ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವಣ ಪ್ರತಿಷ್ಠಿತ ಆ್ಯಶಸ್ (Ashes) ಟೆಸ್ಟ್ ಸರಣಿ ಕುತೂಹಲ ಮೂಡಿಸಿದೆ. ಬರ್ಮಿಂಗ್ಹ್ಯಾಮ್ನ ಎಜ್ಬಾಸ್ಟನ್ನಲ್ಲಿ ನಡೆಯುತ್ತಿರುವ ಮೊದಲ ಟೆಸ್ಟ್ ಪಂದ್ಯದಲ್ಲಿ ಆಸೀಸ್ ಉಸ್ಮಾನ್ ಖ್ವಾಜಾ (Usman Khawaja) ಅವರ ಅಜೇಯ ಶತಕದ ನೆರವಿನಿಂದ 386 ರನ್ ಗಳಿಸಿತು. ಅಲ್ಪ ಮುನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್ ಶುರು ಮಾಡಿದ ಇಂಗ್ಲೆಂಡ್ಗೆ ಮಳೆ ಅಡ್ಡಿ ಪಡಿಸಿತು. ಮೂರನೇ ದಿನದಾಟ ಕೆಲಹೊತ್ತು ಮಾತ್ರ ನಡೆಯಿತು. ಇದರ ನಡುವೆ ಇಂಗ್ಲೆಂಡ್ ಆಲ್ರೌಂಡರ್ ಮೊಯಿನ್ ಅಲಿಗೆ (Moeen Ali) ಐಸಿಸಿ ದಂಡ ವಿಧಿಸಿದೆ.
ಈ ಟೆಸ್ಟ್ ಪಂದ್ಯದಲ್ಲಿ ಮೊಯಿನ್ ಅಲಿ ತಾವು ಬೌಲಿಂಗ್ ಮಾಡುವ ಬಲಗೈ ಬೆರಳುಗಳಿಗೆ ದ್ರಾವಣವೊಂದನ್ನು ಸಿಂಪಡಿಸಿಕೊಂಡಿದ್ದಾರೆ. ಇನಿಂಗ್ಸ್ನ 89ನೇ ಓವರ್ ನಡೆಯುತ್ತಿದ್ದ ಸಂದರ್ಭದಲ್ಲಿ ಬೌಂಡರಿಲೈನ್ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಅಲಿ ಈ ದ್ರಾವಣವನ್ನು ತಮ್ಮ ಕೈಬೆರಳುಗೆ ಸಿಂಪಡಿಸಿಕೊಂಡಿದ್ದು ಟಿವಿಯಲ್ಲಿ ಪ್ರಸಾರವಾಗಿತ್ತು. ಸಿಂಪಡಿಸಿಕೊಂಡ ನಂತರ ಅವರು ಬೌಲಿಂಗ್ ಮಾಡಿದರು. ಇದು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೀತಿ ಸಂಹಿತೆಯ ಲೆವೆಲ್ 1 ಅನ್ನು ಉಲ್ಲಂಘನೆಯಾಗಿದ್ದು, ಅಲಿ ಅವರಿಗೆ ಪಂದ್ಯ ಶುಲ್ಕದ ಶೇಕಡಾ 25 ರಷ್ಟು ದಂಡ ವಿಧಿಸಲಾಗಿದೆ.
ಪೂರ್ವಾನುಮತಿ ಇಲ್ಲದೇ ಈ ರೀತಿಯ ದ್ರಾವಣಗಳನ್ನು ಬಳಸುವಂತಿಲ್ಲ. ಮೊಯಿನ್ ಅಲಿ ಅವರ ಶಿಸ್ತಿನ ಅಂಶಕ್ಕೆ ಒಂದು ಡಿಮೆರಿಟ್ ಪಾಯಿಂಟ್ ಅನ್ನು ಸೇರಿಸಲಾಗಿದೆ, ಇದು 24 ತಿಂಗಳ ಅವಧಿಯಲ್ಲಿ ಅಲಿ ಮಾಡಿದ ಮೊದಲ ಅಪರಾಧ ಇದಾಗಿದೆ. ಅಲಿ ಅಪರಾಧವನ್ನು ಒಪ್ಪಿಕೊಂಡಿದ್ದು, ಎಮಿರೇಟ್ಸ್ ಐಸಿಸಿ ಎಲೈಟ್ ಪ್ಯಾನೆಲ್ ಆಫ್ ಮ್ಯಾಚ್ ರೆಫರಿ ಆಂಡಿ ಪೈಕ್ರಾಫ್ಟ್ ಪ್ರಸ್ತಾಪಿಸಿದ ದಂಡವನ್ನು ಅಲಿ ಒಪ್ಪಿಕೊಂಡಿದ್ದರಿಂದ ಔಪಚಾರಿಕ ವಿಚಾರಣೆಯ ನಡೆಸುವ ಅಗತ್ಯವಿಲ್ಲ ಎಂದು ಐಸಿಸಿ ತಿಳಿಸಿದೆ.
Cricket Records: ಕ್ರಿಕೆಟ್ ಇತಿಹಾಸದಲ್ಲೇ ಅತೀ ಹೆಚ್ಚು ಬಾರಿ ಶೂನ್ಯಕ್ಕೆ ಔಟಾಗಿದ್ದು ಯಾರು ಗೊತ್ತಾ?
ಅಲಿ ಅವರು ಸ್ಪ್ರೇ ಅನ್ನು ಚೆಂಡಿನ ಮೇಲೆ ಬಳಸಿಲ್ಲ, ಕೇವಲ ಕೈಗಳಿಗೆ ಹಾಕಿಕೊಂಡಿದ್ದಾರೆ. ಅವರು ಬಾಲ್ಗೆ ಸ್ಪ್ರೇ ಬಳಸಿದ್ದಲ್ಲಿ ಇದು ಐಸಿಸಿ ಆಟದ ಷರತ್ತುಗಳ ಅನ್ವಯ 41.3 ಅನ್ನು ಉಲ್ಲಂಘಿಸಿದಂತಾಗುತ್ತಿತ್ತು. ಪಂದ್ಯದ ಬಾಲ್ನ ಸ್ಥಿತಿ ಬದಲಾವಣೆಗೆ ಹೆಚ್ಚಿನ ದಂಡವನ್ನು ವಿಧಿಸಲಾಗುತ್ತದೆ. ಆದರೆ ಇಲ್ಲಿ ಅಲಿ ಕೇವಲ ಕೈಗಳಿಗೆ ಮಾತ್ರ ಸ್ಪ್ರೇ ಬಳಸಿದ್ದಾರೆ ಎಂಬುದನ್ನು ಅಂಪೈರ್ಗಳು ದೃಢಪಡಿಸಿದ್ದಾರೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಇಂಗ್ಲೆಂಡ್ ಅಚ್ಚರಿ ಎಂಬಂತೆ ಮೊದಲ ದಿನ ಮುಕ್ತಾಯ ಆಗುವ ಮುನ್ನವೇ 78 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 393 ರನ್ ಗಳಿಸಿದಾಗ ಡಿಕ್ಲೇರ್ ಘೋಷಿಸಿತು. ಜಾಕ್ ಕ್ರಾವ್ಲಿ (61) ಹಾಗೂ ಒಲಿ ಪೋಪ್ (31) 70 ರನ್ಗಳ ಜೊತೆಯಾಟ ಆಡಿದರು. ಜೋ ರೂಟ್ ಜೊತೆಗೂಡಿ ಹ್ಯಾರಿ ಬ್ರೂಕ್ (37 ಎಸೆತಗಳಲ್ಲಿ 32 ರನ್) ಭರ್ಜರಿ ಬ್ಯಾಟ್ ಬೀಸಿದರು. ಜಾನಿ ಬೇರ್ಸ್ಟೋವ್ (78 ಎಸೆತಗಳಲ್ಲಿ 78 ರನ್) ಮತ್ತು ಜೋ ರೂಟ್ 121 ರನ್ಗಳ ಜತೆಯಾಟ ನೀಡಿದರು. ರೂಟ್ 152 ಎಸೆತಗಳಲ್ಲಿ 7 ಫೋರ್, 4 ಸಿಕ್ಸರ್ನೊಂದಿಗೆ ಅಜೇಯ 118 ರನ್ ಚಚ್ಚಿದರು.
ತನ್ನ ಪ್ರಥಮ ಇನಿಂಗ್ಸ್ ಆರಂಭದಲ್ಲಿ ಆಸೀಸ್ ತೃತೀಯ ದಿನದಾಟದ ಆರಂಭದಲ್ಲಿ 386 ರನ್ಗಳಿಗೆ ಆಲೌಟ್ ಆಯಿತು. ತಂಡದ ಪರ ಉಸ್ಮಾನ್ ಖ್ವಾಜಾ 321 ಎಸೆತಗಳಲ್ಲಿ 141 ರನ್ ಗಳಿಸಿದರೆ, ಟ್ರೇವಿಸ್ ಹೆಡ್ (50), ಕ್ಯಾಮರೂನ್ ಗ್ರೀನ್ 38 ರನ್, ಅಲೆಕ್ಸ್ ಕ್ಯಾರಿ 66, ಪ್ಯಾಟ್ ಕಮಿನ್ಸ್ 38 ರನ್ಗಳ ಕೊಡುಗೆ ನೀಡಿದರು. ಬಳಿಕ ತನ್ನ ದ್ವಿತೀಯ ಇನ್ನಿಂಗ್ಸ್ ಆರಂಭಿಸಿದ ಇಂಗ್ಲೆಂಡ್ 28 ರನ್ಗೆ 2 ವಿಕೆಟ್ ಕಳೆದುಕೊಂಡಿದ್ದು 35 ರನ್ಗಳ ಮುನ್ನಡೆಯಲ್ಲಿದೆ. ಒಲಿ ಪೋಪ್ ಹಾಗೂ ಜೋ ರೂಟ್ ಖಾತೆ ತೆರೆಯದೆ ಕ್ರೀಸ್ನಲ್ಲಿದ್ದಾರೆ.
ಇನ್ನಷ್ಟು ಕ್ರೀಡಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ