ನೀ ಔಟಾಗಿದ್ದು ಒಳ್ಳೆದಾಯ್ತು… ವಿರಾಟ್ ಕೊಹ್ಲಿಗೆ ಕೆಎಲ್ ರಾಹುಲ್ ಪ್ರತ್ಯುತ್ತರ

IPL 2025 RCB vs DC: ಇಂಡಿಯನ್ ಪ್ರೀಮಿಯರ್ ಲೀಗ್​​ನ (ಐಪಿಎಲ್ 2025) 46ನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 162 ರನ್ ಕಲೆಹಾಕಿತು. ಈ ಗುರಿಯನ್ನು ಬೆನ್ನತ್ತಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು 18.3 ಓವರ್​ಗಳಲ್ಲಿ ಚೇಸ್ ಮಾಡಿ 6 ವಿಕೆಟ್​ಗಳ ಜಯ ಸಾಧಿಸಿದೆ.

ನೀ ಔಟಾಗಿದ್ದು ಒಳ್ಳೆದಾಯ್ತು... ವಿರಾಟ್ ಕೊಹ್ಲಿಗೆ ಕೆಎಲ್ ರಾಹುಲ್ ಪ್ರತ್ಯುತ್ತರ
Virat Kohli - Kl Rahul

Updated on: Apr 29, 2025 | 9:55 AM

IPL 2025: ಇಂಡಿಯನ್ ಪ್ರೀಮಿಯರ್ ಲೀಗ್​ನ 46ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಹಾಗೂ ಡೆಲ್ಲಿ ಕ್ಯಾಪಿಟಲ್ಸ್ (DC) ತಂಡಗಳು ಮುಖಾಮುಖಿಯಾಗಿದ್ದವು. ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ಆರ್​ಸಿಬಿ ತಂಡದ ನಾಯಕ ರಜತ್ ಪಾಟಿದಾರ್ ಬೌಲಿಂಗ್ ಆಯ್ದುಕೊಂಡಿದ್ದರು. ಅದರಂತೆ ಮೊದಲು ಬ್ಯಾಟ್ ಮಾಡಿದ ಡೆಲ್ಲಿ ಕ್ಯಾಪಿಟಲ್ಸ್ ತಂಡವು 20 ಓವರ್​ಗಳಲ್ಲಿ 8 ವಿಕೆಟ್ ಕಳೆದುಕೊಂಡು 162 ರನ್ ಕಲೆಹಾಕಿತು.

ಈ ಗುರಿ ಬೆನ್ನತ್ತಿದ ಆರ್​ಸಿಬಿ ತಂಡವು ಕೇವಲ 26 ರನ್​ಗಳಿಸುವಷ್ಟರಲ್ಲಿ 3 ಪ್ರಮುಖ ವಿಕೆಟ್ ಕಳೆದುಕೊಂಡಿತು. ಈ ಹಂತದಲ್ಲಿ ಜೊತೆಗೂಡಿದ ವಿರಾಟ್ ಕೊಹ್ಲಿ ಹಾಗೂ ಕೃನಾಲ್ ಪಾಂಡ್ಯ ಜವಾಬ್ದಾರಿಯುತ ಬ್ಯಾಟಿಂಗ್ ಪ್ರದರ್ಶಿಸಿದರು. ಎಚ್ಚರಿಕೆಯ ಆಟದೊಂದಿಗೆ ಇನಿಂಗ್ಸ್ ಕಟ್ಟಿದ ಈ ಜೋಡಿಯು ಶತಕದ ಜೊತೆಯಾಟವಾಡಿದರು.

ಇದನ್ನೂ ಓದಿ
PSL 2025: ಪಾಕಿಸ್ತಾನ್ ಸೂಪರ್ ಲೀಗ್​ನಲ್ಲಿ RCB ಮಾಜಿ ಆಟಗಾರರು
ಪ್ರಿಯಾಂಶ್ ಆರ್ಯನ ಆರ್ಭಟಕ್ಕೆ ವಿಶ್ವ ದಾಖಲೆಯೇ ಉಡೀಸ್
ಕ್ರಿಸ್​ ಗೇಲ್ ದಾಖಲೆ ಜಸ್ಟ್ ಮಿಸ್: ವಿಶ್ವ ದಾಖಲೆ ಬರೆದ ವಿರಾಟ್ ಕೊಹ್ಲಿ
ಉಲ್ಟಾ ಹೊಡೆದ RCB ಕಪ್ ಗೆಲ್ಲಬಾರದು ಎಂದಿದ್ದ ಅಂಬಾಟಿ ರಾಯುಡು

ಇದರ ನಡುವೆ ವಿರಾಟ್ ಕೊಹ್ಲಿ 45 ಎಸೆತಗಳಲ್ಲಿ ಅರ್ಧಶತಕ ಬಾರಿಸಿದರೆ, ಕೃನಾಲ್ ಪಾಂಡ್ಯ 38 ಎಸೆತಗಳಲ್ಲಿ ಹಾಫ್ ಸೆಂಚುರಿ ಸಿಡಿಸಿದರು. ಈ ಅರ್ಧಶತಕಗಳ ನೆರವಿನೊಂದಿಗೆ ಆರ್​ಸಿಬಿ ತಂಡ 18.3 ಓವರ್​ಗಳಲ್ಲಿ 165 ರನ್ ಬಾರಿಸಿ 6 ವಿಕೆಟ್​ಗಳ ಜಯ ಸಾಧಿಸಿತು.

ವಿರಾಟ್ ಕೊಹ್ಲಿಯ ಪ್ಲ್ಯಾನ್ ಮಿಸ್:

ಈ ಗೆಲುವಿನ ಬಳಿಕ ವಿರಾಟ್ ಕೊಹ್ಲಿ ಕೆಎಲ್ ರಾಹುಲ್​ಗೆ ಮೈದಾನದಲ್ಲೇ ತಿರುಗೇಟು ನೀಡಲು ಪ್ಲ್ಯಾನ್ ರೂಪಿಸಿದ್ದರು. ಏಕೆಂದರೆ ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಆರ್​ಸಿಬಿ ವಿರುದ್ಧದ ಪಂದ್ಯದ ಬಳಿಕ ಕೆಎಲ್ ರಾಹುಲ್ ಇದು ನನ್ನ ಮೈದಾನ ಎಂದು ವೃತ್ತ ಬರೆದು ಕಾಂತಾರಾ ಸಿನಿಮಾ ಸ್ಟ್ರೈಲ್​ನಲ್ಲಿ ಸಂಭ್ರಮಿಸಿದ್ದರು.

ಇದಕ್ಕೆ ಪ್ರತಿಯಾಗಿ ದೆಹಲಿಯಲ್ಲಿ ತಿರುಗೇಟು ನೀಡಲು ಕೊಹ್ಲಿ ಪ್ಲ್ಯಾನ್ ಹಾಕಿಕೊಂಡಿದ್ದರು. ಈ ಪ್ಲ್ಯಾನ್​ನಂತ ಕ್ರೀಸ್ ಕಚ್ಚಿ ಆಡಿದ್ದ ವಿರಾಟ್ ಕೊಹ್ಲಿ 18ನೇ ಓವರ್​ನಲ್ಲಿ ಔಟಾದರು. ಹೀಗಾಗಿ ಪಂದ್ಯದ ಬಳಿಕ ಮೈದಾನದಲ್ಲಿ ಕೆಎಲ್ ರಾಹುಲ್​ಗೆ ತಿರುಗೇಟು ನೀಡಲು ಸಾಧ್ಯವಾಗಲಿಲ್ಲ. ಇದನ್ನು ಖುದ್ದು ವಿರಾಟ್ ಕೊಹ್ಲಿಯೇ ಬಹಿರಂಗಪಡಿಸಿದ್ದಾರೆ.

ಡೆಲ್ಲಿ ಕ್ಯಾಪಿಟಲ್ಸ್ ಫ್ರಾಂಚೈಸಿಯು ತನ್ನ ಅಧಿಕೃತ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ನಡುವಣ ಸಂಭಾಷಣೆಯ ವಿಡಿಯೋ ಹಂಚಿಕೊಂಡಿದೆ.

ಔಟಾಗಿದ್ದು ಒಳ್ಳೆದಾಯ್ತು:

ಪಂದ್ಯದ ಬಳಿಕ ನಡೆದ ಈ ಸಂಭಾಷಣೆಯ ನಡುವೆ ವಿರಾಟ್ ಕೊಹ್ಲಿ ಕಾಂತಾರಾ ಸೆಲೆಬ್ರೇಷನ್ ತೋರಿಸಿ ಕೆಎಲ್ ರಾಹುಲ್ ಅವರ ಕಾಲೆಳೆದಿದ್ದರು.

ನಾನು ಮ್ಯಾಚ್ ಮುಗಿಸಿದ ಬಳಿಕ ಕಾಂತಾರಾ ಶೈಲಿಯಲ್ಲಿ ಸಂಭ್ರಮಿಸಲು ನಾನು ಪ್ಲ್ಯಾನ್ ರೂಪಿಸಿದ್ದೆ. ಹೀಗೆ ಸೆಲೆಬ್ರೇಷನ್ ಮಾಡಿ ನಿನ್ನನ್ನು ತಬ್ಕೋಬೇಕು ಎಂದು ಅಂದುಕೊಂಡಿದ್ದೆ ಎಂದು ವಿರಾಟ್ ಕೊಹ್ಲಿ, ಕೆಎಲ್ ರಾಹುಲ್ ಜೊತೆ ಹೇಳಿದ್ದಾರೆ.

ಇದನ್ನೇ ನಾನು ಕರುಣ್ ನಾಯರ್​ಗೆ ಹೇಳುತ್ತಿದ್ದೆ. ವಿರಾಟ್ ಕೊಹ್ಲಿ ಔಟ್ ಆಗಿದ್ದು ಒಳ್ಳೆದಾಯ್ತು ಎಂದು ಕೆಎಲ್ ರಾಹುಲ್ ಪ್ರತಿಕ್ರಿಯಿಸಿದ್ದಾರೆ.

ವಿರಾಟ್ ಕೊಹ್ಲಿ-ಕೆಎಲ್ ರಾಹುಲ್ ವಿಡಿಯೋ:

ಇದೀಗ ಈ ಸಂಭಾಷಣೆಯ ವಿಡಿಯೋ ವೈರಲ್ ಆಗಿದ್ದು, ವಿರಾಟ್ ಕೊಹ್ಲಿ ಹಾಗೂ ಕೆಎಲ್ ರಾಹುಲ್ ನಡುವಣ ಗೆಳೆತನಕ್ಕೆ ಅಭಿಮಾನಿಗಳು ಮೆಚ್ಚುಗೆಗಳನ್ನು ವ್ಯಕ್ತಪಡಿಸುತ್ತಿದ್ದಾರೆ.

 

Published On - 9:54 am, Tue, 29 April 25