Eoin Morgan Retires: ಟಿ20 ವಿಶ್ವಕಪ್ವರೆಗೂ ಆಡಲು ಬಯಸಿದ್ದ ಮಾರ್ಗನ್ ತುರ್ತಾಗಿ ನಿವೃತ್ತಿ ಘೋಷಿಸಲು ಕಾರಣವೇನು?
Eoin Morgan Retires: 35ರ ಹರೆಯದ ಮಾರ್ಗನ್ ಈ ವರ್ಷದ ಟಿ20 ವಿಶ್ವಕಪ್ವರೆಗೆ ಇಂಗ್ಲೆಂಡ್ ತಂಡದ ನಾಯಕನಾಗಿ ಉಳಿಯಲು ಬಯಸಿದ್ದರು. ಆದರೆ, ಕಳೆದ 18 ತಿಂಗಳಿಂದ ಮಾರ್ಗನ್ ಅದೃಷ್ಟ ಸರಿಯಾಗಿ ಕೈಕೊಟ್ಟಿತ್ತು, ಇದರಿಂದಾಗಿ ಅವರು ತಮ್ಮ ಮನಸ್ಸನ್ನು ಬದಲಾಯಿಸಬೇಕಾಯಿತು.
ಬರ್ಮಿಂಗ್ ಹ್ಯಾಮ್ ಟೆಸ್ಟ್ (Birmingham Test)ನಲ್ಲಿ ಭಾರತ ವಿರುದ್ಧದ ಪಂದ್ಯಕ್ಕೂ ಮುನ್ನ ಇಂಗ್ಲೆಂಡ್ ಕ್ರಿಕೆಟ್‌ನಲ್ಲಿ ಭಾರಿ ಭೂಕಂಪ ಸಂಭವಿಸಿದೆ. ಇಂಗ್ಲೆಂಡ್ ಕ್ರಿಕೆಟ್‌ನ ಅತ್ಯಂತ ಯಶಸ್ವಿ ನಾಯಕ ಇಯಾನ್ ಮಾರ್ಗನ್ (Eoin Morgan) ಅಂತರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಹೇಳಿದ್ದಾರೆ. 35ರ ಹರೆಯದ ಮಾರ್ಗನ್ ಈ ವರ್ಷದ ಟಿ20 ವಿಶ್ವಕಪ್ (T20 World Cup)ವರೆಗೆ ಇಂಗ್ಲೆಂಡ್ ತಂಡದ ನಾಯಕನಾಗಿ ಉಳಿಯಲು ಬಯಸಿದ್ದರು. ಆದರೆ, ಕಳೆದ 18 ತಿಂಗಳಿಂದ ಮಾರ್ಗನ್ ಅದೃಷ್ಟ ಸರಿಯಾಗಿ ಕೈಕೊಟ್ಟಿತ್ತು, ಇದರಿಂದಾಗಿ ಅವರು ತಮ್ಮ ಮನಸ್ಸನ್ನು ಬದಲಾಯಿಸಬೇಕಾಯಿತು. ಇಂಗ್ಲೆಂಡ್ ಪರ ಕೊನೆಯ ಬಾರಿಗೆ, ನೆದರ್‌ಲ್ಯಾಂಡ್‌ನಲ್ಲಿ ನಡೆದ ODI ಸರಣಿಯಲ್ಲಿ ಮಾರ್ಗನ್ ನಾಯಕತ್ವ ವಹಿಸಿದ್ದರು. ಈ ಸರಣಿಯಲ್ಲಿ ಇಂಗ್ಲೆಂಡ್ ಕ್ಲೀನ್ ಸ್ವೀಪ್ ಮಾಡಿತ್ತಾದರೂ ಮಾರ್ಗನ್ ಅವರ ಸ್ವಂತ ಪ್ರದರ್ಶನವು ನಿರಾಶಾದಾಯಕವಾಗಿತ್ತು. ಮೊದಲೆರಡು ODIಗಳಲ್ಲಿ ವಿಫಲರಾದ ಅವರು ಮೂರನೇ ಮತ್ತು ಕೊನೆಯ ಪಂದ್ಯದಲ್ಲಿ ಗಾಯದ ಕಾರಣದಿಂದ ಹೊರಗುಳಿದಿದ್ದರು.
ಈ ಎರಡು ಕಾರಣಗಳಿಗಾಗಿ ನಿವೃತ್ತಿ ಘೋಷಣೆ
ಇಯಾನ್ ಮಾರ್ಗನ್ ಅವರು 28 ಜೂನ್ 2022 ರಂದು ನಿವೃತ್ತಿ ಘೋಷಿಸಿದ್ದರೂ ಸಹ, ಅವರು ತೆಗೆದುಕೊಂಡ ಈ ಹೆಜ್ಜೆಯ ಬಗ್ಗೆ ಇಂಗ್ಲಿಷ್ ಮಾಧ್ಯಮಗಳು ಒಂದು ದಿನ ಮುಂಚಿತವಾಗಿ ಈ ಮಾಹಿತಿಯನ್ನು ಬಹಿರಂಗಗೊಳಿಸಿದ್ದವು. ಮಾರ್ಗನ್ ಮಂಗಳವಾರ ನಿವೃತ್ತಿ ಘೋಷಿಸಲಿದ್ದಾರೆ ಎಂದು ಮಾಧ್ಯಮ ವರದಿಯಲ್ಲಿ ಹೇಳಲಾಗಿತ್ತು. ಆಂಗ್ಲ ಮಾಧ್ಯಮದ ಆ ಹೇಳಿಕೆಗಳಿಗೆ ಈಗ ಅಧಿಕೃತ ಮುದ್ರೆ ಬಿದ್ದಿದೆ. ಮಾರ್ಗನ್ ದೀರ್ಘಕಾಲದಿಂದ ಉತ್ತಮ ಪ್ರದರ್ಶನ ನೀಡಲು ವಿಫಲರಾಗಿದ್ದರು. ಹೆಚ್ಚಿನ ಮಟ್ಟಿಗೆ, 2019 ರ ವಿಶ್ವಕಪ್‌ನಿಂದ, ಅವರ ಬ್ಯಾಟ್ ತನ್ನ ಶಕ್ತಿಯನ್ನು ಕಳೆದುಕೊಂಡಿತ್ತು ಎಂದು ಹೇಳಬಹುದು. ಕಳೆದ ವರ್ಷ T20 ವಿಶ್ವಕಪ್‌ನಲ್ಲಿ ಅವರು ಯಾವುದೇ ದೊಡ್ಡ ಇನ್ನಿಂಗ್ಸ್‌ಗಳನ್ನು ಆಡಲು ಸಾಧ್ಯವಾಗಲಿಲ್ಲ. ಆದರೆ ಅವರ ಹೋರಾಟವು ವಿಭಿನ್ನ T20 ಸರಣಿಗಳಲ್ಲಿಯೂ ಸ್ಪಷ್ಟವಾಗಿತ್ತು. ಇದಲ್ಲದೇ, ಇತ್ತೀಚಿನ ದಿನಗಳಲ್ಲಿ ಫಿಟ್ನೆಸ್ ಸಮಸ್ಯೆಯಿಂದಾಗಿ, ಅವರು ಕೆಲವು ಪಂದ್ಯಗಳಿಂದ ಹೊರಗುಳಿಯಬೇಕಾಯಿತು. ಇದರಿಂದಾಗಿ ಅವರ ವೃತ್ತಿಜೀವನದ ಮೇಲೆ ಪ್ರಶ್ನೆಗಳು ಉದ್ಭವಿಸಿದವು.
"I'm hugely proud of what I have achieved, but what I will cherish and remember most are the memories I made with some of the greatest people I know."#ThankYouMorgs ?
— England Cricket (@englandcricket) June 28, 2022
ಮಾರ್ಗನ್ ನಿವೃತ್ತಿ.. ಬಟ್ಲರ್ಗೆ ನಾಯಕತ್ವ?
ಕಳಪೆ ಫಾರ್ಮ್ ಮತ್ತು ಫಿಟ್‌ನೆಸ್‌ನಿಂದಾಗಿ ಇಯಾನ್ ಮಾರ್ಗನ್ ಅಂತರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತರಾದ ನಂತರ ಜೋಸ್ ಬಟ್ಲರ್ ಈಗ ODI ಮತ್ತು T20 ಗಳಲ್ಲಿ ಇಂಗ್ಲೆಂಡ್ ಕ್ರಿಕೆಟ್‌ನ ಜವಾಬ್ದಾರಿಯನ್ನು ನಿಭಾಯಿಸಬಹುದು ಎಂಬ ವದಂತಿಗಳು ಕೇಳಿಬರುತ್ತಿವೆ. ಮಾರ್ಗನ್ ನೇತೃತ್ವದ ತಂಡಕ್ಕೆ ಬಟ್ಲರ್ ಉಪನಾಯಕರಾಗಿದ್ದರು. ಆದರೆ ಈಗ ಅವರು ತಂಡದ ಹೊಸ ನಾಯಕರಾಗಿ ಆಯ್ಕೆಯಾಗುವ ನಿರೀಕ್ಷೆಗಳಿವೆ. ಇದೇನಾದರೂ ನಿಜವಾದರೆ ಬಟ್ಲರ್ ನಾಯಕನಾಗಿ ಅವರ ಮೊದಲ ಪ್ರಮುಖ ಸವಾಲು ಜುಲೈ 7 ರಿಂದ ಪ್ರಾರಂಭವಾಗಲಿದೆ. ಬಟ್ಲರ್ ಟೀಮ್ ಇಂಡಿಯಾ ವಿರುದ್ಧದ ಏಕದಿನ ಮತ್ತು T20 ಸರಣಿಯಲ್ಲಿ ನಾಯಕನಾಗಿ ಕಣಕ್ಕಿಳಿಯಬಹುದು. ಬಟ್ಲರ್ ಇದಕ್ಕೂ ಮೊದಲು 13 ಪಂದ್ಯಗಳಲ್ಲಿ ನಾಯಕತ್ವದ ಅನುಭವವನ್ನು ಹೊಂದಿದ್ದಾರೆ.
ಕುಕ್ನಿಂದ ನಾಯಕತ್ವ ಪಡೆದಿದ್ದ ಮಾರ್ಗನ್
ಐರ್ಲೆಂಡ್‌ನ ಡಬ್ಲಿನ್‌ನಲ್ಲಿ ಜನಿಸಿದ ಇಯಾನ್ ಮಾರ್ಗನ್ 2015 ರ ವಿಶ್ವಕಪ್‌ಗೆ ಮೊದಲು ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್‌ನ ಜವಾಬ್ದಾರಿಯನ್ನು ವಹಿಸಿಕೊಂಡರು. ಅವರು ಅಲಿಸ್ಟರ್ ಕುಕ್ ಅವರಿಂದ ಈ ಜವಾಬ್ದಾರಿಯನ್ನು ಪಡೆದಿದ್ದರು. 2015 ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್‌ನ ಪ್ರದರ್ಶನ ಕಳಪೆಯಾಗಿತ್ತು, ಆದರೆ ಅದರ ನಂತರ ಮಾರ್ಗನ್ ಇಂಗ್ಲೆಂಡ್‌ನ ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಕ್ರಾಂತಿಯನ್ನುಂಟುಮಾಡಲು ಶ್ರಮಿಸಿದರು. ತಂಡದೊಳಗೆ ನಿರ್ಭೀತಿಯಿಂದ ಆಡುವ ಉತ್ಸಾಹ ತುಂಬಿದರು. ODI ಮತ್ತು T20 ಮಾದರಿಯಲ್ಲಿ ತಂಡವನ್ನು ಅಗ್ರ ಶ್ರೇಯಾಂಕಕ್ಕೆ ಮುನ್ನಡೆಸಿದರು. ತದನಂತರ 2019 ರಲ್ಲಿ, ಮಾರ್ಗನ್ ಅವರ ನಾಯಕತ್ವದಲ್ಲಿ, ಇಂಗ್ಲೆಂಡ್ ಯಾವಾಗಲೂ ಕಾಯುತ್ತಿದ್ದ ಕ್ಷಣ ಬಂದಿತು. ಮಾರ್ಗನ್ ನಾಯಕತ್ವದಲ್ಲಿ ಆಂಗ್ಲ ತಂಡ 2019 ರ ODI ವಿಶ್ವಕಪ್‌ನ ಚಾಂಪಿಯನ್ ಆಗಿ ಹೊರಹೊಮ್ಮಿತ್ತು.
ಮಾರ್ಗನ್ ವೃತ್ತಿಜೀವನ
ಮಾರ್ಗ 2006 ರಲ್ಲಿ ಐರ್ಲೆಂಡ್ ಪರ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದರು. 2009 ರಲ್ಲಿ ಅವರು ಇಂಗ್ಲೆಂಡ್ ತಂಡದ ಕಡ್ಡಾಯ ಸದಸ್ಯರಾದರು. ಅವರು ತಮ್ಮ ವೃತ್ತಿಜೀವನದಲ್ಲಿ 248 ODIಗಳನ್ನು ಆಡಿದ್ದಾರೆ, ಇದರಲ್ಲಿ ಅವರು 14 ಶತಕಗಳೊಂದಿಗೆ 7701 ರನ್ ಗಳಿಸಿದ್ದಾರೆ. ಅದೇ ಸಮಯದಲ್ಲಿ, 115 T20I ಪಂದ್ಯಗಳಲ್ಲಿ, ಅವರು 14 ಅರ್ಧಶತಕಗಳೊಂದಿಗೆ 2458 ರನ್ ಗಳಿಸಿದ್ದಾರೆ. ಮಾರ್ಗನ್ ಮೇ 2010 ಮತ್ತು 2012 ರ ನಡುವೆ 16 ಟೆಸ್ಟ್ ಪಂದ್ಯಗಳನ್ನು ಆಡಿದ್ದು, ಅದರಲ್ಲಿ ಅವರು 2 ಶತಕಗಳನ್ನು ಬಾರಿಸಿದ್ದಾರೆ.
Published On - 7:22 pm, Tue, 28 June 22