Dinesh Karthik: ದಿನೇಶ್ ಕಾರ್ತಿಕ್ ಸಿಡಿಲಬ್ಬರ, ಆದರೂ ಸೋತ ತಮಿಳುನಾಡು
Dinesh Karthik: ಈ ಪಂದ್ಯದಲ್ಲಿ ಅರ್ಧಶತಕ ಬಾರಿಸುವುದರೊಂದಿಗೆ ದಿನೇಶ್ ಕಾರ್ತಿಕ್ ಲೀಸ್ಟ್ ಎ ಕ್ರಿಕೆಟ್ನಲ್ಲಿ 7500+ ರನ್ಗಳನ್ನು ಪೂರೈಸಿದರು. ಒಟ್ಟು 256 ಲೀಸ್ಟ್ ಎ ಪಂದ್ಯಗಳನ್ನಾಡಿರುವ ಡಿಕೆ 12 ಶತಕ ಹಾಗೂ 41 ಅರ್ಧಶತಕಗಳೊಂದಿಗೆ ಇದುವರೆಗೆ 7,569 ರನ್ ಕಲೆಹಾಕಿದ್ದಾರೆ.

ದೇಶೀಯ ಅಂಗಳದಲ್ಲಿ ನಡೆಯುತ್ತಿರುವ ವಿಜಯ್ ಹಜಾರೆ ಟೂರ್ನಿಯಲ್ಲಿ ತಮಿಳುನಾಡು ತಂಡದ ನಾಯಕ ದಿನೇಶ್ ಕಾರ್ತಿಕ್ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಈ ಭರ್ಜರಿ ಬ್ಯಾಟಿಂಗ್ ಹೊರತಾಗಿಯೂ ಈ ಪಂದ್ಯದಲ್ಲಿ ಪಂಜಾಬ್ ತಂಡ ಗೆದ್ದಿರುವುದು ವಿಶೇಷ. ಮುಂಬೈನ ಶರದ್ ಪವಾರ್ ಕ್ರಿಕೆಟ್ ಅಕಾಡೆಮಿ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ತಮಿಳುನಾಡು ಮೊದಲು ಬೌಲಿಂಗ್ ಆಯ್ಕೆ ಮಾಡಿಕೊಂಡಿತು.
ಅದರಂತೆ ಮೊದಲು ಬ್ಯಾಟ್ ಮಾಡಿದ ಪಂಜಾಬ್ ಪರ ಆರಂಭಿಕನಾಗಿ ಕಣಕ್ಕಿಳಿದ ವಿಕೆಟ್ ಕೀಪರ್ ಬ್ಯಾಟ್ಸ್ಮನ್ ಪ್ರಭ್ಸಿಮ್ರಾನ್ ಸಿಂಗ್ 39 ಎಸೆತಗಳಲ್ಲಿ 3 ಸಿಕ್ಸ್ ಹಾಗೂ 7 ಫೋರ್ಗಳೊಂದಿಗೆ 58 ರನ್ ಬಾರಿಸಿ ಮಿಂಚಿದರು. ಇನ್ನು ಮಧ್ಯಮ ಕ್ರಮಾಂಕದಲ್ಲಿ ನಾಯಕ ಮಂದೀಪ್ ಸಿಂಗ್ 88 ಎಸೆತಗಳಲ್ಲಿ 68 ರನ್ಗಳ ಕೊಡುಗೆ ನೀಡಿದರು.
ಆದರೆ ಪಂಜಾಬ್ ತಂಡ ಉಳಿದ ಬ್ಯಾಟರ್ಗಳು ತಮಿಳುನಾಡು ಬೌಲರ್ಗಳನ್ನು ಎದುರಿಸುವಲ್ಲಿ ತಡಕಾಡಿದರು. ಪರಿಣಾಮ 45.2 ಓವರ್ಗಳಲ್ಲಿ 251 ರನ್ಗಳಿಸಿ ಪಂಜಾಬ್ ತಂಡ ಆಲೌಟ್ ಆಯಿತು.
50 ಓವರ್ಗಳಲ್ಲಿ 252 ರನ್ಗಳ ಸುಲಭ ಗುರಿ ಪಡೆದ ತಮಿಳುನಾಡು ತಂಡವು ಉತ್ತಮ ಆರಂಭ ಪಡೆದಿರಲಿಲ್ಲ. ತಂಡದ ಮೊತ್ತ 40 ಆಗುವಷ್ಟರಲ್ಲಿ ಅಗ್ರ ಕ್ರಮಾಂಕದ 4 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು.
ಈ ಹಂತದಲ್ಲಿ ಕಣಕ್ಕಿಳಿದ ನಾಯಕ ದಿನೇಶ್ ಕಾರ್ತಿಕ್ ಅದ್ಭುತ ಬ್ಯಾಟಿಂಗ್ ಪ್ರದರ್ಶಿಸಿದರು. ಪಂಜಾಬ್ ಬೌಲರ್ಗಳನ್ನು ಮನಸೊ ಇಚ್ಛೆ ದಂಡಿಸಿದ ಡಿಕೆ 4 ಭರ್ಜರಿ ಸಿಕ್ಸ್ ಹಾಗೂ 13 ಫೋರ್ಗಳೊಂದಿಗೆ 82 ಎಸೆತಗಳಲ್ಲಿ 93 ರನ್ ಬಾರಿಸಿದರು. ಇತ್ತ ಶತಕದಂಚಿಗೆ ತಲುಪಿದ್ದ ಡಿಕೆಯನ್ನು ಸಿದ್ಧಾರ್ಥ್ ಕೌಲ್ ಕ್ಲೀನ್ ಬೌಲ್ಡ್ ಮಾಡಿದರು.
ದಿನೇಶ್ ಕಾರ್ತಿಕ್ ಔಟ್ ಆಗುತ್ತಿದ್ದಂತೆ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡ ತಮಿಳುನಾಡು ತಂಡ 34.2 ಓವರ್ಗಳಲ್ಲಿ 175 ರನ್ಗಳಿಸಿ ಆಲೌಟ್ ಆಯಿತು. ಪಂಜಾಬ್ ಪರ ಸಿದ್ಧಾರ್ಥ್ ಕೌಲ್ 9 ಓವರ್ಗಳಲ್ಲಿ 50 ರನ್ ನೀಡಿ 5 ವಿಕೆಟ್ ಕಬಳಿಸಿ ಮಿಂಚಿದರು. ಈ ಮೂಲಕ ಪಂಜಾಬ್ ತಂಡ 76 ರನ್ಗಳ ಭರ್ಜರಿ ಜಯ ಸಾಧಿಸಿತು.
ವಿಶೇಷ ಸಾಧನೆ ಮಾಡಿದ ಡಿಕೆ:
ಈ ಪಂದ್ಯದಲ್ಲಿ ಅರ್ಧಶತಕ ಬಾರಿಸುವುದರೊಂದಿಗೆ ದಿನೇಶ್ ಕಾರ್ತಿಕ್ ಲೀಸ್ಟ್ ಎ ಕ್ರಿಕೆಟ್ನಲ್ಲಿ 7500+ ರನ್ಗಳನ್ನು ಪೂರೈಸಿದರು. ಒಟ್ಟು 256 ಲೀಸ್ಟ್ ಎ ಪಂದ್ಯಗಳನ್ನಾಡಿರುವ ಡಿಕೆ 12 ಶತಕ ಹಾಗೂ 41 ಅರ್ಧಶತಕಗಳೊಂದಿಗೆ ಇದುವರೆಗೆ 7,569 ರನ್ ಕಲೆಹಾಕಿದ್ದಾರೆ.
ಪಂಜಾಬ್ ಪ್ಲೇಯಿಂಗ್ 11: ಪ್ರಭ್ಸಿಮ್ರಾನ್ ಸಿಂಗ್ (ವಿಕೆಟ್ ಕೀಪರ್) , ಅಭಿಷೇಕ್ ಶರ್ಮಾ , ಅನ್ಮೋಲ್ಪ್ರೀತ್ ಸಿಂಗ್ , ಮಂದೀಪ್ ಸಿಂಗ್ (ನಾಯಕ) , ನೆಹಾಲ್ ವಧೇರಾ , ಸನ್ವಿರ್ ಸಿಂಗ್ , ಪ್ರೀತ್ ದತ್ತಾ , ರಮಣದೀಪ್ ಸಿಂಗ್ , ಮಯಾಂಕ್ ಮಾರ್ಕಂಡೆ , ಸಿದ್ದಾರ್ಥ್ ಕೌಲ್ , ಬಲ್ತೇಜ್ ಸಿಂಗ್.
ಇದನ್ನೂ ಓದಿ: IPL 2024 Auction: 2 ಕೋಟಿ ರೂ. ಮೂಲ ಬೆಲೆ ಘೋಷಿಸಿದ 25 ಆಟಗಾರರು..!
ತಮಿಳುನಾಡು ಪ್ಲೇಯಿಂಗ್ 11: ಸಾಯಿ ಸುದರ್ಶನ್ , ಎನ್ ಜಗದೀಸನ್ , ಬಾಬಾ ಅಪರಾಜಿತ್ , ವಿಜಯ್ ಶಂಕರ್ , ಬಾಬಾ ಇಂದ್ರಜಿತ್ , ದಿನೇಶ್ ಕಾರ್ತಿಕ್ (ನಾಯಕ) , ಶಾರುಖ್ ಖಾನ್ , ಆರ್. ಸಾಯಿ ಕಿಶೋರ್ , ವರುಣ್ ಚಕ್ರವರ್ತಿ , ಸಂದೀಪ್ ವಾರಿಯರ್ , ಟಿ ನಟರಾಜನ್.