ಟೀಮ್ ಇಂಡಿಯಾವನ್ನು ಹಿಂದಿಕ್ಕಿದ ಇಂಗ್ಲೆಂಡ್!

ಅಂತರರಾಷ್ಟ್ರೀಯ ಟಿ20 ಕ್ರಿಕೆಟ್ ರೇಟಿಂಗ್ಸ್‌ನಲ್ಲಿ ಸಣ್ಣ ಬದಲಾವಣೆಯಾಗಿದೆ. ಕಳೆದ ಕೆಲ ವರ್ಷಗಳಿಂದ ಜಾಗತಿಕ ಟಿ20 ಅಂಗಳದಲ್ಲಿ ಅಧಿಪತ್ಯ ಸ್ಥಾಪಿಸಿದ್ದ ಭಾರತ ತಂಡದ ನಂ.1 ಪಟ್ಟವನ್ನು ಇಂಗ್ಲೆಂಡ್ ತನ್ನದಾಗಿಸಿಕೊಂಡಿದೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲಿ ತೋರಿದ ಅಪ್ರತಿಮ ಪ್ರದರ್ಶನದ ಬಲದಿಂದ ಇಂಗ್ಲೆಂಡ್ ಅಧಿಕೃತವಾಗಿ ವಿಶ್ವದ ನಂ.1 ಟಿ20 ತಂಡವಾಗಿ ಹೊರಹೊಮ್ಮಿದೆ. 

ಟೀಮ್ ಇಂಡಿಯಾವನ್ನು ಹಿಂದಿಕ್ಕಿದ ಇಂಗ್ಲೆಂಡ್!
ಇಂಗ್ಲೆಂಡ್ ತಂಡ
Image Credit source: ECB

Updated on: Sep 20, 2026 | 7:55 AM

ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಪ್ರಕಟಿಸಿರುವ ಟಿ20 ತಂಡಗಳ ನೂತನ ಶ್ರೇಯಾಂಕದಲ್ಲಿ ಇಂಗ್ಲೆಂಡ್ ತಂಡವು ಅಗ್ರಸ್ಥಾನವನ್ನು ಅಲಂಕರಿಸಿದೆ. ಅದು ಕೂಡ ಕಳೆದ ಕೆಲ ವರ್ಷಗಳಿಂದ ಮೊದಲ ಸ್ಥಾನದಲ್ಲಿದ್ದ ಟೀಮ್ ಇಂಡಿಯಾವನ್ನು ಹಿಂದಿಕ್ಕುವ ಮೂಲಕ ಎಂಬುದು ವಿಶೇಷ.

ಕ್ಲೀನ್ ಸ್ವೀಪ್​ನೊಂದಿಗೆ ಅಗ್ರಸ್ಥಾನ:

ಶ್ರೀಲಂಕಾ ವಿರುದ್ಧ ನಡೆದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ ಇಂಗ್ಲೆಂಡ್ ಅದ್ಭುತ ಪ್ರದರ್ಶನ ನೀಡಿತು. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್‌ನಲ್ಲಿ ನಡೆದ ಅಂತಿಮ ಪಂದ್ಯದಲ್ಲಿ ಕೇವಲ 9.4 ಓವರ್‌ಗಳಲ್ಲಿ 8 ವಿಕೆಟ್‌ಗಳ ಭರ್ಜರಿ ಜಯ ಸಾಧಿಸುವ ಮೂಲಕ ಸರಣಿಯನ್ನು 3-0 ಅಂತರದಿಂದ ಕ್ಲೀನ್ ಸ್ವೀಪ್ ಮಾಡಿಕೊಂಡಿತು. ಈ ಅಮೋಘ ಗೆಲುವಿನ ಬೆನ್ನಲ್ಲೇ ಇಂಗ್ಲೆಂಡ್ ಶ್ರೇಯಾಂಕ ಪಟ್ಟಿಯಲ್ಲಿ ಅಗ್ರಸ್ಥಾನ ಅಲಂಕರಿಸಿದೆ.

ಭಾರತಕ್ಕೆ ಹಿನ್ನಡೆಯಾಗಿದ್ದೆಲ್ಲಿ?

ಐಸಿಸಿ ಬಿಡುಗಡೆ ಮಾಡಿರುವ ನೂತನ ಪಟ್ಟಿಯಲ್ಲಿ ಇಂಗ್ಲೆಂಡ್ ಮತ್ತು ಭಾರತ ಎರಡೂ ತಂಡಗಳು ಸಮಾನವಾಗಿ 269 ರೇಟಿಂಗ್ ಪಾಯಿಂಟ್‌ಗಳನ್ನು ಹೊಂದಿವೆ. ಆದಾಗ್ಯೂ, ಇಂಗ್ಲೆಂಡ್ ಕೇವಲ 41 ಪಂದ್ಯಗಳಿಂದ ಈ ರೇಟಿಂಗ್ ಗಳಿಸಿದ್ದರೆ, ಭಾರತ 64 ಪಂದ್ಯಗಳನ್ನು ಆಡಿದೆ. ಕಡಿಮೆ ಪಂದ್ಯಗಳಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಧಾರದ ಮೇಲೆ ಇಂಗ್ಲೆಂಡ್‌ಗೆ ನಂ.1 ಪಟ್ಟ ಒಲಿದಿದೆ. ಆಸ್ಟ್ರೇಲಿಯಾ (260 ರೇಟಿಂಗ್) ಮೂರನೇ ಸ್ಥಾನದಲ್ಲಿದ್ದರೆ, ನ್ಯೂಝಿಲೆಂಡ್ ಮತ್ತು ಸೌತ್ ಆಫ್ರಿಕಾ ನಂತರದ ಸ್ಥಾನಗಳಲ್ಲಿವೆ.

ಟಿ20 ತಂಡಗಳ ಶ್ರೇಯಾಂಕ ಪಟ್ಟಿ ಇಲ್ಲಿದೆ:

ಶ್ರೇಯಾಂಕ ತಂಡ ರೇಟಿಂಗ್ 
1 ಇಂಗ್ಲೆಂಡ್ 269
2 ಭಾರತ 269
3 ಆಸ್ಟ್ರೇಲಿಯಾ 260
4 ನ್ಯೂಝಿಲೆಂಡ್ 247
5 ಸೌತ್ ಆಫ್ರಿಕಾ 243
6 ವೆಸ್ಟ್ ಇಂಡೀಸ್ 241
7 ಪಾಕಿಸ್ತಾನ್ 238
8 ಶ್ರೀಲಂಕಾ 226
9 ಬಾಂಗ್ಲಾದೇಶ್ 221
10 ಆಫ್ಘಾನಿಸ್ತಾನ್ 218

ಬ್ರೂಕ್ ನಾಯಕತ್ವದ ಮ್ಯಾಜಿಕ್:

ಯುವ ನಾಯಕ ಹ್ಯಾರಿ ಬ್ರೂಕ್ ಸಾರಥ್ಯದಲ್ಲಿ ಇಂಗ್ಲೆಂಡ್ ತಂಡವು ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಬ್ರೂಕ್ ನಾಯಕತ್ವ ವಹಿಸಿಕೊಂಡ ನಂತರ ಇಂಗ್ಲೆಂಡ್ ಆಡಿದ 26 ಪಂದ್ಯಗಳ ಪೈಕಿ 23 ರಲ್ಲಿ ಜಯಭೇರಿ ಬಾರಿಸಿದೆ. ಸದ್ಯ ಸತತ 7 ಪಂದ್ಯಗಳ ಗೆಲುವಿನ ನಗೆ ಬೀರಿದ್ದಾರೆ. ಕಳೆದ ಎರಡು ತಿಂಗಳುಗಳಿಂದ ಭಾರತ ಮತ್ತು ಇಂಗ್ಲೆಂಡ್ ನಡುವೆ ನಂ.1 ಸ್ಥಾನಕ್ಕಾಗಿ ತೀವ್ರ ಪೈಪೋಟಿ ನಡೆದಿತ್ತು. ಇದೀಗ ಶ್ರೀಲಂಕಾ ವಿರುದ್ಧದ ಸರಣಿ ಜಯದೊಂದಿಗೆ ಇಂಗ್ಲೆಂಡ್‌ ಅಗ್ರಸ್ಥಾನಕ್ಕೇರಿದೆ.

ಇದನ್ನೂ ಓದಿ: ಭಾರತದ ವಿರುದ್ಧದ ಸರಣಿಗೆ ಬಲಿಷ್ಠ ವೆಸ್ಟ್ ಇಂಡೀಸ್ ತಂಡ ಪ್ರಕಟ

ಒಟ್ಟಾರೆಯಾಗಿ, ಬಲಿಷ್ಠ ಬ್ಯಾಟಿಂಗ್ ಮತ್ತು ಮಾರಕ ಬೌಲಿಂಗ್ ದಾಳಿಯ ಬಲದೊಂದಿಗೆ ಮುನ್ನುಗ್ಗುತ್ತಿರುವ ಇಂಗ್ಲೆಂಡ್, ವಿಶ್ವ ವೇದಿಕೆಯಲ್ಲಿ ಟಿ20 ಕ್ರಿಕೆಟ್‌ನ ಹೊಸ ಸಾಮ್ರಾಟನಾಗಿ ಮೆರೆಯುತ್ತಿದೆ. ಇದರ ಜೊತೆಗೆ, ಇತ್ತ ಟೀಮ್ ಇಂಡಿಯಾ ಕೂಡ ಟಿ20 ಕ್ರಿಕೆಟ್‌ನಲ್ಲಿ ತನ್ನ ಪ್ರಾಬಲ್ಯವನ್ನು ಮುಂದುವರಿಸಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಉಭಯ ತಂಡಗಳ ನಡುವೆ ಅಗ್ರಸ್ಥಾನಕ್ಕಾಗಿ ತೀವ್ರ ಪೈಪೋಟಿ ಏರ್ಪಡುವುದನ್ನು ನಿರೀಕ್ಷಿಸಬಹುದು.

 

Published On - 7:53 am, Sun, 20 September 26

Loading...
Unable to load recommendations.
Follow Us