ಆರ್​ಸಿಬಿ ಅವಕಾಶ ನೀಡದ ಬೌಲರ್ ಹ್ಯಾಟ್ರಿಕ್ ವಿಕೆಟ್ ಪಡೆದ

Sonu Yadav's Hat-trick Triumph: ಆರ್ಸಿಬಿ ತಂಡದಲ್ಲಿ ಅವಕಾಶವಿಲ್ಲದೆ ಐಪಿಎಲ್​ನಿಂದ ಹೊರಬಿದ್ದಿದ್ದ ಸೋನು ಯಾದವ್, ಟಿಎನ್‌ಪಿಎಲ್‌ನಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ನೆಲ್ಲೈ ರಾಯಲ್ ಕಿಂಗ್ಸ್ ಪರ ಆಡುತ್ತಿರುವ ಅವರು ಇತ್ತೀಚೆಗೆ ಹ್ಯಾಟ್ರಿಕ್ ಪಡೆದು ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. ಐಪಿಎಲ್‌ನಲ್ಲಿ ಅವಕಾಶ ಸಿಗದಿದ್ದರೂ, ತಮ್ಮ ಪ್ರತಿಭೆಯನ್ನು ಸಾಬೀತುಪಡಿಸಿ ಯಶಸ್ಸು ಕಂಡಿದ್ದಾರೆ.

ಆರ್​ಸಿಬಿ ಅವಕಾಶ ನೀಡದ ಬೌಲರ್ ಹ್ಯಾಟ್ರಿಕ್ ವಿಕೆಟ್ ಪಡೆದ
Sonu Yadav

Updated on: Jun 08, 2025 | 4:20 PM

ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 18 ವರ್ಷಗಳ ನಂತರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಪ್ರಶಸ್ತಿ ಗೆಲ್ಲುವ ಮೂಲಕ ಇತಿಹಾಸ ನಿರ್ಮಿಸಿದೆ. ಫೈನಲ್‌ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ವಿಕೆಟ್‌ಗಳಿಂದ ಸೋಲಿಸಿದ ಆರ್​ಸಿಬಿ ಚೊಚ್ಚಲ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತು. ಆದರೆ ಆರ್​ಸಿಬಿ ತಂಡದಲ್ಲಿದ್ದರೂ ಒಂದೇ ಒಂದು ಅವಕಾಶ ಸಿಗದ ಬೌಲರ್​ವೊಬ್ಬರು ಇದೀಗ ತಮಿಳುನಾಡು ಪ್ರೀಮಿಯರ್ ಲೀಗ್ 2025 (TNPL 2025) ರಲ್ಲಿ ಸದ್ದು ಮಾಡುತ್ತಿದ್ದಾರೆ. ಭಾರತದ ಯುವ ವೇಗದ ಬೌಲರ್ ಸೋನು ಯಾದವ್ (Sonu Yadav) ಎರಡು ವರ್ಷಗಳ ಹಿಂದೆ ಆರ್​ಸಿಬಿ ತಂಡದಲ್ಲಿದ್ದರು. ಆದರೆ ಅವರಿಗೆ ಒಂದೇ ಒಂದು ಪಂದ್ಯವನ್ನು ಆಡಲು ಅವಕಾಶ ಸಿಗಲಿಲ್ಲ. ಇದಾದ ನಂತರ ಅವರನ್ನು ತಂಡದಿಂದ ಕೈಬಿಡಲಾಯಿತು. ಇದೀಗ ಅವರು TNPL ನಲ್ಲಿ ಹ್ಯಾಟ್ರಿಕ್ ಪಡೆಯುವ ಮೂಲಕ ಎಲ್ಲರನ್ನೂ ಅಚ್ಚರಿಗೊಳಿಸಿದ್ದಾರೆ. TNPL ತನ್ನ ಅಧಿಕೃತ ಇನ್‌ಸ್ಟಾಗ್ರಾಮ್ ಪುಟದಲ್ಲಿ ಹ್ಯಾಟ್ರಿಕ್ ಪಡೆದ ವೀಡಿಯೊವನ್ನು ಅಪ್‌ಲೋಡ್ ಮಾಡಿದೆ.

ಅವಕಾಶ ವಂಚಿತ ಸೋನು ಯಾದವ್

2023 ರಲ್ಲಿ, ಸೋನು ಯಾದವ್ ಅವರನ್ನು ಆರ್‌ಸಿಬಿ ತಂಡಕ್ಕೆ ಆಯ್ಕೆ ಮಾಡಲಾಗಿತ್ತು. ವೇಗದ ಬೌಲಿಂಗ್ ಆಲ್‌ರೌಂಡರ್ ಆಗಿರುವ ಸೋನು ಯಾದವ್​ಗೆ ಐಪಿಎಲ್‌ನಲ್ಲಿ ಪಾದಾರ್ಪಣೆ ಮಾಡಲು ಅವಕಾಶ ಸಿಗದಿದ್ದರೂ, ಉತ್ತರ ಪ್ರದೇಶದ ಗೋರಖ್‌ಪುರದ ಈ ಆಟಗಾರ ಇದರಿಂದ ನಿರಾಶೆಗೊಳ್ಳಲಿಲ್ಲ. ಇದೀಗ ಅವರು ತಮಿಳುನಾಡು ಪ್ರೀಮಿಯರ್ ಲೀಗ್ 2025 ರಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಈ ಸೀಸನ್​ನ ನಾಲ್ಕನೇ ಪಂದ್ಯದಲ್ಲಿ ನೆಲ್ಲೈ ರಾಯಲ್ ಕಿಂಗ್ಸ್ ಪರ ಆಡುವಾಗ ಅವರು ಹ್ಯಾಟ್ರಿಕ್ ಪಡೆದರು. ಇದಲ್ಲದೆ, ಈ ಪಂದ್ಯದಲ್ಲಿ ಸೋನು 8 ಎಸೆತಗಳಲ್ಲಿ ಅಜೇಯ 10 ರನ್ ಬಾರಿಸಿದರು.

ಹ್ಯಾಟ್ರಿಕ್ ಪಡೆದ ಆರನೇ ಆಟಗಾರ

ನೆಲ್ಲೈ ರಾಯಲ್ ಕಿಂಗ್ಸ್ ತಂಡದ ಆಲ್‌ರೌಂಡರ್ ಸೋನು ಯಾದವ್ ತ್ರಿಚಿ ಗ್ರ್ಯಾಂಡ್ ವಿರುದ್ಧದ ಪಂದ್ಯದಲ್ಲಿ ಕೊನೆಯ ಓವರ್ ಬೌಲ್ ಮಾಡಿ ಈ ಓವರ್‌ನ ಮೂರನೇ, ನಾಲ್ಕನೇ ಮತ್ತು ಐದನೇ ಎಸೆತಗಳಲ್ಲಿ ವಿಕೆಟ್ ಪಡೆಯುವ ಮೂಲಕ ಇತಿಹಾಸ ನಿರ್ಮಿಸಿದರು. ಈ ಮೂಲಕ ಟಿಎನ್‌ಪಿಎಲ್‌ನಲ್ಲಿ ಹ್ಯಾಟ್ರಿಕ್ ಪಡೆದ ಆರನೇ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಈ ಪಂದ್ಯದಲ್ಲಿ ಸೋನು ಯಾದವ್ 3 ಓವರ್‌ಗಳಲ್ಲಿ 22 ರನ್‌ಗಳನ್ನು ನೀಡಿ ಮೂರು ವಿಕೆಟ್ ಕಬಳಿಸಿದರು. ಅವರ ಅದ್ಭುತ ಬೌಲಿಂಗ್‌ನಿಂದಾಗಿ, ತ್ರಿಚಿ ಗ್ರ್ಯಾಂಡ್ ತಂಡ 20 ಓವರ್‌ಗಳಲ್ಲಿ 8 ವಿಕೆಟ್‌ಗಳಿಗೆ 157 ರನ್‌ಗಳಿಸಲಷ್ಟೇ ಶಕ್ತವಾಯಿತು.

RCB IPL purchase: ಮದ್ಯ ಪ್ರಚಾರಕ್ಕಾಗಿ ಆರ್​ಸಿಬಿ ಫ್ರಾಂಚೈಸ್ ಖರೀದಿಸಿದ ವಿಜಯ್ ಮಲ್ಯ

ಇದಕ್ಕೆ ಉತ್ತರವಾಗಿ, ನೆಲ್ಲೈ ರಾಯಲ್ ಕಿಂಗ್ಸ್ ತಂಡವು 19.2 ಓವರ್‌ಗಳಲ್ಲಿ 5 ವಿಕೆಟ್‌ಗಳನ್ನು ಕಳೆದುಕೊಂಡು ಗೆಲುವಿನ ಗುರಿ ತಲುಪಿತು. ಈ ಗೆಲುವಿನೊಂದಿಗೆ, ನೆಲ್ಲೈ ರಾಯಲ್ ಕಿಂಗ್ಸ್ ಈ ಸೀಸನ್‌ನಲ್ಲಿ ಗೆಲುವಿನ ಆರಂಭ ಪಡೆದುಕೊಂಡಿದೆ.

ಮತ್ತಷ್ಟು ಕ್ರೀಡಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ