಂಕದಲ್ಲಿ ಆಡಿದ ಕರುಣ್ ನಾಯರ್, ರವೀಂದ್ರ ಜಡೇಜಾ ಹಾಗೂ ಶಾರ್ದೂಲ್ ಠಾಕೂರ್ ಸಂಪೂರ್ಣ ವಿಫಲರಾಗಿದ್ದರು. ಅಲ್ಲದೆ ಎರಡು ಇನಿಂಗ್ಸ್ಗಳ ಮೂಲಕ ಟೀಮ್ ಇಂಡಿಯಾದ ಕೆಳ ಕ್ರಮಾಂಕದ ಬ್ಯಾಟರ್ಗಳು ಕಲೆಹಾಕಿರುವುದು ಕೇವಲ 65 ರನ್ಗಳು ಮಾತ್ರ. ಹೀಗಾಗಿಯೇ ದಿನೇಶ್ ಕಾರ್ತಿಕ್ ಬಾಲವಿಲ್ಲದ ಡಾಬರ್‌ಮ್ಯಾನ್ ನಾಯಿಗೆ ಟೀಮ್ ಇಂಡಿಯಾದ ಬ್ಯಾಟಿಂಗ್ ಲೈನಪ್ ಅನ್ನು ಹೋಲಿಸಿದ್ದಾರೆ.
ಇದನ್ನೂ ಓದಿ: ೧೪೮ ವರ್ಷಗಳ ಇತಿಹಾಸದಲ್ಲೇ ಟೀಮ್ ಇಂಡಿಯಾಗೆ ಹೀಗೊಂದು ಹೀನಾಯ ಸೋಲು
ಇದೀಗ ದಿನೇಶ್ ಕಾರ್ತಿಕ್ ಅವರ ಈ ವಿಮರ್ಶೆಗೆ ಪರ-ವಿರೋಧ ಪ್ರತಿಕ್ರಿಯೆಗಳು ವ್ಯಕ್ತವಾಗುತ್ತಿದೆ. ಕೆಲವರು ಡಿಕೆಯ ಹೋಲಿಕೆಗೆ ನಕ್ಕರೆ, ಇನ್ನೂ ಕೆಲವರು ಭಾರತೀಯ ಆಟಗಾರರನ್ನು ನಾಯಿಗೆ ಹೋಲಿಸಿದರ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶಗಳನ್ನು ವ್ಯಕ್ತಪಡಿಸಿದ್ದಾರೆ.
