ಒಂದೇ ಓವರ್ನಲ್ಲಿ 34 ರನ್… ಸ್ಫೋಟಕ ಸೆಂಚುರಿ ಸಿಡಿಸಿದ ಹಾರ್ದಿಕ್ ಪಾಂಡ್ಯ
Vijay Hazare Trophy Elite 2025-26: ದೇಶೀಯ ಏಕದಿನ ಟೂರ್ನಿ ವಿಜಯ ಹಝಾರೆ ಟ್ರೋಫಿಯಲ್ಲಿ ಬರೋಡಾ ಪರ ಕಣಕ್ಕಿಳಿದಿರುವ ಹಾರ್ದಿಕ್ ಪಾಂಡ್ಯ ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ಅದು ಕೂಡ ಒಂದೇ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ 5 ಸಿಕ್ಸರ್ಗಳೊಂದಿಗೆ 34 ರನ್ ಚಚ್ಚುವ ಮೂಲಕ ಎಂಬುದು ವಿಶೇಷ.

ವಿಜಯ ಹಝಾರೆ ಟೂರ್ನಿಯಲ್ಲಿ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಸೆಂಚುರಿ ಸಿಡಿಸಿದ್ದಾರೆ. ಅದು ಕೂಡ ಕೇವಲ 68 ಎಸೆತಗಳಲ್ಲಿ ಎಂಬುದು ವಿಶೇಷ. ರಾಜ್ಕೋಟ್ನ ನಿರಂಜನ್ ಶಾ ಮೈದಾನದಲ್ಲಿ ನಡೆದ ಈ ಪಂದ್ಯದಲ್ಲಿ ವಿದರ್ಭ ಹಾಗೂ ಬರೋಡಾ ತಂಡಗಳು ಮುಖಾಮುಖಿಯಾಗಿದ್ದವು.
ಟಾಸ್ ಗೆದ್ದ ಬೌಲಿಂಗ್ ಆಯ್ದುಕೊಂಡಿದ್ದ ನಾಯಕ ಹರ್ಷ್ ದುಬೆ ನಿರ್ಧಾರವನ್ನು ಸಮರ್ಥಿಸುವಂತೆ ವಿದರ್ಭ ತಂಡದ ಬೌಲರ್ಗಳು ದಾಳಿ ಸಂಘಟಿಸಿದ್ದರು. ಪರಿಣಾಮ ಬರೋಡಾ ತಂಡವು 71 ರನ್ಗಳಿಸುವಷ್ಟರಲ್ಲಿ 5 ಪ್ರಮುಖ ವಿಕೆಟ್ ಕಳೆದುಕೊಂಡಿತು.
ಈ ಹಂತದಲ್ಲಿ 7ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಹಾರ್ದಿಕ್ ಪಾಂಡ್ಯ ಸಿಡಿಲಬ್ಬರದ ಬ್ಯಾಟಿಂಗ್ ಪ್ರದರ್ಶಿಸಿದರು. ಮೊದಲಿಗೆ 62 ಎಸೆತಗಳಲ್ಲಿ 66 ರನ್ ಬಾರಿಸಿದ್ದ ಪಾಂಡ್ಯ ಒಂದೇ ಓವರ್ನಲ್ಲಿ 34 ರನ್ ಚಚ್ಚಿದರು.
ಪಾರ್ಥ್ ರೇಖಾಡೆ ಎಸೆತದ ಈ ಓವರ್ನಲ್ಲಿ ಬ್ಯಾಕ್ ಟು ಬ್ಯಾಕ್ 5 ಸಿಕ್ಸ್ ಸಿಡಿಸಿದ ಹಾರ್ದಿಕ್ ಪಾಂಡ್ಯ ಕೊನೆಯ ಎಸೆತದಲ್ಲಿ ಫೋರ್ ಬಾರಿಸಿದರು. ಈ ಮೂಲಕ ಕೇವಲ 68 ಎಸೆತಗಳಲ್ಲಿ ಶತಕ ಪೂರೈಸಿದರು.
ಶತಕದ ಬಳಿಕ ಕೂಡ ಸ್ಫೋಟಕ ಇನಿಂಗ್ಸ್ ಮುಂದುವರೆಸಿದ ಪಾಂಡ್ಯ 92 ಎಸೆತಗಳಲ್ಲಿ 11 ಭರ್ಜರಿ ಸಿಕ್ಸರ್ ಹಾಗೂ 8 ಫೋರ್ಗಳೊಂದಿಗೆ 133 ರನ್ ಬಾರಿಸಿದರು.
ಹಾರ್ದಿಕ್ ಪಾಂಡ್ಯ ಅವರ ಈ ವಿಸ್ಫೋಟಕ ಬ್ಯಾಟಿಂಗ್ ನೆರವಿನೊಂದಿಗೆ ಬರೋಡಾ ತಂಡವು 50 ಓವರ್ಗಳಲ್ಲಿ 9 ವಿಕೆಟ್ ಕಳೆದುಕೊಂಡು 293 ರನ್ ಕಲೆಹಾಕಿದೆ. ಈ ಮೂಲಕ ವಿದರ್ಭ ತಂಡಕ್ಕೆ 294 ರನ್ಗಳ ಗುರಿ ನೀಡಿದೆ.
ವಿಶೇಷ ಎಂದರೆ ಇದು ಹಾರ್ದಿಕ್ ಪಾಂಡ್ಯ ಅವರ ಚೊಚ್ಚಲ ಲಿಸ್ಟ್ ಎ ಶತಕವಾಗಿದೆ. ಇದಕ್ಕೂ ಮುನ್ನ ಅವರು 92 ರನ್ಗಳಿಸಿದ್ದು ಗರಿಷ್ಠ ಸ್ಕೋರ್ ಆಗಿತ್ತು. ಇದೀಗ ಭರ್ಜರಿ ಸೆಂಚುರಿ ಸಿಡಿಸುವ ಮೂಲಕ ಪಾಂಡ್ಯ ಏಕದಿನ ಕ್ರಿಕೆಟ್ನಲ್ಲಿ ಶತಕದ ಖಾತೆ ತೆರೆದಿದ್ದಾರೆ.
ಬರೋಡಾ ಪ್ಲೇಯಿಂಗ್ 11: ನಿತ್ಯ ಪಾಂಡ್ಯ , ಅಮಿತ್ ಪಾಸಿ , ಜಿತೇಶ್ ಶರ್ಮಾ (ವಿಕೆಟ್ ಕೀಪರ್) ಹಾರ್ದಿಕ್ ಪಾಂಡ್ಯ , ಕೃನಾಲ್ ಪಾಂಡ್ಯ (ನಾಯಕ) , ವಿಷ್ಣು ಸೋಲಂಕಿ , ಪ್ರಿಯಾಂಶು ಮೋಲಿಯಾ , ಅತಿತ್ ಶೇಠ್ , ರಾಜ್ ಲಿಂಬಾನಿ , ಕರಣ್ ಉಮಟ್ , ಮಹೇಶ್ ಪಿಥಿಯಾ.
ಇದನ್ನೂ ಓದಿ: IPL 2026: ಐಪಿಎಲ್ನಿಂದ ಬಾಂಗ್ಲಾದೇಶ್ ಆಟಗಾರನಿಗೆ ಗೇಟ್ ಪಾಸ್..!
ವಿದರ್ಭ ಪ್ಲೇಯಿಂಗ್ 11: ಅಥರ್ವ ತೈಡೆ , ಅಮನ್ ಮೊಖಡೆ , ಧ್ರುವ್ ಶೋರೆ , ನಚಿಕೇತ್ ಭೂತೆ , ಯಶ್ ರಾಥೋಡ್ , ರವಿಕುಮಾರ್ ಸಮರ್ಥ್ , ಅಕ್ಷಯ್ ವಾಡ್ಕರ್ (ವಿಕೆಟ್ ಕೀಪರ್ ), ಹರ್ಷ್ ದುಬೆ (ನಾಯಕ) , ಪಾರ್ಥ್ ರೇಖಾಡೆ , ಯಶ್ ಠಾಕೂರ್ , ಪ್ರಫುಲ್ ಹಿಂಜ್.
