Virat Kohli: ವಿರಾಟ್ ಕೊಹ್ಲಿ ವಿಷಯದಲ್ಲಿ ಮೊಂಡು ವಾದ ಬೇಡ: ಗಂಭೀರ್ ಗರಂ
Gautam Gambhir: ಈ ಹಿಂದೆ ವಿರಾಟ್ ಕೊಹ್ಲಿ ನಾಯಕರಾಗಿದ್ದಾಗ ಟೀಮ್ ಇಂಡಿಯಾ ಪರ ಓಪನಿಂಗ್ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು.
ಟಿ20 ವಿಶ್ವಕಪ್ಗೂ ಮುನ್ನ ಟೀಮ್ ಇಂಡಿಯಾ (Team India) ಮಾಜಿ ನಾಯಕ ವಿರಾಟ್ ಕೊಹ್ಲಿ (Virat Kohli) ಫಾರ್ಮ್ಗೆ ಮರಳಿರುವುದು ಭಾರತ ತಂಡಕ್ಕೆ ಶುಭಸೂಚನೆ ಎಂದರೆ ತಪ್ಪಾಗಲಾರದು. ಏಕೆಂದರೆ ಟಿ20 ವಿಶ್ವಕಪ್ಗೆ ದಿನಗಳು ಮಾತ್ರ ಉಳಿದಿದ್ದು, ಅದಕ್ಕೂ ಮುನ್ನ ವಿರಾಟ್ ಕೊಹ್ಲಿ ಏಷ್ಯಾಕಪ್ನಲ್ಲಿ ಅಬ್ಬರಿಸುವ ಮೂಲಕ ಟೀಮ್ ಇಂಡಿಯಾದ ಬ್ಯಾಟಿಂಗ್ ಬಲವನ್ನು ಹೆಚ್ಚಿಸಿದ್ದಾರೆ. ಇತ್ತೀಚೆಗಷ್ಟೇ ಮುಕ್ತಾಯಗೊಂಡ ಏಷ್ಯಾ ಕಪ್‌ನಲ್ಲಿ ವಿರಾಟ್ ಕೊಹ್ಲಿ ಐದು ಇನ್ನಿಂಗ್ಸ್‌ಗಳಿಂದ 92 ಸರಾಸರಿಯಲ್ಲಿ 276 ರನ್‌ಗಳಿಸಿ ಟೂರ್ನಿಯಲ್ಲಿ ಅತ್ಯಧಿಕ ರನ್ ಬಾರಿಸಿದ ಎರಡನೇ ಬ್ಯಾಟ್ಸ್ಮನ್ ಎನಿಸಿಕೊಂಡರು. ಅದರಲ್ಲೂ ಅಫ್ಘಾನಿಸ್ತಾನ್ ವಿರುದ್ಧ ಭರ್ಜರಿ ಶತಕ ಸಿಡಿಸಿ ಮಿಂಚಿದ್ದರು.
ಅಫ್ಘಾನಿಸ್ತಾನದ ವಿರುದ್ಧ ವಿಶ್ರಾಂತಿ ಪಡೆದ ರೋಹಿತ್ ಶರ್ಮಾ ಬದಲಿಗೆ ಕೆಎಲ್ ರಾಹುಲ್ ಅವರೊಂದಿಗೆ ಇನ್ನಿಂಗ್ಸ್ ಆರಂಭಿಸಿದ ಕೊಹ್ಲಿ ತಮ್ಮ ಚೊಚ್ಚಲ ಟಿ20 ಶತಕಗಳಿಸಿದ್ದರು. ಆದರೆ ಈ ಭರ್ಜರಿ ಶತಕದ ಬೆನ್ನಲ್ಲೇ ಕೊಹ್ಲಿಯ ಬ್ಯಾಟಿಂಗ್ ಕ್ರಮಾಂಕದ ಬಗ್ಗೆ ಚರ್ಚೆಗಳು ಶುರುವಾಗಿತ್ತು. ಕೆಲ ಮಾಜಿ ಆಟಗಾರರು ವಿರಾಟ್ ಕೊಹ್ಲಿ ಆರಂಭಿಕರಾಗಿ ಕಣಕ್ಕಿಳಿಯುವುದು ಸೂಕ್ತ ಎಂದು ಅಭಿಪ್ರಾಯಟ್ಟಿದ್ದರು. ಅಲ್ಲದೆ ತಮ್ಮ ವಾದಗಳಿಗೆ 2016 ರ ಐಪಿಎಲ್ನ ಅಂಕಿ ಅಂಶಗಳನ್ನು ಕೂಡ ಮುಂದಿಟ್ಟಿದ್ದರು.
2016 ರಲ್ಲಿ ಆರ್ಸಿಬಿ ಪರ ಆರಂಭಿಕರಾಗಿ ಆಡಿದ್ದ ಕೊಹ್ಲಿ 973 ರನ್ ಬಾರಿಸಿ ಹೊಸ ಇತಿಹಾಸ ನಿರ್ಮಿಸಿದ್ದರು. ಹೀಗಾಗಿ ಟೀಮ್ ಇಂಡಿಯಾ ಪರ ಕೂಡ ಕೊಹ್ಲಿ ಆರಂಭಿಕರಾಗಿ ಆಡುವುದು ಸೂಕ್ತ ಎಂದು ಕೆಲ ಮಾಜಿ ಕ್ರಿಕೆಟಿಗರು ಅಭಿಪ್ರಾಯಪಟ್ಟಿದ್ದರು. ಆದರೆ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆಯ ಚರ್ಚೆಗಳ ಬಗ್ಗೆ ಟೀಮ್ ಇಂಡಿಯಾ ಮಾಜಿ ಆರಂಭಿಕ ಆಟಗಾರ ಗೌತಮ್ ಗಂಭೀರ್ ಗರಂ ಆಗಿದ್ದಾರೆ.
ಈ ಬಗ್ಗೆ ಮಾತನಾಡಿದ ಗಂಭೀರ್, ವಿರಾಟ್ ಕೊಹ್ಲಿ ಓಪನರ್ ಆಗಿ ಆಡುವ ಬಗ್ಗೆ ಅಸಂಬದ್ಧ ಚರ್ಚೆಯನ್ನು ಹುಟ್ಟುಹಾಕಬೇಡಿ. ಈಗಾಗಲೇ ಆರಂಭಿಕರಾಗಿ ಕೆಎಲ್ ರಾಹುಲ್ ಮತ್ತು ರೋಹಿತ್ ಶರ್ಮಾ ಇದ್ದಾರೆ. ಹೀಗಾಗಿ ಈ ಬಗ್ಗೆ ಚರ್ಚೆ ಕೂಡ ಮಾಡಬಾರದು ಎಂದು ನಾನು ಈ ಹಿಂದೆಯೇ ಹೇಳಿದ್ದೇನೆ ಎಂದು ಗಂಭೀರ್ ತಿಳಿಸಿದರು.
ವಿರಾಟ್ ಕೊಹ್ಲಿ 3ನೇ ಕ್ರಮಾಂಕದಲ್ಲಿ ಹೊಂದಿಕೊಳ್ಳುತ್ತಾರೆ. ಏಕೆಂದರೆ ಆರಂಭಿಕರು 10 ಓವರ್‌ಗಳ ಕಾಲ ಬ್ಯಾಟ್ ಮಾಡಿದರೆ, ನಂತರ ನಾನು ಸೂರ್ಯಕುಮಾರ್ ಯಾದವ್ ಅವರನ್ನು ನಂಬರ್ 3 ನಲ್ಲಿ ಕಣಕ್ಕಿಳಿಸುವುದು ಸೂಕ್ತ ಎನ್ನುತ್ತೇನೆ. ಆದರೆ ಆರಂಭಿಕ ವಿಕೆಟ್ ಬೇಗನೆ ಪತನವಾದರೆ ವಿರಾಟ್ ಕೊಹ್ಲಿಯೇ 3ನೇ ಕ್ರಮಾಂಕದಲ್ಲಿ ಆಡಬೇಕೆಂದು ಗೌತಮ್ ಗಂಭೀರ್ ಅಭಿಪ್ರಾಯಪಟ್ಟರು.
ಈ ಹಿಂದೆ ವಿರಾಟ್ ಕೊಹ್ಲಿ ನಾಯಕರಾಗಿದ್ದಾಗ ಟೀಮ್ ಇಂಡಿಯಾ ಪರ ಓಪನಿಂಗ್ ಮಾಡುವ ಬಯಕೆಯನ್ನು ವ್ಯಕ್ತಪಡಿಸಿದ್ದರು. ಕಳೆದ ವರ್ಷ ಇಂಗ್ಲೆಂಡ್ ವಿರುದ್ಧ ತವರಿನಲ್ಲಿ ನಡೆದ ಸೀಮಿತ ಓವರ್‌ಗಳ ಸರಣಿಯಲ್ಲಿ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಇನಿಂಗ್ಸ್ ಆರಂಭಿಸಿದ್ದರು.
ಆದರೆ ಇದೀಗ ವಿರಾಟ್ ಕೊಹ್ಲಿಯನ್ನು ಓಪನರ್ ಆಗಿ ಆಡಿಸಿ, ನಾಯಕ ರೋಹಿತ್ ಶರ್ಮಾ ಅಥವಾ ಕೆಎಲ್ ರಾಹುಲ್ ಅವರ ಸ್ಥಾನವನ್ನು ಬದಲಿಸುವುದು ಸರಿಯಲ್ಲ. 3ನೇ ಸ್ಥಾನದಲ್ಲಿರುವ ಕೊಹ್ಲಿಗೂ ಅಂತಹ ಯಾವುದೇ ಕೆಟ್ಟ ಯೋಚನೆಯಿಲ್ಲ. ಏಕೆಂದರೆ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡುವಾಗ ಕೊಹ್ಲಿ ಹೆಚ್ಚು ಯಶಸ್ವಿಯಾಗಿದ್ದಾರೆ ಎಂದು ಗಂಭೀರ್ ತಿಳಿಸಿದರು.
ಇನ್ನು ಗೌತಮ್ ಗಂಭೀರ್ ಅವರ ಈ ಅಭಿಪ್ರಾಯಕ್ಕೆ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಮ್ಯಾಥ್ಯೂ ಹೇಡನ್ ಕೂಡ ಬೆಂಬಲ ಸೂಚಿಸಿದ್ದಾರೆ. 3ನೇ ಕ್ರಮಾಂಕದಲ್ಲಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಭಾರತ ತಂಡಕ್ಕೆ ಅಮೂಲ್ಯವಾದುದು ಎಂದು ಹೇಡನ್ ಅಭಿಪ್ರಾಯಪಟ್ಟಿದ್ದಾರೆ. ಹೀಗಾಗಿ ವಿರಾಟ್ ಕೊಹ್ಲಿಯ ಬ್ಯಾಟಿಂಗ್ ಕ್ರಮಾಂಕದ ಬದಲಾವಣೆಯ ಬಗ್ಗೆ ಮೊಂಡು ವಾದ ಬೇಡ. ಇಂತಹ ತರ್ಕಗಳೇ ಅಸಂಬದ್ಧ ಎಂದು ಗೌತಮ್ ಗಂಭೀರ್ ಹೇಳಿದ್ದಾರೆ.