ಬೆಂಗಳೂರು (ಮಾ. 24): ಇಂಡಿಯನ್ ಪ್ರೀಮಿಯರ್ ಲೀಗ್ 2025 ಆರಂಭವಾಗಿದೆ. ಭಾನುವಾರ ನಡೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಮುಂಬೈ ಇಂಡಿಯನ್ಸ್ (CSK vs MI) ಟೀಮ್ ಅನ್ನು ನಾಲ್ಕು ವಿಕೆಟ್‌ಗಳಿಂದ ಸೋಲಿಸಿತು. ಈ ಮೂಲಕ ತನ್ನ ಮೊದಲ ಪಂದ್ಯದಲ್ಲಿ ಸೋಲುವ ವಾಡಿಕೆಯನ್ನು ಮುಂಬೈ ಈ ಬಾರಿಯೂ ಮುಂದುವರೆಸಿದೆ. ಮುಂಬೈ ಇಂಡಿಯನ್ಸ್ ಸೋಲಿನ ನಂತರ, ರೋಹಿತ್ ಶರ್ಮಾ ಮತ್ತು ಸೌತ್ ಸೂಪರ್‌ಸ್ಟಾರ್ ಮಹೇಶ್ ಬಾಬು ಅವರ ಚಿತ್ರವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಈ ಚಿತ್ರದಲ್ಲಿ ಮಹೇಶ್ ಬಾಬು ಮುಂಬೈ ಇಂಡಿಯನ್ಸ್ ಜೆರ್ಸಿಯಲ್ಲಿ ಕಾಣಿಸಿಕೊಂಡಿದ್ದಾರೆ. ಅಭಿಮಾನಿಗಳು ಇದನ್ನು ಭರ್ಜರಿ ಆಗಿ ಹಂಚಿಕೊಳ್ಳುತ್ತಿದ್ದಾರೆ.
ಫೇಸ್ಬುಕ್ ಬಳಕೆದಾರರು ಇವರಿಬ್ಬರು ಕ್ರೀಡಾಂಗಣದಲ್ಲಿರುವ ಫೋಟೋವನ್ನು ಹಂಚಿಕೊಂಡು, ‘‘ ಸೌತ್ ಸೂಪರ್ ಸ್ಟಾರ್ ಮಹೇಶ್ ಬಾಬು ಜೊತೆ ರೋಹಿತ್ ಶರ್ಮಾ. ಎಂಥಾ ಅದ್ಭುತ ಫೋಟೋ’’ ಎಂದು ಬರೆದುಕೊಂಡಿದ್ದಾರೆ.
ಈ ಸುದ್ದಿಯ ಸತ್ಯಾಸತ್ಯತೆಯನ್ನು ಟಿವಿ9 ಕನ್ನಡ ಪರಿಶೋದಿಸಿದಾಗ ಇದೊಂದು ಸುಳ್ಳು ವಿಚಾರ ಎಂಬುದು ತಿಳಿದುಬಂದಿದೆ. ನಿಜಾಂಶವನ್ನು ತಿಳಿಯಲು ನಾವು ಮೊದಲಿಗೆ ರಿವರ್ಸ್ ಇಮೇಜ್ ಸರ್ಚ್ ನಡೆಸಿದಾಗ ಮಹೇಶ್ ಬಾಬು ಅಥವಾ ರೋಹಿತ್ ಶರ್ಮಾ ಅವರು ಭೇಟಿಯನ್ನು ದೃಢೀಕರಿಸುವ ಯಾವುದೇ ವಿಶ್ವಾಸಾರ್ಹ ಸುದ್ದಿ ವರದಿಗಳು, ಅಧಿಕೃತ ಹೇಳಿಕೆಗಳು ಅಥವಾ ಸಾಮಾಜಿಕ ಮಾಧ್ಯಮ ಹೇಳಿಕೆಗಳು ಕಂಡುಬಂದಿಲ್ಲ. ಈ ಫೋಟೋಗಳು ನಿಜವಾದದ್ದಾಗಿದ್ದರೆ, ಮುಖ್ಯವಾಹಿನಿಯ ಮಾಧ್ಯಮಗಳು ಅವುಗಳನ್ನು ವರದಿ ಮಾಡುತ್ತಿದ್ದವು.
ಇದಲ್ಲದೆ, ಚಿತ್ರಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅಸ್ವಾಭಾವಿಕ ಮುಖಭಾವಗಳು, ಅಸಮಂಜಸ ಬೆಳಕು, ಹಿನ್ನೆಲೆಯಲ್ಲಿ ವಿಚಿತ್ರವಾದ ಮಿಶ್ರಣ ಮತ್ತು ಮುಖಗಳು ವಿರೂಪವಾಗಿರುವಂತಹ ಹಲವಾರು ಸಂಗತಿಗಳು ನಮಗೆ ಕಂಡುಬಂತು. ಹೀಗಾಗಿ ಇವುಗಳನ್ನು ಕೃತಕ ಬುದ್ದಿಮತ್ತೆ ಸಹಾಯದಿಂದ ರಚಿಸಿರಬಹುದು ಎಂಬ ಅನುಮಾನ ಮೂಡಿತು.
MS Dhoni: ತೀರಾ ಕೆಳ ಮಟ್ಟಕ್ಕಿಳಿದ ಧೋನಿ ಫ್ಯಾನ್ಸ್: ರಚಿನ್ ರವೀಂದ್ರಾಗೆ ಮನಬಂದಂತೆ ಬೈದ MSD ಅಭಿಮಾನಿಗಳು
ಮತ್ತಷ್ಟು ಪರಿಶೀಲಿಸಲು, ನಾವು ಚಿತ್ರಗಳನ್ನು AI ಪತ್ತೆ ಸಾಧನ – ಹೈವ್ ಮಾಡರೇಶನ್ ಮೂಲಕ ನಡೆಸಿದ್ದೇವೆ. ಈ ಫೋಟೋವನ್ನು ಡಿಜಿಟಲ್ ರೂಪದಲ್ಲಿ ರಚಿಸಲಾಗಿದೆಯೇ ಹೊರತು ನಿಜವಾದ ಛಾಯಾಚಿತ್ರಗಳಲ್ಲ ಎಂದು ಇದು ತಿಳಿಸಿದೆ. ಹಾಗೆಯೆ ನಂತರ ನಾವು wasitai.com ನಲ್ಲಿ ವೈರಲ್ ಫೋಟೋವನ್ನು ಅಪ್‌ಲೋಡ್ ಮಾಡಿ ಪರಿಶೀಲಿಸಿದೆವು. ಆ ಫಲಿತಾಂಶದಲ್ಲಿಯೂ ವೈರಲ್ ಚಿತ್ರವು AI ನಿಂದ ರಚಿತವಾಗಿದೆ ಎಂದು ಕಂಡುಬಂದಿದೆ.
ಹೀಗಾಗಿ ಮುಂಬೈ ಇಂಡಿಯನ್ಸ್ ಜೆರ್ಸಿಯಲ್ಲಿ ಮಹೇಶ್ ಬಾಬು ಮತ್ತು ರೋಹಿತ್ ಶರ್ಮಾ ಅವರ ವೈರಲ್ ಆಗುತ್ತಿರುವ ಫೋಟೋಗಳು ಕೃತಕ ಬುದ್ಧಿಮತ್ತೆಯಿಂದ ರಚಿಸಲ್ಪಟ್ಟವು ಮತ್ತು ನಕಲಿ ಎಂದು ನಾವು ಖಚಿತವಾಗಿ ಹೇಳುತ್ತೇವೆ. ಅಂತಹ ಯಾವುದೇ ಫೋಟೋವನ್ನು ಅವರಿಬ್ಬರು ಕ್ಲಿಕ್ಕಿಸಿಲ್ಲ, ಅಲ್ಲದೆ ಇವರಿಬ್ಬರು ಇತ್ತೀಚಿನ ದಿನಗಳಲ್ಲಿ ಭೇಟಿ ಕೂಡ ಆಗಿಲ್ಲ.
ಚೆನ್ನೈನ ಎಂ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್-2025 ರ ಮೂರನೇ ಪಂದ್ಯವು ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಿತು. ಇದೊಂದು ಲೋ ಸ್ಕೋರಿಂಗ್ ರೋಚಕ ಪಂದ್ಯವಾಗಿತ್ತು. ರುತುರಾಜ್ ಗಾಯಕ್ವಾಡ್ ನೇತೃತ್ವದ ಸಿಎಸ್ಕೆ ವಿರುದ್ಧ ಮುಂಬೈ 20 ಓವರ್‌ಗಳಲ್ಲಿ 9 ವಿಕೆಟ್‌ಗೆ 155 ರನ್ ಗಳಿಸಿತು. ಆತಿಥೇಯರು 19.1 ಓವರ್‌ಗಳಲ್ಲಿ 6 ವಿಕೆಟ್‌ಗೆ 158 ರನ್ ಗಳಿಸುವ ಮೂಲಕ ಗೆದ್ದರು. ಮುಂಬೈ ತಂಡದ ಖಾಯಂ ನಾಯಕ ಹಾರ್ದಿಕ್ ಪಾಂಡ್ಯ ಈ ಪಂದ್ಯದಲ್ಲಿ ಆಡಲಿಲ್ಲ.
ಇನ್ನಷ್ಟು ಫ್ಯಾಕ್ಟ್ ಚೆಕ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ