
ಭಾರತ ಮತ್ತು ಶ್ರೀಲಂಕಾ ನಡುವಣ ಟೆಸ್ಟ್ ಸರಣಿ ಆಗಸ್ಟ್ 15 ರಿಂದ ಶುರುವಾಗಲಿದೆ. ಈ ಸರಣಿಯು ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ದೃಷ್ಟಿಯಿಂದ ಟೀಮ್ ಇಂಡಿಯಾ ಪಾಲಿಗೆ ತುಂಬಾ ಮಹತ್ವದ್ದು. ಏಕೆಂದರೆ ಈ ಸರಣಿಯಲ್ಲಿ ಅಮೋಘ ಪ್ರದರ್ಶನ ನೀಡಿದರೆ ಮಾತ್ರ ಭಾರತ ತಂಡದ WTC ಫೈನಲ್ ಹಾದಿ ಸುಗಮವಾಗಲಿದೆ. ಆದರೆ ಟೀಮ್ ಇಂಡಿಯಾ ಸದ್ಯ ಫೈನಲ್ ತಲುಪುವ ಒತ್ತಡವನ್ನು ಬದಿಗಿಟ್ಟು, ಶ್ರೀಲಂಕಾ ವಿರುದ್ಧ ಕೇವಲ ಪಂದ್ಯಗಳನ್ನು ಗೆಲ್ಲುವ ಕಡೆಗೆ ಗಮನ ಹರಿಸಬೇಕೆಂದು ಭಾರತದ ಮಾಜಿ ಕ್ರಿಕೆಟಿಗ ದೀಪ್ ದಾಸ್‌ಗುಪ್ತಾ ಸಲಹೆ ನೀಡಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮುಂಬರುವ ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಯ ಕುರಿತು ಮಾತನಾಡಿ ದೀಪ್ ದಾಸ್‌ಗುಪ್ತಾ, ನಾನು ಹೇಳಲಿರುವ ಮಾತು ಕೆಲವರಿಗೆ ಇಷ್ಟವಾಗದೇ ಇರಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ನಾವು WTC ಫೈನಲ್ ಅರ್ಹತೆಯ ಬಗ್ಗೆ ಸಂಪೂರ್ಣವಾಗಿ ಮರೆತುಬಿಡುವುದು ಒಳ್ಳೆಯದು. ಅದರ ಬಗ್ಗೆ ಈಗ ಚರ್ಚಿಸದಿರುವುದು ಉತ್ತಮ ಎಂದಿದ್ದಾರೆ.
WTC ಫೈನಲ್ ತಲುಪಲೇಬೇಕು ಎಂಬ ಹಠಕ್ಕೆ ಬಿದ್ದರೆ, ತಂಡವು ನಿರ್ದಿಷ್ಟ ಪಂದ್ಯ ಅಥವಾ ಸರಣಿ ಗೆಲ್ಲಲು ಕೇವಲ ತಾತ್ಕಾಲಿಕ ‘ಶಾರ್ಟ್‌ಕಟ್’ ಮಾರ್ಗಗಳನ್ನು ಹುಡುಕಲು ಆರಂಭಿಸುತ್ತದೆ ಎಂದು ದೀಪ್ ದಾಸ್‌ಗುಪ್ತಾ ಎಚ್ಚರಿಸಿದ್ದಾರೆ. ಇದು ದೀರ್ಘಾವಧಿಯಲ್ಲಿ ತಂಡಕ್ಕೆ ನಷ್ಟವನ್ನು ಉಂಟು ಮಾಡಲಿದೆ.
ನಾವು ಸದ್ಯಕ್ಕೆ ಕೇವಲ ಬ್ಯಾಂಡ್-ಏಡ್ ಹಾಕಿಕೊಂಡು ನಡೆಯಬೇಕೇ ಅಥವಾ ಸೂಕ್ತವಾದ ಹೊಲಿಗೆ ಹಾಕಿಸಿಕೊಂಡು ವಿಶ್ರಾಂತಿ ಪಡೆದು, 100% ಫಿಟ್‌ನೆಸ್‌ನೊಂದಿಗೆ ಭವಿಷ್ಯಕ್ಕೆ ಸಿದ್ಧರಾಗಬೇಕೇ ಎಂಬುದನ್ನು ನಿರ್ಧರಿಸಬೇಕು. ಅಂದರೆ ಫೈನಲ್ಗೆ ತಲುಪಲು ಆಡಬೇಡಿ, ಟೆಸ್ಟ್ ತಂಡವನ್ನು ಬಲಿಷ್ಠಗೊಳಿಸಲು ಯೋಜನೆ ರೂಪಿಸಬೇಕೆಂದು ದೀಪ್ ದಾಸ್‌ಗುಪ್ತಾ ಹೇಳಿದ್ದಾರೆ.
ತಾಯ್ನಾಡಿನಲ್ಲಿ ಮಾತ್ರವಲ್ಲದೆ ವಿದೇಶಿ ನೆಲದಲ್ಲೂ ಸರಣಿ ಗೆಲ್ಲುವ ಸಾಮರ್ಥ್ಯ ಹೊಂದಿದ್ದ 2020-21ರ ಬಲಿಷ್ಠ ಟೀಮ್ ಇಂಡಿಯಾವನ್ನು ಮತ್ತೆ ಕಟ್ಟುವುದು ನಮ್ಮ ಮೊದಲ ಆದ್ಯತೆಯಾಗಬೇಕು ಎಂದು ಇದೇ ವೇಳೆ ದೀಪ್ ದಾಸ್‌ಗುಪ್ತಾ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ರಾಜೀವ್ ಕುಮಾರ್… ಟೀಮ್ ಇಂಡಿಯಾ ಹಿಂದಿದ್ದ ಕಾಣದ ‘ಕೈ’
ಮುಂದಿನ ತಿಂಗಳುಗಳಲ್ಲಿ ಶ್ರೀಲಂಕಾ ಮತ್ತು ನ್ಯೂಝಿಲೆಂಡ್ ವಿರುದ್ಧ ಅವರದ್ದೇ ನೆಲದಲ್ಲಿ ಆಡುವುದು ಮತ್ತು ಆಸ್ಟ್ರೇಲಿಯಾ ವಿರುದ್ಧದ 5 ಪಂದ್ಯಗಳ ಕಠಿಣ ಸರಣಿಯನ್ನು ಎದುರಿಸುವುದು ಭಾರತದ ಮುಂದಿರುವ ಅತೀ ದೊಡ್ಡ ಸವಾಲಾಗಿದೆ. ಹೀಗಾಗಿ, ಪಾಯಿಂಟ್‌ಗಳ ಲೆಕ್ಕಾಚಾರ ಬದಿಗಿಟ್ಟು ಬಲಿಷ್ಠ ತಂಡ ನಿರ್ಮಾಣಕ್ಕೆ ಕೋಚ್ ಗೌತಮ್ ಗಂಭೀರ್ ಹಾಗೂ ನಾಯಕ ಶುಭ್ಮನ್ ಗಿಲ್ ಒತ್ತು ನೀಡಬೇಕು ಎಂದು ದೀಪ್ ದಾಸ್‌ಗುಪ್ತಾ ಹೇಳಿದ್ದಾರೆ.