AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rishabh Pant: ಸೋಲಿಗೆ ನಾನೊಬ್ಬನೇ ಜವಾಬ್ದಾರನಲ್ಲ… ಅವರು ಸಹ ಕಾರಣ!

IPL 2026 LSG vs PBKS: ಇಂಡಿಯನ್ ಪ್ರೀಮಿಯರ್ ಲೀಗ್​ನ (ಐಪಿಎಲ್ 2026) 68ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು 20 ಓವರ್​ಗಳಲ್ಲಿ 196 ರನ್​ ಕಲೆಹಾಕಿದ್ದರು. ಈ ಗುರಿಯನ್ನು ಶ್ರೇಯಸ್ ಅಯ್ಯರ್ (101) ಅವರ ಅಜೇಯ ಶತಕದೊಂದಿಗೆ ಪಂಜಾಬ್ ಕಿಂಗ್ಸ್ ತಂಡವು 18 ಓವರ್​ಗಳಲ್ಲಿ ಚೇಸ್ ಮಾಡಿ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

Rishabh Pant: ಸೋಲಿಗೆ ನಾನೊಬ್ಬನೇ ಜವಾಬ್ದಾರನಲ್ಲ... ಅವರು ಸಹ ಕಾರಣ!
Rishabh Pant
ಝಾಹಿರ್ ಯೂಸುಫ್
|

Updated on: May 24, 2026 | 8:47 AM

Share

IPL 2026: ಇಂಡಿಯನ್ ಪ್ರೀಮಿಯರ್ ಲೀಗ್​ನ 68ನೇ ಪಂದ್ಯದಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡ ಸೋಲನುಭವಿಸಿದೆ. ಲಕ್ನೋನ ಏಕಾನ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಪಂಜಾಬ್ ಕಿಂಗ್ಸ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ 20 ಓವರ್​ಗಳಲ್ಲಿ 196 ರನ್ ಕಲೆಹಾಕಿದ್ದರು. ಈ ಗುರಿಯನ್ನು ಪಂಜಾಬ್ ಕಿಂಗ್ಸ್ ತಂಡ ಕೇವಲ 18 ಓವರ್​ಗಳಲ್ಲಿ ಚೇಸ್ ಮಾಡಿದೆ. ಈ ಮೂಲಕ ಪಂಜಾಬ್ ಪಡೆ 7 ವಿಕೆಟ್​ಗಳ ಭರ್ಜರಿ ಜಯ ಸಾಧಿಸಿದೆ.

ಈ ಸೋಲಿನ ಬಳಿಕ ಮಾತನಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ ರಿಷಭ್ ಪಂತ್, “ಖಂಡಿತವಾಗಿಯೂ ನಾವು ಇನ್ನು 5-10 ರನ್ ಹೆಚ್ಚು ಗಳಿಸಬಹುದಿತ್ತು. ಆದರೆ ಈ ಮೊತ್ತ ಗೆಲ್ಲಲು ಸಾಕಾಗಿತ್ತು. ಆದರೆ ಏಕನಾ ಪಿಚ್‌ನಲ್ಲಿ ಎರಡನೇ ಇನ್ನಿಂಗ್ಸ್‌ನಲ್ಲಿ ಬ್ಯಾಟಿಂಗ್ ಮಾಡುವುದು ತುಂಬಾ ಸುಲಭವಾಗುತ್ತದೆ. ಅದೇ ಕಾರಣಕ್ಕೆ ಇಲ್ಲಿ ಎಲ್ಲರೂ ಮೊದಲು ಫೀಲ್ಡಿಂಗ್ ಮಾಡಲು ಬಯಸುತ್ತಾರೆ. ಅಂದರೆ ಇಲ್ಲಿ ಟಾಸ್ ಪ್ರಮುಖ ಪಾತ್ರವಹಿಸುತ್ತದೆ. ಅತ್ತ ಟಾಸ್ ಗೆದ್ದು ಪಂಜಾಬ್ ಕಿಂಗ್ಸ್ ಚೇಸಿಂಗ್ ಆಯ್ಕೆ ಮಾಡಿಕೊಂಡಿದ್ದರಿಂದ ಈ ಪಂದ್ಯವನ್ನು ಸುಲಭವಾಗಿ ಗೆದ್ದುಕೊಂಡಿದ್ದಾರೆ” ಎಂದು ರಿಷಭ್ ಪಂತ್ ಹೇಳಿದ್ದಾರೆ.

ಇದೇ ವೇಳೆ ಲಕ್ನೋ ಸೂಪರ್ ಜೈಂಟ್ಸ್​ ತಂಡಕ್ಕೆ ಇದು ಅತ್ಯಂತ ಕಠಿಣ ಸೀಸನ್ ಆಗಿದ್ದರೂ, ಕೆಲವು ಆಟಗಾರರ ಪ್ರದರ್ಶನವನ್ನು ರಿಷಭ್ ಪಂತ್ ಮುಕ್ತಕಂಠದಿಂದ ಶ್ಲಾಘಿಸಿದರು:

  • ಜೋಶ್ ಇಂಗ್ಲಿಸ್: ಕೊನೆಯ ಪಂದ್ಯದಲ್ಲಿ ಅದ್ಭುತ ಇನ್ನಿಂಗ್ಸ್ ಆಡಿ ತಂಡಕ್ಕೆ ನೆರವಾಗಿದ್ದರು. ಅವರು ತಂಡದಲ್ಲಿ ಕಾಣಿಸಿಕೊಂಡಿರುವುದು ಪ್ಲಸ್ ಪಾಯಿಂಟ್.
  • ಪ್ರಿನ್ಸ್ ಯಾದವ್: ಈ ಸೀಸನ್‌ನಲ್ಲಿ ಅದ್ಭುತ ಬೌಲಿಂಗ್ ಪ್ರದರ್ಶಿಸಿ, ಭಾರತ ತಂಡಕ್ಕೆ ಆಯ್ಕೆಯಾಗುವ ಮೂಲಕ ಗಮನ ಸೆಳೆದಿದ್ದಾರೆ.
  •  ಮೊಹ್ಸಿನ್ ಖಾನ್ ಮತ್ತು ಮೊಹಮ್ಮದ್ ಶಮಿ: ಗಾಯದಿಂದ ಚೇತರಿಸಿಕೊಂಡು ಬಂದ ಮೊಹ್ಸಿನ್ ಪ್ರಯತ್ನ ಹಾಗೂ ಇಡೀ ವೇಗದ ಬೌಲಿಂಗ್ ವಿಭಾಗವನ್ನು ಮುನ್ನಡೆಸಿದ ಹಿರಿಯ ವೇಗಿ ಮೊಹಮ್ಮದ್ ಶಮಿ ಅವರ ನಾಯಕತ್ವದ ಗುಣವನ್ನು ಪಂತ್ ಕೊಂಡಾಡಿದರು.
  • ಮಿಚೆಲ್ ಮಾರ್ಷ್: ಕೊನೆಯ ಪಂದ್ಯದಲ್ಲಿ ಆಡದಿದ್ದರೂ, ಸೀಸನ್‌ನಾದ್ಯಂತ ಮಾರ್ಷ್ ನೀಡಿದ ಕೊಡುಗೆಯನ್ನು ರಿಷಭ್ ಪಂತ್ ನೆನಪಿಸಿಕೊಂಡರು.

ಈ ಅನುಭವಿ ಆಟಗಾರರ ಉತ್ತಮ ಪ್ರದರ್ಶನದ ಹೊರತಾಗಿಯೂ ಕೆಲ ಪಂದ್ಯಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ ಎಂಬುದನ್ನು ಒಪ್ಪಿಕೊಂಡ ರಿಷಭ್ ಪಂತ್,  “ಕೆಲವೊಮ್ಮೆ ಜವಾಬ್ದಾರಿ ಇಲ್ಲದ ಆಲೋಚನೆಗಳು ಅಥವಾ ಯೋಜನೆಗಳು ಪರಿಸ್ಥಿತಿಯನ್ನು ಮತ್ತಷ್ಟು ಕಠಿಣಗೊಳಿಸುತ್ತವೆ” ಎಂದಿದ್ದಾರೆ.

ರಿಷಭ್ ಪಂತ್ ಅವರ ಈ ಹೇಳಿಕೆಯು ತಂಡದ ಮ್ಯಾನೇಜ್‌ಮೆಂಟ್ ಅಥವಾ ತಂತ್ರಗಾರಿಕೆಯಲ್ಲಿನ ಲೋಪದೋಷಗಳನ್ನು ಪರೋಕ್ಷವಾಗಿ ಉಲ್ಲೇಖಿಸಿದಂತಿದೆ. ಏಕೆಂದರೆ ಈ ಸೀಸನ್‌ನಾದ್ಯಂತ ಬ್ಯಾಟಿಂಗ್ ಕ್ರಮಾಂಕದಲ್ಲಿ ಪದೇ ಪದೇ ಆದ ಬದಲಾವಣೆಗಳು ಲಕ್ನೋ ಸೂಪರ್ ಜೈಂಟ್ಸ್​​ ಹಿನ್ನಡೆಗೆ ಪ್ರಮುಖ ಕಾರಣವಾಗಿತ್ತು.

ಈ ಮೂಲಕ ಲಕ್ನೋ ಸೂಪರ್ ಜೈಂಟ್ಸ್ ತಂಡದ ಹೀನಾಯ ಪ್ರದರ್ಶನಕ್ಕೆ ನಾನೊಬ್ಬನೇ ಕಾರಣನಲ್ಲ, ಬದಲಾಗಿ ಟೀಮ್ ಮ್ಯಾನೇಜ್ಮೆಂಟ್ ತೆಗೆದುಕೊಂಡ ಜವಾಬ್ದಾರಿ ಇಲ್ಲದ ಕೆಲ ನಿರ್ಧಾರಗಳು ಹಾಗೂ ಯೋಜನೆಗಳು ಕೂಡ ಸಹ ಕಾರಣ ಎಂದು ರಿಷಭ್ ಪಂತ್ ಪರೋಕ್ಷವಾಗಿ ತಿಳಿಸಿದ್ದಾರೆ.

ಇನ್ನು ಈ ಸೋಲು-ಗೆಲುವುಗಳ ನಡುವೆ ತಂಡದ ಬಗ್ಗೆ ಹೆಮ್ಮೆ ವ್ಯಕ್ತಪಡಿಸಿರುವ ರಿಷಭ್ ಪಂತ್, “ಇದು ನಮಗೆ ತುಂಬಾ ಸುದೀರ್ಘ ಮತ್ತು ಕಠಿಣ ಸೀಸನ್ ಆಗಿತ್ತು. ಏನೇ ಆದರೂ ನಾವು ತಲೆ ಎತ್ತಿ ಮುನ್ನಡೆಯುತ್ತೇವೆ. ತಪ್ಪುಗಳಿಂದ ಸಾಕಷ್ಟು ಕಲಿತಿದ್ದೇವೆ. ಮುಂದಿನ ವರ್ಷ (IPL 2027) ಇನ್ನಷ್ಟು ಬಲಿಷ್ಠವಾಗಿ ಮರಳುತ್ತೇವೆ ಎಂದು ಭರವಸೆ ನೀಡುತ್ತೇನೆ,” ಎಂದು ಭಾವುಕರಾಗಿ ನುಡಿದರು.

ಇದನ್ನೂ ಓದಿ: Shreyas Iyer: ಅಯ್ಯರ್ ಫೈಯರ್… ಭರ್ಜರಿ ದಾಖಲೆ!

ಒಟ್ಟಾರೆಯಾಗಿ ಹೇಳುವುದಾದರೆ, ಐಪಿಎಲ್ 2026ರ ಸೀಸನ್ ಲಕ್ನೋ ಸೂಪರ್ ಜೈಂಟ್ಸ್ ತಂಡಕ್ಕೆ ಅಂದುಕೊಂಡಷ್ಟು ಸುಲಭವಾಗಿರಲಿಲ್ಲ. ನಿರಂತರ ತಂತ್ರಗಾರಿಕೆಯ ಏರಿಳಿತಗಳು ಮತ್ತು ಕಠಿಣ ಸವಾಲುಗಳ ನಡುವೆಯೂ, ನಾಯಕ ರಿಷಭ್ ಪಂತ್ ತಂಡದ ಧನಾತ್ಮಕ ಅಂಶಗಳನ್ನು ಎತ್ತಿಹಿಡಿದಿದ್ದಾರೆ.

ಯುವ ಆಟಗಾರರ ಉದಯ ಮತ್ತು ಹಿರಿಯ ಆಟಗಾರರ ಮಾರ್ಗದರ್ಶನ ಮುಂದಿನ ಸೀಸನ್‌ಗೆ ತಂಡಕ್ಕೆ ದೊಡ್ಡ ಬಲ ನೀಡಲಿದೆ ಎಂಬುದರಲ್ಲಿ ಸಂಶಯವಿಲ್ಲ. ಸೋಲಿನ ಕಹಿಯನ್ನು ಮರೆತು, ತಪ್ಪುಗಳಿಂದ ಪಾಠ ಕಲಿತು, ಕಠಿಣ ಪರಿಶ್ರಮದೊಂದಿಗೆ ಐಪಿಎಲ್ 2027ರಲ್ಲಿ ಲಕ್ನೋ ಸೂಪರ್ ಜೈಂಟ್ಸ್​ ತಂಡವು ಹೊಸ ಅಧ್ಯಾಯ ಬರೆಯಲು ಸಜ್ಜಾಗಬೇಕಿದೆ.

Follow Us
Zahir Yusuf
Zahir Yusuf

ಟಿವಿ9 ಡಿಜಿಟಲ್ ಮುಖ್ಯ ಉಪ ಸಂಪಾದಕ. 10 ವರ್ಷಗಳಿಂದ ಕನ್ನಡ ಡಿಜಿಟಲ್​ ಮಾಧ್ಯಮದಲ್ಲಿ ಪತ್ರಿಕಾ ವೃತ್ತಿ. ಕ್ರೀಡಾ ಸುದ್ದಿ, ದೀರ್ಘ ಲೇಖನ, ವಿಶ್ಲೇಷಣೆ, ಹೀಗೆ ಎಲ್ಲ ತರಹದ ಬರಹದಲ್ಲೂ ಅನುಭವ. ಪ್ರಸ್ತುತ ವಿದ್ಯಮಾನಗಳ ವ್ಯಾಖ್ಯಾನ, ಚರ್ಚೆಯಲ್ಲಿ ನೈಪುಣ್ಯ. ಈ ಹಿಂದೆ ಉದಯವಾಣಿ, ನ್ಯೂಸ್ 18 ಕನ್ನಡ ಡಿಜಿಟಲ್​​ನಲ್ಲಿ ಕೆಲಸ ಮಾಡಿದ ಅನುಭವ. ಆಸಕ್ತಿದಾಯಕ ವಿಷಯ ಕ್ರೀಡೆ, ಸಿನಿಮಾ ಮತ್ತು ರಾಜಕೀಯ.

Read More