IND vs IRE: ಐರಿಶ್ ಬೌಲರ್‌ಗಳು ಸುಸ್ತೋ ಸುಸ್ತು; ಟಿ20 ಕ್ರಿಕೆಟ್‌ನಲ್ಲಿ ಚೊಚ್ಚಲ ಶತಕ ಸಿಡಿಸಿದ ದೀಪಕ್ ಹೂಡಾ..!
IND vs IRE: ಐರ್ಲೆಂಡ್ ವಿರುದ್ಧದ ಎರಡನೇ ಟಿ20 ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟ್ಸ್‌ಮನ್ ದೀಪಕ್ ಹೂಡಾ ಭರ್ಜರಿ ಶತಕ ಸಿಡಿಸಿದ್ದಾರೆ.
ಐರ್ಲೆಂಡ್ ವಿರುದ್ಧದ ಎರಡನೇ ಟಿ20 (T20 against Ireland) ಪಂದ್ಯದಲ್ಲಿ ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟ್ಸ್‌ಮನ್ ದೀಪಕ್ ಹೂಡಾ (Deepak Hooda) ಭರ್ಜರಿ ಶತಕ ಸಿಡಿಸಿದ್ದಾರೆ. ಡಬ್ಲಿನ್‌ನಲ್ಲಿ ಮಂಗಳವಾರ ಜೂನ್ 28 ರಂದು ನಡೆದ ಎರಡನೇ ಪಂದ್ಯದಲ್ಲಿ, ಹೂಡಾ ಭಾರತ ತಂಡದ ಪರ ಅದ್ಭುತ ಇನ್ನಿಂಗ್ಸ್ ಆಡಿ ಐರ್ಲೆಂಡ್ ಬೌಲರ್‌ಗಳ ಹೆಡೆಮುರಿ ಕಟ್ಟುವುದರೊಂದಿಗೆ ಭರ್ಜರಿ ಶತಕ ಬಾರಿಸಿದರು. ತಮ್ಮ T20 ವೃತ್ತಿಜೀವನದ ಕೇವಲ ಐದನೇ ಪಂದ್ಯವನ್ನು ಆಡುತ್ತಿರುವ ಹೂಡಾ, ಕೇವಲ 55 ಎಸೆತಗಳಲ್ಲಿ ತಮ್ಮ ಶತಕವನ್ನು ಪೂರೈಸಿದರು. ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಶತಕ ಸಿಡಿಸಿದ ಭಾರತದ ನಾಲ್ಕನೇ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಹೂಡಾ ಪಾತ್ರರಾದರು.
27 ಎಸೆತಗಳಲ್ಲಿ ಅರ್ಧಶತಕ
ಮೊದಲ ಟಿ20ಯಲ್ಲಿ 47 ರನ್ ಗಳಿಸಿ ಭಾರತವನ್ನು ಗೆಲುವಿನತ್ತ ಮುನ್ನಡೆಸಿದ್ದ ಹೂಡಾ, ಎರಡನೇ ಪಂದ್ಯದಲ್ಲೂ ತಮ್ಮ ಶೈಲಿಯನ್ನು ಮುಂದುವರಿಸಿದರು. ಜೊತೆಗೆ ಈ ಬಾರಿ ಅವರು ಹೆಚ್ಚು ಆಕ್ರಮಣಕಾರಿಯಾಗಿ ಆಡಿದರು. ಆದರೆ ಈ ಪಂದ್ಯದಲ್ಲಿ ಹೂಡಾ ಮೂರನೇ ಕ್ರಮಾಂಕದಲ್ಲಿ ಬ್ಯಾಟ್ ಮಾಡಲು ಬಂದರು. ಮೂರನೇ ಓವರ್ನಲ್ಲಿ ಇಶಾನ್ ಕಿಶನ್ ವಿಕೆಟ್ ಪತನಗೊಂಡ ನಂತರ ಕ್ರೀಸ್ಗೆ ಬಂದ ಹೂಡಾ ಅಬ್ಬರದ ಬ್ಯಾಟಿಂಗ್ ಆರಂಭಿಸಿದರು. ಹೂಡಾ ಟಿ20ಯಲ್ಲಿ ಕೇವಲ 27 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಈ ವೇಳೆಗೆ ಭಾರತದ ಸ್ಕೋರ್ 100 ರನ್ ದಾಟಿತ್ತು.
55 ಎಸೆತಗಳಲ್ಲಿ ಶತಕ
ಅರ್ಧಶತಕದ ನಂತರವೂ ಹೂಡಾ ದಾಳಿ ನಿಲ್ಲಲಿಲ್ಲ ಮತ್ತು ಸಂಜು ಸ್ಯಾಮ್ಸನ್ ಜೊತೆಗೂಡಿ ಅವರು ಪ್ರತಿ ಐರಿಶ್ ಬೌಲರ್ ಅನ್ನು ದಂಡಿಸಿದರು. 18ನೇ ಓವರ್‌ನ ಮೊದಲ ಎಸೆತದಲ್ಲಿ ರನ್ ಗಳಿಸುವ ಮೂಲಕ ಹೂಡಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಮೊದಲ ಶತಕ ದಾಖಲಿಸಿದರು. ಹೂಡಾ ಶತಕ ತಲುಪಲು ಕೇವಲ 55 ಎಸೆತಗಳನ್ನು ಎದುರಿಸಿದರು. ಅಂತಿಮವಾಗಿ 104 ರನ್ ಗಳಿಸಿ ಔಟಾದರು. 57 ಎಸೆತಗಳ ಅವರ ಇನ್ನಿಂಗ್ಸ್‌ನಲ್ಲಿ ಹೂಡಾ 9 ಬೌಂಡರಿ ಮತ್ತು 6 ಪ್ರಚಂಡ ಸಿಕ್ಸರ್‌ಗಳನ್ನು ಬಾರಿಸಿದರು.
27 ವರ್ಷದ ಹೂಡಾ ಈ ವರ್ಷದ ಫೆಬ್ರವರಿಯಲ್ಲಿ ಶ್ರೀಲಂಕಾ ವಿರುದ್ಧ ಟಿ20 ಪಾದಾರ್ಪಣೆ ಮಾಡಿದರು. ಈ ಪಂದ್ಯದವರೆಗೆ ಕೇವಲ ನಾಲ್ಕು ಪಂದ್ಯಗಳನ್ನು ಮಾತ್ರ ಆಡಿದ್ದರು. ಐದನೇ ಟಿ20ಯಲ್ಲಿ ಶತಕ ಬಾರಿಸುವ ಮೂಲಕ ರೋಹಿತ್ ಶರ್ಮಾ, ಕೆಎಲ್ ರಾಹುಲ್ ಅವರಂತಹ ದಿಗ್ಗಜರ ಪಟ್ಟಿಗೆ ಸೇರ್ಪಡೆಗೊಂಡರು. ಹೂಡಾ ಈಗ ಟಿ20 ಅಂತರಾಷ್ಟ್ರೀಯ ಶತಕ ಸಿಡಿಸಿದ ನಾಲ್ಕನೇ ಭಾರತೀಯ ಬ್ಯಾಟ್ಸ್‌ಮನ್. ಇವರಿಗಿಂತ ಮೊದಲು ಸುರೇಶ್ ರೈನಾ, ರೋಹಿತ್ ಶರ್ಮಾ ಮತ್ತು ರಾಹುಲ್ ಮಾತ್ರ ಭಾರತ ಪರ ಶತಕ ಸಿಡಿಸಿದ್ದಾರೆ.
ಈ ಪಂದ್ಯದಲ್ಲಿ ರಿತುರಾಜ್ ಗಾಯಕ್ವಾಡ್ ಬದಲಿಗೆ ತಂಡಕ್ಕೆ ಸೇರ್ಪಡೆಗೊಂಡ ಸಂಜು ಸ್ಯಾಮ್ಸನ್ ಹೂಡಾಗೆ ಉತ್ತಮ ಬೆಂಬಲ ನೀಡಿದರು. 7 ವರ್ಷಗಳ ಹಿಂದೆ ಟಿ20ಗೆ ಪದಾರ್ಪಣೆ ಮಾಡಿದ್ದ ಸ್ಯಾಮ್ಸನ್ ಭಾರತಕ್ಕೆ ಕೇವಲ 14ನೇ ಟಿ20 ಪಂದ್ಯವಾಗಿದ್ದು, ಈ ಪಂದ್ಯದಲ್ಲಿ ಮೊದಲ ಟಿ20 ಅರ್ಧಶತಕ ಬಾರಿಸಿದ್ದರು. 42 ಎಸೆತಗಳಲ್ಲಿ 77 ರನ್‌ಗಳ ಅಬ್ಬರದ ಇನ್ನಿಂಗ್ಸ್ ಆಡಿದ ನಂತರ ಅವರು ಔಟಾದರು. ಈ ವೇಳೆ ಅವರು 9 ಬೌಂಡರಿ ಹಾಗೂ 4 ಸಿಕ್ಸರ್‌ಗಳನ್ನು ಬಾರಿಸಿದರು. ಸ್ಯಾಮ್ಸನ್ ಮತ್ತು ಹೂಡಾ ಎರಡನೇ ವಿಕೆಟ್‌ಗೆ ಐತಿಹಾಸಿಕ 176 ರನ್‌ಗಳ ಜೊತೆಯಾಟವನ್ನು ನಡೆಸಿದರು, ಇದು T20I ಗಳಲ್ಲಿ ಭಾರತದ ಅತ್ಯುನ್ನತ ಜೊತೆಯಾಟಕ್ಕೆ ಹೊಸ ದಾಖಲೆಯಾಗಿದೆ.
Published On - 10:32 pm, Tue, 28 June 22