ENG vs NZ: ಅತ್ತ ಮೈದಾನದಲ್ಲಿ ಆಕ್ರಮಣಕಾರಿ ಆಟ: ಇತ್ತ ಪ್ರೇಕ್ಷಕರ ನಡುವೆ ಹೊಡೆದಾಟ..!

England-New Zealand 3rd Test: ಮೂರನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ಅನ್ನು 7 ವಿಕೆಟ್​ಗಳಿಂದ ಸೋಲಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಬೈರ್‌ಸ್ಟೋ ಎರಡನೇ ಇನ್ನಿಂಗ್ಸ್‌ನಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು.

ENG vs NZ: ಅತ್ತ ಮೈದಾನದಲ್ಲಿ ಆಕ್ರಮಣಕಾರಿ ಆಟ: ಇತ್ತ ಪ್ರೇಕ್ಷಕರ ನಡುವೆ ಹೊಡೆದಾಟ..!
ಹೊಡೆದಾಟದ ದೃಶ್ಯ
Follow us
TV9 Web
| Updated By: ಝಾಹಿರ್ ಯೂಸುಫ್

Updated on:Jun 28, 2022 | 6:26 PM

ಇಂಗ್ಲೆಂಡ್ ಮತ್ತು ನ್ಯೂಜಿಲೆಂಡ್ (England vs New zealand) ನಡುವಣ 3 ಪಂದ್ಯಗಳ ಟೆಸ್ಟ್​ ಸರಣಿಯು ಮುಕ್ತಾಯಗೊಂಡಿದೆ. ಈ ಸರಣಿಯನ್ನು ಇಂಗ್ಲೆಂಡ್ 3-0 ಅಂತರದಲ್ಲಿ ಏಕಪಕ್ಷೀಯವಾಗಿ ಗೆದ್ದುಕೊಂಡಿತು. ವಿಶೇಷ ಎಂದರೆ ಇಂಗ್ಲೆಂಡ್ ತಂಡವು ಈ ಸರಣಿಯುದ್ದಕ್ಕೂ ಆಕ್ರಮಣಕಾರಿ ಕ್ರಿಕೆಟ್ ಪ್ರದರ್ಶಿಸಿತ್ತು. ಇತ್ತ ಆಂಗ್ಲರ ಅಬ್ಬರದ ಮುಂದೆ ಕಿವೀಸ್ ಆಟಗಾರರು ಮಂಕಾಗಿದ್ದರು. ಇನ್ನು ಲೀಡ್ಸ್​ನಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಇಂಗ್ಲೆಂಡ್ ಆಟಗಾರರು ಮೈದಾನದಲ್ಲಿ ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸುತ್ತಿದ್ದರೆ, ಇತ್ತ ಗ್ಯಾಲರಿಯಲ್ಲಿ ಪ್ರೇಕ್ಷಕರ ನಡುವೆ ಕೂಡ ಕಾದಾಟ ಏರ್ಪಟ್ಟಿತ್ತು. ಪಂದ್ಯದ ನಾಲ್ಕನೇ ದಿನದಾಟದ ವೇಳೆ ಹೆಡಿಂಗ್ಲಿ ವೆಸ್ಟರ್ನ್ ಟೆರೇಸ್ ಸ್ಟ್ಯಾಂಡ್‌ನಲ್ಲಿ ಇಬ್ಬರು ಕ್ರಿಕೆಟ್ ಪ್ರೇಮಿಗಳು ಕಾದಾಟಕ್ಕೆ ಇಳಿದಿದ್ದರು. ಮೇಲ್ನೋಟಕ್ಕೆ ಇಬ್ಬರು ಇಂಗ್ಲೆಂಡ್-ನ್ಯೂಜಿಲೆಂಡ್ ತಂಡಗಳ ಅಭಿಮಾನಿಗಳಾಗಿದ್ದು, ಮಾತಿಗೆ ಮಾತು ಬೆಳೆದು ಕೈ ಮಿಲಾಯಿಸಿದ್ದರು ಎಂದು ಹೇಳಲಾಗಿದೆ.

ಇಬ್ಬರೂ ಪರಸ್ಪರ ಹೊಡೆದಾಡಿಕೊಳ್ಳುತ್ತಿದ್ದರೆ, ಜಗಳವು ಇತರರಿಗೆ ತುಂಬಾ ಹಾಸ್ಯಾಸ್ಪದವಾಗಿ ಕಂಡುಬಂತು. ಈ ವೇಳೆ ಕೆಲವರು ಮಧ್ಯ ಪ್ರವೇಶಿಸಲು ಬಯಸಿದರೂ ಇಬ್ಬರ ಕೋಪವನ್ನು ತಣ್ಣಗಾಗಿಸಲು ಸಾದ್ಯವಾಗಿರಲಿಲ್ಲ.  ಆ ಬಳಿಕ ಪೊಲೀಸರು ಆಗಮಿಸಿ ಇಬ್ಬರನ್ನು ಸ್ಟ್ಯಾಂಡ್‌ನಿಂದ ಹೊರಕ್ಕೆ ಕರೆದುಕೊಂಡು ಹೋದರು. ವಿಶೇಷ ಎಂದರೆ ಈ ಹೊಡೆದಾಟದಲ್ಲಿದ್ದ ವ್ಯಕ್ತಿಯು ಗ್ಯಾಸ್ಕೊಯ್ನ್ ಜೆರ್ಸಿಯನ್ನು ಧರಿಸಿದ್ದರು. ಪಾಲ್ ಗ್ಯಾಸ್ಕೊಯ್ನ್ ಇಂಗ್ಲೆಂಡ್​ನ ಖ್ಯಾತ ಮಾಜಿ ಫುಟ್​ಬಾಲ್ ಆಟಗಾರ. ಇದೇ ಕಾರಣದಿಂದಾಗಿ ಇದೀಗ ಈ ಜಗಳದ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.

ಇನ್ನು ಮೂರನೇ ಟೆಸ್ಟ್‌ ಪಂದ್ಯದಲ್ಲಿ ಇಂಗ್ಲೆಂಡ್ ತಂಡವು ನ್ಯೂಜಿಲೆಂಡ್ ಅನ್ನು 7 ವಿಕೆಟ್​ಗಳಿಂದ ಸೋಲಿಸಿದೆ. ಮೊದಲ ಇನ್ನಿಂಗ್ಸ್‌ನಲ್ಲಿ ಶತಕ ಸಿಡಿಸಿದ್ದ ಬೈರ್‌ಸ್ಟೋ ಎರಡನೇ ಇನ್ನಿಂಗ್ಸ್‌ನಲ್ಲಿ ಬಿರುಸಿನ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲ ಇನಿಂಗ್ಸ್‌ನಲ್ಲಿ ಬೈರ್‌ಸ್ಟೋ 157 ಎಸೆತಗಳಲ್ಲಿ 162 ರನ್ ಗಳಿಸಿದರೆ, ಎರಡನೇ ಇನಿಂಗ್ಸ್‌ನಲ್ಲಿ 161 ಸ್ಟ್ರೈಕ್ ರೇಟ್‌ನಲ್ಲಿ ಕೇವಲ 44 ಎಸೆತಗಳಲ್ಲಿ 71 ರನ್ ಬಾರಿಸಿದರು. ಈ ಮೂಲಕ ನ್ಯೂಜಿಲೆಂಡ್ ನೀಡಿದ 295 ರನ್​ಗಳ ಟಾರ್ಗೆಟ್​ ಅನ್ನು ಚೇಸ್ ಮಾಡಿ ಭರ್ಜರಿ ಜಯ ಸಾಧಿಸಿತು.

ಇದೀಗ ಗೆಲುವಿನ ಅಲೆಯಲ್ಲಿರುವ ಇಂಗ್ಲೆಂಡ್ ತಂಡವು ಟೀಮ್ ಇಂಡಿಯಾ ವಿರುದ್ದ ಟೆಸ್ಟ್ ಪಂದ್ಯವಾಡಲು ಸಜ್ಜಾಗುತ್ತಿದೆ. ಭಾರತ-ಇಂಗ್ಲೆಂಡ್ ನಡುವಣ ಟೆಸ್ಟ್ ಪಂದ್ಯವು ಜುಲೈ 1 ರಿಂದ ಬರ್ಮಿಂಗ್‌ಹ್ಯಾಮ್‌ನಲ್ಲಿ ಶುರುವಾಗಲಿದೆ. ಈ ಪಂದ್ಯದಲ್ಲಿ ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ ಆಡುವುದು ಅನುಮಾನ ಎನ್ನಲಾಗಿದೆ. ಏಕೆಂದರೆ ಹಿಟ್​ಮ್ಯಾನ್ ಕೊರೋನಾ ಸೋಂಕಿಗೆ ಒಳಗಾಗಿದ್ದು, ಜೂನ್ 30 ರೊಳಗೆ ಕೊರೋನಾ ಟೆಸ್ಟ್ ನೆಗೆಟಿವ್ ಬಂದರೆ ಮಾತ್ರ ಕಣಕ್ಕಿಳಿಯಬಹುದು. ಒಂದು ವೇಳೆ ರೋಹಿತ್ ಶರ್ಮಾ ಅಲಭ್ಯರಾದರೆ ತಂಡವನ್ನು ಉಪನಾಯಕ ಜಸ್​ಪ್ರೀತ್ ಬುಮ್ರಾ ಮುನ್ನಡೆಸುವ ಸಾಧ್ಯತೆಯಿದೆ.

Published On - 6:25 pm, Tue, 28 June 22