
ಕ್ರೈಸ್ಟ್ಚರ್ಚ್ನಲ್ಲಿ ನ್ಯೂಜಿಲೆಂಡ್ ವಿರುದ್ಧ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದಲ್ಲಿ ಭಾರತ ತಂಡ ಸೋಲಿನ ಸುಳಿಗೆ ಸಿಲುಕಿದೆ. ಪಂದ್ಯದ ಮೊದಲ ಮೂರು ದಿನಗಳ ಆಟದಲ್ಲಿ ಆತಿಥೇಯ ನ್ಯೂಜಿಲೆಂಡ್ ಸಂಪೂರ್ಣ ಮೇಲುಗೈ ಸಾಧಿಸಿದೆ. ಮೊದಲ ಇನ್ನಿಂಗ್ಸ್ನಲ್ಲಿ ಕಿವೀಸ್ ಪಡೆ 356 ರನ್ಗಳಿಗೆ ಆಲೌಟ್ ಆದರೆ, ಭಾರತ ತಂಡ ಕೇವಲ 246 ರನ್ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು. ಇನ್ನು ಮೂರನೇ ದಿನದಾಟದ ಅಂತ್ಯಕ್ಕೆ ನ್ಯೂಜಿಲೆಂಡ್ ತನ್ನ ಎರಡನೇ ಇನ್ನಿಂಗ್ಸ್ನಲ್ಲಿ 3 ವಿಕೆಟ್ ಕಳೆದುಕೊಂಡು 133 ರನ್ ಗಳಿಸಿದೆ. ಈ ಮೂಲಕ ಒಟ್ಟು 243 ರನ್ಗಳ ಮುನ್ನಡೆ ಪಡೆದುಕೊಂಡಿದೆ.
ಹೀಗಾಗಿ ನಾಲ್ಕನೇ ಇನ್ನಿಂಗ್ಸ್ನಲ್ಲಿ ಭಾರತ ತಂಡಕ್ಕೆ ಕಠಿಣ ಗುರಿ ಎದುರಾಗುವ ಸಾಧ್ಯತೆಯಿದೆ. ಅದರಲ್ಲೂ ಹ್ಯಾಗ್ಲಿ ಓವಲ್ ಮೈದಾನದಲ್ಲಿ ನಾಲ್ಕನೇ ಇನ್ನಿಂಗ್ಸ್ನಲ್ಲಿ ದೊಡ್ಡ ಮೊತ್ತವನ್ನು ಬೆನ್ನಟ್ಟುವುದು ಸುಲಭದ ಮಾತಲ್ಲ. ಈ ಮೈದಾನದಲ್ಲಿ ಈವರೆಗೂ ಯಾವುದೇ ತಂಡ 300 ಅಥವಾ ಅದಕ್ಕಿಂತ ಹೆಚ್ಚಿನ ರನ್ಗಳ ಗುರಿಯನ್ನು ಯಶಸ್ವಿಯಾಗಿ ಬೆನ್ನಟ್ಟಿಲ್ಲ. ಇಲ್ಲಿ ದಾಖಲಾದ ಗರಿಷ್ಠ ಚೇಸ್ ಮೊತ್ತ 285 ರನ್ಗಳು.
ನ್ಯೂಜಿಲೆಂಡ್ನ ಕ್ರೈಸ್ಟ್ಚರ್ಚ್ನಲ್ಲಿರುವ ಹ್ಯಾಗ್ಲಿ ಓವಲ್ ಮೈದಾನದಲ್ಲಿ ಮೊದಲ ಟೆಸ್ಟ್ ಪಂದ್ಯ ನಡೆದಿದ್ದು 2014ರಲ್ಲಿ. ಈ ಮೈದಾನದಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಣ ಪಂದ್ಯ ನಡೆಯುತ್ತಿದೆ. ನಾಲ್ಕನೇ ಇನ್ನಿಂಗ್ಸ್ನಲ್ಲಿ ಅತಿ ಹೆಚ್ಚು ರನ್ಗಳ ಗುರಿಯನ್ನು ಬೆನ್ನಟ್ಟಿದ ದಾಖಲೆ ಆತಿಥೇಯ ನ್ಯೂಜಿಲೆಂಡ್ ತಂಡದ ಹೆಸರಿನಲ್ಲಿದೆ. 2023ರಲ್ಲಿ ಶ್ರೀಲಂಕಾ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಪಡೆ 285 ರನ್ಗಳ ಗುರಿಯನ್ನು ಬೆನ್ನಟ್ಟಿ ಎರಡು ವಿಕೆಟ್ಗಳ ರೋಚಕ ಗೆಲುವು ದಾಖಲಿಸಿತ್ತು.
ಇನ್ನು ವಿದೇಶಿ ತಂಡವೊಂದು ಈ ಮೈದಾನದಲ್ಲಿ ನಾಲ್ಕನೇ ಇನ್ನಿಂಗ್ಸ್ನಲ್ಲಿ ಯಶಸ್ವಿಯಾಗಿ ಬೆನ್ನಟ್ಟಿದ ಗರಿಷ್ಠ ಮೊತ್ತದ ದಾಖಲೆ ಆಸ್ಟ್ರೇಲಿಯಾ ಹೆಸರಿನಲ್ಲಿದೆ. 2024ರಲ್ಲಿ ನ್ಯೂಜಿಲೆಂಡ್ ವಿರುದ್ಧದ ಪಂದ್ಯದಲ್ಲಿ ಆಸೀಸ್ ಪಡೆ 279 ರನ್ಗಳ ಗುರಿಯನ್ನು ಬೆನ್ನಟ್ಟಿ ಮೂರು ವಿಕೆಟ್ಗಳ ಜಯ ಸಾಧಿಸಿತ್ತು.
ಹ್ಯಾಗ್ಲಿ ಓವಲ್ ಮೈದಾನದಲ್ಲಿ ಈವರೆಗೆ ನಡೆದಿರುವ 16 ಟೆಸ್ಟ್ ಪಂದ್ಯಗಳ ಪೈಕಿ ನಾಲ್ಕನೇ ಇನ್ನಿಂಗ್ಸ್ನಲ್ಲಿ ಗುರಿ ಬೆನ್ನಟ್ಟಿದ ತಂಡಗಳು ಎಂಟು ಬಾರಿ ಗೆಲುವು ಸಾಧಿಸಿವೆ. ಇದು ಭಾರತ ತಂಡಕ್ಕೆ ಸ್ವಲ್ಪ ಸಮಾಧಾನ ನೀಡುವ ಅಂಕಿ-ಅಂಶವಾಗಿದೆ. ಆದರೆ ಈ ಎಂಟು ಗೆಲುವುಗಳಲ್ಲಿ ಐದು ಪಂದ್ಯಗಳನ್ನು ನ್ಯೂಜಿಲೆಂಡ್ ತಂಡವೇ ಗೆದ್ದಿರುವುದು ಗಮನಾರ್ಹ. ಆಸ್ಟ್ರೇಲಿಯಾ ಎರಡು ಬಾರಿ ಹಾಗೂ ಇಂಗ್ಲೆಂಡ್ ಒಂದು ಬಾರಿ ಇಲ್ಲಿ ನಾಲ್ಕನೇ ಇನ್ನಿಂಗ್ಸ್ನಲ್ಲಿ ಗುರಿ ಬೆನ್ನಟ್ಟಿ ಗೆಲುವು ದಾಖಲಿಸಿವೆ.
ನ್ಯೂಜಿಲೆಂಡ್ ನೆಲದಲ್ಲಿ ಧೋನಿ, ಕೊಹ್ಲಿ ದಾಖಲೆ ಸರಿಗಟ್ಟಿದ ಧ್ರುವ್ ಜುರೆಲ್
ಇನ್ನು ಈ ಮೈದಾನದಲ್ಲಿ 2025ರಲ್ಲಿ ನ್ಯೂಜಿಲೆಂಡ್ ಮತ್ತು ವೆಸ್ಟ್ ಇಂಡೀಸ್ ನಡುವೆ ನಡೆದ ಕೊನೆಯ ಟೆಸ್ಟ್ ಪಂದ್ಯದಲ್ಲಿ ಕಿವೀಸ್ ಪಡೆ ಎದುರಾಳಿಗೆ ಬರೋಬ್ಬರಿ 531 ರನ್ಗಳ ಗುರಿ ನೀಡಿತ್ತು. ಆದರೆ ವೆಸ್ಟ್ ಇಂಡೀಸ್ ತಂಡ ಅದ್ಭುತ ಹೋರಾಟ ನಡೆಸಿ ನಾಲ್ಕನೇ ಇನ್ನಿಂಗ್ಸ್ನಲ್ಲಿ 457 ರನ್ ಗಳಿಸುವ ಮೂಲಕ ಪಂದ್ಯವನ್ನು ಡ್ರಾ ಮಾಡಿಕೊಳ್ಳುವಲ್ಲಿ ಯಶಸ್ವಿಯಾಗಿತ್ತು. ಹೀಗಾಗಿ ಭಾರತ ತಂಡಕ್ಕೂ ಇಂತಹದ್ದೇ ಒಂದು ಹೋರಾಟದ ಅಗತ್ಯವಿದೆ. ಸೋಲಿನ ಸುಳಿಯಿಂದ ಪಾರಾಗಬೇಕಾದರೆ ಭಾರತೀಯ ಬ್ಯಾಟರ್ಗಳು ನಾಲ್ಕನೇ ಇನ್ನಿಂಗ್ಸ್ನಲ್ಲಿ ಜವಾಬ್ದಾರಿಯುತ ಆಟವಾಡಬೇಕಿದೆ.