ಐಪಿಎಲ್ ನಡುವೆ ಇಂಗ್ಲೆಂಡ್‌ನ ಲೆಜೆಂಡರಿ ಬೌಲರ್ ನಿಧನ
Peter Lever: ಪ್ರಸಿದ್ಧ ಇಂಗ್ಲೆಂಡ್ ಕ್ರಿಕೆಟ್ ಆಟಗಾರ ಪೀಟರ್ ಲಿವರ್ ಅವರು 84ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. 1970-71ರ ಆಶಸ್ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದ ಲಿವರ್ ಸರಣಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. 17 ಟೆಸ್ಟ್ ಪಂದ್ಯಗಳಲ್ಲಿ 41 ವಿಕೆಟ್‌ಗಳನ್ನು ಪಡೆದ ಅವರು ಏಕದಿನ ಕ್ರಿಕೆಟ್‌ನಲ್ಲೂ ಉತ್ತಮ ಸಾಧನೆ ಮಾಡಿದ್ದರು.

ಒಂದೆಡೆ ಭಾರತ ಕ್ರಿಕೆಟ್ನಲ್ಲಿ ಐಪಿಎಲ್ ರಂಗು ಜೋರಾಗಿದ್ದರೆ, ಮತ್ತೊಂದೆಡೆ ಕ್ರಿಕೆಟ್ ಜನಕ ಇಂಗ್ಲೆಂಡ್ ಕ್ರಿಕೆಟ್ನಲ್ಲಿ ಶೋಕ ಮನೆ ಮಾಡಿದೆ.1970-71ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಆಶಸ್ ಸರಣಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರವಹಿಸಿದ್ದ ಇಂಗ್ಲೆಂಡ್‌ನ ಮಾಜಿ ವೇಗಿ ಪೀಟರ್ ಲಿವರ್ 84 ನೇ ವಯಸ್ಸಿನಲ್ಲಿ ಇಹಲೋಕ ತ್ಯಜಿಸಿದ್ದಾರೆ. ಇಂಗ್ಲೆಂಡ್ ಪರ 17 ಟೆಸ್ಟ್‌ಗಳನ್ನಾಡಿದ್ದ ಪೀಟರ್ ಲಿವರ್ 41 ವಿಕೆಟ್‌ಗಳನ್ನು ಕಬಳಿಸಿದ್ದರು. ಇದು ಮಾತ್ರವಲ್ಲದೆ 1971 ರಲ್ಲಿ ಆಸ್ಟ್ರೇಲಿಯಾ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಲಿವರ್, ಇಂಗ್ಲೆಂಡ್ ತಂಡದ ಪರ 10 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದರು.
1970-71 ರ ಆಸ್ಟ್ರೇಲಿಯಾ ಪ್ರವಾಸದಲ್ಲಿ ರೇಮಂಡ್ ಇಲಿಂಗ್‌ವರ್ತ್ ನಾಯಕತ್ವದಲ್ಲಿ ಇಂಗ್ಲೆಂಡ್ ಪರ ಲಿವರ್ ತಮ್ಮ ಟೆಸ್ಟ್ ಪಂದ್ಯಕ್ಕೆ ಪಾದಾರ್ಪಣೆ ಮಾಡಿದ್ದರು. ಆ ಬಳಿಕ 1975 ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದಿದ್ದ ಆಶಸ್ ಸರಣಿಯಲ್ಲಿ ಅದ್ಭುತ ಪ್ರದರ್ಶನ ನೀಡಿದ್ದ ಅವರು ಮೆಲ್ಬೋರ್ನ್‌ನಲ್ಲಿ ನಡೆದಿದ್ದ ಟೆಸ್ಟ್ ಪಂದ್ಯದಲ್ಲಿ 38 ರನ್‌ಗಳಿಗೆ 6 ವಿಕೆಟ್ ಕಬಳಿಸಿ ತಮ್ಮ ವೃತ್ತಿಜೀವನದ ಅತ್ಯುತ್ತಮ ಪ್ರದರ್ಶನ ನೀಡಿದ್ದರು.
ತಲೆಗೆ ಬೌನ್ಸರ್, ಲಿವರ್ಗೆ ಕಳಂಕ
ಬ್ಯಾಟ್ಸ್ಮನ್ಗಳು ತಲೆಗೆ ಹೆಲ್ಮೆಟ್ ಧರಿಸದ ಸಮಯದಲ್ಲಿ ಕ್ರಿಕೆಟ್ ಅಂಗಳಕ್ಕೆ ಕಾಲಿಟ್ಟಿದ್ದ ಲಿವರ್, 1975 ರಲ್ಲಿ ಆಕ್ಲೆಂಡ್‌ನಲ್ಲಿ ನಡೆದಿದ್ದ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಕಿವೀಸ್ ಬ್ಯಾಟರ್ ಇವಾನ್ ಚಾಟ್‌ಫೀಲ್ಡ್ ಅವರ ತಲೆಗೆ ತಮ್ಮ ಬೌನ್ಸರ್ ಮೂಲಕ ಗಾಯ ಮಾಡಿದ್ದರು. ಲಿವರ್ ಮಾರಕ ವೇಗ ಇವಾನ್ ಚಾಟ್‌ಫೀಲ್ಡ್ ಅವರನ್ನು ಪ್ರಜ್ಞಹೀನ ಸ್ಥಿತಿಗೆ ಕೊಂಡೊಯ್ದಿತ್ತು. ಅದೃಷ್ಟವಶಾತ್ ತುರ್ತು ಚಿಕಿತ್ಸೆಯ ನಂತರ ಅವರು ಚೇತರಿಸಿಕೊಂಡಿದ್ದರು.
ಈ ಘಟನೆಯ ಬಳಿಕ ಮಾತನಾಡಿದ್ದ ಲಿವರ್, ‘ಇವಾನ್ ಚಾಟ್‌ಫೀಲ್ಡ್ ನನ್ನ ಬೌನ್ಸರ್ನಿಂದಾಗಿ ಗಾಯಗೊಂಡು ನೆಲಕ್ಕೆ ಉರುಳಿದ್ದನ್ನು ನೋಡಿದ್ದ ನಾನು ಅವನನ್ನು ಕೊಂದೆನೆಂದು ಭಾವಿಸಿದೆ.’ ನಾನು ಮಾಡಿದ್ದಕ್ಕೆ ನನಗೆ ಬೇಸರವಾಯಿತು ಮತ್ತು ನಾಚಿಕೆಯಾಯಿತು. ನಾನು ಪೆವಿಲಿಯನ್‌ಗೆ ಹಿಂತಿರುಗಿದಾಗ ನಾನು ಕ್ರಿಕೆಟ್‌ನಿಂದ ನಿವೃತ್ತಿ ಹೊಂದಲು ಯೋಚಿಸುತ್ತಿದ್ದೆ. ಆದರೆ ಆ ಅಪಘಾತಕ್ಕೆ ತಾನು ಜವಾಬ್ದಾರನಲ್ಲ ಎಂದು ಚಾಟ್‌ಫೀಲ್ಡ್ ಹೇಳಿದ ನಂತರ ಕೊಂಚ ಸಮಾಧಾನನಾದೆ ಎಂದು ಹೇಳಿಕೊಂಡಿದ್ದರು.
ಲಂಕಾಷೈರ್ ಕೌಂಟಿ ಕ್ರಿಕೆಟ್ ಕ್ಲಬ್ ಅವರ ನಿಧನದ ಸುದ್ದಿಯನ್ನು ಟ್ವಿಟರ್‌ನಲ್ಲಿ ಹಂಚಿಕೊಂಡಿದೆ. ’84 ನೇ ವಯಸ್ಸಿನಲ್ಲಿ ಪೀಟರ್ ಲಿವರ್ ನಿಧನರಾದ ಸುದ್ದಿ ಕೇಳಿ ನಮಗೆ ತುಂಬಾ ದುಃಖವಾಯಿತು. ಕಳೆದ ವರ್ಷ ಪೀಟರ್ ಅವರನ್ನು ನಮ್ಮ ಹಾಲ್ ಆಫ್ ಫೇಮ್‌ಗೆ ಸೇರಿಸಲಾಯಿತು ಎಂದು ಬರೆದುಕೊಂಡಿದೆ.
We are deeply saddened by the news that Peter Lever has passed away, aged 84.
Peter was inducted into our Hall of Fame last year after playing 301 First-Class matches between 1960 and 1976 – taking 796 wickets.
Our thoughts are with his family and friends.
🌹 #RedRoseTogether pic.twitter.com/5JuAXNB07j
— Lancashire Cricket Men (@lancscricket) March 27, 2025
ಪೀಟರ್ ಲಿವರ್ ಅವರ ವೃತ್ತಿಜೀವನ
ಪೀಟರ್ ಲಿವರ್ 1960 ರಿಂದ 1976 ರವರೆಗೆ 301 ಪ್ರಥಮ ದರ್ಜೆ ಪಂದ್ಯಗಳನ್ನು ಆಡಿದ್ದು, 796 ವಿಕೆಟ್‌ಗಳನ್ನು ಪಡೆದಿದ್ದರು. ಅವರು ತಮ್ಮ ವೃತ್ತಿಜೀವನದಲ್ಲಿ 45 ಸಾವಿರದ 945 ಎಸೆತಗಳನ್ನು ಎಸೆದಿದ್ದಾರೆ. 70 ರನ್‌ಗಳಿಗೆ 7 ವಿಕೆಟ್‌ಗಳನ್ನು ಪಡೆದಿದ್ದು ಅವರ ಅತ್ಯುತ್ತಮ ಪ್ರದರ್ಶನ. ಈ ಆಟಗಾರ 28 ಬಾರಿ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ. ಅದೇ ಸಮಯದಲ್ಲಿ, ಅವರು ಪಂದ್ಯದಲ್ಲಿ ಎರಡು ಬಾರಿ 10 ವಿಕೆಟ್‌ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು. ಲಿವರ್, ಲಿಸ್ಟ್ ಎ ನಲ್ಲಿ 272 ವಿಕೆಟ್‌ಗಳನ್ನು ಕಬಳಿಸಿದ್ದು, ಇದರಲ್ಲಿ 3 ಐದು ವಿಕೆಟ್ ಗೊಂಚಲುಗಳು ಸೇರಿವೆ.
ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 7:34 pm, Thu, 27 March 25