
ಭಾರತ ಟಿ20 ತಂಡದ ಮುಂದಿನ ನಾಯಕ ಯಾರು? ಈ ಪ್ರಶ್ನೆಗೆ ಶೀಘ್ರದಲ್ಲೇ ಉತ್ತರ ಸಿಗಲಿದೆ. ಆದರೆ ನೂತನ ನಾಯಕನ ಆಯ್ಕೆಯಲ್ಲಿ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ನಿರ್ಧಾರವೇ ಅಂತಿಮವಾಗುವ ಸಾಧ್ಯತೆ ದಟ್ಟವಾಗಿದೆ. ಪ್ರಸ್ತುತ ನಾಯಕ ಸೂರ್ಯಕುಮಾರ್ ಯಾದವ್ ಅವರ ಫಾರ್ಮ್ ಕೈಕೊಟ್ಟಿರುವ ಕಾರಣ ಸೆಲೆಕ್ಟರ್‌ಗಳು ಹೊಸ ನಾಯಕನ ಹುಡುಕಾಟದಲ್ಲಿದ್ದಾರೆ. ಆದರೆ, ರೇಸ್‌ನಲ್ಲಿ ಮುಂಚೂಣಿಯಲ್ಲಿರಬೇಕಾಗಿದ್ದ ಶ್ರೇಯಸ್ ಅಯ್ಯರ್ ಅವರ ಹಾದಿಗೆ ಗಂಭೀರ್ ಅಡ್ಡಿಯಾಗಬಹುದು ಎಂಬ ವರದಿಗಳು ಕ್ರಿಕೆಟ್ ವಲಯದಲ್ಲಿ ಭಾರಿ ಸಂಚಲನ ಮೂಡಿಸಿವೆ.
ವರದಿಗಳ ಪ್ರಕಾರ, ಕೋಚ್ ಗೌತಮ್ ಗಂಭೀರ್ ಮತ್ತು ಶ್ರೇಯಸ್ ಅಯ್ಯರ್ ನಡುವೆ ಎಲ್ಲವೂ ಸರಿಯಿಲ್ಲ. ಕೊಲ್ಕತ್ತಾ ನೈಟ್ ರೈಡರ್ಸ್ (KKR) ಐಪಿಎಲ್ ಚಾಂಪಿಯನ್ ಆದಾಗ, ತಂಡದ ನಾಯಕನಾಗಿದ್ದ ಅಯ್ಯರ್ ಅವರಿಗಿಂತ ಮೆಂಟರ್ ಆಗಿದ್ದ ಗಂಭೀರ್ ಅವರಿಗೆ ಮಾಧ್ಯಮಗಳಲ್ಲಿ ಹೆಚ್ಚಿನ ಕ್ರೆಡಿಟ್ ಸಿಕ್ಕಿತ್ತು. ಇದು ಅಯ್ಯರ್ ಅಸಮಾಧಾನಕ್ಕೆ ಕಾರಣವಾಗಿತ್ತು ಎನ್ನಲಾಗಿದೆ.
ಇದೇ ಮುನಿಸಿನಿಂದಾಗಿ ಕೆಕೆಆರ್ ತಂಡದಿಂದ ಹೊರ ನಡೆದಿದ್ದ ಶ್ರೇಯಸ್ ಅಯ್ಯರ್, ಬಳಿಕ ಪಂಜಾಬ್ ಕಿಂಗ್ಸ್ ತಂಡ ಸೇರಿದ್ದರು. ಇತ್ತ ಗಂಭೀರ್ ಭಾರತ ತಂಡದ ಕೋಚ್ ಆದಾಗಿನಿಂದ ಅಯ್ಯರ್ ಟೀಮ್ ಇಂಡಿಯಾದ ಖಾಯಂ ಸದಸ್ಯನಾಗಿ ಕಾಣಿಸಿಕೊಂಡಿಲ್ಲ. ಅದರಲ್ಲೂ ದೇಶಿ ಕ್ರಿಕೆಟ್‌ನಲ್ಲಿ ಅಯ್ಯರ್ ರನ್ ಮಳೆ ಹರಿಸಿದರೂ ಅವರನ್ನು ಟೆಸ್ಟ್ ಹಾಗೂ ಏಷ್ಯಾ ಕಪ್ ತಂಡದಿಂದ ಕೈಬಿಡಲಾಗಿತ್ತು.
ಈ ಬಾರಿಯ ಐಪಿಎಲ್ ಸೀಸನ್‌ನಲ್ಲಿ ಶ್ರೇಯಸ್ ಅಯ್ಯರ್ ಭರ್ಜರಿ ಪ್ರದರ್ಶನ ನೀಡಿದ್ದಾರೆ. 55.33 ರ ಸರಾಸರಿಯಲ್ಲಿ, 198.03 ರ ಸ್ಟ್ರೈಕ್ ರೇಟ್‌ನೊಂದಿಗೆ 498 ರನ್ ಗಳಿಸಿದ್ದಾರೆ. ಮತ್ತೊಂದೆಡೆ, ಸೂರ್ಯಕುಮಾರ್ ಯಾದವ್ ಕೇವಲ 210 ರನ್ ಗಳಿಸಿ ಫಾರ್ಮ್ಗಾಗಿ ತಡಕಾಡುತ್ತಿದ್ದಾರೆ. ಹೀಗಾಗಿ ನಾಯಕತ್ವ ಬದಲಾಗುವುದು ಖಚಿತ. ಆದರೆ ಸೆಲೆಕ್ಟರ್‌ಗಳ ನಾಯಕತ್ವ ಬದಲಾವಣೆ ತೀರ್ಮಾನಕ್ಕೆ ಗಂಭೀರ್ ತಮ್ಮ ‘ವೀಟೋ ಪವರ್’ ಬಳಸಿ ಅಡ್ಡಿಪಡಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.
ಅಂದರೆ ಆಯ್ಕೆ ಸಮಿತಿಯು ಶ್ರೇಯಸ್ ಅಯ್ಯರ್ ಅವರಿಗೆ ಕ್ಯಾಪ್ಟನ್ ಪಟ್ಟ ನೀಡಲು ಆಸಕ್ತರಾಗಿದ್ದಾರೆ. ಇದಾಗ್ಯೂ ಟೀಮ್ ಇಂಡಿಯಾ ಹೆಡ್ ಕೋಚ್ ಗೌತಮ್ ಗಂಭೀರ್ ಅವರ ತೀರ್ಮಾನವೇ ಅಂತಿಮ.
ಏಕೆಂದರೆ ಕಳೆದ ಬಾರಿ ಟಿ20 ತಂಡದ ನಾಯಕನ ರೇಸ್‌ನಲ್ಲಿ ಹಾರ್ದಿಕ್ ಪಾಂಡ್ಯ ಹೆಸರು ಮುಂಚೂಣಿಯಲ್ಲಿತ್ತು. ಆದರೆ ಗಂಭೀರ್, ಸೂರ್ಯಕುಮಾರ್ ಯಾದವ್ ಅವರನ್ನು ಕ್ಯಾಪ್ಟನ್ ಮಾಡುವಂತೆ ಪಟ್ಟು ಹಿಡಿದಿದ್ದರು.
ಗೌತಮ್ ಗಂಭೀರ್ ಅವರ ಈ ನಿರ್ಧಾರವು ಫಲ ನೀಡಿತು. ಪರಿಣಾಮ ಟೀಮ್ ಇಂಡಿಯಾ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ಇದೀಗ ಇದೇ ಯಶಸ್ಸನ್ನು ಮುಂದಿಟ್ಟುಕೊಂಡು ಗೌತಮ್ ಗಂಭೀರ್ ನಾಯಕನ ಆಯ್ಕೆಯಲ್ಲಿ ನಿರ್ಣಾಯಕ ಪಾತ್ರವಹಿಸಲಿದ್ದಾರೆ ಎಂದು ವರದಿಯಾಗಿದೆ.
ಅಂದರೆ ಇಲ್ಲಿ ಗೌತಮ್ ಗಂಭೀರ್ ತಮಗೆ ಬೇಕಾದವರನ್ನು ಕ್ಯಾಪ್ಟನ್ ಆಗಿ ಆಯ್ಕೆ ಮಾಡುವ ಸಾಧ್ಯತೆ ಹೆಚ್ಚಿದೆ. ಹೀಗಾಗಿ ಶ್ರೇಯಸ್ ಅಯ್ಯರ್ ಅವರಿಗೆ ಟಿ20 ತಂಡದ ನಾಯಕತ್ವ ಒಲಿಯುವುದು ಅನುಮಾನ ಎನ್ನಲಾಗುತ್ತಿದೆ.
ಅತ್ತ ಗೌತಮ್ ಗಂಭೀರ್ ಅವರ ಸಲಹೆಯಂತೆ ಈಗಾಗಲೇ ಶುಭ್ಮನ್ ಗಿಲ್ ಅವರನ್ನು ಏಕದಿನ ಹಾಗೂ ಟೆಸ್ಟ್ ತಂಡಗಳಿಗೆ ಕ್ಯಾಪ್ಟನ್ ಆಗಿ ಆಯ್ಕೆ ಮಾಡಲಾಗಿದೆ. ಇತ್ತ ಈ ಬಾರಿಯ ಐಪಿಎಲ್ನಲ್ಲಿ ಅತ್ಯುತ್ತಮ ಸ್ಟ್ರೈಕ್ ರೇಟ್‌ನೊಂದಿಗೆ ಭರ್ಜರಿ ಪ್ರದರ್ಶನ ನೀಡಿರುವ ಶುಭ್ಮನ್ ಗಿಲ್ ನಾಯಕನಾಗಿ ಗುಜರಾತ್ ಟೈಟಾನ್ಸ್ ತಂಡವನ್ನು ಯಶಸ್ವಿಯಾಗಿ ಪ್ಲೇಆಫ್ನತ್ತ ಮುನ್ನಡೆಸಿದ್ದಾರೆ.
ಇದನ್ನೂ ಓದಿ: ಸೋಲಿಗೆ ನಾನೊಬ್ಬನೇ ಜವಾಬ್ದಾರನಲ್ಲ… ಅವರು ಸಹ ಕಾರಣ!
ಈ ಎಲ್ಲಾ ಕಾರಣಗಳನ್ನು ಮುಂದಿಟ್ಟು ಗೌತಮ್ ಗಂಭೀರ್ ಶುಭ್ಮನ್ ಗಿಲ್ ಅವರನ್ನು ಟಿ20 ತಂಡದ ಕ್ಯಾಪ್ಟನ್ ಮಾಡಬೇಕೆಂಬ ಬೇಡಿಕೆ ಮುಂದಿಡುವ ಸಾಧ್ಯತೆಯಿದೆ. ಈ ಬೇಡಿಕೆಯನ್ನು ಆಯ್ಕೆ ಸಮಿತಿ ಒಪ್ಪಿಕೊಂಡರೆ ಭಾರತ ತಂಡದ ಏಕೈಕ ಕ್ಯಾಪ್ಟನ್ ಆಗಿ ಶುಭ್ಮನ್ ಗಿಲ್ ಕಾಣಿಸಿಕೊಳ್ಳಲಿದ್ದಾರೆ.