ಪಾಕಿಸ್ತಾನ್ ಆಟಗಾರನ ಮನೆ ಮೇಲೆ ಗುಂಡಿನ ದಾಳಿ..!
ಪಾಕಿಸ್ತಾನ್ ಮತ್ತು ಶ್ರೀಲಂಕಾ ನಡುವಣ ಏಕದಿನ ಸರಣಿಯು ಇಂದಿನಿಂದ (ನ.11) ಶುರುವಾಗಲಿದೆ. ಈ ಸರಣಿಯಲ್ಲಿ ಕಣಕ್ಕಿಳಿಯಲು ಸಜ್ಜಾಗುತ್ತಿದ್ದ ಪಾಕ್ ತಂಡದ ಯುವ ವೇಗಿ ನಸೀಮ್ ಶಾ ಅವರ ಮನೆ ಮೇಲೆ ಗುಂಪೊಂದು ಏಕಾಏಕಿ ದಾಳಿ ನಡೆಸಿದೆ. ಈ ದಾಳಿ ಸಂಬಂಧ ಇದೀಗ ಪೊಲೀಸರು ಐವರನ್ನು ವಶಪಡೆದಿದ್ದಾರೆ.

ಪಾಕಿಸ್ತಾನ್ ತಂಡದ ಯುವ ವೇಗದ ಬೌಲರ್ ನಸೀಮ್ ಶಾ ಅವರ ಮನೆಯ ಮೇಲೆ ಗುಂಡಿನ ದಾಳಿ ನಡೆದಿದೆ. ಖೈಬರ್ ಪಖ್ತೂನ್ಖ್ವಾದ ಲೋವರ್ ದಿರ್ನಲ್ಲಿರುವ ಅವರ ಮನೆಯ ಮೇಲೆ ಏಕಾಏಕಿ ದಾಳಿ ನಡೆದಿದ್ದು, ಇದೀಗ ಪ್ರಕರಣ ದಾಖಲಿಸಿ ಪೊಲೀಸರು ತನಿಖೆಯನ್ನು ಕೈಗೆತ್ತಿಕೊಂಡಿದ್ದಾರೆ ಎಂದು ವರದಿಯಾಗಿದೆ.
ವರದಿಗಳ ಪ್ರಕಾರ, ನಸೀಮ್ ಶಾ ಅವರ ಮನೆಯ ಮೇಲೆ ಬಹಿರಂಗವಾಗಿ ಗುಂಡು ಹಾರಿಸಲಾಗಿದ್ದು, ಹಲವಾರು ವಸ್ತುಗಳು ಹಾನಿಗೊಳಗಾಗಿವೆ. ದಾಳಿಯಲ್ಲಿ ಅವರ ಮನೆಯ ಕಿಟಕಿಗಳು, ಮುಖ್ಯ ದ್ವಾರ ಮತ್ತು ಪಾರ್ಕಿಂಗ್ ಪ್ರದೇಶವು ತೀವ್ರವಾಗಿ ಹಾನಿಗೊಂಡಿವೆ.
ಈ ದಾಳಿ ವೇಳೆ ನಸೀಮ್ ಶಾ ಅವರ ಪೋಷಕರು ಹಾಗೂ ಕೆಲ ಕುಟುಂಬಸ್ಥರು ಮಾತ್ರ ಮನೆಯಲ್ಲಿದ್ದರು. ಅದೃಷ್ಟವಶಾತ್ ಅವರ ಜೀವಗಳಿಗೆ ಯಾವುದೇ ಹಾನಿಯಾಗಿಲ್ಲ. ಅಲ್ಲದೆ ಇದೀಗ ಎಲ್ಲರೂ ಸುರಕ್ಷಿತವಾಗಿದ್ದಾರೆ ಎಂದು ವರದಿಯಲ್ಲಿ ತಿಳಿಸಲಾಗಿದೆ.
ಐವರ ಬಂಧನ:
ಪಾಕಿಸ್ತಾನ್ ಕ್ರಿಕೆಟಿಗನ ಮನೆ ಮೇಲೆ ದಾಳಿ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಐವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಅಲ್ಲದೆ ನಸೀಮ್ ಶಾ ಅವರ ಮನೆಗೆ ಪೊಲೀಸರು ಹೆಚ್ಚಿನ ಭದ್ರತೆಯನ್ನು ಒದಗಿಸಿದ್ದಾರೆ. ಇದೀಗ ತನಿಖೆಯನ್ನು ಕೈಗೆತ್ತಿಕೊಂಡಿರುವ ಪೊಲೀಸರು ಪ್ರಕರಣದ ಹಿಂದಿರುವ ಉದ್ದೇಶವನ್ನು ಪತ್ತೆ ಹಚ್ಚಲು ಮುಂದಾಗಿದ್ದಾರೆ.
ರಾವಲ್ಪಿಂಡಿಯಲ್ಲಿ ನಸೀಮ್ ಶಾ:
ದಾಳಿಯ ಸಮಯದಲ್ಲಿ ನಸೀಮ್ ಶಾ ಪಾಕಿಸ್ತಾನ್ ತಂಡದೊಂದಿಗೆ ರಾವಲ್ಪಿಂಡಿಯಲ್ಲಿದ್ದರು. ನವೆಂಬರ್ 11 ರಿಂದ 15 ರವರೆಗೆ ನಡೆಯಲಿರುವ ಶ್ರೀಲಂಕಾ ವಿರುದ್ಧದ ಮೂರು ಪಂದ್ಯಗಳ ಏಕದಿನ ಸರಣಿಗೆ ನಸೀಮ್ ಶಾ ಆಭ್ಯಾಸದಲ್ಲಿ ನಿರತರಾಗಿದ್ದಾರೆ.
ಇದನ್ನೂ ಓದಿ: Naseem Shah: 11ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿ ವಿಶ್ವ ದಾಖಲೆ ಬರೆದ ನಸೀಮ್ ಶಾ
ಏಕದಿನ ಸರಣಿಯ ನಂತರ, ನಸೀಮ್ ಶಾ ಮೂರು ರಾಷ್ಟ್ರಗಳ ಟಿ20 ಸರಣಿಯಲ್ಲಿ ಪಾಕಿಸ್ತಾನ ತಂಡವನ್ನು ಪ್ರತಿನಿಧಿಸಲಿದ್ದಾರೆ. ಪಾಕಿಸ್ತಾನ ಮತ್ತು ಶ್ರೀಲಂಕಾ ಜೊತೆಗೆ ಟಿ20 ಸರಣಿಯಲ್ಲಿ ಝಿಂಬಾಬ್ವೆ ಮೂರನೇ ತಂಡವಾಗಿ ಕಣಕ್ಕಿಳಿಯಲಿದೆ. ಈ ಸರಣಿಯು ನವೆಂಬರ್ 17 ರಿಂದ 29 ರವರೆಗೆ ರಾವಲ್ಪಿಂಡಿ ಮತ್ತು ಲಾಹೋರ್‌ನಲ್ಲಿ ನಡೆಯಲಿವೆ.
